ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗುಂಬೆಯಲ್ಲೂ ದೊಣ್ಣೆಮೆಣಸು

Last Updated 24 ಜೂನ್ 2013, 19:59 IST
ಅಕ್ಷರ ಗಾತ್ರ

ಆಗುಂಬೆಯಂತಹ ಭಾರಿ ಮಳೆ ಗಾಳಿ ಬೀಳುವ ಪ್ರದೇಶದಲ್ಲಿ ದೊಣ್ಣೆಮೆಣಸು (ಕ್ಯಾಪ್ಸಿಕಮ್) ಬೆಳೆಯುವುದು ಅಸಾಧ್ಯ ಎಂದೇ ಹೇಳುವುದುಂಟು. ಆದರೆ ಇದನ್ನು ಸಾಧ್ಯ ಮಾಡಿ ತೋರಿಸಿದ್ದಾರೆ ನಾಲ್ವರು ಮಿತ್ರರು.

ಇಲ್ಲಿಯ ಹೂವು ತರಕಾರಿ ಬೆಳೆಯುವ ಸ್ವ- ಸಹಾಯ ಸಂಘದ ಸದಸ್ಯರಾಗಿರುವ ಮಹಾಬಲೇಶ್, ಗಿರೀಶ್, ಶಬ್ಬೀರ್ ಹಾಗೂ ನಿಶಾಂತ್ 1000ಚ.ಮೀ ವಿಸ್ತೀರ್ಣದ ತೋಟದಲ್ಲಿ ಈ ಮೆಣಸು ಬೆಳೆಯುವ ಸಾಹಸಕ್ಕೆ ಕೈಹಾಕಿ ಅದರಲ್ಲಿ ಯಶ ಗಳಿಸಿದ್ದಾರೆ.

ಒಂದು ಸಾವಿರ ಚ.ಮೀ ಪಾಲಿಹೌಸ್ ನಿರ್ಮಿಸಿದ್ದಾರೆ. ಅದರಲ್ಲಿ 3 ಅಡಿ ಅಗಲ ಹಾಗೂ 70 ಅಡಿ ಉದ್ದದಷ್ಟು ಜಾಗ ಬಿಡಲಾಗಿದೆ. ಕಳೆ ಬೆಳೆಯದೇ ಇರಲಿ ಎಂಬ ಕಾರಣಕ್ಕೆ ಇದರ ಮೇಲೆ ಕಪ್ಪು ಪ್ಲಾಸ್ಟಿಕ್ ಶೀಟ್ ಹಾಸಲಾಗಿದೆ. ಇದರ ಮೇಲೆ ವೈಜ್ಞಾನಿಕ ರೀತಿಯಲ್ಲಿ ಬೀಜ ಹಾಕಲಾಗಿದೆ.

`ಬೀಜ ಹಾಕಿದ 8 ದಿನಕ್ಕೆ ಮೊಳಕೆ ಬರುತ್ತದೆ. 21 ದಿನ ಆಗುವಷ್ಟರಲ್ಲಿ ಗಿಡ ನೆಡಲು ರೆಡಿಯಾಗುತ್ತದೆ. ನಾಟಿ ಮಾಡಿದ ಎರಡು ತಿಂಗಳಲ್ಲಿ ಹೂವು ಬಿಡಲಿಕ್ಕೆ ಆರಂಭವಾಗುತ್ತದೆ. ತದನಂತರ ಕ್ಯಾಪ್ಸಿಕಂ (ಮೂರು ತಿಂಗಳಲ್ಲಿ) ಕೊಯ್ಲಿಗೆ ತಯಾರಾಗುತ್ತದೆ. ಈ ಪಾಲಿ ಹೌಸಿನಲ್ಲಿ ಬೆಳೆಯುತ್ತಿರುವುದರಿಂದ ವರ್ಷವಿಡೀ ಫಸಲು ನೀಡುತ್ತದೆ' ಎನ್ನುತ್ತಾರೆ ಈ ಮಿತ್ರರು.

ನೆಡುವ ವಿಧಾನ
ಗಿಡದಿಂದ ಗಿಡಕ್ಕೆ ಹಾಗೂ ಸಾಲಿನಿಂದ ಸಾಲಿಗೆ 1 ಸೆಂ.ಮೀ. ಅಂತರ ಇರಬೇಕು. ಶೇ 25ರಷ್ಟು ರಾಸಾಯನಿಕ ಗೊಬ್ಬರ ನೀಡಿದರೆ ಉಳಿದ ಶೇ 75ರಷ್ಟು ಗಂಜಲ, ಜೀವಾಮೃತ ನೀಡಬೇಕು. ಎಲ್ಲಾ ಗಿಡದ ಬುಡಕ್ಕೆ ಪೈಪ್ ಅಳವಡಿಸಬೇಕು. ಹೀಗೆ ಮಾಡಿದರೆ ಪ್ರತಿ ಪಾಲಿಹೌಸ್‌ನಲ್ಲಿ ಒಂದು ಸಾವಿರ ಗಿಡಗಳನ್ನು ನೆಡಬಹುದು. ಆದರೆ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಪರಿಣಾಮಕಾರಿ ಔಷಧಿ ಸಿಂಪಡಿಸಬೇಕು. ಇಲ್ಲದಿದ್ದರೆ ರೋಗಬಾಧೆ ಖಂಡಿತ ಇದಕ್ಕೆ ತಗಲುತ್ತದೆ.

1 ಕೆ.ಜಿ. ಕ್ಯಾಪ್ಸಿಕಮ್‌ಗೆ 25 ರಿಂದ 30 ರೂಪಾಯಿ ಇದೆ. ವಾರಕ್ಕೆ 4 ಕ್ವಿಂಟಾಲ್ ಕೊಯ್ಲಿಗೆ ಬರುತ್ತದೆ. ಉತ್ತಮ ಗುಣಮಟ್ಟದ ಒಳ್ಳೆಯ ಗಾತ್ರದ ಮೆಣಸು ಬೆಳೆಯುತ್ತಿದ್ದು, ಸಾಕಷ್ಟು ಬೇಡಿಕೆ ಇದೆ.  ಉಡುಪಿ, ಮಣಿಪಾಲ ಹೀಗೆ ಇದರ ಬೇಡಿಕೆ ಹೆಚ್ಚು ಇದ್ದಲ್ಲಿ ಮಾರುಕಟ್ಟೆಯನ್ನು ಮೊದಲೇ ಕಂಡುಕೊಂಡರೆ ಹೆಚ್ಚಿನ ಲಾಭ ಗಳಿಸಲು ಸಾಧ್ಯ ಎನ್ನುತ್ತಾರೆ ಅವರು. ಪಾಲಿ ಹೌಸ್, ಬಿತ್ತನೆ ಬೀಜ, ನೀರಿನ ವ್ಯವಸ್ಥೆ, ರಸಗೊಬ್ಬರ, ಔಷಧಿ ಸಿಂಪಡನೆ ಇತ್ಯಾದಿಗಳಿಗೆ ಒಟ್ಟು ತಗುಲಿದ ವೆಚ್ಚ 9 ಲಕ್ಷ. ಇದರಲ್ಲಿ  3.5 ಲಕ್ಷ ರೂಪಾಯಿಗಳನ್ನು ತೋಟಗಾರಿಕಾ ಇಲಾಖೆ ಸಹಾಯಧನವಾಗಿ ನೀಡಿದೆ. ಯಾವುದೇ  ಬ್ಯಾಂಕ್ ಸಾಲ ಪಡೆಯದೇ ವೆಚ್ಚವನ್ನು ಸ್ನೇಹಿತರೇ ಹಂಚಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT