ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ಬೆನ್ನೇರಿ...

Last Updated 21 ಡಿಸೆಂಬರ್ 2015, 19:52 IST
ಅಕ್ಷರ ಗಾತ್ರ

ಭಾರತದಲ್ಲಿ ರಾಜಾಸ್ತಾನದ ನಂತರ ಹೆಚ್ಚು ಬರ ಸಂಭವ ಪ್ರದೇಶವೆಂದರೆ ಕರ್ನಾಟಕ. ‘ಬರ’ ಎಂದರೇನು ಎಂಬುದಕ್ಕೆ ಸರಿಯಾದ ವಿವರಣೆ ಇಲ್ಲ. ಕೇಂದ್ರೀಯ ಜಲ ಪ್ರಾಧಿಕಾರದ ಪ್ರಕಾರ ‘ಒಂದು ವಿಸ್ತಾರ ಪ್ರದೇಶದಲ್ಲಿ ನಿರಂತರ ಮಳೆಯು ಕಡಿಮೆಯಾಗಿ, ಮಣ್ಣಿನಲ್ಲಿ ತೇವಾಂಶ ಕಡಿಮೆಯಾದಾಗ ಕೃಷಿಯು ಕ್ಷೀಣಗೊಂಡರೆ ಆಗ ಬರ ಬಿದ್ದಿದೆ’ ಎಂದರ್ಥ. ಎಂದರೆ ಕೆರೆ ಕುಂಟೆಗಳು, ಜಲಾಶಯಗಳು ಪೂರ್ತಿ ಅಥವಾ ಭಾಗಶಃ ಒಣಗಿ ಹೋಗುವುದು.

ಇಂಥ ನೈಸರ್ಗಿಕ ವಿಕೋಪಕ್ಕೆ ನಮ್ಮ ರಾಜ್ಯ ಈ ವರ್ಷ ಗುರಿಯಾಗಿದೆ. ನಾನು ನಡೆಸಿರುವ ಅಧ್ಯಯನದ ಪರಿಮಿತಿಯಲ್ಲಿ ಹೇಳುವುದಾದರೆ 1988–89ರಲ್ಲಿ ಇಂಥ ಬರದ ಪರಿಸ್ಥಿತಿ ನಮ್ಮ ರಾಜ್ಯದಲ್ಲಿತ್ತು.

ಕರ್ನಾಟಕದಲ್ಲಿ ಕರಾವಳಿ ಮತ್ತು ಪಶ್ಚಿಮ ಘಟ್ಟದ ಜಿಲ್ಲೆಗಳು ಹೆಚ್ಚಿನ ಮಳೆಯನ್ನು ಪಡೆಯುತ್ತವೆ. ಲಭ್ಯವಿರುವ ಮಾಹಿತಿಯ ಪ್ರಕಾರ ಶಿವಮೊಗ್ಗ ಜಿಲ್ಲೆಯ ಆಗುಂಬೆಯು 1946ರಲ್ಲಿ, 12,927 ಮಿ.ಮೀ. ಮಳೆಯನ್ನು ಪಡೆದಿತ್ತು. ಸಾಮಾನ್ಯವಾಗಿ ಕರಾವಳಿ ಪ್ರದೇಶ ವರ್ಷದಲ್ಲಿ 4000 ಮಿ.ಮೀ. ಮಳೆ ಬಿದ್ದರೆ, ದೂರ ಸರಿದಂತೆಲ್ಲಾ ಮಳೆಯು ಕಡಿಮೆಯಾಗುತ್ತದೆ. ಚಿತ್ರದುರ್ಗ, ರಾಯಚೂರು, ಕಲಬುರ್ಗಿ ಮತ್ತು ಕೋಲಾರ ಜಿಲ್ಲೆಗಳಲ್ಲಿ ಪ್ರತಿ ವರ್ಷ 600 ಮಿ.ಮೀ. ಅಥವಾ ಅದಕ್ಕೂ ಕಡಿಮೆ ಮಳೆ ಬೀಳುತ್ತದೆ. ಆದ್ದರಿಂದ ಈ ಜಿಲ್ಲೆಗಳಿಗೆ ಸರ್ಕಾರ ಹೆಚ್ಚು ಗಮನ ಕೊಡಬೇಕಿರುವ ಅಗತ್ಯವಿದೆ.

1995ಕ್ಕಿಂತ ಪೂರ್ವದಲ್ಲಿ ರಾಜ್ಯದಲ್ಲಿ ಕೇವಲ 975 ಮಳೆ ಮಾಪನ ಕೇಂದ್ರಗಳಿದ್ದವು. ಆದರೆ ಈಗ ಪ್ರತಿ ಹೋಬಳಿ ಕೇಂದ್ರದಲ್ಲಿ ಒಂದೊಂದು ಮಳೆ ಮಾಪನ ಕೇಂದ್ರಗಳಿವೆ. ಈ ಕೇಂದ್ರಗಳು ಉಪಗ್ರಹದ ಮೂಲಕ ತತ್‌ಕ್ಷಣದ ಮಳೆ ಮಾಹಿತಿಯನ್ನು ರಾಜ್ಯದ ನೈಸರ್ಗಿಕ ಉತ್ಪಾದನಾ ಕೇಂದ್ರಕ್ಕೆ ರವಾನಿಸುತ್ತವೆ.

ಈ ಆಧಾರದ ಮೇಲೆ ಕೆ.ಎಸ್‌.ಎನ್‌.ಎಂ.ಡಿ.ಸಿ. ಸರ್ಕಾರದ ಸಂಬಂಧಿತ ಇಲಾಖೆಗಳಿಗೆ ಮಾಹಿತಿಯನ್ನು ನೀಡುತ್ತದೆ. ನಮ್ಮ ರಾಜ್ಯದ ವಾರ್ಷಿಕ ಮಳೆಯ ಶೇ 80 ರಷ್ಟು ಮಳೆಯು ವಾಯವ್ಯ ಮಾರುತದಿಂದ ಬೀಳುತ್ತದೆ. ಶೇ 20ರಷ್ಟು ಮಾತ್ರ ಈಶಾನ್ಯ ಮಳೆ ಮಾರುತದಿಂದ ಬೀಳುತ್ತದೆ. ನೈರುತ್ಯ ಮಳೆ ಮಾರುತವು ಈ ವರ್ಷ ಅಂದರೆ ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ತೀರಾ ಕಡಿಮೆಯಾಗಿದ್ದು ಒಟ್ಟು 136 ತಾಲ್ಲೂಕುಗಳು ಬರಪೀಡಿತವಾಗಿವೆ.

ಆದರೆ ಸರ್ಕಾರ ಮಾತ್ರ ಬರ ಪರಿಹಾರ ಕ್ರಮಗಳನ್ನು ಕೈಗೊಂಡ ಬಗ್ಗೆ ಎಲ್ಲೂ ವರದಿಯಾಗಿಲ್ಲ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ 1,40 ಕೋಟಿ ಬರ ಪರಿಹಾರವನ್ನು ಕೊಟ್ಟಿದ್ದರೂ ಅದು ಪ್ರಯೋಜನವಾಗಿಲ್ಲ. ಬರ ಬಂದರೆ, ರಾಜಕಾರಣಿಗಳ, ಅಧಿಕಾರಿಗಳ ಮತ್ತು ಗುತ್ತಿಗೆದಾರರ ಭ್ರಷ್ಟಾಚಾರದ ತ್ರಿಕೋನ ನಿರ್ಮಾಣಗೊಳ್ಳುತ್ತದೆ. ಸರ್ಕಾರ ಈ ತ್ರಿಕೋನವನ್ನು ಛಿದ್ರಗೊಳಿಸಿದರೆ, ಜನರಿಗೆ ಪರಿಹಾರ ಸಿಗುತ್ತದೆ.

ಬರ ಪರಿಹಾರ ಕ್ರಮಗಳನ್ನು ತಾತ್ಕಾಲಿಕ ಹಾಗೂ ಕಾಯಂ ಕ್ರಮಗಳೆಂದು ವಿಂಗಡಿಸಬಹುದು.  ಹಳ್ಳಿಗಾಡಿನಲ್ಲಿ ನೆಲೆಸಿರುವ ಕೃಷಿ ಹಾಗೂ ತತ್ಸಂಬಂಧಿತ ಕಾರ್ಮಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಳಗಿನ ಕ್ರಮಗಳನ್ನು ಸೂಚಿಸಲಾಗಿದೆ.

* ಗ್ರಾಮೀಣ ಪ್ರದೇಶಗಳನ್ನು ತಾಲ್ಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲು, ರಸ್ತೆಗಳನ್ನು ನಿರ್ಮಿಸುವುದು. ಸಾಮಾನ್ಯವಾಗಿ ಮಣ್ಣಿನ ರಸ್ತೆಗಳನ್ನು  ನಿರ್ಮಿಸಲಾಗುತ್ತದೆ. ಇದು ಸರಿಯಾದ ಕ್ರಮವಲ್ಲ. ಪಕ್ಕಾ ರಸ್ತೆಗಳನ್ನು ನಿರ್ಮಿಸಬೇಕು. ಮಣ್ಣಿನ ರಸ್ತೆಗಳ ನಿರ್ಮಾಣದ ಹಿಂದಿರುವ ಉದ್ದೇಶ ಎಲ್ಲರಿಗೂ ಗೊತ್ತು. ಇದರ ಬದಲಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಕಟ್ಟಡಗಳನ್ನು ಅಥವಾ ಇತರೆ ಯಾವುದಾದರೂ ಸಾರ್ವಜನಿಕ ಕಟ್ಟಡಗಳನ್ನು ನಿರ್ಮಿಸಬೇಕು.

* ನಮ್ಮ ರಾಜ್ಯದ ಬಹುತೇಕ ಕೆರೆಗಳು ಹೊಂಡಿನಿಂದ ಮುಚ್ಚಿಹೋಗಿವೆ. ಅಂಥ ಕೆರೆಗಳನ್ನು ಆರಿಸಿ ಯಂತ್ರಗಳ ಸಹಾಯದಿಂದ ಹೊಂಡನ್ನು ತೆಗೆದು ನೀರಿನ ಇಳಿಕೆಯಲ್ಲಿ ಹಾಕಬೇಕು. ಇದಕ್ಕಿಂತಲೂ ಹೆಚ್ಚಿನ ಉಪಯೋಗವೆಂದರೆ, ಇಂಥ ಹೊಂಡನ್ನು ಹೊಲಗಳಿಗೆ ಗೊಬ್ಬರವಾಗಿ ಉಪಯೋಗಿಸಲು ರೈತರಿಗೆ ತಿಳಿಹೇಳಬೇಕು.

* ಸಣ್ಣ ಸಣ್ಣ ಹಳ್ಳಗಳಿಗೆ ಚೆಕ್‌ಡ್ಯಾಂಗಳನ್ನು ಕಟ್ಟಬೇಕು. ಇದರಿಂದ ನೀರಿನ ಸವಕಳಿ ಕಡಿತಗೊಳ್ಳುತ್ತದೆ. ಮತ್ತು ಆಂತರ್ಜಲ ಮತ್ತು ಮರುಪೂರ್ಣಗೊಳ್ಳುತ್ತದೆ. ಕೆಳಹರಿವಿನಲ್ಲಿರುವ ಬಾವಿಗಳಲ್ಲಿ ನೀರು ಉಕ್ಕುತ್ತದೆ.

* ಸಿಂಧನೂರು, ಗಂಗಾವತಿ ಮತ್ತು ಕೊಪ್ಪಳ ತಾಲ್ಲೂಕಿನ ಎರೆ ಭೂಮಿ ಕಬ್ಬು ಮತ್ತು ಭತ್ತ ಬೆಳೆದಿದ್ದರಿಂದ ಸವಳು ಭೂಮಿಯಾಗಿದೆ. ಈ ಭೂಮಿಯಲ್ಲಿ ಸದ್ಯ ಏನನ್ನೂ ಬೆಳೆಯಲು ಸಾಧ್ಯವಿಲ್ಲ. ಅಂಥ ಸವಳು ಭೂಮಿಯಲ್ಲಿ ಸರ್ಕಾರವೇ ನೀಲಗಿರಿ ಮರಗಳನ್ನು ಬೆಳೆದು ಆಯಾ ಭೂಮಾಲೀಕರಿಗೆ ಕಟಾವು ಮಾಡಿಕೊಳ್ಳುವ ಹಕ್ಕನ್ನು ನೀಡಬೇಕು.

ಕೆಲವೇ ವರ್ಷಗಳಲ್ಲಿ ನೀಲಗಿರಿ ಮರಗಳನ್ನು ಕಟಾವು ಮಾಡಿ ರೈತರು ಹಣ ಗಳಿಸಬಹುದು. ನಂತರ ಸವಳು ಭೂಮಿಯು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತನೆಗೊಳ್ಳುತ್ತದೆ. ನಂತರ ಕಬ್ಬು, ಭತ್ತ ಇತ್ಯಾದಿ ಬೆಳೆಗಳನ್ನು ಬೆಳೆಯದೆ ಜೋಳ, ರಾಗಿ, ಮೆಕ್ಕೆ ಜೋಳದಂಥ ಕಡಿಮೆ ನೀರು ಬೇಕಾಗುವ ಬೆಳೆಗಳನ್ನು ಬೆಳೆಯಬೇಕು. ಇವಿಷ್ಟಲ್ಲದೇ ಇನ್ನೂ ಅನೇಕ ಕ್ರಮಗಳ ಕುರಿತು ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ಚರ್ಚಿಸಿ ಕ್ರಮ ಕೈಗೊಳ್ಳಬೇಕಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT