ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದಲಿ ಹಸನಾದ ಹಣ್ಣು, ತರಕಾರಿ...

ಭೂ ರಮೆ:5
Last Updated 6 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕೆಂಬಣ್ಣ ಹೊತ್ತು ಮಿರಮಿರ ಮಿರುಗುವ ಟೊಮೆಟೊ, ಇತರ ತರಕಾರಿಗೆ ಸವಾಲೊಡ್ಡುವ ಹೀರೇಕಾಯಿ, ಮಿಂಚುಳ್ಳಿಯಂಥ ಸ್ಟ್ರಾಬೆರಿ, ಜೋತು ಬಿದ್ದ ಬೆಂಡೆಕಾಯಿ, ಘಮ್‌ ಎನ್ನುವ ಗಾಳಿ ಹೊತ್ತು ತರುವ ಜಾಜಿ ಮಲ್ಲಿಗೆ, ನಿಂಬೆ ಹಣ್ಣಿನಂತೆ ಭಾಸವಾಗುವ ಯಾಷನ್‌ ಫ್ರೂಟ್‌, ಹಸಿರು ಮಿಶ್ರಿತ ಕೆಂಪು ಬಣ್ಣದಿಂದ ಕಂಗೊಳಿಸುವ ಪಪ್ಪಾಯಿ, ಹಸಿರನ್ನು ಹೊದ್ದ ಅರಿಶಿಣ, ಮೈದುಂಬಿದ ಬಾಳೆ, ಕಿತ್ತಳೆ, ದಾಳಿಂಬೆ, ಮಾವು, ನಿಂಬೆ, ಗಜ್ಜರಿ ಒಂದೇ ಎರಡೇ...

ಹಳೆಯ ಪೈಪಿನೊಳಗೆ ಬೆಳೆದಿರುವ ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ, ವಿವಿಧ ಜಾತಿಯ ಔಷಧೀಯ ಸಸ್ಯಗಳು... ಇದೆಲ್ಲವೂ ಇರುವುದು ಧಾರವಾಡದ ಸವಿತಾ ಪುಣೇಕರ್‌ ಅವರಿಗೆ ಸೇರಿದ ಕೈತೋಟದಲ್ಲಿ. ಎತ್ತ ತಿರುಗಿದರೂ ಒಂದಲ್ಲಾ ಒಂದು ವಿಶೇಷ. ಇದರಿಂದ ಪ್ರೇರಿತವಾಗುವ ಮನಸ್ಸು ಚಿಟ್ಟೆಯಂತೆ ಒಂದರಿಂದ ಮತ್ತೊಂದನ್ನು ನೋಡಲು ಹಾತೊರೆಯುತ್ತದೆ.

6 ಗುಂಟೆ ಜಾಗದಲ್ಲಿ ನಿರ್ಮಾಣಗೊಂಡಿರುವ ಕೆಂಪು ಕೋಟೆಯಂತೆ ಕಾಣುವ ಮನೆಯ ಸುತ್ತಲೂ ಬೇಡವಾದ ಸ್ನಾನದ ಟಬ್, ಪೈಪುಗಳಲ್ಲಿ ತರಕಾರಿ, ವಿವಿಧ ಜಾತಿಯ ಪುಷ್ಪ, ಹಣ್ಣು–ತರಕಾರಿಗಳನ್ನು ಬೆಳೆಯುತ್ತಿದ್ದಾರೆ ಸವಿತಾ. ಹೋಮಿಯೋಪತಿ ಶಿಕ್ಷಕಿಯಾದ ಅವರು, 4 ವರ್ಷದ ಹಿಂದೆ ಕೈತೋಟ ಕೆಲಸ ಆರಂಭಿಸಿದ್ದಾರೆ. ಪ್ರತಿನಿತ್ಯ ವಿವಿಧ ಪತ್ರಿಕೆಗಳು, ಮ್ಯಾಗಜಿನ್‌ಗಳಲ್ಲಿ ಬರುವ ಲೇಖನಗಳನ್ನು ಓದಿ ತರಕಾರಿ ಮತ್ತು ಹಣ್ಣಿನ ಗಿಡಗಳನ್ನು ಬೆಳೆಸುವ ಕ್ರಮ ಅರಿತಿದ್ದಾರೆ. ಇಷ್ಟು ಮಾತ್ರವಲ್ಲದೇ ಧಾರವಾಡದ ಕೃಷಿ ವಿದ್ಯಾಲಯಕ್ಕೆ ತೆರಳಿ ಅಲ್ಲಿಂದಲೂ ಮಾಹಿತಿ ಪಡೆಯುತ್ತಾರೆ.

ಪ್ರತಿದಿನ ಮೂರ್ನಾಲ್ಕು ತಾಸು ಕೈತೋಟದಲ್ಲಿ ಕಾಲ ಕಳೆಯುವ ಅವರು, ತೋಟ ಸ್ವಚ್ಛಗೊಳಿಸುವುದು, ಕಸ ತೆಗೆಯುವುದು, ಓರೆ ಬೆಳೆಯುವ ಗಿಡಗಳಿಗೆ ಕಡ್ಡಿ ಕಟ್ಟಿ ನೇರ ಮಾಡುವುದು, ಟ್ರಿಮ್‌ ಮಾಡುವುದು, ಗೊಬ್ಬರ ಮತ್ತು ನೀರು ಹಾಕಿ ಅವುಗಳನ್ನು ಪೋಷಿಸುವ ಕೆಲಸ ಮಾಡುತ್ತಾರೆ.

‘ಹಿಂದೆ ಕಾಯಂ ಆಗಿ ಒಬ್ಬರು ತೋಟ ನೋಡಿಕೊಳ್ಳುತ್ತಿದ್ದರು. ಸದ್ಯ ಈ ಎಲ್ಲಾ ಕೆಲಸವನ್ನು ನಾನೇ ಮಾಡುತ್ತೇನೆ. ಇದರಿಂದ ದೈಹಿಕ ಚಟುವಟಿಕೆಯಾಗುತ್ತದೆ. ಗೊಬ್ಬರ ಹಾಕುವುದು ಹಾಗೂ ಹೆಚ್ಚು ಶ್ರಮ ಬೇಡುವ ಕೆಲಸಗಳಿಗೆ ಮಾತ್ರ ಕೂಲಿ ಆಳುಗಳನ್ನು ಕರೆಸುತ್ತೇನೆ. ಒಟ್ಟಾರೆ ನನ್ನ ಕನಸಿನ ಕೈತೋಟ ನನ್ನ ಮುಂದಿದೆ’ ಎನ್ನುತ್ತಾರೆ ಸವಿತಾ. ಅಂದ ಹಾಗೆ ಅವರ ಮನೆಗೆ ಬಂದ ಎಲ್ಲರೂ ಕೈತೋಟದಲ್ಲಿ ಪ್ರವಾಸ ಕೈಗೊಳ್ಳುವುದು ಅಲಿಖಿತ ನಿಯಮ.

ಸದ್ಯ ಮನೆಯಲ್ಲಿ ಪತಿ ಅರವಿಂದ್‌ ಪುಣೇಕರ್‌ ಅವರ ಜೊತೆ ಸುನಿತಾ ನೆಲೆಸಿದ್ದು, ಯಾವೊಂದು ತರಕಾರಿಯನ್ನು ಅವರು ಅಂಗಡಿಯಿಂದ ಕೊಂಡು ತರುವುದಿಲ್ಲ. ತಮಗೆ ಬೇಕಾದದನ್ನು ಹಿತ್ತಲಲ್ಲೇ ಬೆಳೆದುಕೊಳ್ಳುತ್ತಿದ್ದಾರೆ. ಕಳೆದ ವರ್ಷ 2 ಕೆ.ಜಿ. ಅರಿಶಿಣ ಬೆಳೆದಿರುವ ಸವಿತಾ, ತೆಂಗು, ಮಾವು, ಪೇರಲೆ ಮತ್ತಿತರ ಗಿಡಗಳನ್ನು ಬೆಳೆಸಿದ್ದಾರೆ.

‘ಗೀಜರ್‌ ಮತ್ತು ಹೀಟರ್‌ ಇದ್ದರೂ, ಕೈತೋಟದಲ್ಲಿ ಸಿಗುವ ಕಟ್ಟಿಗೆಗಳನ್ನು ಹೊರಗೆಸೆಯದೇ ಅವುಗಳನ್ನು ಬಳಸಿ ನೀರು ಕುದಿಸಿ ಸ್ನಾನ ಮಾಡಲು ಬಳಸುತ್ತಿದ್ದಾರೆ. ಬೂದಿಯನ್ನು ಗೊಬ್ಬರವಾಗಿ ಗಿಡ ಮರಗಳಿಗೆ ಬಳಸುತ್ತಿದ್ದು, ಇದೇ ಬೂದಿ ಗುಲಾಬಿ ಗಿಡಕ್ಕೆ ಔಷಧಿಯಾಗಿ ಬಳಕೆಯಾಗುತ್ತಿದೆ. ಮುಸುರೆ ನೀರನ್ನು ಕೈತೋಟಕ್ಕೆ ಸುರಿಯಲಾಗುತ್ತಿದ್ದು, ಇಲ್ಲಿ ಬೆಳೆಯುವ ಎಲ್ಲವೂ ಶೇ 99ರಷ್ಟು ಸಾವಯವ ತರಕಾರಿ, ಹಣ್ಣು–ಹಂಪಲು’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸುಗಮ ಸಂಗೀತ ಕಲಾವಿದೆಯಾದ ಸವಿತಾ.

ಹಿತ್ತಲಲ್ಲಿರುವ ಸೊಪ್ಪು, ತರಕಾರಿ ಗಿಡಗಳು
ಅಂದಹಾಗೆ ಸೊಪ್ಪುಗಳಾದ ಮೆಂತೆ, ಸಬ್ಬಸಿಗೆ, ಕೊತ್ತಂಬರಿ, ಕಿರಿಕ್‌ಸಾಲಿ, ದಂಟು, ಬಸಳೆ, ರಾಜಗಿರಿ, ಪುದೀನ, ಪಾಲಾಕ್‌, ಅವರೆಕಾಯಿ, ಸೋರೆಕಾಯಿ, ತುಪ್ಪದ ಹೀರೇಕಾಯಿ, ಚವಳಿಕಾಯಿ, ಮೆಣಸಿನಕಾಯಿ, ಬದನೆ, ಬೂದುಗುಂಬಳ, ಕರಿಬೇವು, ಮೆಣಸು, ವೀಳ್ಯದ ಎಲೆ ಜೊತೆಗೆ ಔಷಧೀಯ ಸಸ್ಯಗಳಾದ ಅಜ್ವಾನ, ಅಮೃತಬಳ್ಳಿ ಗಿಡಗಳನ್ನು ಸವಿತಾ ಅವರು ಬೆಳೆಸಿದ್ದು, ಒಂದು ಕಾಫಿ ಗಿಡ ಸಹ ನೆಟ್ಟಿದ್ದಾರೆ. ಕೆಂಪು, ಬಿಳಿ ಮತ್ತು ಗುಲಾಬಿ ದಾಸವಾಳ ಕೈದೋಟದಲ್ಲಿ ನಸುನಗುತ್ತಿವೆ.

ಕೆಂಪು ದಾಸವಾಳದ ಶರಬತ್ತು
ನಾಲ್ಕೈದು ಕೆಂಪುದಾಸವಾಳ ಕಿತ್ತುಕೊಂಡ ಸವಿತಾ, ನೀರು ಕಾಯಿಸಿ ಅದರೊಳಗೆ ಹೂವು ಅದ್ದಿ, ಮೂರು ಚಮಚ ಸಕ್ಕರೆ ಹಾಕಿ ಸ್ವಲ್ಪ ನಿಂಬೆ ರಸ ಹಾಕಿ ತಿರುಗಿಸಿ ಕೆಂಪು ದಾಸವಾಳದ ಶರಬತ್ತು ತಯಾರಿಸಿ ಕೈಗಿಟ್ಟರು. ಸಕ್ಕರೆ ಬದಲು ಬೆಲ್ಲ ಬಳಸಿದರೆ ಕೆಂಪು ದಾಸವಾಳದ ಶರಬತ್ತು ತುಂಬಾ ಚೆನ್ನಾಗಿರುತ್ತದಂತೆ. ಅಂದಹಾಗೆ ರಕ್ತದಲ್ಲಿನ ಕಬ್ಬಿಣಂಶ ಹೆಚ್ಚಿಸಿ, ಕೊಲೆಸ್ಟ್ರಾಲ್‌ ಮತ್ತು ಆ್ಯಂಟಿ ಟಾಕ್ಸಿನ್‌ ಅನ್ನು ಕಡಿಮೆ ಮಾಡುತ್ತದೆ ಈ ಶರಬತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT