ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ವ್ಯಾಕ್ಸಿನ್‌ ವರಾತ !

Published 9 ಮೇ 2024, 0:10 IST
Last Updated 9 ಮೇ 2024, 0:10 IST
ಅಕ್ಷರ ಗಾತ್ರ

‘ಗೊತ್ತಿತ್ತು ರೀ, ನಂಗೆ ಗೊತ್ತಿತ್ತು. ನೀವು ತುಂಬಾ ಸ್ವಾರ್ಥಿ ಅಂತ ನನಗೆ ಮೊದಲೇ ಗೊತ್ತಿತ್ತು’ ಬೆಳಿಗ್ಗೆಯೇ ಹೆಂಡತಿಯ ಸುಪ್ರಭಾತ ಶುರುವಾಗಿತ್ತು. 

‘ಏನಾಯ್ತು ಮಾರಾಯ್ತಿ ನಿಂಗೆ’ ಕೇಳಿದೆ. 

‘ನೋಡಿ ಇಲ್ಲಿ, ಏನು ನ್ಯೂಸ್‌ ಬಂದಿದೆ ಅಂತ’ ಪೇಪರ್‌ ತೆಗೆದು ಮುಖಕ್ಕೆ ಹಿಡಿದು, ‘ಕೋವಿಶೀಲ್ಡ್‌ ಲಸಿಕೆಯಿಂದ ಗಂಭೀರ ಅಡ್ಡ ಪರಿಣಾಮ. ಕೋವಿಶೀಲ್ಡ್‌ ಹಿಂಪಡೆಯುವುದಾಗಿ ಘೋಷಿಸಿದ ಲಸಿಕೆ ತಯಾರಿಕಾ ಕಂಪನಿ’ ಎಂದು ಬರೆದಿದ್ದ ಸಾಲುಗಳನ್ನು ಜೋರಾಗಿ ಓದಿದಳು ಪತ್ನಿ.

‘ಹೌದು, ಅದಕ್ಕೆ ನಾನೇನು ಮಾಡ್ಲಿ ಈಗ, ನಂದೇನು ತಪ್ಪಿದೆ?’ ಗೊಂದಲದಲ್ಲೇ ಕೇಳಿದೆ. 

‘ಅವತ್ತೇನಾಯ್ತು ನೆನಪು ಮಾಡಿಕೊಳ್ಳಿ’. 

‘ನೆನಪಿಲ್ಲ, ಹೇಳು ಮಾರಾಯ್ತಿ’.

‘ನೀವು ಕೋವ್ಯಾಕ್ಸಿನ್‌ ಲಸಿಕೆ ಹಾಕಿಸಿಕೊಂಡು ಬಂದಿದ್ರಿ, ನನಗೂ ಅದೇ ವ್ಯಾಕ್ಸಿನ್‌ ಹಾಕಿಸಿ ಅಂದರೆ, ಅದು ಖಾಲಿಯಾಗಿದೆಯಂತೆ ಅಂತ ಹೇಳಿ ನನಗೆ ಕೋವಿಶೀಲ್ಡ್‌ ಲಸಿಕೆ ಹಾಕಿಸಿದ್ರಿ’.

‘ಆ ಟೈಮ್‌ನಲ್ಲಿ ಯಾವುದೋ ಒಂದು ಲಸಿಕೆ ಹಾಕಿಸಬೇಕಿತ್ತು, ಹಾಕಿಸಿದೆ ಏನಾಯ್ತೀಗ?’

‘ನೋಡಿ ಈಗ, ಕೋವಿಶೀಲ್ಡ್‌ ತೆಗೆದುಕೊಂಡವರಿಗೆ ಅಡ್ಡ ಪರಿಣಾಮ ಅಂತೆ’. 

‘ವ್ಯಾಕ್ಸಿನ್‌ ಹಾಕಿಸಿಕೊಂಡು ಮೂರು ವರ್ಷ ಆಯ್ತಲ್ಲ, ಈಗೇನು ಆಗಲ್ಲ, ತಲೆ ಕೆಡಿಸಿಕೊಳ್ಳಬೇಡ. ನೋಡು ನನಗೇನಾದರೂ ಆಗಿದೆಯಾ?’ 

‘ನಿಮಗೆ ಹೇಗಾಗುತ್ತೆ ಹೇಳಿ, ಎಲ್ಲ ನನಗೆ ಆಗ್ತಿದೆ. ಈ ಸುದ್ದಿ ಓದಿದಾಗಿನಿಂದ ಸುಸ್ತಾಗ್ತಿದೆ. ಎಲ್ಲದಕ್ಕೂ ನೀವೇ ಕಾರಣ’ ಬೈಯತೊಡಗಿದಳು.  

‘ನೀನೇನಮ್ಮ, ವ್ಯಾಕ್ಸಿನ್‌ ಸರ್ಟಿಫಿಕೇಟ್‌ನಲ್ಲಿ
ಫೋಟೊ ಹಾಕಿಕೊಂಡಿದ್ದವರನ್ನ ಬಿಟ್ಟು ಈಗ ನನಗೆ ಕ್ಲಾಸ್‌ ತೆಗೆದುಕೊಳ್ತಿದೀಯಾ. ಈಗ ನಾನೇನು ಮಾಡಬೇಕು ಅದನ್ನಾದರೂ ಹೇಳು’. 

‘ನಾನು ನನ್ನ ವ್ಯಾಕ್ಸಿನ್‌ ಸರ್ಟಿಫಿಕೇಟ್‌ ನೋಡಿದಾಗೆಲ್ಲ ಟೆನ್ಷನ್ ಆಗುತ್ತೆ, ಸಮಾಧಾನ ಆಗಬೇಕು, ಹಾಗೆ ಏನಾದರೂ ಮಾಡಿ’ ಎಂದು ಹೇಳಿ ಒಳಗೆ ಹೋದಳು. 

ಹೆಂಡತಿಯ ವ್ಯಾಕ್ಸಿನ್‌ ಸರ್ಟಿಫಿಕೇಟ್‌ ತೆಗೆದುಕೊಂಡು, ಕೋವಿಶೀಲ್ಡ್‌ ಜಾಗದಲ್ಲಿ ಕೋವ್ಯಾಕ್ಸಿನ್‌ ಎಂದು ಫೋಟೊಶಾಪ್‌ ಮೂಲಕ ತಿದ್ದಿಸಿಕೊಂಡು ಬಂದೆ. 

ಸರ್ಟಿಫಿಕೇಟ್‌ ನೋಡಿದ ಹೆಂಡತಿ ಈಗ
ಪ್ರಸನ್ನ ವದನೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT