ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿ ನಾಡಲ್ಲಿ ಪರಂಗಿ ಘಮಲು

Last Updated 19 ಮೇ 2014, 19:30 IST
ಅಕ್ಷರ ಗಾತ್ರ

ಸೋನಾಮಸೂರಿ ಅಕ್ಕಿ ಎಂದರೆ ಥಟ್ಟನೆ ನೆನಪಿಗೆ ಬರುವುದು ಕೊಪ್ಪಳ ಜಿಲ್ಲೆಯ ಗಂಗಾವತಿ.  ಬರೀ ಭತ್ತದ ಬೆಳೆಗಷ್ಟೇ ಹೆಸರು ಮಾಡಿದ್ದ ಗಂಗಾವತಿ ತಾಲ್ಲೂಕೀಗ ತೋಟಗಾರಿಕಾ ಕ್ಷೇತ್ರದಲ್ಲೂ ದಾಪುಗಾಲು ಇಟ್ಟಿದೆ.

ಇದಕ್ಕೆ ಸಾಕ್ಷಿ ಗಂಗಾವತಿ ತಾಲ್ಲೂಕಿನ ಜೀರಾಳ ಗ್ರಾಮದ ರೈತ ಫಕೀರೇಶ್. ಸುಲಭದಲ್ಲಿ ಬೆಳೆಯಬಹುದಾದ ಪಪ್ಪಾಯ ಬೆಳೆಯ ಮೂಲಕವೂ ಆರ್ಥಿಕವಾಗಿ ಸದೃಢರಾಗಬಹುದು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ.ತೋಟಗಾರಿಕೆ ಇಲಾಖೆಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ನವೀನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ತಮ್ಮ ಎರಡು ಎಕರೆ ಜಮೀನಿನಲ್ಲಿ ಪಪ್ಪಾಯ ಬೆಳೆ ಬೆಳೆದು ಉತ್ತಮ ಲಾಭ ಗಳಿಸಿದ್ದಾರೆ.

ರೆಡ್‌ಲೇಡಿ ತಳಿ
ತೋಟಗಾರಿಕೆ ಸಹಾಯಕ ಅಧಿಕಾರಿ ಪ್ರಶಾಂತ ನಾಯಕ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವಸಂತಪ್ಪನವರ ಅವರ ಬಳಿ ತರಬೇತಿ ಪಡೆದ ಫಕೀರೇಶ, ತಮ್ಮ ಜಮೀನಿನಲ್ಲಿ ‘ರೆಡ್‌ಲೇಡಿ’ ತಳಿಯ 2,300 ಪಪ್ಪಾಯ ಸಸಿಗಳನ್ನು ನಾಟಿ ಮಾಡಿದ್ದಾರೆ. ಸಸಿಗಳ ವೆಚ್ಚ, ಭೂಮಿ ತಯಾರಿಕೆ, ಸಸ್ಯ ಸಂರಕ್ಷಣಾ ಔಷಧಿಗಳು ಮುಂತಾದವುಗಳಿಗೆಂದು ಸುಮಾರು  1.80 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇಲಾಖೆಯಿಂದ ಶೇ 50ರ ಸಬ್ಸಿಡಿ ಅಲ್ಲದೇ ಹನಿ ನೀರಾವರಿಗೆ ಶೇ 75ರ ಸಬ್ಸಿಡಿ ಇವರಿಗೆ ದೊರೆತಿದೆ.

ನಾಟಿ ಮಾಡಿದ 8 ತಿಂಗಳಿಂದಲೇ ಇಳುವರಿ ಆರಂಭವಾಗಿದೆ. ಇದುವರೆಗೂ ಸುಮಾರು 30 ಟನ್‌ಗಳಷ್ಟು ಇಳುವರಿ ಪಡೆದಿರುತ್ತಾರೆ. ಮುಂಬೈನ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಗೆ ಸರಾಸರಿ ₨ 12 ರಂತೆ ಬೆಲೆ ಸಿಕ್ಕಿದ್ದರಿಂದ
₨ 3.5 ಲಕ್ಷ  ಆದಾಯ ಗಳಿಸಿರುತ್ತಾರೆ. ಇನ್ನೂ 20 ಟನ್‌ಗಳಷ್ಟು ಇಳುವರಿ ಬರುವ ನಿರೀಕ್ಷೆ ಇದೆ. ‘20 ಟನ್‌ ಇಳುವರಿಯಿಂದ ಏನಿಲ್ಲವೆಂದರೂ 5 ಲಕ್ಷ ರೂಪಾಯಿ ವಹಿವಾಟು ಆಗುವ ಸಾಧ್ಯತೆ ಇದೆ. ನಾನು ಮಾಡಿರುವ ಖರ್ಚನ್ನೆಲ್ಲ ಕಳೆದರೂ ಕನಿಷ್ಠ 3 ಲಕ್ಷ ರೂಪಾಯಿ ಆದಾಯ ಸಿಗುತ್ತದೆ. ಬೆಲೆ ಮಾಮೂಲಿಗಿಂತ ಹೆಚ್ಚಾದರೆ 5ಲಕ್ಷ ರೂಪಾಯಿ ಆದಾಯ ಕಟ್ಟಿಟ್ಟ ಬುತ್ತಿ’ ಎನ್ನುತ್ತಾರೆ ಫಕೀರೇಶ. ಪಪ್ಪಾಯದಿಂದಾಗಿ ತಮ್ಮ ಆರ್ಥಿಕ ಮಟ್ಟ ಸುಧಾರಣೆ ಆಗಿದೆ ಎಂಬ ಹೆಮ್ಮೆ ಅವರದ್ದು.

ತೋಟಗಾರಿಕೆ ಇಲಾಖೆ ನೆರವು
ಇವೆಲ್ಲವೂ ತೋಟಗಾರಿಕೆ ಇಲಾಖೆಯ ನೆರವಿನಿಂದ ಮಾತ್ರ ಸಾಧ್ಯವಾಗಿದೆ ಎನ್ನುವುದು ಫಕೀರೇಶ ಅವರ ಮಾತು. ಇಲಾಖೆಯಿಂದ ಹಲವಾರು ಯೋಜನೆಗಳು ಲಭ್ಯವಿವೆ.  ಕಳೆದ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯನ್ನು  ಇಲಾಖೆ ವತಿಯಿಂದ ಪರಿಚಯಿಸಲಾಗಿದೆ.

ಈ ಯೋಜನೆ ಅಡಿ ಸಣ್ಣ, ಅತೀ ಸಣ್ಣ ಮತ್ತು ಅನುಸೂಚಿತ ಜಾತಿಯ ರೈತರನ್ನು ಹೋಬಳಿ ಮಟ್ಟದಲ್ಲಿ ಗುರುತಿಸಲಾಗಿದೆ. ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಸೂಕ್ತ ಬೆಳೆ ಬೆಳೆಯಲು ಅನುವು ಮಾಡಿಕೊಡಲಾಗಿದೆ.
ಗುಣಮಟ್ಟದ ಇಳುವರಿ ಮತ್ತು ಆದಾಯ ಪಡೆಯಲು ಗುಚ್ಛಗ್ರಾಮಗಳ ಮತ್ತು ಫಲಾನುಭವಿ ರೈತರನ್ನು ಆಯ್ಕೆ ಮಾಡುವ ಪ್ರಕ್ರಿಯೆಯೂ ನಡೆದಿದೆ.

‘ನೂತನ ತಂತ್ರಜ್ಞಾನ ಅಳವಡಿಸಿಕೊಂಡು ತೋಟಗಾರಿಕೆಯನ್ನು ಲಾಭದಾಯಕವನ್ನಾಗಿಸಿಕೊಳ್ಳುವ ಮೂಲಕ ಉತ್ತಮ ಲಾಭ ಪಡೆಯುತ್ತಿರುವ ರೈತ ಉಳಿದ ಪಪ್ಪಾಯ ಬೆಳೆಗಾರರಿಗಿಂತ ಭಿನ್ನವಾಗಿ ಕಾಣುತ್ತಾರೆ.  ರೈತರು ಇಂತಹ ತೋಟಗಾರಿಕಾ ಕ್ಷೇತ್ರಗಳಿಗೆ ಭೇಟಿ ನೀಡಿ ಹೊಸ ತಂತ್ರಜ್ಞಾನದತ್ತ ಗಮನಹರಿಸಬೇಕಿದೆ’ ಎನ್ನುತ್ತಾರೆ ತೋಟಗಾರಿಕೆ ಉಪನಿರ್ದೇಶಕರಾದ ಶಶಿಕಾಂತ ಕೋಟಿಮನಿ. ಹೆಚ್ಚಿನ ವಿವರಗಳಿಗೆ ಕೊಪ್ಪಳದ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ಸಂಪರ್ಕ ಸಂಖ್ಯೆ 08539 230170.
    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT