ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವ ಮುಂಗಾರು ಆಗಿ ತಯಾರು

Last Updated 25 ಏಪ್ರಿಲ್ 2016, 19:46 IST
ಅಕ್ಷರ ಗಾತ್ರ

ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಬೇಸಿಗೆಯ ತೀವ್ರತೆ ದಿನೇದಿನೇ ಹೆಚ್ಚುತ್ತಿದೆ. ಈ ವರ್ಷ ಗರಿಷ್ಠ ಉಷ್ಣಾಂಶದಲ್ಲಿ ಹಿಂದೆಂದಿಗಿಂತಲೂ ಏರಿಕೆಯಾಗಿದೆ. ಆದರೆ ಈ ಉಷ್ಣಾಂಶ ಮುಂಗಾರಿಗೆ ವರವಾಗಿ ಪರಿಣಮಿಸಲಿದೆ.

ಜೂನ್‌ನಿಂದ ಸೆಪ್ಟೆಂಬರ್‌ವರೆಗೂ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಈ ಬಾರಿಯ ಬೇಸಿಗೆ ಮಳೆ (ಪೂರ್ವ ಮುಂಗಾರು)ಯು ನಿಗದಿತ ಕಾಲಕ್ಕೆ ಸರಾಸರಿ ಪ್ರಮಾಣದಲ್ಲಿ ಬರುವ ಮುನ್ಸೂಚನೆಯಿದೆ. ಇಂತಹ ಸಂದರ್ಭದಲ್ಲಿ ರೈತರು ಸೂಕ್ತವಾದ ಬೇಸಾಯ ಕ್ರಮಗಳನ್ನು ಅನುಸರಿಸಬೇಕು ಮತ್ತು ಅದಕ್ಕೆ ತಕ್ಕಂತೆ ಕೃಷಿ ಪರಿಕರಗಳನ್ನು ಒದಗಿಸಿಕೊಳ್ಳಬೇಕು.

ರೈತಾಪಿ ವರ್ಗದವರು ಹೇಳುವ ಹಾಗೆ ಭರಣಿ ಬಿಸಿಲು ಭರಿಸೋಕೆ ಆಗೋದಿಲ್ಲ ಆದರೆ ಅದೇ ಭರಣಿ ಮಳೆ ಹುಯ್ದರೆ ಧರಣಿಯೆಲ್ಲಾ ಬೆಳೆ ಎಂಬುದನ್ನೂ ಮರೆಯುವಂತಿಲ್ಲ. ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಪೂರ್ವ ಮುಂಗಾರು ಮಳೆಯು ಬಿರುಸಾಗಿದ್ದು ಈ ತಿಂಗಳ  ಕೊನೆ ವಾರದಿಂದ ಮಳೆಯು ಬೀಳತೊಡಗುತ್ತದೆ.

ಇಂಥ ಪ್ರದೇಶಗಳಲ್ಲಿ ಎರಡು ಬೆಳೆ ಪದ್ಧತಿ ವಾಡಿಕೆಯಲ್ಲಿದೆ. ಎರಡು ಬೆಳೆ ಪದ್ಧತಿಯನ್ನು ಅನುಸರಿಸುವ ರೈತರು ಬೀಳುವ ಮಳೆಯನ್ನು ಸಂರಕ್ಷಣೆ ಮಾಡಿಕೊಂಡು  ವರ್ಷದಲ್ಲಿ ಎರಡು ಬೆಳೆಗಳನ್ನು ಖುಷ್ಕಿ ಪ್ರದೇಶದಲ್ಲಿಯೂ ತೆಗೆದುಕೊಳ್ಳಬಹುದು.

ಏಪ್ರಿಲ್–ಮೇ ತಿಂಗಳಿನಲ್ಲಿ ಬಿತ್ತಬಹುದಾದ ಮೊದಲ ಬೆಳೆ: ಮಧ್ಯದ ಒಣ ಪ್ರದೇಶ (ಕೃಷಿ ವಲಯ-4)ದಲ್ಲಿ ಮೊದಲನೇ ಬೆಳೆಯಾಗಿ ಹೈಬ್ರೀಡ್ ಸಜ್ಜೆ, ತೃಣ ಧಾನ್ಯಗಳು, ಹೆಸರು, ಅಲಸಂದೆ ಅಥವಾ ಉದ್ದು ಬೆಳೆಗಳನ್ನು ಬೆಳೆಯುವುದು ಲಾಭದಾಯಕ.

ಪೂರ್ವ ಒಣ ಪ್ರದೇಶಗಳಲ್ಲಿ (ಕೃಷಿ ವಲಯ 5)ಮೊದಲ ಬೆಳೆಯಾಗಿ ಎಳ್ಳು, ಹುಚ್ಚೆಳ್ಳು, ಅಲಸಂದೆ, ಮೇವಿನ ಮುಸುಕಿನ ಜೋಳ ಅಥವಾ ನೆಲಗಡಲೆಯಂಥ ಅಲ್ಪಾವಧಿ ಬೆಳೆಗಳನ್ನು ಮೇ ತಿಂಗಳ ಎರಡನೇ ವಾರದಿಂದ ಜೂನ್ ಮೊದಲ ವಾರದವರೆಗೆ ಬಿತ್ತನೆ ಮಾಡುವುದು ಸೂಕ್ತವಾಗಿರುತ್ತದೆ. ಈ ಬೆಳೆಗಳು ಆಗಸ್ಟ್‌ ಎರಡನೇ ಅಥವಾ ಮೂರನೇ ವಾರದಲ್ಲಿ ಕಟಾವಿಗೆ ಬರುತ್ತವೆ.

ಈ ಬೆಳೆಗಳನ್ನು ಕಟಾವು ಮಾಡಿದ ತಕ್ಷಣ ಸಸಿಮಡಿಯಲ್ಲಿ ಸಿದ್ಧವಾಗಿರುವ ರಾಗಿಯನ್ನು ನಾಟಿ ಮಾಡಬಹುದು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಅಲಸಂದೆ, ಸೆಣಬು, ಇನ್ನಿತರೆ ದ್ವಿದಳ ಬೆಳೆಗಳನ್ನು ಹಸಿರೆಲೆ ಗೊಬ್ಬರದ ಬೆಳೆಯಾಗಿ ಬೆಳೆಯಬಹುದು.

ಮೇ ತಿಂಗಳಲ್ಲಿ ದೀರ್ಘಾವಧಿ ಬೆಳೆಗಳಾದ ತೊಗರಿ ಮತ್ತು ಹರಳು ಬೆಳೆಗಳನ್ನು ಏಕಬೆಳೆಗಳಾಗಿ ಬೆಳೆದರೆ ಹೆಚ್ಚು ಲಾಭದಾಯಕ, ಮಣ್ಣಿನ ಫಲವತ್ತತೆ ಹಾಗೂ ಮಣ್ಣಿನ ಆಳ ಕಡಿಮೆ ಇರುವ ಕಡೆಯಲ್ಲಿ ತೊಗರಿ, ಹರಳಿನ ಬದಲಾಗಿ ಎಳ್ಳು, ಅಲಸಂದೆ ಅಥವಾ ನೆಲಗಡಲೆಯನ್ನು ಬೆಳೆಯವುದು ಅನುಕೂಲಕರವಾಗಿರುತ್ತದೆ.

ದಕ್ಷಿಣ ಒಣ ಪ್ರದೇಶಗಳಲ್ಲಿ (ಕೃಷಿ ವಲಯ 6) ಹುರಳಿ, ಎಳ್ಳು, ಹೆಸರು, ಅಲಸಂದೆ, ಉದ್ದು ಹಾಗೂ ಹೆಚ್ಚು ತೇವಾಂಶ ಒದಗಿಸುವ ಗೋಡು ಮಣ್ಣಿನ ಪ್ರದೇಶಗಳಲ್ಲಿ ಸೂರ್ಯಕಾಂತಿ, ಹರಳು ಮತ್ತು ತೃಣ ಧಾನ್ಯಗಳನ್ನು ಮೊದಲನೇ ಬೆಳೆಯಾಗಿ ಬಿತ್ತನೆ ಮಾಡುವುದು ಒಳಿತು.

ಅರೆ ಮಲೆನಾಡು ಪ್ರದೇಶದಲ್ಲಿ (ಕೃಷಿ ವಲಯ 7) ಮಳೆ ವಿತರಣೆ ಚೆನ್ನಾಗಿ ಇರುವುದರಿಂದ ಸಾಮಾನ್ಯವಾಗಿ ಎರಡು ಬೆಳೆ ಪದ್ಧತಿಯು ವಾಡಿಕೆಯಲ್ಲಿದ್ದು ಏಪ್ರಿಲ್-ಮೇನಲ್ಲಿ ಮೊದಲ ಬೆಳೆಗಳಾಗಿ ಹೈಬ್ರೀಡ್‌ ಸಜ್ಜೆ, ಹೊಗೆಸೊಪ್ಪು, ಆಲೂಗಡ್ಡೆ, ಮೆಣಸಿನ ಕಾಯಿ,ಶೇಂಗಾ, ಎಳ್ಳು,  ತೃಣ ಧಾನ್ಯಗಳು ಹಾಗೂ ಅಲ್ಪಾವಧಿ ಬೇಳೆ ಕಾಳುಗಳನ್ನು ಬೆಳೆಯುವುದು ಉತ್ತಮದಾಯಕವಾಗಿರುತ್ತದೆ.

ಉತ್ತರ ಅರೆ ಮಲೆನಾಡು ಪ್ರದೇಶದಲ್ಲಿ(ಕೃಷಿ ವಲಯ 8) ಶೇಂಗಾ, ಸೋಯಾ ಅವರೆ, ಸೂರ್ಯಕಾಂತಿ, ಎಳ್ಳು, ಸಾಮೆ, ಸಜ್ಜೆ, ದ್ವಿದಳ ಧಾನ್ಯಗಳನ್ನು ಮೊದಲನೆ ಬೆಳೆಯಾಗಿ ಬೆಳೆಯಬಹುದು.

ಸಾಮಾನ್ಯವಾಗಿ ದ್ವಿದಳ ಬೆಳೆಗಳು (ಅಲಸಂದೆ, ಉದ್ದು, ಹೆಸರು) ಹೆಕ್ಟೇರಿಗೆ20–30 ಕಿ.ಗ್ರಾಂ ಸಾರಜನಕವನ್ನು ಸ್ಥಿರೀಕರಿಸುವುದಲ್ಲದೇ ಮುಂಗಾರಿನಲ್ಲಿ ಹೊದಿಕೆ ಬೆಳೆಗಳಾಗಿ ಮಣ್ಣಿನ ಸಂರಕ್ಷಣೆ ಮಾಡುತ್ತವೆ.

ಮಳೆಯ ಮುನ್ಸೂಚನೆಯನ್ನು ಅನುಸರಿಸಿ ರೈತರುಸೂಕ್ತ ಬೆಳೆ ಪದ್ಧತಿ ಕೈಗೊಂಡರೆ ಉತ್ತಮ ಇಳುವರಿ ಪಡೆಯಬಹುದು ಹಾಗೂ ರೈತರ ಮೊಗದಲ್ಲಿ ಹರ್ಷದ ಹೊನಲು ಕಾಣಬಹುದು. ಲೇಖಕರು ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು, ಕೃಷಿ ಹವಾಮಾನ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಗಾಂಧಿ ಕೃಷಿ ವಿಜ್ಞಾನಕೇಂದ್ರ, ಬೆಂಗಳೂರು


*ಪೂರ್ವ ಮುಂಗಾರಿನ ಮಳೆ
 ಪೂರ್ವ ಮುಂಗಾರಿನಲ್ಲಿ ಕ್ರಮವಾಗಿ ಅಶ್ವಿನಿ
(ಏ.14ರಿಂದ ಏ. 26– 32.4 ಮಿ.ಮೀ ಮಳೆ)
ಭರಣಿ (ಏ. 27ರಿಂದ ಮೇ 10–26.0 ಮಿ.ಮೀ)
ಕೃತ್ತಿಕ (ಮೇ 11ರಿಂದ ಮೇ 24– 46.6 ಮಿ.ಮೀ)
ರೋಹಿಣಿ (ಮೇ 25ರಿಂದ ಜೂ 7– 55.2 ಮಿ.ಮೀ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT