ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀನ್ಸ್ ಅಲ್ಲದ ಬೀನ್ಸ್..!

Last Updated 24 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಒಂದು ರೀತಿಯಲ್ಲಿ ಬದನೆ ರೀತಿ ಕಾಣುವ ಇದು ಬದನೆ ಅಲ್ಲ. ಹೆಸರು ಲವಂಗ ಬೀನ್ಸ್. ಹಾಗಂತ ಇದು ಲವಂಗವೂ ಅಲ್ಲ, ಬೀನ್ಸ್ ಹಾಗೆ ಕಂಡರೂ ಅದೂ ಅಲ್ಲ! ಇದೊಂದು ಬಳ್ಳಿ ತರಕಾರಿ. ಇದರಲ್ಲಿ ಎರಡು ಮೂರು ಹೆಸರು ತಳಕು ಹಾಕಿಕೊಂಡಿದೆ. ಇದಕ್ಕೆ ಒಂದೊಂದು ಕಡೆ ಒಂದೊಂದು ಹೆಸರು. ಇದು ಸದ್ಯಕ್ಕೆ ಲವಂಗ ಬೀನ್ಸ್ ಎಂಬ ಹೆಸರಿನಲ್ಲಿ ಜನಪ್ರಿಯವಾಗಿದೆ. ಕೇರಳದ ಹಳ್ಳಿಗಾಡಿನಲ್ಲಿ ಇದನ್ನು ನಿತ್ಯ ಬದನೆ ಎಂದು ಕರೆಯುವುದು ರೂಢಿ.

ನಿಮ್ಮ ಮನೆ ಹಿತ್ತಲಿನಲ್ಲಿ ಇದು ಇದ್ದರೆ ಅಗತ್ಯ ಬಿದ್ದಾಗಲೆಲ್ಲ ಸಾಂಬಾರು ಸೇರಿಕೊಳ್ಳಲು ಇದು ರೆಡಿ. ಒಮ್ಮೆ ಬಳ್ಳಿ ಬೆಳೆಯಿತೆಂದರೆ ನಾಲ್ಕು ವರ್ಷ ನಿರಂತವಾಗಿ ಬೆಳೆಯುತ್ತದೆ. ಅಂತಹ ಸಮೃದ್ಧ ತರಕಾರಿ ಇದು. ಇದೊಂದು ರೀತಿ ನಿಸ್ವಾರ್ಥಿ ಬಳ್ಳಿ, ಹೆಚ್ಚಿನ ಆರೈಕೆ ಬೇಡದು. ಇದರ ವೈಜ್ಞಾನಿಕ ಹೆಸರು ಐಪೊಮಿಯಾ ಮುರಿಕಾಟ. ಮಲಯಾಳದಲ್ಲಿ ಇದನ್ನು ನಿತ್ಯ ವಜಿದಿಲ್ ಎಂದು ಕರೆಯಲಾಗುವುದು.

ಕೇರಳದ ಈ ತರಕಾರಿ ನಮ್ಮ ರಾಜ್ಯಕ್ಕೆ ಬಂದದ್ದು ಹೀಗೆ: ಹಲವು ಅಪರೂಪದ ತರಕಾರಿಗಳನ್ನು ಬೆಳೆಯುವ ನಿತ್ಯಾಸಕ್ತಿ ಹೊಂದಿರುವ ನಮ್ಮ ದಕ್ಷಿಣ ಕನ್ನಡದ ಬಂಟ್ವಾಳ ತಾಲ್ಲೂಕಿನ ಶಂಕರಭಟ್ ವಡ್ಯ ಕಣ್ಣಿಗೆ ಬಿದ್ದದ್ದೇ ತಡ, ಅದು ದಕ್ಷಿಣ ಕನ್ನಡದ ಮೂಲಕ ರಾಜ್ಯಕ್ಕೆ ಕಾಲಿಟ್ಟೇ ಬಿಡ್ತು. ಕೇರಳದ ತಮ್ಮ ಸ್ನೇಹಿತರ ಮೂಲಕ ಬೀಜಗಳನ್ನು ತರಿಸಿ ಬಿತ್ತಿ ಬೆಳೆದರು. ಬಿತ್ತಿದ ೬೦ ದಿನಗಳಲ್ಲಿ ಬಳ್ಳಿ ಹೂ ಬಿಟ್ಟು ಕಾಯಿ ಕಾಣಿಸಿಕೊಳ್ಳಲಾರಂಭಿಸಿತು. ಅದಕ್ಕೆ ಬೀಜವೇ ಬೇಕೆಂದಿಲ್ಲ, ಬಳ್ಳಿಯನ್ನು ಕತ್ತರಿಸಿ ಗಿಡ ಮಾಡಿಕೊಂಡು ನೆಟ್ಟರೂ ಬಳ್ಳಿಯಾಗಿ ಬೆಳೆಯುತ್ತದೆ.

ಇದರಲ್ಲಿ ಸಾಂಬಾರು ಇಲ್ಲವೇ ಪಲ್ಯ ಸಹ ಮಾಡಬಹುದು. ಎಲ್ಲ ತರಹದ ಖಾದ್ಯಗಳಿಗೂ ಬಳಸಬಹುದು. ಬಳ್ಳಿಯಿಂದ ಬಿಡಿಸಿಕೊಂಡು ತುದಿಯಲ್ಲಿರುವ ಹೂವಿನಂತಹ ಭಾಗವನ್ನು ತೆಗೆದು ರುಚಿಕರ ಖಾದ್ಯ ತಯಾರಿಸಬಹದು. ಮಜ್ಜಿಗೆ ಹುಳಿ ಮಾಡಿದರೂ ಸೈ. ಹಿತ್ತಲಿನಲ್ಲಿ ನಾಲ್ಕು ಬಳ್ಳಿಗಳು ಸಾಕು. ಎಳೆದಿದ್ದಾಗಲೇ ಕೊಯ್ಲು ಮಾಡಿದರೆ ರುಚಿ ಹೆಚ್ಚು. ಸ್ವಲ್ಪ ಬಲಿತರೂ ಸಾಕು ನಾರು ಬಂದು ಗಟ್ಟಿಯಾಗುತ್ತದೆಂದು ತಮ್ಮ ಮನೆಯಲ್ಲಿ ಈ ತರಕಾರಿ ಬೆಳೆದಿರುವ ಕೃಷಿಕ ಬಂಟ್ವಾಳದ ಪೆರಮೊಗರುವಿನ ರಮೇಶ ಕೈಂತಜೆ ಹೇಳುತ್ತಾರೆ.

ದಕ್ಷಿಣ ಕನ್ನಡದ ಅಪರೂಪದ ಗೊಂಚಲು ಹೀರೆಯನ್ನು ಹುಡುಕಿ ತಂದು ಬೆಳೆಸಿ ಸ್ನೇಹಿತರಿಗೆಲ್ಲ ನೀಡಿದ್ದ ಶಂಕರ ಭಟ್ ವಡ್ಯ ಈಗ ಕೇರಳದ ಲವಂಗ ಬೀನ್ಸ್‌ ಅನ್ನು ಪರಿಚಯಿಸಿದ್ದಾರೆ. ಸಂಪರ್ಕಕ್ಕೆ ೯೮೮೦೨೪೫೩೬.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT