ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟಿನ ಫಲವಿದು

Last Updated 25 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕೊಪ್ಪಳ ನಗರದಿಂದ ಹೊಸಪೇಟೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಿರ್ಲೋಸ್ಕರ್ ಕಾರ್ಖಾನೆಯಿಂದ ಸ್ವಲ್ಪ ದೂರ ಸಾಗಿ, ಎಡಕ್ಕೆ ಹೊರಳಿದ್ದಲ್ಲಿ, ಸುಮಾರು 40 ಎಕರೆ ಪ್ರದೇಶದಲ್ಲಿ ಸೊಗಸಾಗಿ ಬೆಳೆದಿರುವ ಪಪ್ಪಾಯ ತೋಟ ಕಣ್ಸೆಳೆಯುತ್ತದೆ. ಪ್ರತಿಯೊಂದು ಗಿಡಗಳಲ್ಲೂ ಬೃಹದಾಕಾರದ ಪಪ್ಪಾಯಿ ಹಣ್ಣುಗಳು ಬಾಯಲ್ಲಿ ನೀರೂರಿಸುತ್ತವೆ.

‘ವಾವ್‌! ತೋಟವೆಂದರೆ ಹೀಗಿರಬೇಕು ಎಂದುಕೊಳ್ಳುತ್ತ ಹತ್ತಿರ ಹೋದರೆ ಅಲ್ಲಿ ಟನ್‌ಗಟ್ಟಲೆ ಪಪ್ಪಾಯ ಬೆಳೆದಿರುವುದು ಕಾಣಿಸುತ್ತದೆ. ದೇಶದಲ್ಲಷ್ಟೇ ಅಲ್ಲದೇ ವಿದೇಶಿಗರ ಗಮನವನ್ನೂ ಸೆಳೆದಿದೆ ಈ ಪಪ್ಪಾಯ. ಈ ಪಪ್ಪಾಯದ ಬೆಳೆಗಾರ ಯಾರಿರಬಹುದು ಎಂದು ಅಲ್ಲಿ ವಿಚಾರಿಸಿದಾಗಲೇ ತಿಳಿದದ್ದು ಇದು ಒಬ್ಬ ರೈತನ ಕರಾಮತ್ತಲ್ಲ, ಬದಲಿಗೆ 10 ರೈತರ ಶ್ರಮದ ಫಲ ಎಂದು! ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಅನಾದಿ ಕಾಲದ ಗಾದೆಮಾತಿಗೆ ಸಾಕ್ಷಿಯಾಗಿದೆ ಈ ಫಲ.

‘ಕೃಷಿ ಬದುಕಿನಲ್ಲಿ ಏನೂ ಗಿಟ್ಟಂಗಿಲ್ಲ’ ಎಂದು ಹಳ್ಳಿಯಿಂದ ನಗರದತ್ತ ವಲಸೆ ಹೋಗುವ ಮಂದಿ ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚು.  ಹೀಗಾಗಿ ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಣ್ಣ ಪುಟ್ಟ ರೈತರು ತಮ್ಮ ಹೊಲ ಉಳುವುದನ್ನೇ ಬಿಟ್ಟಿದ್ದಾರೆ. ಆದ್ದರಿಂದ ಇಲ್ಲಿ ಹೆಚ್ಚಿನ ಹೊಲಗಳು ಬೀಳು ಬಿದ್ದಿರುವುದನ್ನು ಕಾಣಬಹುದು. ‘ಬದುಕಿನ ಬಂಡಿ ಸಾಗಿಸಲು ಹತ್ತು ಹಲವು ದಾರಿಗಳಿವೆ. ಆದರೆ ಬೇಸಾಯವೆಂದರೆ ವೃಥಾ ಶ್ರಮ’ ಎಂದುಕೊಂಡು ಮೂಗು ಮುರಿಯುವ ಯುವಕರೇ ಇಲ್ಲಿ ಹೆಚ್ಚು.

ಆದರೆ ಮನಸ್ಸಿದ್ದರೆ ಮಾರ್ಗ ಎಂಬುದನ್ನು ಜಿಲ್ಲೆ ಹಿಟ್ನಾಳ ಗ್ರಾಮದ 10 ರೈತರು ಹವಾಯಿ ದ್ವೀಪ ಮೂಲದ ರೆಡ್‌ಲೇಡಿ ತಳಿಯ ಪಪ್ಪಾಯಿ ಹಣ್ಣು ಬೆಳೆದು ತೋರಿಸಿಕೊಟ್ಟಿದ್ದಾರೆ. ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಟನ್‌ಗಟ್ಟಲೆ ಬೆಳೆದ ಪಪ್ಪಾಯವನ್ನು ವಿದೇಶಗಳಿಗೂ ರಫ್ತು ಮಾಡುತ್ತಿದ್ದಾರೆ.

ರೈತರ ಪರಿಶ್ರಮ
ಕೊಪ್ಪಳ ತಾಲ್ಲೂಕಿನ ಹಿಟ್ನಾಳ, ಹಿರೇಬಗನಾಳ ಸುತ್ತಮುತ್ತಲ ಗ್ರಾಮಗಳ ರೈತರಾದ ಲಕ್ಷ್ಮವ್ವ, ಫಕೀರವ್ವ, ಬಸಮ್ಮ, ಲಕ್ಷ್ಮಣ, ಹನುಮೇಶ್, ಬಸಪ್ಪ, ರಾಜಶೇಖರ, ಆನಂದ, ರಮೇಶ್, ನಾಗರಾಜ್, ಮಾರ್ಕಂಡೆಪ್ಪ ಅಡಗಿ ಅವರು ತಮ್ಮ ಲ್ಲಿರುವ ಒಟ್ಟೂ ಜಮೀನಿನಲ್ಲಿ ಯಾವ ಬೆಳೆ ಬೆಳೆಯುವುದು ಸೂಕ್ತ ಎಂಬುದರ ಬಗ್ಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆ ಕೇಳಿದರು. ರೆಡ್‌ಲೇಡಿ 786 ಎಂಬ ಹೊಸ ತಳಿಯ ಪಪ್ಪಾಯಿ ಬೆಳೆಯುವ ಸಲಹೆ ಪಡೆದು ಅದನ್ನೇ ಬೆಳೆಯಲು ನಿರ್ಧರಿಸಿದರು.

ಪ್ರತಿ ಎಕರೆಗೆ ಸುಮಾರು 1 ಲಕ್ಷ ರೂಪಾಯಿ ವೆಚ್ಚವಾಗಿದ್ದು, ತೋಟಗಾರಿಕೆ ಇಲಾಖೆಯಿಂದ 2012–13ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಶೇ 50ರಷ್ಟು ಸಹಾಯಧನ (ಸಬ್ಸಿಡಿ) ಪಡೆದುಕೊಂಡರು. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಶೇ 90ರಷ್ಟು ಸಹಾಯಧನದಲ್ಲಿ ಹನಿ ನೀರಾವರಿ ವ್ಯವಸ್ಥೆಯನ್ನು ತೋಟಕ್ಕೆ ಅಳವಡಿಸಿಕೊಳ್ಳಲಾಯಿತು. ಹೊಲ ಹದ ಮಾಡಿಕೊಂಡ ರೈತರು ಪ್ರತಿ ಎಕರೆಗೆ 1200 ಸಸಿಗಳನ್ನು,5–6 ಅಡಿ ಅಂತರದಲ್ಲಿ ರೆಡ್‌ಲೇಡಿ ತಳಿಯ ಪಪ್ಪಾಯಿ ಗಿಡ ನಾಟಿ ಮಾಡಿದರು. 

ಹನಿ ನೀರಾವರಿ ಪದ್ಧತಿ ಅಳವಡಿಸಿದ್ದರಿಂದ ನೀರು ಹಾಯಿಸುವ ಶ್ರಮವೂ ಬರಲಿಲ್ಲ. ಭೂಮಿ ಸಿದ್ಧತೆ, ಬೆಡ್ ಹಾಕುವುದು, ಸಸಿ ನಾಟಿ ಹಾಗೂ ಗೊಬ್ಬರ ಸೇರಿದಂತೆ ಬೇಸಾಯ ಕ್ರಮಗಳು ಹಾಗೂ ಗಿಡಗಳ ನಿರ್ವಹಣೆಗೆ ತೋಟಗಾರಿಕೆ ತಜ್ಞರ ಸಲಹೆ ಪಡೆದುಕೊಂಡು, ತೋಟವನ್ನು ಜೋಪಾನ ಮಾಡಲಾಯಿತು. ಎಲ್ಲರೂ ಶ್ರಮ ವಹಿಸಿ ದುಡಿಯುತ್ತಿದ್ದು, ಇದೀಗ 40 ಎಕರೆ ಪ್ರದೇಶದಲ್ಲಿ ಸಮೃದ್ಧ ಪಪ್ಪಾಯಿ ತೋಟ ಹಸಿರಿನಿಂದ ಕಂಗೊಳಿಸುತ್ತಿದೆ.

ಭವಿಷ್ಯದ ಆದಾಯಕ್ಕೂ ಯೋಜನೆ
ಪಪ್ಪಾಯಿ ಬೆಳೆ 2 ವರ್ಷಗಳವರೆಗೆ ಫಲ ನೀಡಲಿದ್ದು, ಮುಂದೇನು ಎಂಬುದರ ಬಗ್ಗೆ ಈಗಲೇ ಯೋಜನೆ ಸಿದ್ಧಪಡಿಸಿಟ್ಟುಕೊಂಡಿರುವ ರೈತರು, ಈ ಬೆಳೆಯ ಮಧ್ಯೆ ಉತ್ತಮ ತಳಿಯ ದಾಳಿಂಬೆ ಗಿಡಗಳನ್ನು ಮಿಶ್ರ ಬೆಳೆಯಾಗಿ ಈಗಾಗಲೇ ನಾಟಿ ಮಾಡಿದ್ದಾರೆ. ಪಪ್ಪಾಯಿ ಕೃಷಿ ಮುಗಿಯುವ ವೇಳೆಗೆ ದಾಳಿಂಬೆ ಫಸಲು ಕೈಗೆ ಬರುತ್ತದೆ. ಪಪ್ಪಾಯಿ ಗಿಡಗಳ ಮಧ್ಯೆ ದಾಳಿಂಬೆ ಬೆಳೆದರೆ ದುಂಡಾಣು ಅಂಗಮಾರಿ ರೋಗ ನಿಯಂತ್ರಿಸಬಹುದಾಗಿದೆ.

ತೋಟಗಾರಿಕೆ ತಜ್ಞರ ಸಲಹೆಯಂತೆ ಸಕಾಲಕ್ಕೆ ನೀರು, ಗೊಬ್ಬರ, ರೋಗ ನಿಯಂತ್ರಣ ಮಾಡಿದ ಕಾರಣ ಉತ್ತಮ ಫಸಲು ದೊರೆತಿದೆ. ಈಗಾಗಲೇ ಕಟಾವು ಆರಂಭವಾಗಿದ್ದು, ಮುಂಬೈ ಮಾರುಕಟ್ಟೆಗೆ ಹಣ್ಣು ಒದಗಿಸಲಾಗುತ್ತಿದೆ.  ದುಡಿಯುವ ಛಲ ಹಾಗೂ ಪರಿಶ್ರಮಕ್ಕೆ ಆದ್ಯತೆ ನೀಡಿದರೆ, ಕೃಷಿ ಹಾಗೂ ತೋಟಗಾರಿಕೆಯಲ್ಲಿ ಹೆಚ್ಚಿನ ಲಾಭವಿದೆ. ಆದರೆ ಇಂದಿನ ಯುವ ಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎನ್ನುತ್ತಾರೆ ರೈತ ಮಾರ್ಕಂಡೆಪ್ಪ ಅಗಡಿ.

ಲಾಭದಾಯಕವಾದದ್ದು ಹೀಗೆ
ಸಾಮಾನ್ಯವಾಗಿ ಪಪ್ಪಾಯಿ ಗಿಡ ನಾಟಿ ಮಾಡಿದ 8 ತಿಂಗಳ ನಂತರ ಇಳುವರಿ ನೀಡಲು ಪ್ರಾರಂಭಿಸುತ್ತದೆ. ಇದು ಸುಮಾರು 2 ವರ್ಷಗಳವರೆಗೆ ಹಣ್ಣು ನೀಡುತ್ತದೆ. ಅದರಂತೆ ಇದೀಗ ತೋಟ, ಪಪ್ಪಾಯಿ ಹಣ್ಣುಗಳಿಂದ ತುಂಬಿದ್ದು, ಪ್ರತಿಯೊಂದು ಗಿಡದಿಂದಲೂ ಸರಾಸರಿ 80 ರಿಂದ 100 ಕೆ.ಜಿ. ಇಳುವರಿ ಪಡೆಯಬಹುದಾಗಿದೆ. ಮಾರುಕಟ್ಟೆಯಲ್ಲಿ 1 ಕೆ.ಜಿ. ಪಪ್ಪಾಯಿಗೆ ಕನಿಷ್ಠ 8 ರೂಪಾಯಿ ದೊರೆಯುತ್ತದೆ.

ಹಬ್ಬದ ಸಂದರ್ಭದಲ್ಲಿ ಈ ಹಣ್ಣಿಗೆ ದೇಶ, ವಿದೇಶಗಳಲ್ಲಿ ಎಲ್ಲಿಲ್ಲದ ಬೇಡಿಕೆ ಇರುವ ಕಾರಣ, ಆ ಸಂದರ್ಭ ದಲ್ಲಿ 14 ರೂಪಾಯಿಗಳವರೆಗೂ ಬೆಲೆ ಸಿಗುತ್ತದೆ. (ಬೆಂಗಳೂರಿನಲ್ಲಿ ಕೆ.ಜಿ ಪಪ್ಪಾಯಕ್ಕೆ 30 ರಿಂದ 40 ರೂಪಾಯಿ ಬೆಲೆ ಇದೆ). 1 ಎಕರೆಗೆ ಕನಿಷ್ಠ 60 ಟನ್ ಪಪ್ಪಾಯಿ ಹಣ್ಣು ದೊರೆಯಲಿದೆ. ಅಂದರೆ ಎಕರೆಗೆ ಸುಮಾರು 10 ಲಕ್ಷ ರೂಪಾಯಿ ಆದಾಯ ಗಳಿಸಬಹುದು.

ಐಸ್‌ಕ್ರೀಂ ಉದ್ಯಮ ಹಾಗೂ ಬೇಕರಿ ತಿನಿಸುಗಳಿಗೆ ಸಂಸ್ಕರಿಸಿದ ಪಪ್ಪಾಯಿ ಹಣ್ಣಿನ ಉತ್ಪನ್ನಗಳನ್ನು (ಪೊಪೈನ್) ಹೆಚ್ಚಾಗಿ ಬಳಕೆ ಮಾಡಲಾಗುತ್ತಿರುವುದರಿಂದ ಪಪ್ಪಾಯಿ ಹಣ್ಣಿಗೆ ವ್ಯಾಪಕ ಬೇಡಿಕೆ ಇದೆ. ಪಪ್ಪಾಯಿ ತೋಟದ ನಿರ್ವಹಣೆಗೆ ಅತ್ಯಂತ ಕಡಿಮೆ ಖರ್ಚು ಆಗಲಿದ್ದು, ಹೆಚ್ಚಿನ ಆದಾಯ ಗಳಿಸಬಹುದಾಗಿದೆ ಎನ್ನುತ್ತಾರೆ ಸಹಾಯಕ ತೋಟಗಾರಿಕೆ ಅಧಿಕಾರಿ ರುದ್ರಪ್ಪ ಬಿಡನಾಳ.

ಪಪ್ಪಾಯಿ ಹಣ್ಣು ಬೆಳೆಯುವ ಅನೇಕ ರೈತರ ನಡುವೆ, ತಾಂತ್ರಿಕತೆಯನ್ನು ಅಳವಡಿಸಿಕೊಂಡು, ತೋಟಗಾರಿಕೆಯನ್ನು ಲಾಭದಾಯಕವನ್ನಾಗಿಸಿಕೊಳ್ಳುವ ಮೂಲಕ ಉತ್ತಮ ಲಾಭ ಪಡೆಯುತ್ತಿರುವ ಇಲ್ಲಿನ ರೈತರು ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ ಎನ್ನುತ್ತಾರೆ ಕೊಪ್ಪಳದ ತೋಟಗಾರಿಕೆ ಇಲಾಖೆ ಹಾರ್ಟಿ ಕ್ಲಿನಿಕ್‌ನ ಸಲಹಾಧಿಕಾರಿ ವಾಮನಮೂರ್ತಿ. ಮಾಹಿತಿಗೆ- ರುದ್ರಪ್ಪ ಬಿಡನಾಳ- 9980361673.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT