ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RCB vs GT: ಜಾಕ್ಸ್ ಶತಕದ ಅಬ್ಬರ, ಕೊಹ್ಲಿ ಫಿಫ್ಟಿ; ಆರ್‌ಸಿಬಿಗೆ ಭರ್ಜರಿ ಗೆಲುವು

Published 28 ಏಪ್ರಿಲ್ 2024, 9:40 IST
Last Updated 28 ಏಪ್ರಿಲ್ 2024, 9:40 IST
ಅಕ್ಷರ ಗಾತ್ರ

ಅಹಮದಾಬಾದ್: ವಿಲ್ ಜಾಕ್ಸ್ ಅಮೋಘ ಶತಕ (100*) ಹಾಗೂ ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ (70*) ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಒಂಬತ್ತು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಗೆಲುವಿಗೆ ಒಂದು ರನ್ ಬೇಕಾಗಿದ್ದಾಗ ಸಿಕ್ಸರ್ ಗಳಿಸಿದ ಜಾಕ್ಸ್, ಶತಕ ಗಳಿಸುವುದರೊಂದಿಗೆ ಆರ್‌ಸಿಬಿ ಗೆಲುವಿನ ದಡ ಸೇರಿತು. ಇದು ಐಪಿಎಲ್‌ನಲ್ಲಿ ಜಾಕ್ಸ್ ಗಳಿಸಿದ ಚೊಚ್ಚಲ ಶತಕವಾಗಿದೆ.

201 ರನ್ ಗುರಿ ಬೆನ್ನಟ್ಟಿದ ಆರ್‌ಸಿಬಿ ಇನ್ನೂ ನಾಲ್ಕು ಓವರ್‌ಗಳು ಬಾಕಿ ಉಳಿದಿರುವಂತೆಯೇ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಜಾಕ್ಸ್-ಕೊಹ್ಲಿ ಅಬ್ಬರ...

ಮುರಿಯದ ಎರಡನೇ ವಿಕೆಟ್‌ಗೆ ಕೊಹ್ಲಿ ಹಾಗೂ ಜಾಕ್ಸ್ 166 ರನ್‌ಗಳ ಜೊತೆಯಾಟ ಕಟ್ಟಿದರು. ನಾಯಕ ಫಫ್ ಡುಪ್ಲೆಸಿ 24 ರನ್ ಗಳಿಸಿ ಔಟ್ ಆದರು...

ಈ ಬಾರಿಯ ಐಪಿಎಲ್‌ನಲ್ಲಿ 500 ರನ್ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ ಮಗದೊಂದು ಆಕರ್ಷಕ ಅರ್ಧಶತಕ ಗಳಿಸಿದರು. ಅಲ್ಲದೆ 44 ಎಸೆತಗಳಲ್ಲಿ 70 ರನ್ ಗಳಿಸಿ ಔಟಾಗದೆ ಉಳಿದರು. ಕೊಹ್ಲಿ ಇನಿಂಗ್ಸ್‌ನಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿದ್ದವು.

ಜಾಕ್ಸ್ 10 ಸಿಕ್ಸರ್...

ಮತ್ತೊಂದೆಡೆ ವಿಲ್ ಜಾಕ್ಸ್ 41 ಎಸೆತಗಳಲ್ಲಿ ಐಪಿಎಲ್‌ನ ಚೊಚ್ಚಲ ಶತಕ ಸಾಧನೆ ಮಾಡಿದರು. ಅವರ ಸ್ಫೋಟಕ ಇನಿಂಗ್ಸ್‌ನಲ್ಲಿ 10 ಸಿಕ್ಸರ್ ಹಾಗೂ ಐದು ಬೌಂಡರಿಗಳು ಸೇರಿದ್ದವು.

ಇನಿಂಗ್ಸ್‌ನ 15ನೇ ಹಾಗೂ 16ನೇ ಓವರ್‌ಗಳನ್ನು ಅನುಕ್ರಮವಾಗಿ ಎಸೆದ ಮೋಹಿತ್ ಶರ್ಮಾ ಹಾಗೂ ರಶೀದ್ ಖಾನ್ ಓವರ್‌ಗಳಲ್ಲಿ ತಲಾ 29 ರನ್ ಸೊರೆಗೈದರು. 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಜಾಕ್ಸ್, ಮುಂದಿನ 50 ರನ್‌ಗಾಗಿ ತೆಗೆದುಕೊಂಡಿದ್ದು ಕೇವಲ 10 ಎಸೆತ ಮಾತ್ರ!. ಆ ಮೂಲಕ ಸ್ಮರಣೀಯ ಶತಕ ಗಳಿಸಿದರು.

ಇದರೊಂದಿಗೆ ಗೆಲುವಿನ ಲಯಕ್ಕೆ ಮರಳಿರುವ ಆರ್‌ಸಿಬಿ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಆದರೂ 10 ಪಂದ್ಯಗಳಲ್ಲಿ ಮೂರು ಗೆಲುವಿನೊಂದಿಗೆ ಆರು ಅಂಕ ಗಳಿಸಿದ್ದು, ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.

ವಿಲ್ ಜಾಕ್ಸ್ ಹಾಗೂ ವಿರಾಟ್ ಕೊಹ್ಲಿ

ವಿಲ್ ಜಾಕ್ಸ್ ಹಾಗೂ ವಿರಾಟ್ ಕೊಹ್ಲಿ 

(ಚಿತ್ರ ಕೃಪೆ: X/@IPL)

ಐಪಿಎಲ್‌ನಲ್ಲಿ ಅತಿ ವೇಗದ ಶತಕ ಸಾಧನೆ:

  • ಕ್ರಿಸ್ ಗೇಲ್: 30

  • ಯೂಸುಫ್ ಪಠಾಣ್: 37

  • ಡೇವಿಡ್ ಮಿಲ್ಲರ್ಛ 38

  • ಟ್ರಾವಿಸ್ ಹೆಡ್: 39

  • ವಿಲ್ ಜಾಕ್ಸ್: 41

ಐಪಿಎಲ್‌ನಲ್ಲಿ ಅತಿ ಹೆಚ್ಚು 500ಕ್ಕೂ ಹೆಚ್ಚು ರನ್ ಸಾಧನೆ (ಆವೃತ್ತಿಯೊಂದಲ್ಲಿ):

  • ಡೇವಿಡ್ ವಾರ್ನರ್: 7

  • ವಿರಾಟ್ ಕೊಹ್ಲಿ: 7

  • ಶಿಖರ್ ಧವನ್: 5

  • ಕೆ.ಎಲ್. ರಾಹುಲ್: 5

ಸಾಯಿ, ಶಾರುಕ್ ಹೋರಾಟ ವ್ಯರ್ಥ...

ಈ ಮೊದಲು ಸಾಯಿ ಸುದರ್ಶನ್ (84*) ಹಾಗೂ ಶಾರುಕ್ ಖಾನ್ ಬಿರುಸಿನ ಅರ್ಧಶತಕಗಳ (58) ನೆರವಿನಿಂದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 200 ರನ್ ಪೇರಿಸಿತು.

ಅಹಮದಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಫ್ ಡುಪ್ಲೆಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಅಲ್ಲದೆ ಗುಜರಾತ್‌ನ ಆರಂಭಿಕ ಬ್ಯಾಟರ್‌ಗಳಾದ ನಾಯಕ ಶುಭಮನ್ ಗಿಲ್ (16) ಹಾಗೂ ವೃದ್ಧಿಮಾನ್ ಸಹಾ (5) ವಿಕೆಟ್‌ಗಳನ್ನು ಬೇಗನೇ ಗಳಿಸುವಲ್ಲಿ ಯಶಸ್ವಿಯಾಗಿತ್ತು.

ಆದರೆ ಮೂರನೇ ವಿಕೆಟ್‌ಗೆ 86 ರನ್‌ಗಳ ಜೊತೆಯಾಟ ಕಟ್ಟಿದ ಸಾಯಿ ಸುದರ್ಶನ್ ಹಾಗೂ ಶಾರುಕ್ ಖಾನ್, ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು.

ಶಾರೂಕ್ ಖಾನ್ 24 ಎಸೆತಗಳಲ್ಲಿ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕದ ಸಾಧನೆ ಮಾಡಿದರು. ಅಲ್ಲದೆ 30 ಎಸೆತಗಳಲ್ಲಿ 58 ರನ್ ಗಳಿಸಿ (5 ಸಿಕ್ಸರ್, 3 ಬೌಂಡರಿ) ಔಟ್ ಆದರು.

ಸಾಯಿ ಸುದರ್ಶನ್ ಹಾಗೂ ಶಾರುಕ್ ಖಾನ್

ಸಾಯಿ ಸುದರ್ಶನ್ ಹಾಗೂ ಶಾರುಕ್ ಖಾನ್

(ಪಿಟಿಐ ಚಿತ್ರ)

ಮತ್ತೊಂದೆಡೆ ಆರ್‌ಸಿಬಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಸುದರ್ಶನ್ 84 ರನ್ ಗಳಿಸಿ ಔಟಾಗದೆ ಉಳಿದರು. 49 ಎಸೆತಗಳನ್ನು ಎದುರಿಸಿದ ಸಾಯಿ ಇನಿಂಗ್ಸ್‌ನಲ್ಲಿ ಎಂಟು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು.

ಕೊನೆಯ ಹಂತದಲ್ಲಿ ಡೇವಿಡ್ ಮಿಲ್ಲರ್ ಅಜೇಯ 26 ರನ್‌ಗಳ (19 ಎಸೆತ, 1 ಸಿಕ್ಸರ್, 2 ಬೌಂಡರಿ) ಕೊಡುಗೆ ನೀಡಿದರು. ಆರ್‌ಸಿಬಿ ಪರ ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ತಲಾ ಒಂದು ವಿಕೆಟ್ ಗಳಿಸಿದರು.

ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್...

ಈ ಮೊದಲು ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಫ್ ಡುಪ್ಲೆಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಸತತ ಆರು ಸೋಲಿನ ಬಳಿಕ ಕೊನೆಗೂ ಗೆಲುವಿನ ಲಯಕ್ಕೆ ಮರಳಿರುವ ಆರ್‌ಸಿಬಿ, ಪ್ಲೇ-ಆಫ್ ಕನಸು ಜೀವಂತವಾಗಿರಿಸಲು ಮಂದಿನ ಎಲ್ಲ ಪಂದ್ಯಗಳಲ್ಲೂ ಗೆಲ್ಲುವ ಒತ್ತಡಕ್ಕೊಳಗಾಗಿದೆ.

ಈವರೆಗೆ ಆಡಿರುವ 9 ಪಂದ್ಯಗಳಲ್ಲಿ ನಾಲ್ಕು ಅಂಕ ಮಾತ್ರ ಗಳಿಸಿದ್ದು, ಕೊನೆಯ ಸ್ಥಾನದಲ್ಲಿದೆ. ಮತ್ತೊಂದೆಡೆ ಗುಜರಾತ್ ಒಂಬತ್ತು ಪಂದ್ಯಗಳಲ್ಲಿ ನಾಲ್ಕು ಗೆಲುವಿನೊಂದಿಗೆ ಎಂಟು ಅಂಕ ಗಳಿಸಿದ್ದು, ಏಳನೇ ಸ್ಥಾನದಲ್ಲಿದೆ.

ತಂಡದಲ್ಲಿರುವ ಎಲ್ಲರೂ ಕಳೆದ ಪಂದ್ಯದ ಲಯವನ್ನೇ ಮುಂದುವರಿಸಿದರೆ ಮತ್ತೊಂದು ಜಯದ ಸಂಭ್ರಮ ಅಚರಿಸಬಹುದು. ರನ್ ಬೇಟೆಯಲ್ಲಿ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT