ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣದವರನ್ನು ಆಫ್ರಿಕನ್ನರು ಎಂದು ಶಾಂತಿಯ ತೋಟ ಕದಡಿದ ಕಾಂಗ್ರೆಸ್: ಆರ್. ಅಶೋಕ

Published 9 ಮೇ 2024, 10:27 IST
Last Updated 9 ಮೇ 2024, 10:27 IST
ಅಕ್ಷರ ಗಾತ್ರ

ಬೆಂಗಳೂರು: 'ಕಾಂಗ್ರೆಸ್‌ ನಾಯಕ ಸ್ಯಾಮ್ ಪಿತ್ರೋಡಾ ಅವರ ಜನಾಂಗೀಯ ನಿಂದನೆಯ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ. ದಕ್ಷಿಣ ಭಾರತದ ಜನರು ಐದು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದಾರೆ. ಇದನ್ನು ತಿಳಿಯದೆ ನಮ್ಮನ್ನು ಆಫ್ರಿಕನ್ನರು ಎನ್ನುವ ಮೂಲಕ ಶಾಂತಿಯ ತೋಟವನ್ನು ಕದಡಿದ್ದಾರೆ’ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಯಾಮ್‌ ಪಿತ್ರೋಡಾ ಅವರ ಹೇಳಿಕೆ ಕಾಂಗ್ರೆಸ್‌ನ ಮನಸ್ಥಿತಿಯನ್ನು ತೋರಿಸಿದೆ. ವರ್ಣಭೇದ ನೀತಿ ಹಾಗೂ ಬಣ್ಣದ ಕುರಿತು ಮಾತಾಡುವುದು ಕಾಂಗ್ರೆಸ್‌ನ ಡಿಎನ್‌ಎಯಲ್ಲೇ ಇದೆ. ಇದಕ್ಕೂ ಮುನ್ನ ಸಂಸದ ಡಿ.ಕೆ.ಸುರೇಶ್‌ ಇದೇ ಧಾಟಿಯ ಮಾತುಗಳನ್ನಾಡಿದ್ದರು. ಈಗ ದೇಶ ಒಡೆಯುವ, ಛಿದ್ರ ಮಾಡುವ ಮಾತನ್ನು ಪಿತ್ರೋಡಾ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ ಸಿದ್ಧಾಂತವನ್ನು ತಿಳಿಸಿದ್ದಾರೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣದ ಗ್ಯಾರಂಟಿಯನ್ನು ನೀಡಿದ್ದಾರೆ. ಹಿಂದೆ ವರ್ಣಭೇದ ನೀತಿಯಿಂದ ಅನೇಕ ಸಾವು ನೋವುಗಳಾಗಿತ್ತು. ನೆಲ್ಸನ್‌ ಮಂಡೇಲ, ಮಹಾತ್ಮ ಗಾಂಧೀಜಿ ಅವರು ಈ ತಾರತಮ್ಯದ ವಿರುದ್ಧ ಹೋರಾಟ ನಡೆಸಿದ್ದರು. ಆದರೆ ಕಾಂಗ್ರೆಸ್ ಬಣ್ಣದ ಆಧಾರದಲ್ಲಿ ಜನರ ಮನಸ್ಸನ್ನು ಒಡೆದಿದೆ. 5 ಸಾವಿರ ವರ್ಷಗಳ ಇತಿಹಾಸವಿರುವ ನಮ್ಮನ್ನು ಆಫ್ರಿಕಾದವರು ಎಂದಿದ್ದಾರೆ. ಒಕ್ಕಲಿಗರು, ಲಿಂಗಾಯಿತರು, ದಲಿತರಿಗೆ ಕಾಂಗ್ರೆಸ್‌ ಯಾವ ಬಣ್ಣ ಹಚ್ಚುತ್ತದೆ’ ಎಂದು ಪ್ರಶ್ನೆ ಮಾಡಿದರು.

‘ಸೋನಿಯಾ ಗಾಂಧಿ ಇಟಲಿಯಿಂದ ಬಂದಿದ್ದರೂ ಅವರನ್ನು ಭಾರತೀಯರೆಂದು ಒಪ್ಪಿಕೊಳ್ಳುವಂತೆ ಕಾಂಗ್ರೆಸ್‌ ನಾಯಕರು ಒತ್ತಾಯಿಸುತ್ತಾರೆ. ಸೋನಿಯಾ ದೇಶದ ಸೊಸೆ ಎಂದು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಸೋನಿಯಾ, ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ ಯಾವ ದೇಶದಿಂದ ಬಂದಿದ್ದಾರೆ ಎಂದು ಮೊದಲು ತಿಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ನುಡಿದಂತೆ ನಡೆಯುವ ಸಿಎಂ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿ ಬಗ್ಗೆ ಹೇಳುತ್ತಿದ್ದಾರೆ. ಆದರೆ ಈಗ ಬಿಳಿ ಗ್ಯಾರಂಟಿ, ಕಪ್ಪು ಗ್ಯಾರಂಟಿ, ಚೈನೀಸ್‌ ಗ್ಯಾರಂಟಿ, ಅರಬ್ಬಿ ಗ್ಯಾರಂಟಿ, ಆಫ್ರಿಕಾ ಗ್ಯಾರಂಟಿಯನ್ನು ನೀಡಿದ್ದಾರೆ’ ಎಂದು ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

‘ಮಹಾರಾಷ್ಟ್ರದಲ್ಲಿ ಹುಟ್ಟಿದ ಡಾ. ಬಿ.ಆರ್‌.ಅಂಬೇಡ್ಕರ್‌ ಯಾರು, ಗುಜರಾತ್‌ನಲ್ಲಿ ಹುಟ್ಟಿದ ಗಾಂಧೀಜಿ ಯಾರು, ಬೆಂಗಳೂರು ಕಟ್ಟಿದ ಕೆಂಪೇಗೌಡರು ಯಾರು ಎಂದು ‌ಕಾಂಗ್ರೆಸ್ ಹೇಳಬೇಕು. ಈಗಾಗಲೇ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡುತ್ತಿದೆ. ಮೋದಿ ಎಂದರೆ‌ ಕಪಾಳಕ್ಕೆ ಹೊಡಿ ಎಂದವರು ಪಿತ್ರೋಡಾಗೆ ಹೇಗೆ ಹೊಡೆಯುತ್ತಾರೆ’ ಎಂದು ಪ್ರಶ್ನೆ ಮಾಡಿದರು.

ದಕ್ಷಿಣ ಭಾರತದವರು ಆಫ್ರಿಕಾದವರು ಎನ್ನುವುದಾದರೆ ಸಿಎಂ ಸಿದ್ದರಾಮಯ್ಯ ಮೊದಲು ಆಫ್ರಿಕಾಗೆ ಹೋಗಿ ಅಲ್ಲಿ ಸಿಎಂ ಆಗಬೇಕು
– ಆರ್. ಅಶೋಕ, ವಿಧಾನಸಭೆಯ ಪ್ರತಿಪಕ್ಷ ನಾಯಕ

ಸ್ವಂತ ಮಕ್ಕಳಿಗೆ ಹಕ್ಕಿಲ್ಲ

‘ಹಿಂದೆ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನು ತಂದ ಬ್ರಿಟಿಷರು ರಾಜ್ಯಗಳನ್ನು ಕಿತ್ತುಕೊಂಡರು. ಅದೇ ರೀತಿ ಈಗಿನ ಕಾಂಗ್ರೆಸ್ ಸ್ವಂತ ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನು ತರಲು ಮುಂದಾಗಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಲೂಟಿ ಮಾಡಿದ್ದೇವೆ ಎಂದು ಹೇಳಿದ್ದರು. ಅಂತಹ ಲೂಟಿಯ ಸಂಪತ್ತನ್ನು ನರೇಂದ್ರ ಮೋದಿ ಜನರಿಗೆ ಹಂಚಲಿದ್ದಾರೆ’ ಎಂದು ಅಶೋಕ ಹೇಳಿದ್ದಾರೆ.

ಮುಖ್ಯಮಂತ್ರಿಗಳೇ ಉತ್ತರಿಸಿ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಸಿಲೆರಿ ನೀರು, ಜ್ಯೂಸ್ ಕುಡಿದುಕೊಂಡು ಎ.ಸಿ.ಯಲ್ಲಿ ಕುಳಿತು ಪ್ರಧಾನಿ ನರೇಂದ್ರ ‌ಮೋದಿಗೆ ಪ್ರಶ್ನೆ ಮಾಡಿದ್ದಾರೆ. ರಾಜ್ಯ ಸರ್ಕಾರ ಜನರಿಗೆ ನೀರು ನೀಡಿಲ್ಲ, ಹಾಲಿನ ಪ್ರೋತ್ಸಾಹಧನ ನೀಡಿಲ್ಲ, ಆಂಬ್ಯುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡಿಲ್ಲ, ಬಿಬಿಎಂಪಿ ಗುತ್ತಿಗೆದಾರರಿಗೆ ಬಿಲ್ ಕೊಟ್ಟಿಲ್ಲ, ನೇಹಾ ಹತ್ಯೆಗೆ 120 ದಿನಗಳಲ್ಲಿ ತೀರ್ಪು ಕೊಡುತ್ತೇನೆಂದು ಇನ್ನೂ ತನಿಖೆ ಶುರು ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಒಂದು ದಿನ ರಜೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಎಲ್ಲ ಬಗೆಯ ರಜೆ ಪಡೆದು ಮಜಾ ಮಾಡುತ್ತಿದ್ದಾರೆ. ಸದಾ ಕೆಲಸ ಮಾಡುವ ಮೋದಿ ಹಾಗೂ ಕೆಲಸ ಕಳ್ಳ ಸಿಎಂ ಸಿದ್ದರಾಮಯ್ಯ ಅವರ ನಡುವೆ ಎಲ್ಲಿಯ ಹೋಲಿಕೆ’ ಎಂದು ವ್ಯಂಗ್ಯವಾಡಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT