ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಿ ಮೇಲಿನ ಹಲ್ಲೆ ಪ್ರಕರಣ: ನಿರೀಕ್ಷಣಾ ಜಾಮೀನು ಕೋರಿ ಬಿಭವ್‌ ಕುಮಾರ್ ಅರ್ಜಿ

Published 18 ಮೇ 2024, 10:02 IST
Last Updated 18 ಮೇ 2024, 10:02 IST
ಅಕ್ಷರ ಗಾತ್ರ

ನವದೆಹಲಿ: ‘ಆಮ್‌ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್‌ ಮೇಲಿನ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್‌ ಅವರು ನಿರೀಕ್ಷಣಾ ಜಾಮೀನು ಕೋರಿ ಇಂದು (ಶನಿವಾರ) ಕೋರ್ಟ್‌ ಮೆಟ್ಟಿಲೇರಿದ್ದಾರೆ.

ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ಇಂದೇ ಬಿಭವ್ ಕುಮಾರ್‌ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

‘ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸಕ್ಕೆ ತೆರಳಿದ್ದಾಗ, ಅವರ ಕಾರ್ಯದರ್ಶಿಯಾಗಿರುವ ಬಿಭವ್ ಕುಮಾರ್ ತಮ್ಮ ಜೊತೆಗೆ ಅನುಚಿತವಾಗಿ ವರ್ತಿಸಿದ್ದು, ದೈಹಿಕವಾಗಿ ಹಲ್ಲೆ ನಡೆಸಿದ್ದರು’ ಎಂದು ಸಂಸದೆ ಸ್ವಾತಿ ಮಾಲಿವಾಲ್‌ ಅವರು ಆರೋಪಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು, ಬಿಭವ್‌ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಎಸ್‌.ಕುಶ್ವಾಹಾ ನೇತೃತ್ವದ ದೆಹಲಿ ಪೊಲೀಸರ ತಂಡವು ಗುರುವಾರ ಮಾಲಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾಲಿವಾಲ್‌ ಅವರಿಂದ ಮಾಹಿತಿ ಕಲೆಹಾಕಿತ್ತು.

ಪ್ರಕರಣವೇನು?

ಮೇ 13ರಂದು ದೆಹಲಿಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ತೆರಳಿದ್ದ ಸ್ವಾತಿ ಮಾಲಿವಾಲ್, ಕೇಜ್ರಿವಾಲ್ ಅವರ ಮನೆಯಲ್ಲಿ ಅವರ ಆಪ್ತ ಸಿಬ್ಬಂದಿಯೊಬ್ಬರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದರು.

‘ನನ್ನ ಎದೆ, ಹೊಟ್ಟೆ ಮತ್ತು ದೇಹದ ಕೆಳಭಾಗಕ್ಕೆ ಕೇಜ್ರಿವಾಲ್ ಆಪ್ತ ಸಹಾಯಕ ಬಿಭವ್‌ ಕುಮಾರ್ ಒದ್ದಿದ್ದಾನೆ. ನನ್ನ ಮೇಲೆ ಸಂಪೂರ್ಣ ಬಲ ಬಳಸಿ ಹಲ್ಲೆ ನಡೆಸಿದ್ದಾನೆ. ಏಳೆಂಟು ಬಾರಿ ಕಪಾಳಕ್ಕೆ ಹೊಡೆದಿದ್ದಾನೆ’ ಎಂದು ಮಾಲಿವಾಲ್ ದೂರಿನಲ್ಲಿ ತಿಳಿಸಿದ್ದರು.

ಈ ಆರೋಪವನ್ನು ತಳ್ಳಿಹಾಕಿರುವ ಬಿಭವ್‌ ಕುಮಾರ್, ‘ಮುಖ್ಯಮಂತ್ರಿಗಳ ನಿವಾಸವನ್ನು ಅಕ್ರಮವಾಗಿ ಪ್ರವೇಶಿಸಿದ್ದ ಅವರನ್ನು ತಡೆಯಲು ನಾನು ಯತ್ನಿಸಿದ್ದಾಗ, ಗದ್ದಲ ಮಾಡಿದ್ದಲ್ಲದೇ ನನ್ನನ್ನು ನಿಂದಿಸಿದ್ದರು’ ಎಂದು ಪ್ರತಿ ದೂರು ದಾಖಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ನಿವಾಸದ ಸಿಸಿಟಿವಿ ದೃಶ್ಯಗಳನ್ನು ಎಎಪಿ ಬಿಡುಗಡೆ ಮಾಡಿದೆ. ಮಾಲಿವಾಲ್ ಮೇಲೆ ಭ್ರಷ್ಟಾಚಾರದ ಆರೋಪವಿದ್ದು, ಕೇಜ್ರಿವಾಲ್ ವಿರುದ್ಧ ಸಂಚು ರೂಪಿಸಲು ಬಿಜೆಪಿ ಅವರಿಗೆ ಬೆದರಿಕೆ ಹಾಕಿದೆ ಎಂದು ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT