ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

DL v KKR: ಕೋಲ್ಕತ್ತಗೆ ಆರನೇ ಜಯ; ಡೆಲ್ಲಿ ಕ್ಯಾಪಿಟಲ್ಸ್‌ಗೆ ಏಳು ವಿಕೆಟ್‌ಗಳ ಸೋಲು

ವರುಣ್‌ ಮೋಡಿ, ಸಾಲ್ಟ್‌ ಅಬ್ಬರ
Published 29 ಏಪ್ರಿಲ್ 2024, 14:00 IST
Last Updated 29 ಏಪ್ರಿಲ್ 2024, 18:09 IST
ಅಕ್ಷರ ಗಾತ್ರ

ಕೋಲ್ಕತ್ತ: ಬೌಲರ್‌ಗಳ ಬಿಗು ದಾಳಿಯ ನಂತರ ಆರಂಭ ಆಟಗಾರ ಫಿಲ್‌ ಸಾಲ್ಟ್‌ (68; 33ಎ) ಅವರ ಆಕ್ರಮಣಕಾರಿ ಅರ್ಧಶತಕದ ನೆರವಿನಿಂದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡ ಸೋಮವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಪ್ಲೇ ಆಫ್‌ ಹಾದಿಯತ್ತ ಹೆಜ್ಜೆಯಿಟ್ಟಿತು.

ಇದು ಕೋಲ್ಕತ್ತ ತಂಡಕ್ಕೆ ಒಂಬತ್ತು ಪಂದ್ಯಗಳಿಂದ ಆರನೇ ಗೆಲುವಾಗಿದ್ದು, ಒಟ್ಟು 12 ಅಂಕ ಸಂಪಾದಿಸಿದೆ. ಡೆಲ್ಲಿ ತಂಡವು 11 ಪಂದ್ಯಗಳಿಂದ 10 ಪಾಯಿಂಟ್ಸ್‌ ಸಂಗ್ರಹಿಸಿದ್ದು, ಪ್ಲೇ ಆಫ್‌ ಹಾದಿ ಕಠಿಣವಾಗಿದೆ.

ಈಡನ್‌ ಗಾರ್ಡನ್‌ನಲ್ಲಿ ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ವಿಕೆಟ್‌ಗೆ 153 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಉತ್ತರವಾಗಿ ಕೋಲ್ಕತ್ತ ತಂಡವು ಇನ್ನೂ 21 ಎಸೆತ ಬಾಕಿ ಇರುವಂತೆ
3 ವಿಕೆಟ್‌ಗಳಿಗೆ 157 ರನ್‌ ಗಳಿಸಿತು.

ಸಾಲ್ಟ್‌ ಮೊದಲ ವಿಕೆಟ್‌ಗೆ ಸುನಿಲ್‌ ನಾರಾಯಣ್‌ ಜತೆ 6.1 ಓವರ್‌ಗಳಲ್ಲೇ
79 ರನ್‌ ಸೇರಿಸಿ ಭದ್ರ ಬುನಾದಿ ಹಾಕಿದರು. ಇದರಲ್ಲಿ ಸುನಿಲ್‌ ಪಾಲು 15 ರನ್‌.
ಮಿಂಚಿನ ಬ್ಯಾಟಿಂಗ್‌ ನಡೆಸಿದ ಸಾಲ್ಟ್‌ 7 ಬೌಂಡರಿ ಮತ್ತು ಐದು ಸಿಕ್ಸರ್‌ ಸಿಡಿಸಿದರು. ತಂಡವು ನೂರರ ಸಮೀಪ ಸಾಗುತ್ತಿದ್ದಾಗ ಸಾಲ್ಟ್‌ ಅವರು ಅಕ್ಷರ್‌ ಪಟೇಲ್‌ ಅವರಿಗೆ ವಿಕೆಟ್‌ ಒಪ್ಪಿಸಿದರು. ಆದರೆ, ಈ ಪಂದ್ಯದಲ್ಲೂ ರಿಂಕು ಸಿಂಗ್‌ (11) ನಿರಾಸೆ ಮೂಡಿಸಿದರು.

ನಂತರ ನಾಯಕ ಶ್ರೇಯಸ್‌ ಅಯ್ಯರ್‌ (ಔಟಾಗದೇ 33) ಮತ್ತು ವೆಂಕಟೇಶ್‌ |
ಅಯ್ಯರ್‌ (ಔಟಾಗದೇ 26) ಗೆಲುವಿನ ಔಪಚಾರಿಕತೆಯನ್ನು ಪೂರೈಸಿದರು. ಅವರು ನಾಲ್ಕನೇ ವಿಕೆಟ್‌ಗೆ ಮುರಿಯದ 57 ರನ್‌ (43 ಎ) ಸೇರಿಸಿದರು. ಇದೇ ವೇಳೆ ಶ್ರೇಯಸ್‌ ಐಪಿಎಲ್‌ನಲ್ಲಿ 3 ಸಾವಿರ ರನ್‌ ಗಡಿ ದಾಟಿದರು. ಅವರು 110 ಇನ್ನಿಂಗ್ಸ್‌ ಗಳಲ್ಲಿ ಈ
ಸಾಧನೆ ಮಾಡಿದರು.

ಇದಕ್ಕೂ ಮೊದಲು ಕೋಲ್ಕತ್ತ ತಂಡದ ವೇಗದ ಬೌಲರ್‌ಗಳಾದ ವೈಭವ್ ಆರೋರಾ  (29ಕ್ಕೆ2) ಮತ್ತು ಹರ್ಷಿತ್ ರಾಣಾ (28ಕ್ಕೆ 2) ಅವರು ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಲಗಾಮು ಹಾಕಿದರು. ಮಧ್ಯಮ ಹಂತದ ಓವರುಗಳಲ್ಲಿ ವರುಣ್ ಚಕ್ರವರ್ತಿ (16ಕ್ಕೆ3) ಎದುರಾಳಿಗಳು
ಚೇತರಿಸಿಕೊಳ್ಳದಂತೆ ನೋಡಿಕೊಂಡರು.

ಆರೋರಾ ಪವರ್‌ ಪ್ಲೇ ಅವಧಿಯೊಳಗೆ ಎರಡು ವಿಕೆಟ್ ಪಡೆದರು. 9ನೇ ಓವರ್‌ನಲ್ಲಿ ದಾಳಿಗಿಳಿದ ಚಕ್ರವರ್ತಿ
ಸತತ ನಾಲ್ಕು ಓವರ್‌ಗಳ ಸ್ಪಿನ್ ದಾಳಿಯಲ್ಲಿ ಪ್ರಮುಖ ಬ್ಯಾಟರ್‌ಗಳಾದ ರಿಷಭ್ ಪಂತ್‌
(27, 20ಎ), ಟ್ರಿಸ್ಟನ್‌ ಸ್ಟಬ್ಸ್‌ ಮತ್ತು
ಇಂಪ್ಯಾಕ್ಟ್‌ ಸಬ್‌ ಆದ ಕುಮಾರ್ ಕುಶಾಗ್ರ ಅವರ ವಿಕೆಟ್‌ಗಳನ್ನು ಪಡೆದು ಪೆಟ್ಟು
ಕೊಟ್ಟರು. ಆದರೆ, ಪ್ರಮುಖ ಬೌಲರ್
ಮಿಚೆಲ್ ಸ್ಟಾರ್ಕ್ ಮತ್ತೊಮ್ಮೆ ದುಬಾರಿ ಎನಿಸಿ ಮೂರು ಓವರುಗಳಲ್ಲಿ 43 ರನ್ ತೆತ್ತರು. ಒತ್ತಡದಲ್ಲಿ ದೆಹಲಿಯ ಬ್ಯಾಟರ್‌ಗಳು ಆಕ್ರಮಣಕಾರಿ ಆಟವಾಡಲು
ವಿಫಲರಾದರು.

ದೆಹಲಿ ಕ್ಯಾಪಿಟಲ್ಸ್ ಪರ ಕುಲದೀಪ್ ಯಾದವ್‌ ಕೊನೆಯಲ್ಲಿ ಸ್ವಲ್ಪ ಪ್ರತಿರೋಧ ತೋರಿದರು. ಅವರೇ ಅತಿ ಹೆಚ್ಚು ರನ್ (ಔಟಾಗದೇ 35, 26ಎ) ಗಳಿಸಿದರಲ್ಲದೇ, ತಂಡ 150ರ ಗಡಿ ದಾಟಲು ನೆರವಾದರು. ಒಂದು ಹಂತದಲ್ಲಿ 15 ಓವರುಗಳ ಒಳಗೆ 115 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡಿದ್ದ ಡೆಲ್ಲಿ ತಂಡವನ್ನು ಆಲೌಟ್‌ ಮಾಡಲಾಗದ
ನಿರಾಸೆ ಮಾತ್ರ ಕೋಲ್ಕತ್ತವನ್ನು ಕಾಡಿತು. ಕುಲದೀಪ್ ತಮ್ಮ ಮಾಜಿ ಫ್ರಾಂಚೈಸಿ
ತಂಡವನ್ನು ಕಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT