ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತಳೆ ಹೋಲುವ ಕಿನೋ

ಕೊನರು ಭಾಗ -1
Last Updated 18 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ದಶಕದಿಂದ ಕೊಪ್ಪಳ ಜಿಲ್ಲೆ ದಾಳಿಂಬೆಗೆ ಪ್ರಸಿದ್ಧ. ಅದರಲ್ಲೂ ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕಿನ ರೈತರು ತಮ್ಮ ಹೊಲದಲ್ಲಿ ಭರ್ಜರಿ ದಾಳಿಂಬೆ ಬೆಳೆದರು. ಇಂಗ್ಲೆಂಡ್, ಜರ್ಮನಿ ಮುಂತಾದ ದೇಶಗಳಿಗೆ ಇಲ್ಲಿನ ಅತ್ಯುತ್ತಮ ಗುಣಮಟ್ಟದ ದಾಳಿಂಬೆಯನ್ನು ಒಯ್ಯಲು ಕಂಟೇನರ್‌ಗಳು ನೇರವಾಗಿ ರೈತರ ಹೊಲಗಳಿಗೆ ಬಂದವು. ಹೀಗೆ ದಾಳಿಂಬೆ ಬೆಳೆದ ರೈತನ ಬಾಳು ಬಂಗಾರವಾಗಲು ಪ್ರಾರಂಭವಾಗುತ್ತಿರುವಾಗ, ದಿಢೀರನೆ ಹೊಲಗಳಿಗೆ ದಾಳಿ ಇಟ್ಟ ‘ದುಂಡಾಣು ಅಂಗಮಾರಿ’ ರೋಗ, ಇಡೀ ತೋಟವನ್ನು ನುಂಗಿ ಹಾಕಿತು. ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿತು. 

ದಾಳಿಂಬೆ ಬೆಳೆಯುತ್ತಿದ್ದ ಅನೇಕ ರೈತರು ಇದರಿಂದ ಕಂಗಾಲಾಗಿ ಈಗಲೂ ಸಂಕಷ್ಟವನ್ನು ಎದುರಿಸುತ್ತಲೇ ಇದ್ದಾರೆ. ಇಂತಹದೇ ಸಂಕಷ್ಟದ ದಾರಿಯಲ್ಲಿದ್ದ ರೈತ ರಾಮಣ್ಣ ವಿರೂಪಾಕ್ಷ ಪಟ್ಟಣದ ಅವರು, ವಿಧಿಯನ್ನು ಹಳಿಯುತ್ತ ಕೂರದೆ, ತೋಟಗಾರಿಕೆ ಇಲಾಖೆಯ ನೆರವು ಪಡೆದು, ‘ಕಿನೋ’ ಎಂಬ ಕಿತ್ತಳೆ ಜಾತಿಯ ಬೆಳೆಯನ್ನು ಬೆಳೆಯಲು ಆರಂಭಿಸಿದರು. ಇದೀಗ ಈ ಹಣ್ಣು ಉತ್ತಮ ಫಲ ನೀಡುತ್ತಿದ್ದು, ಲಾಭದ ಹಾದಿಯಲ್ಲಿ ಇವರನ್ನು ತಂದು ನಿಲ್ಲಿಸಿದೆ. ಪರಿಣಾಮ, ಇದೀಗ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 300 ಎಕರೆಗೂ ಹೆಚ್ಚಿನ ಜಮೀನಿನಲ್ಲಿ ಕಿನೋ ಬೆಳೆಯಲಾಗುತ್ತಿದೆ.

ಏನಿದು ಕಿನೋ
ಅತ್ಯಂತ ಆಕರ್ಷಕ, ಸಿಹಿ-ಹುಳಿ ಮಿಶ್ರಿತ ಹಣ್ಣು ಇದು. ಕಿತ್ತಳೆ ಹಣ್ಣು ಸಿಟ್ರಸ್ ಜಾತಿಗೆ ಸೇರಿದ್ದು, ಸಾವಿರಾರು ವರ್ಷಗಳಿಂದಲೂ ಬಳಕೆಯಲ್ಲಿದೆ. ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯದಲ್ಲಿ ಎಚ್.ಬಿ. ಫ್ರಾಸ್ಟ್ ಎಂಬ ವಿಜ್ಞಾನಿ ‘ಕಿಂಗ್’ ಮತ್ತು ‘ವಿಲ್ಲೊ’ ಎಂಬ ಎರಡು ಸಿಟ್ರಸ್ ಜಾತಿಯ ತಳಿಗಳನ್ನು ಕಸಿ ಮಾಡಿ ಪಡೆದ ತಳಿಯೇ ಈ ಕಿನೋ. ಇದು ಬಹುತೇಕ ಕಿತ್ತಳೆ ಹಣ್ಣನ್ನೇ ಹೋಲುತ್ತದೆ. ಇದರ ಸಿಪ್ಪೆ ಸುಲಿಯುವುದು ಕೂಡ ತುಂಬಾ ಸುಲಭ. ಈ ಹಣ್ಣು 1949ರಲ್ಲಿಯೇ ಭಾರತ ದೇಶಕ್ಕೆ ಕಾಲಿಟ್ಟಿತು ಎಂಬುದು ಬಹುತೇಕ ತಜ್ಞರ ಅನಿಸಿಕೆ. ಭಾರತ ದೇಶದಲ್ಲಿ ಪಂಜಾಬ್, ಗುಜರಾತ್, ಉತ್ತರ ಪ್ರದೇಶ ಮುಂತಾದೆಡೆ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಇದೀಗ ಈ ಸಾಲಿನಲ್ಲಿ ಕರ್ನಾಟಕವೂ ಸೇರಿಕೊಂಡಿದೆ.

ರಾಮಣ್ಣ ಸಾಧನೆ
ಹೊಸಪೇಟೆಯಿಂದ ಕುಷ್ಟಗಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಕುಷ್ಟಗಿ ಪಟ್ಟಣ ಇನ್ನೂ 13 ಕಿ.ಮೀ ಇರುವಂತೆಯೇ ಎಡಕ್ಕೆ ಸಿಗುವ ಮಾಟಲದಿನ್ನಿ ಗ್ರಾಮದಿಂದ ಬೀರಲದಿನ್ನಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿದೆ ರಾಮಣ್ಣ ಅವರ ಸುಂದರ ತೋಟ. ರಾಮಣ್ಣನವರು ಬಿ.ಎ, ಬಿ.ಇಡಿ ಪದವೀಧರ. ಸರ್ಕಾರಿ ನೌಕರಿಯ ಹಿಂದೆ ಬೀಳದೆ, ಭೂಮಿಯನ್ನು ನಂಬಿದ ರೈತ. ತನ್ನ 16 ಎಕರೆ ಜಮೀನಿನಲ್ಲಿ 2002 ರಲ್ಲಿ ದಾಳಿಂಬೆ ಗಿಡ ಬೆಳೆದು, ನಂತರ ಉತ್ತಮ ಬೆಳೆಯನ್ನೂ ತೆಗೆದು, 2006ರವರೆಗೂ ಭರ್ಜರಿ ಆದಾಯವನ್ನೂ ಗಳಿಸಿದರು. ಆದರೆ ದುಂಡಾಣು ಅಂಗಮಾರಿ ರೋಗಕ್ಕೆ ತುತ್ತಾದ ದಾಳಿಂಬೆ ಗಿಡಗಳು ಹಾಳಾದವು. ಆದ್ದರಿಂದ ತೋಟಗಾರಿಕೆ ಇಲಾಖೆಯ ಅಧಿಕಾರಿ ಗುರುಮೂರ್ತಿ ಅವರೊಂದಿಗೆ ಮುಂದಿನ ದಾರಿಯ ಬಗ್ಗೆ ಸಮಾಲೋಚಿಸಿದಾಗ, ಅವರಿಗೆ ದೊರೆತಿದ್ದು, ಕಿನೋ ಎಂಬ ಹೊಸ ಬೆಳೆ ಬೆಳೆಯುವ ಸಲಹೆ. ಕೂಡಲೇ ಇದನ್ನು ಕಾರ್ಯರೂಪಕ್ಕೆ ಇಳಿಸಲು ನಿರ್ಧರಿಸಿದ ರಾಮಣ್ಣ, ಗುಜರಾತ್ ರಾಜ್ಯದ ಗಂಗಾನಗರದಿಂದ ಪ್ರತಿ ಗಿಡಕ್ಕೆ ₨ 32 ರಂತೆ ಒಟ್ಟು 1,650 ಗಿಡಗಳನ್ನು ತರಿಸಿದ್ದಾರೆ. 16 ಎಕರೆ ಜಮೀನಿನ ಪೈಕಿ12 ಎಕರೆಯಲ್ಲಿ ಪ್ರತಿ ಗಿಡಕ್ಕೆ 18 ಅಡಿಗಳ ಅಂತರವನ್ನು ಕಾಯ್ದುಕೊಂಡು, ಪ್ರತಿ ಎಕರೆಗೆ 136 ಗಿಡಗಳಂತೆ ನಾಟಿ ಮಾಡಿದರು. ತೋಟಗಾರಿಕೆ ಇಲಾಖೆಯ ಸಹಾಯಧನದಲ್ಲಿ ಹನಿ ನೀರಾವರಿ ಅಳವಡಿಸಿ, ಕಾಲಕಾಲಕ್ಕೆ ಅಗತ್ಯ ಗೊಬ್ಬರವನ್ನು ಪೂರೈಸಿ, ಪ್ರತಿಯೊಂದು ಗಿಡವನ್ನೂ ಜೋಪಾನದಿಂದ ನೋಡಿಕೊಂಡರು. ತೋಟದ ನಿರ್ವಹಣೆಗೆ ಇವರ ಸಾಥ್ ನೀಡಿದ್ದು, ಗಣೇಶ ಹುಣಸಿಹಾಳ ಎಂಬ ಇನ್ನೊಬ್ಬ ರೈತ. 

ಗಿಡ ನೆಟ್ಟ ಮೂರೂವರೆ ವರ್ಷಗಳ ನಂತರ ಹಣ್ಣು ನೀಡಲಾರಂಭಿಸಿದ ಮರಗಳಿಂದ ಇಂದು ತೋಟ ಸುಂದರವಾಗಿ ಕಂಗೊಳಿಸುತ್ತಿದೆ. ಮೊದಲ ಇಳುವರಿಯಲ್ಲಿ ಇವರು ಪಡೆದದ್ದು ಬರೋಬ್ಬರಿ 70 ಟನ್ ಕಿನೋ ಹಣ್ಣುಗಳು. ಈ ಹಣ್ಣುಗಳಿಗೆ ಚೆನ್ನೈ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಹೀಗಾಗಿ ಮೊದಲ ಪ್ರಯತ್ನದಲ್ಲೇ ಸುಮಾರು 25 ಲಕ್ಷ ರೂಪಾಯಿ ಆದಾಯ ಪಡೆದರು. ಎರಡನೇ ಇಳುವರಿಗೆ ಪಡೆದದ್ದು, 80 ಟನ್‌ಗಳಾದರೆ, ಇದೀಗ ಮೂರನೇ ಬೆಳೆ ಪಡೆಯುತ್ತಿದ್ದು, ಪ್ರತಿಯೊಂದು ಗಿಡಗಳಲ್ಲೂ ಸುಮಾರು 600 ರಿಂದ 800 ಹಣ್ಣುಗಳು ತೂಗುತ್ತಿವೆ. ಅಂದಾಜು 100 ಟನ್ ಬೆಳೆ ಪಡೆಯುವ ನಿರೀಕ್ಷೆ ಇದೆ. ಸದ್ಯ ಪ್ರತಿ ಟನ್‌ಗೆ ಸುಮಾರು 45 ರಿಂದ 48 ಸಾವಿರ ರೂಪಾಯಿ ಬೆಲೆ ಇದ್ದು,100 ಟನ್‌ಗಳಿಗೆ ಕಡಿಮೆ ಎಂದರೂ 45 ಲಕ್ಷ ರೂಪಾಯಿ ಆದಾಯ ಗಳಿಸುವ ನಿರೀಕ್ಷೆ ಇದೆ. ಭೂಮಿ ತಾಯಿಯನ್ನು ನಂಬಿದರೆ ಆಕೆ ಎಂದಿಗೂ ರೈತನ ಕೈ ಬಿಡುವುದಿಲ್ಲ ಎನ್ನುತ್ತಾರೆ ರಾಮಣ್ಣ.

ಮಿಶ್ರ ಬೆಳೆಗಳ ಸಮ್ಮಿಲನ
ರಾಮಣ್ಣನವರು ಕಿನೋ ಮಧ್ಯೆ ಅಂತರ ಬೆಳೆಯಾಗಿ ಸಾಗುವಾನಿ, ಜಂಬು ನೇರಳೆ, ಸಿಲ್ವರ್ ಓಕ್, ಹಲಸು, ಮಾವು ಮುಂತಾದ ಮಿಶ್ರ ಬೆಳೆಯನ್ನೂ ಬೆಳೆದಿದ್ದಾರೆ. ಎಲ್ಲ ಗಿಡಗಳೂ ಸೀಸನ್‌ಗಳಿಗೆ ಅನುಗುಣವಾಗಿ ಸಮೃದ್ಧ ಹಣ್ಣುಗಳನ್ನು ನೀಡುತ್ತಿವೆ. ತೋಟಗಾರಿಕೆ ಇಲಾಖೆಯು ರಾಷ್ಟ್ರೀಯ ತೊಟಗಾರಿಕೆ ಮಿಷನ್ ಯೋಜನೆಯಡಿ ರೈತರಿಗೆ ಹನಿ ನೀರಾವರಿ ವ್ಯವಸ್ಥೆ, ಜೀವಸಾರ ಘಟಕ ಮುಂತಾದ ಬೇಸಾಯದಲ್ಲಿ ನವೀನ ತಾಂತ್ರಿಕತೆ ಅಳವಡಿಸಿಕೊಳ್ಳಲು ಸಹಾಯಧನ ನೀಡುತ್ತಿದೆ. ರೈತರು ಯೋಜನೆಯ ಸದುಪಯೋಗ ಪಡೆದುಕೊಂಡು, ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದರೆ, ರೈತರಿಗೆ ಗೆಲುವು ಸಿಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ಕೊಪ್ಪಳ ತೋಟಗಾರಿಕೆ ಇಲಾಖೆಯ ಹಾರ್ಟಿ ಕ್ಲಿನಿಕ್‌ನ ಅಧಿಕಾರಿ ವಾಮನಮೂರ್ತಿ ಅವರು. ಹೆಚ್ಚಿನ ವಿವರಗಳಿಗೆ ವಾಮನಮೂರ್ತಿ- 9482672039, ರಾಮಣ್ಣ ವಿರೂಪಾಕ್ಷ -9739940163.
                                                   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT