ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡಗಳ ‘ರಕ್ಷಾ ಕವಚ’

Last Updated 19 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಗಿಡ–ಮರಗಳನ್ನೂ ಮಕ್ಕಳಂತೆಯೇ ಕಾಪಾಡುವವರು ಹಲವರು. ಮಕ್ಕಳು ದೊಡ್ಡವರಾಗುವತನಕ ಅವರದ್ದೇ ಚಿಂತೆಯಲ್ಲಿರುವ ಪೋಷಕರಂತೆ, ಸಸಿ ನೆಟ್ಟ ಮೇಲೆ ಬೇರು ಗಟ್ಟಿಯಾಗಿ, ಕೊಂಬೆ ಹರಡಿ ಒಂದೈದಡಿ ಎತ್ತರ ಬೆಳೆಯುವ ತನಕ ಅದರ ಮಾಲೀಕರ ಚಿಂತೆ ಕರಗದು.

ಇಂಥ ಸಂಕಟವನ್ನು ಸ್ವತಃ ಅನುಭವಿಸಿದ ಹಿರಿಯ ನಾಗರಿಕರೊಬ್ಬರು ಅದಕ್ಕೆ ಪರಿಹಾರ ಕಂಡುಹಿಡಿದಿದ್ದಾರೆ. ಸಸಿಗೆ ನೀರು, ಗೊಬ್ಬರ ಹಾಕುವುದಷ್ಟೇ ಅಲ್ಲ ಅದರ ಸುತ್ತ ಒಂದು ಉತ್ತಮ ‘ರಕ್ಷಾ ಕವಚ’ವನ್ನು ಸಿದ್ಧಪಡಿಸಿ, ನೀಡಿದ್ದಾರೆ. ಅವುಗಳು ಈಗ ಹುಬ್ಬಳ್ಳಿ-ಧಾರವಾಡದ ನೂರಾರು ಸಸಿಗಳಿಗೆ ಕವಚವಾಗಿವೆ.

ಈ ಕುರಿತು ಮಾತು ಆರಂಭಿಸಿದ ಹುಬ್ಬಳ್ಳಿಯ ಗಣೇಶನಗರದ ಎ.ಜಿ.ದೇಶಪಾಂಡೆ ‘ಸಸಿ ನೆಡೋದು ದೊಡ್ಡದಲ್ರಿ, ಅದು ಬೆಳೆಯೊಗುಂಟಾ ಅದನ್‌ ಮಕ್ಕಳ ಥರಾ ದೇಖರೆಕಿ (ಪೋಷಣೆ) ಮಾಡಬೇಕಾಗ್ತದ. ಅದಕ್ ಸ್ವಲ್ಪ ರೊಕ್ಕಾ ಖರ್ಚಾಗ್ತದ ಖರೆ, ಆದ್ರ ಮಕ್ಕಳಿಗೆ ಜ್ವರ ಬಂದ್ರ ನಾವು ದವಾಖಾನಿಗೆ ರೊಕ್ಕ ಹಾಕ್ತೆವಿ ಇಲ್ಲೊ. ಅದೇ ಥರ ಮನೆ ಎದುರಿಗ ಇರೊ ಮರಾನ ಛೊಲೊ ನೋಡೊಕೊಂಡ್ರ ಮುಂದ ನಮಗ ಶುದ್ಧ ಗಾಳಿ ಮತ್ ನೆರಳ ಸಿಗ್ತದ’ ಎಂದರು.

ಅರೆ ಮಲೆನಾಡು ಎನ್ನಲಾಗುವ ಹುಬ್ಬಳ್ಳಿ-ಧಾರವಾಡ ವೈವಿಧ್ಯಮಯ ಗಿಡ, ಮರ ಬೆಳೆಸಲು ಸೂಕ್ತ ಸ್ಥಳ. ಆದರೆ ದೂರದೃಷ್ಟಿ ಹಾಗೂ ಇಚ್ಛಾಶಕ್ತಿ ಕೊರತೆಯಿಂದ ಹಲವು ದಶಕಗಳ ಮರಗಳೇ ಈಚೆಗೆ ರಸ್ತೆ ವಿಸ್ತರಣೆಗೆ ಬಲಿಯಾಗಿವೆ. ಇನ್ನು ಹಸಿರು ಬೆಳೆಸುವ ಭರವಸೆ ಮಾತುಗಳು ಮಾತ್ರ ಕೇಳಿಬರುತ್ತವೆ ಹೊರತು ಅದು ಕಾರ್ಯನುಷ್ಠಾನ ಆಗುತ್ತಿಲ್ಲ. ಆದರೆ ದೇಶಪಾಂಡೆ ಅವರ ಪರಿಸರ ಪ್ರವಾಸಿ ತಾಣಗಳ ಅಭಿವೃದ್ಧಿ ಸಂಘಗಳು ಇದಕ್ಕೆ ಅಪವಾದವಾಗಿವೆ.

ಇರುವ ಜಾಗದಲ್ಲಿಯೇ ವೈಜ್ಞಾನಿಕವಾಗಿ ಸಸಿ ನೆಡುವ ತಿಳಿವಳಿಕೆ ನೀಡುವುದರ ಜೊತೆ ಸಸಿ ನೆಡುವುದು ಹೇಗೆ, ರಕ್ಷಿಸುವುದು ಹೇಗೆ ಎಂಬಿತ್ಯಾದಿ ಕುರಿತು ಅರಿವು  ಮೂಡಿಸುತ್ತಿದೆ. ಮರಗಳ ರಕ್ಷಣೆ ಅಧ್ಯಯನಕ್ಕಾಗಿಯೇ ಸಂಘದ ಕೆಲ ಸದಸ್ಯರು ಸಿಂಗಪುರ, ಥೈಲೆಂಡ್, ಮಲೇಷ್ಯಾಗಳಿಗೆ ಈಚೆಗೆ ಭೇಟಿ ನೀಡಿದರು. ಅಲ್ಲಿನ ‘ಫೈಬರ್‌ ಟ್ರೀ ಗಾರ್ಡ್‌’ಗಳನ್ನು ಗಮನಿಸಿದ ಸದಸ್ಯರು ಒಂದು ನಿರ್ಧಾರಕ್ಕೆ ಬಂದರು. ಕಟ್ಟಿಗೆಯಿಂದ ‘ಟ್ರೀ ಗಾರ್ಡ್‌’ ಮಾಡಿದರೆ ಒಲೆಗೆ ಉರಿ ಹಚ್ಚಲು ಒಯ್ಯುತ್ತಾರೆ, ಕಬ್ಬಿಣದಿಂದ ಸಿದ್ಧಗೊಳಿಸಿದರೆ ಕೊರೆದು ಗುಜರಿಗೆ ಮಾರುತ್ತಾರೆ. ಅದರ ಬದಲಾಗಿ ಪೈಪ್‌ನಿಂದ ಸಿದ್ಧಪಡಿಸಿದರೆ ಹೇಗೆ ಎಂಬುದನ್ನು ವಿಚಾರಿಸಿದರು. ನಂತರ ಅದು ಯಶಸ್ಸನ್ನೂ ಕಂಡಿತು.

ಏಳು ಅಡಿ ಎತ್ತರ, ಒಂದೂವರೆ ಅಡಿ ಅಗಲದ ಚೌಕಾಕಾರದ ಅಳತೆಯಲ್ಲಿ ಪಿವಿಸಿ ಪೈಪ್‌ನಿಂದ 30 ‘T’ ಜಾಯಿಂಟ್‌ ಉಪಯೋಗಿಸಿದ್ದಾರೆ. ಮೇಲ್ಭಾಗದಲ್ಲಿ ಜಾನುವಾರು ಎಲೆ ತಿನ್ನದಂತೆ ಎರಡು ಅಡಿ ಜಾಲರಿ, ಪೈಪ್ ಒಳಗಡೆ ದಪ್ಪಾದ ಕಟ್ಟಿಗೆಯನ್ನು ಹಾಕಿದ್ದಾರೆ. ಗಟ್ಟಿಯಾಗಿ ನೆಲದಲ್ಲಿ ಹುದುಗಲು ಆರು ಇಂಚಿನ ನಾಲ್ಕು ಮೊಳೆಗಳನ್ನು ಅಳವಡಿಸಲಾಗಿದೆ. ಇದಕ್ಕೆ ತಗಲುವ ಒಟ್ಟು ವೆಚ್ಚ ₹ 550. ಕೂಲಿ ಸೇರಿ ₹ 600. ಆದರೆ ಇದು ಲಾಭಕ್ಕಾಗಿ ಮಾಡುತ್ತಿಲ್ಲ. ಕೂಲಿ ಹಣ ಹೊರತುಪಡಿಸಿ ಉಳಿದ ಹಣವನ್ನು ಪರಿಸರ ಕಾಳಜಿಗಾಗಿಯೇ ಬಳಸಲಾಗುತ್ತದೆ ಎನ್ನುತ್ತಾರೆ ದೇಶಪಾಂಡೆ.

ರಕ್ಷಾ ಕವಚವನ್ನು ಹಾಕುವುದಷ್ಟೇ ಅಲ್ಲ. ಇವುಗಳ ಪೋಷಣೆಗೂ ಉಪಾಯವಿದೆ ಇವರ ಹತ್ತಿರ. ಊಟದ ನಂತರ ಚರಂಡಿಗೆ ಹಾಕುವ ಮುಸುರಿ ನೀರನ್ನು ಗಿಡಗಳಿಗೆ ಹಾಕಿದರೆ ಸಾಕು, ಅವುಗಳು ಮತ್ತಷ್ಟು ಸೊಂಪಾಗಿ ಬೆಳೆಯುತ್ತವೆ. ಇನ್ನು ಅನುಪಯುಕ್ತ ತರಕಾರಿ ತುಂಡರಿಸಿ ಹಾಕಿದರೆ ಅದೇ ಉತ್ತಮ ಗೊಬ್ಬರ ಎನ್ನುತ್ತಾರೆ.

ಹಸಿರಿನ ಮಹತ್ವ ಹೇಳುವ ದೇಶಪಾಂಡೆ ಅವರು, ‘33 ಮೀಟರ್ ಅಗಲದ ಮರವೊಂದು ಜೀವನದುದ್ದಕ್ಕೂ ಎಲ್ಲ ಜೀವರಾಶಿಗಳಿಗೆ ಪ್ರತಿ ಹೆಕ್ಟೇರ್‌ಗೆ 8ರಿಂದ 10 ಟನ್ ಆಮ್ಲಜನಕ ಪೂರೈಸುತ್ತದೆ. ನಾವು ಉಗುಳುವ ಇಂಗಾಲದ ಡೈ ಆಕ್ಸೈಡ್ ಮೊದಲಾದ ವಿಷ ಅನಿಲವನ್ನು ಸೇವಿಸುತ್ತದೆ. ಒಂದು ವೃಕ್ಷ  6ರಿಂದ 8 ಡೆಸಿಮಲ್ ಸಪ್ಪಳ ಮಾಲಿನ್ಯ ಹೀರಿಕೊಳ್ಳುತ್ತದೆ ಆದರೂ ಜನರು ಗಿಡ ಬೆಳೆಸುವುದಿಲ್ಲ, ಉಳಿಸುವುದಿಲ್ಲ ಏಕೆ’ ಎಂದು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT