ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕ ಕಾಲದಲ್ಲಿ ಹಸುಗಳ ಬೆದೆ

Last Updated 8 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಹಾಲಿನ ಇಳುವರಿ ಹೆಚ್ಚಳಕ್ಕೆ ಹಸುಗಳನ್ನು ಏಕ ಕಾಲದಲ್ಲಿ ಬೆದೆಗೆ ತರುವ ವೈಜ್ಞಾನಿಕ ವಿಧಾನದ ಕುರಿತು ಇಲ್ಲಿ ವಿವರಿಸಿದ್ದಾರೆ  ತುಮಕೂರು ಜಿಲ್ಲೆಯ ಕುಣಿಗಲ್‌ನ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪಶುವೈದ್ಯಾಧಿಕಾರಿ ಡಾ.ದರ್ಶನ್ ರಾಜ್. ಜಿ.

ಹೈನುಗಾರಿಕೆಯಲ್ಲಿ ಹಸುಗಳ ಸಂತಾನೋತ್ಪತ್ತಿ ಪ್ರಮುಖ ಆಯಾಮ. ಹಸುಗಳು ಕರು ಹಾಕಿದಾಗ ಮಾತ್ರ ಹೆಚ್ಚು ಹಾಲನ್ನು ಕೊಡುತ್ತವೆ. ಕರು ಹಾಕಿ ಮೊದಲ 120 ದಿವಸಗಳು ಗರಿಷ್ಠ ಹಾಲಿನ ಇಳುವರಿ ನೀಡುತ್ತವೆ. ಆದ್ದರಿಂದ ಹಸುಗಳು ಎಷ್ಟು ಬೇಗ ಗರ್ಭ ಧರಿಸುತ್ತವೆಯೋ ಹೈನುಗಾರಿಕೆಯಲ್ಲಿ ಅಷ್ಟು ಲಾಭ ಪಡೆಯಬಹುದು.

ಸಾಮಾನ್ಯವಾಗಿ ಹೈನುಗಾರರು ಹಸು, ಕರು ಹಾಕಿ ಮೊದಲ 90 ದಿವಸಗಳು ಬೆದೆಗೆ ಬಂದರೂ ಗರ್ಭಧಾರಣೆಯನ್ನು ಮಾಡಿಸುವುದಿಲ್ಲ, ಈ ಅವಧಿಯನ್ನು ಸ್ವಯಂ ಕಾಯುವ ಅವಧಿ (Vo*untary waiting period) ಎನ್ನುತ್ತೇವೆ. ಈ ಅವಧಿ ನಂತರ ಎಲ್ಲಾ ಹಸುಗಳನ್ನು ಒಟ್ಟಿಗೆ ಬೆದೆಗೆ ತಂದು ಗರ್ಭಧಾರಣೆ ಮಾಡುವ ಅವಕಾಶವಿದೆ.

ಏಕ ಕಾಲದಲ್ಲಿ ಬೆದೆ–ಪ್ರಯೋಜನ
*ಗರ್ಭಧಾರಣೆಯನ್ನು  ಒಂದು ನಿರ್ದಿಷ್ಟ ಅವಧಿಯಲ್ಲಿ ಮಾಡಬಹುದಾಗಿದೆ.

*ಕರುಗಳ ಜನನವನ್ನು ಒಂದು ನಿರ್ದಿಷ್ಟ ಕಾಲದಲ್ಲಿ ಆಗುವಂತೆ ಮಾಡಬಹುದಾಗಿದೆ.

*ಒಂದೇ ವಯಸ್ಸಿನ ಏಕರೂಪದ ಕರುಗಳನ್ನು ಪಡೆಯಬಹುದಾಗಿದೆ.

*ಸಕಾಲದಲ್ಲಿ  ಹಾಗೂ ನಿಖರವಾಗಿ ಹಸುಗಳು ಬೆದೆಗೆ ಬಂದ ಲಕ್ಷಣಗಳನ್ನು ಗುರ್ತಿಸಬಹುದಾಗಿದೆ.

*ಏಕ ಕಾಲದಲ್ಲಿ ಹಸುಗಳು ಬೆದೆಗೆ ಬರುವುದರಿಂದ  ಕೃತಕ ಗರ್ಭಧಾರಣೆ ಕ್ರಿಯೆಯು ಸುಲಭವಾಗುತ್ತದೆ.

*ವಾಸ್ತವಿಕವಾಗಿ ಬೆದೆಗೆ ಬಂದ ಲಕ್ಷಣಗಳನ್ನು ಗುರ್ತಿಸುವ ಕೆಲಸವನ್ನು ತೊಡೆದು ಹಾಕಲು ಸಾಧ್ಯವಿಲ್ಲ, ಆದರೆ ಇಂತಷ್ಟೇ ಅವಧಿಯಲ್ಲಿ ಬರುತ್ತದೆ ಅಥವಾ ಕೇಂದ್ರೀಕೃತವಾಗಿದೆ ಎಂದು ನಿರ್ಧರಿಸಬಹುದಾಗಿದೆ.

ಬೆದೆಗೆ ತರುವ ಹಸುಗಳಿಗಿರಬೇಕು ಈ ಅರ್ಹತೆ
*ಹಸುಗಳ ದೈಹಿಕ ಸ್ಥಿತಿ ಉತ್ತಮವಾಗಿರಬೇಕು. ಹಸುಗಳಲ್ಲಿ ದೇಹ ಸ್ಥಿತಿ (Body Condition Score) 2.5–3.0 ಇರಬೇಕು. ಅತ್ಯಂತ ಮೃದು ಹಾಗೂ ಕೊಬ್ಬಿದ ಹಸುಗಳನ್ನು ಈ ಪ್ರಕ್ರಿಯೆಗೆ ಒಳಪಡಿಸಬಾರದು.

*ಹಸುಗಳನ್ನು ಚೆನ್ನಾಗಿ ಪೋಷಿಸಿರಬೇಕು. ಅವುಗಳಿಗೆ ನೀಡುವ ಆಹಾರವು ಸಮತೋಲನವಾಗಿದ್ದು, ಒಣ ಅಂಶ, ಪ್ರೊಟೀನ್, ಖನಿಜ, ಜೀವಸತ್ವ ಅಂಶಗಳನ್ನು ಹೊಂದಿರಬೇಕು.

*ಹಸುಗಳು ಈ ಪ್ರಕ್ರಿಯೆಯ ಮೊದಲ ಹಾಗೂ ನಂತರದ ಆರು ವಾರಗಳು ಬೇರೆ ಹಸುಗಳ ಜೊತೆ ಇಟ್ಟಿರಬೇಕು.

*ಹಸುಗಳು ಸಂತಾನವೃದ್ಧಿ ಋತುವಿನ ಚಕ್ರದಲ್ಲಿ ಇರಬೇಕು.

*ಈ ಪ್ರಕ್ರಿಯೆಗೆ ಒಳಗಾಗುವ ಪ್ರೌಢಾವಸ್ಥೆಯ ಹೆಣ್ಣು ಹಸುವಿನ ದೇಹದ ತೂಕ ಶೇ 65ರಷ್ಟು ಇರಬೇಕು ಹಾಗೂ ಕಾಯಿಲೆಗಳಿಂದ ಮುಕ್ತವಾಗಿರಬೇಕು.

*ಬೆದೆ ಪ್ರಕ್ರಿಯೆಗೆ ಒಳಪಡಲು ಆಕಳ ಗರ್ಭಕೋಶವು  ಆರೋಗ್ಯಕರ ಹಾಗೂ ಕ್ರಿಯಾತ್ಮಕವಾಗಿದೆ ಎಂಬ ಬಗ್ಗೆ ವೈದ್ಯಾಧಿಕಾರಿಗಳು ತಪಾಸಣೆ ಮಾಡಬೇಕು.

*ಗರ್ಭಕೋಶದಲ್ಲಿ ಯಾವುದೇ ಸೋಂಕಿನ ಲಕ್ಷಣಗಳಿರದೇ ಬೆದೆಗೆ ಬಂದಾಗ ಗರ್ಭಕೋಶದ ಸೋರಿಕೆಯು ತಿಳಿ ನೀರಿನಂತೆ ಇರಬೇಕು.

*ಪ್ರಕ್ರಿಯೆಯ ಮೊದಲು  ಹಸುಗಳಿಗೆ ಅಗತ್ಯ ಔಷಧಿ ಹಾಗೂ ಲಸಿಕೆಗಳನ್ನು ನೀಡಬೇಕು.

*ಕೃತಕ ಗರ್ಭಧಾರಣೆಗೆ ಉಪಯೋಗಿಸುವ ಹೋರಿಯ ವೀರ್ಯದ ವಿವರ, ಗರ್ಭಧಾರಣೆ ಮಾಡಿದ ದಿನಾಂಕ, ಕರುಗಳನ್ನು ಹಾಕಿದ ದಿನಾಂಕಗಳನ್ನು  ನಿಖರವಾಗಿ ಇರಿಸಲು ಅವಶ್ಯಕತೆ ಇದೆ.

ಅದೇ ರೀತಿ ಗರ್ಭದಾನ ಪ್ರಕ್ರಿಯೆ ಆರಂಭಗೊಳ್ಳುವ ಪೂರ್ವದಲ್ಲಿ ಹಸುಗಳಿಗೆ ಔಷಧಿ ನೀಡುವ ಸಮಯದಲ್ಲಿ, ಬೆದೆಗೆ ಬಂದ ಲಕ್ಷಣಗಳನ್ನು ಗುರುತಿಸುವ ಸಮಯದಲ್ಲಿ ಹಾಗೂ ಕೃತಕ ಗರ್ಭಧಾರಣೆ  ಮಾಡುವ ಸಮಯದಲ್ಲಿ ಹೆಚ್ಚಿನ ಕೆಲಸಗಾರರ ಅವಶ್ಯಕತೆ ಇರುತ್ತದೆ.

ಹಲವು ಹಸುಗಳನ್ನು ನಿಯಂತ್ರಿಸಲು ಅಗತ್ಯವಾದ ಸಿದ್ಧತೆಗಳನ್ನು ಮೊದಲೇ ಮಾಡಿಟ್ಟುಕೊಳ್ಳಬೇಕು. ಹಸುಗಳನ್ನು ನಿಯಂತ್ರಿಸಲು ಅನುಭವಿ, ನುರಿತ ಕೆಲಸಗಾರರ ಅವಶ್ಯಕತೆ ಇರುತ್ತದೆ.

ಗರ್ಭ ಧಾರಣೆಗೆ ಒಳಗಾದ ಎಲ್ಲಾ ಹಸುಗಳೂ ಗರ್ಭ ಧರಿಸುವುದಿಲ್ಲ. ಆದರೆ ಶೇ30–35ರಷ್ಟು ಹಸುಗಳು ಗರ್ಭಧರಿಸಬಹುದು. ಮೇಲೆ ತಿಳಿಸಿದ ಮುಂಜಾಗರೂಕತೆ ಅನುಸರಿಸಿದರೆ ಹಸುಗಳು ಗರ್ಭಧರಿಸುವ ಸಾಧ್ಯತೆಯು ಹೆಚ್ಚುತ್ತದೆ.

ಪ್ರಕ್ರಿಯೆಯ ವಿಧಾನಗಳು
ಏಕ ಕಾಲದಲ್ಲಿ ಬೆದೆಗೆ ತರುವ ಕಾರ್ಯಕ್ರಮದಲ್ಲಿ ಹಲವು ವಿಧಾನಗಳಿವೆ. ಇದರಲ್ಲಿ ಪ್ರಮುಖ ವಿಧಾನವೆಂದರೆ. ನಿಯಂತ್ರಿತ ಆಂತರಿಕ ಔಷಧ ಬಿಡುಗಡೆ ಮಾಡುವ ಸಾಧನ (Contro**ed Interna* Drug Re*ease). ಇದರಲ್ಲಿ ಎರಡು ವಿಧಾನಗಳಿವೆ. ಒಂದು , ಹಸುಗಳ ಕಿವಿಗಳಿಗೆ ಅಳವಡಿಸುವ ಸಾಧನ. ಇನ್ನೊಂದು, ಐರೋಪ್ಯ ರಾಷ್ಟ್ರಗಳಲ್ಲಿ ಪ್ರಸಿದ್ಧಿಯಾಗಿರುವ ಹಸುಗಳ ಆಂತರಿಕ ಯೋನಿ ಭಾಗದಲ್ಲಿ ಅಳವಡಿಸುವ ಸಾಧನ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ನಾಗನಹಳ್ಳಿಯ ಅನಂತಶೇಷರವರ ಡೈರಿಯಲ್ಲಿ 25 ಹಸುಗಳನ್ನು ಏಕ ಕಾಲದಲ್ಲಿ ಬೆದೆಗೆ ತರುವ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಅಂದರೆ ಶೇ72ರಷ್ಟು ಹಸುಗಳು ಗರ್ಭ ಧರಿಸಿವೆ.

ಹಸುಗಳ ಕಿವಿಗಳಿಗೆ ಅಳವಡಿಸುವ ಸಾಧನ ಬಳಸುವ ಮೂಲಕ ಇದನ್ನು ಮಾಡಲಾಗಿದೆ. ಪ್ರಕ್ರಿಯೆ ನಂತರ 18 ಹಸುಗಳು ಗರ್ಭಧರಿಸಿ ಆರೋಗ್ಯವಾದ ಕರುಗಳಿಗೆ ಜನನ ನೀಡಿದ್ದು, ಇದರಲ್ಲಿ ಒಂದು ಹಸು ಅವಳಿ ಕರುಗಳಿಗೆ ಜನನ ನೀಡಿದೆ.

ದಿನವೊಂದಕ್ಕೆ 120ರಿಂದ 140 ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದುದು, ಈ ಪ್ರಕ್ರಿಯೆ ನಂತರ 375–400 ಲೀಟರ್‌ಗೆ ಏರಿದೆ. ಮುಂದಿನ ದಿನಗಳಲ್ಲಿ ಹಾಲಿನ ಉತ್ಪಾದನೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.

ಬೇಸಿಗೆಯಲ್ಲಿ ಹಸಿರು ಹುಲ್ಲಿನ ಲಭ್ಯತೆ ಕಡಿಮೆ ಇರುವ ಕಾರಣ ಮಾರುಕಟ್ಟೆಗೆ ಹಾಲಿನ ಸರಬರಾಜು ಕಡಿಮೆ ಇರುತ್ತದೆ ಹಾಗೂ ಸಾರ್ವಜನಿಕವಾಗಿ ಹಾಲಿನ ಬೇಡಿಕೆ ಹೆಚ್ಚಿರುವ ಕಾರಣ, ಮಾರ್ಚ್ ತಿಂಗಳಲ್ಲೇ ಬೆದೆ ಪ್ರಕ್ರಿಯೆ ನಡೆಸಲಾಗಿತ್ತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT