ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಹಾ...! ಭಾರತ ಕ್ರಿಕೆಟ್ ಚಿತ್ರಶಾಲೆ

Published 27 ಏಪ್ರಿಲ್ 2024, 23:34 IST
Last Updated 27 ಏಪ್ರಿಲ್ 2024, 23:34 IST
ಅಕ್ಷರ ಗಾತ್ರ

‘90ರ ದಶಕದಲ್ಲಿ ಮೊದಲ ಬಾರಿ ಭಾರತಕ್ಕೆ ಬಂದಿದ್ದೆ. ಅದರ ನಂತರವೂ ಹಲವು ಬಾರಿ ಬಂದಿದ್ದೇನೆ. ಆದರೆ ಆಗೆಲ್ಲ ಆಸ್ಟ್ರೇಲಿಯಾ ತಂಡದ ಆಟಗಾರನಾಗಿ, ನಾಯಕನಾಗಿ ಆಡಲು ಬರುತ್ತಿದ್ದೆ. ತಂಡದ ಬಸ್‌ನಲ್ಲಿ ಕುಳಿತು ಕಿಟಕಿಯಿಂದ ಹೊರಗೆ ನೋಡುತ್ತ ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ಹೋಗಿ ಬಂದ ನೆನಪುಗಳು ಹಲವು. ಆದರೆ ಆಗ ಕಿಟಕಿಯಿಂದ ಕಂಡಿದ್ದಷ್ಟೇ ಭಾರತವಲ್ಲ ಎಂಬುದು ಈಗ ನನ್ನ ನೆಚ್ಚಿನ ಸಂಗಾತಿ ಕ್ಯಾಮೆರಾ ಹಿಡಿದು ಈ ದೇಶಕ್ಕೆ ಬಂದಾಗ ಅನಿಸಿತು. ಕ್ರೀಡಾಂಗಣಗಳಾಚೆ ಗಲ್ಲಿ ಗಲ್ಲಿಗಳಲ್ಲಿಯೂ ಅಪ್ಪಟ ಕ್ರಿಕೆಟ್ ಪ್ರೀತಿ ತುಂಬಿದೆ. ಕ್ರಿಕೆಟ್ ಇಲ್ಲಿಯ ಧರ್ಮವೇ ಆಗಿಹೋಗಿದೆ’–ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಯಶಸ್ವಿ ಆಲ್‌ರೌಂಡರ್ ಸ್ಟೀವ್‌ ವಾ ಅವರ ಮಾತುಗಳಿವು.

ಹೋದ ವರ್ಷ ಸುಮಾರು ಮೂರು ತಿಂಗಳಿಗೂ ಹೆಚ್ಚು ಸಮಯ ಭಾರತದ ಮೂಲೆಮೂಲೆಗಳನ್ನು ಓಡಾಡಿದ್ದ ಸ್ಟೀವ್‌ ಗಲ್ಲಿ ಗಲ್ಲಿಗಳಲ್ಲಿ ನಡೆಯುವ ಕ್ರಿಕೆಟ್‌ ಚಟುವಟಿಕೆಗಳನ್ನು ಸೆರೆ ಹಿಡಿದಿದ್ದಾರೆ. ಸಾವಿರಾರು ಚಿತ್ರಗಳನ್ನು ಕ್ಲಿಕ್ಕಿಸಿದರೂ ತಮ್ಮ ‘ಸ್ಪಿರಿಟ್ ಆಫ್ ಕ್ರಿಕೆಟ್, ಇಂಡಿಯಾ’ ಪುಸ್ತಕದಲ್ಲಿ  ಆಯ್ದ 220 ಚಿತ್ರಗಳನ್ನು ಮಾತ್ರ ಪ್ರಕಟಿಸಿದ್ದಾರೆ. 320 ಪುಟಗಳ ಈ ಪುಸ್ತಕದಲ್ಲಿರುವ ಚಿತ್ರಗಳು ದೇಶದ ಕ್ರಿಕೆಟ್‌ ಕ್ರೇಜ್‌ ಅನ್ನು ಇಂಚಿಂಚಾಗಿ ಅನಾವರಣಗೊಳಿಸುತ್ತದೆ. 

ರಾಜಸ್ಥಾನದ ಮರಳುಗಾಡಿನಲ್ಲಿ ಚೆಂಡೇ ಪುಟಿಯದ ನೆಲದಲ್ಲಿಯೂ ಕ್ರಿಕೆಟ್ ಆಡುವ ಮಕ್ಕಳ ಉತ್ಸಾಹ ಮಾತ್ರ  ಆಗಸದೆತ್ತರಕ್ಕೆ ಚಿಮ್ಮುತ್ತದೆ. ಉರಿಬಿಸಿಲಿಗೂ ಜಗ್ಗದ ಹುಡುಗರ ಆಟವನ್ನು ವರ್ಣಿಸಲು ಸ್ಟೀವ್‌ ಪದಗಳಿಗೆ ತಡಕಾಡಿದ್ದಾರೆ. ಅದಕ್ಕೇ ಚಿತ್ರಗಳ ಮೂಲಕವೇ ಆ ಕಥೆಯನ್ನು ಮನಮುಟ್ಟುವಂತೆ ತೋರಿಸಿದ್ದಾರೆ. ಹಿಮಾಲಯದ ಚಳಿಯಲ್ಲಿ ಬೌದ್ಧಬಿಕ್ಕುಗಳೂ ಚೆಂಡು–ದಾಂಡು ಹಿಡಿದು ಸಂಭ್ರಮಿಸುವ ನೋಟವೂ ಅವರಿಗೆ ಅಪ್ಯಾಯಮಾನವಾಗಿ ಕಂಡಿದೆ. ಧರ್ಮಶಾಲಾದ ಸುಂದರವಾದ ಕ್ರೀಡಾಂಗಣದಲ್ಲಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಪ್ರತಿಭೆ ನೋಡಿ ಮೂಕವಿಸ್ಮಿತರಾಗಿದ್ದಾರೆ ಸ್ಟೀವ್‌.  ಕೋಲ್ಕತ್ತ, ದೆಹಲಿ, ಮುಂಬೈಗಳಲ್ಲಿ ಒಂದು ಕಾಲಿಲ್ಲದ ಅಂಗವಿಕಲ ಹುಡುಗರು ಊರುಗೋಲು ಹಿಡಿದುಕೊಂಡೇ ಕ್ರಿಕೆಟ್‌ ಆಡುವ ಪರಿಗೆ ಕ್ಯಾಮೆರಾ ಲೆನ್ಸ್‌ ಹಿಂದಿನ ಕಣ್ಣು ಮಂಜಾಗಿದ್ದೂ ಇದೆ. 

‘ಗಿಲಿ ಗಿಲಿ..’ ಸದ್ದು ಮಾಡುತ್ತ ಬರುವ ಚೆಂಡನ್ನು ಹೊಡೆಯುವ ಅಂಧ ಬ್ಯಾಟರ್‌ ನೋಡಿದ ವಿಶ್ವಕಪ್ ವಿಜೇತ ಸ್ಟೀವ್‌ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಅಷ್ಟೇ ಅಲ್ಲ; ತಮ್ಮ ಕಣ್ಣುಗಳಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಬ್ಯಾಟ್ ಹಿಡಿದು ಆ ಚೆಂಡಿನ ಸದ್ದು ಗುರುತಿಸುವಲ್ಲಿ ಯಶಸ್ವಿಯಾಗಿ ಸ್ವೀಪ್ ಮಾಡಿ, ಸಾರ್ಥಕತೆಯ ನಗೆಯನ್ನು ಬೀರಿದ್ದರು. ಭಾರತದ ಜನಜೀವನದ ಉಸಿರಿನಲ್ಲಿ ಕ್ರಿಕೆಟ್ ತುಂಬಿರುವುದನ್ನು ಕಂಡು ದಾಖಲಿಸಿದ್ದಾರೆ. 1997ರಲ್ಲಿ ಈಡನ್ ಗಾರ್ಡನ್‌ ಟೆಸ್ಟ್‌ನಲ್ಲಿ ಶತಕ ಹೊಡೆದಿದ್ದ ಸಂದರ್ಭದಲ್ಲಿಯೂ ಸ್ಟೀವ್ ಇಷ್ಟೊಂದು ಸಂಭ್ರಮಿಸಿರಲಿಲ್ಲವಂತೆ. ಅಷ್ಟೊಂದು ಖುಷಿ ಮತ್ತು ಧನ್ಯತಾಭಾವ ಈ ಪಯಣದಲ್ಲಿ ಕಂಡಿದ್ದಾರೆ. 168 ಟೆಸ್ಟ್‌, 325 ಏಕದಿನ ಪಂದ್ಯಗಳಲ್ಲಿ ಆಡಿರುವಷ್ಟೇ ತಾಳ್ಮೆ ಮತ್ತು ಕೌಶಲವನ್ನು ತಮ್ಮ ಚಿತ್ರಗಳಲ್ಲಿಯೂ ತೋರಿದ್ದಾರೆ. ಈ ಪಯಣದಲ್ಲಿ ಕೊಳೆಗೇರಿ, ಹಳ್ಳಿಗಳು, ಅಕಾಡೆಮಿಗಳಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳು, ಟೈಂ ಪಾಸ್‌ಗಾಗಿ ಕ್ರಿಕೆಟ್‌ ಆಡುತ್ತ ಸಂಭ್ರಮಿಸುವ ‘40 ಪ್ಲಸ್‌ ಯುವಕರು’ ಸೇರಿದಂತೆ ಎಲ್ಲರೊಂದಿಗೆ ಹರಟೆ ಹೊಡೆದಿದ್ದಾರೆ. ಎಲ್ಲ ನೆನಪುಗಳೊಂದಿಗೆ ತಾಯ್ನಾಡಿಗೆ ಮರಳಿದ್ದಾರೆ. 

ಕ್ರಿಕೆಟ್‌ ಅನ್ನು ಉಸಿರಿನಷ್ಟೇ ಪ್ರೀತಿಸುವ ಸ್ಟೀವ್‌ ವಾ ಅವರ ಇಂಥ ಅನನ್ಯ ದಾಖಲೆಗೆ ಭಾರತೀಯರು ಹೇಳಬೇಕು; ವಾರೆವ್ಹಾ!

ಆ ಹೊತ್ತಿನಲ್ಲಿ ನಮ್ಮವರೇ ಆಗಿದ್ದರು..

ವಿಶ್ವದ ಕ್ರಿಕೆಟ್‌ನಲ್ಲಿ ಯಶಸ್ವಿ ಆಲ್‌ರೌಂಡರ್ ಮತ್ತು ನಾಯಕರಲ್ಲಿ ಸ್ಟೀವ್ ವಾ ಅವರ ಹೆಸರೂ ಪ್ರಮುಖವಾಗಿದೆ. ಆಸ್ಟ್ರೇಲಿಯಾ ತಂಡಕ್ಕೆ ವಿಶ್ವಕಪ್‌ ಕಿರೀಟ ಮತ್ತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಉತ್ತುಂಗ ಗೌರವ ಕೊಡಿಸಿದ ನಾಯಕ ಅವರು. ಆದರೆ ಭಾರತದ ಕ್ರಿಕೆಟ್‌ ಕಣ್ತುಂಬಿಕೊಳ್ಳುವ ಅವರ ಅದಮ್ಯವಾದ ಛಲ ನನಗಂತೂ ಬೆರಗು ಮೂಡಿಸಿತ್ತು. ಆ ಸಂದರ್ಭದಲ್ಲಿ ಅವರು ಮುಂಬೈಗೆ ಬಂದಾಗ ಒಂದಷ್ಟು ಸಮಯ ಅವರೊಂದಿಗೆ ಕಳೆದಿದ್ದೆ. 

ಭಾರತದ ಅತ್ಯಂತ ಹಿರಿಯ ವಯಸ್ಸಿನ ಕ್ರಿಕೆಟಿಗರಾಗಿದ್ದ ವಸಂತ ರಾಯಜಿ ಅವರ ಮನೆಗೆ ಕರೆದುಕೊಂಡು ಹೋಗಿದ್ದೆ. ಸ್ಟೀವ್‌ ಅವರು ರಾಯಜಿಯವರನ್ನು ಸಂದರ್ಶಿಸಿದ್ದರು. ರಾಯಜಿ ಅವರ ಬಳಿ ಇದ್ದ ಡಾನ್ ಬ್ರಾಡ್ಮನ್ ಸೇರಿದಂತೆ ಹಲವು ದಿಗ್ಗಜ ಆಟಗಾರರ ಪತ್ರಗಳನ್ನು ನೋಡಿದ್ದ ಸ್ಟೀವ್ ಅಚ್ಚರಿಗೊಂಡಿದ್ದರು. ಅಷ್ಟೊಂದು ಜತನದಿಂದ ಅವುಗಳನ್ನು ಕಾಪಾಡಿದ್ದ ರಾಯಜಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

‘ಭಾರತದ ಸಾರ್ವಕಾಲೀಕ ಶ್ರೇಷ್ಠ ನಾಯಕ ಮತ್ತು ಕ್ರಿಕೆಟಿಗನೆಂದರೆ ಕರ್ನಲ್ ಸಿ.ಕೆ. ನಾಯ್ಡು. ಅವರು ಮುಂಬೈನಲ್ಲಿ ಅವತ್ತು ಎಂಸಿಸಿ ವಿರುದ್ಧ ಆಡಿದ ಇನಿಂಗ್ಸ್‌ ಬಿಳಿಯರ ಕಣ್ಣು ತೆರೆಸಿತ್ತು. ಭಾರತಕ್ಕೂ ಟೆಸ್ಟ್ ಕ್ರಿಕೆಟ್ ಮಾನ್ಯತೆ ನೀಡುವ ಬಗ್ಗೆ ಯೋಚಿಸಿತ್ತು. ಅವರ ಆ ಆಟವು ಭಾರತ ಕ್ರಿಕೆಟ್‌ನ ಭವಿಷ್ಯವನ್ನೇ ಬದಲಿಸಿಬಿಟ್ಟಿತು’ ಎಂದು ರಾಯಜಿ ವಿವರಿಸಿದ್ದರು. ಅದನ್ನು ಸ್ಟೀವ್ ಬಹಳ ಶ್ರದ್ಧೆಯಿಂದ ದಾಖಲಿಸಿದ್ದಾರೆ. 

ಅವರ ಮನೆಗೆ ಹೋದಾಗ ನಾವೆಲ್ಲರೂ ಬೂಟುಗಳನ್ನು ಹೊರಗೆ ಬಿಟ್ಟು ಬಂದಿದ್ದನ್ನು ಗಮನಿಸಿದ ಸ್ಟೀವ್ ತಾವೂ ಹಾಗೇ ಮಾಡಿದರು. ಅವರ ಮನೆಯೊಳಗೆ ಹೋದಾಗಲೂ ಕುರ್ಚಿ ಮೇಲೆ ಕೂರದೇ ನೆಲದಲ್ಲಿಯೇ ಕುಳಿತು (ತಮಗೆ ರೂಢಿಯಿಲ್ಲದಿದ್ದರೂ) ರಾಯಜಿಯೊಂದಿಗೆ ಸಂಭಾಷಣೆಯಲ್ಲಿ ತೊಡಗಿದರು.

ಅವರ ಮನೆಯಲ್ಲಿ ನೀಡಿದ ಡೋಕ್ಲಾ, ಸಿಹಿ ತಿಂಡಿ, ಪಾಪಡಿ ಮತ್ತಿತರ ಗುಜರಾತಿ ತಿನಿಸುಗಳನ್ನು ಖುಷಿಯಿಂದಲೇ ಸವಿದರು. ಒಂದು ಪದಾರ್ಥದ ಹೆಸರು, ಬಳಸಿದ ಸಾಮಗ್ರಿಗಳ ಕುರಿತು ಕೇಳುತ್ತ ತಿಂದಿದ್ದು ವಿಶೇಷವಾಗಿತ್ತು.  ಅದೇ ಸಮಯಕ್ಕೆ ಅಲ್ಲಿಗೆ ಸಚಿನ್ ತೆಂಡೂಲ್ಕರ್ ಕೂಡ ಬಂದರು. ರಾಯಜಿ ಮತ್ತು ಸಚಿನ್ ಅವರೊಂದಿಗೆ ಸ್ಟೀವ್ ದೀರ್ಘ ಸಮಯ ಮಾತುಕತೆ ನಡೆಸಿದರು. ಈ ಹೊತ್ತಿನಲ್ಲಿ ಅವರೊಂದಿಗೆ ಬಂದಿದ್ದ ನೆರವು ಸಿಬ್ಬಂದಿ ಮತ್ತು ಸ್ಟೀವ್ ಸೇರಿ ನೂರಾರು ಚಿತ್ರಗಳನ್ನು ಕ್ಲಿಕ್ಕಿಸಿದರು. ಆದರೆ ಪುಸ್ತಕದಲ್ಲಿ ಪ್ರಕಟವಾಗಿದ್ದು ಒಂದು ಚಿತ್ರ ಮಾತ್ರ. ಅಂದರೆ ಅವರ ಆಯ್ಕೆ ಎಷ್ಟೊಂದು ಸೂಕ್ಷ್ಮ ಮತ್ತು ವೃತ್ತಿಪರ ಎಂಬುದನ್ನು ಮನಗಾಣಬಹುದು. 

 ಮಾರ್ಕಸ್ ಕುಟೊ ಬಿಸಿಸಿಐ ನಿವೃತ್ತ ಅಂಪೈರ್, ಮುಂಬೈ

ಮಾರ್ಕಸ್ ಕುಟೊ ಸಚಿನ್ ತೆಂಡೂಲ್ಕರ್ ವಸಂತ್ ರಾಯಜಿ ಹಾಗೂ ಸ್ಟೀವ್ ವಾ -ಸಂಗ್ರಹ ಚಿತ್ರ
ಮಾರ್ಕಸ್ ಕುಟೊ ಸಚಿನ್ ತೆಂಡೂಲ್ಕರ್ ವಸಂತ್ ರಾಯಜಿ ಹಾಗೂ ಸ್ಟೀವ್ ವಾ -ಸಂಗ್ರಹ ಚಿತ್ರ
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT