ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ ತರಕಾರಿ ತೋಟ

Last Updated 9 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಎಲ್ಲ ತರಕಾರಿ ತೋಟಗಳಂತೆ ಇದಲ್ಲ. ಏಕೆಂದರೆ ಇಲ್ಲಿರುವ ತರಕಾರಿಗಳೆಲ್ಲ ಸಾಮಾನ್ಯವಲ್ಲ, ಎಲ್ಲದ್ದರಲ್ಲೂ ಒಂದೊಂದು ಬಗೆಯ ವೈಶಿಷ್ಟ್ಯ. ಗಾತ್ರದಲ್ಲಷ್ಟೇ ಅಲ್ಲದೇ ರುಚಿಯಲ್ಲಿಯೂ ಬೇರೆಲ್ಲ ತರಕಾರಿಗಳನ್ನು ಮೀರಿ ನಿಂತಿವೆ.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಿಂದ ಪುಣಚೆಯ ಮಾರ್ಗ ಮಧ್ಯೆ ಸಿಗುವ ಸೂರ್ಣಕಟ್ಟೆಯಿಂದ ಎಡಕ್ಕೆ ತಿರುಗಿ ನಾಲ್ಕು ಕಿಲೋ ಮೀಟರ್ ಪಯಣಿಸುತ್ತಿದ್ದಂತೆಯೇ 50 ಎಕರೆಯಷ್ಟು ವಿಶಾಲವಾಗಿ ಚಾಚಿಕೊಂಡಿರುವ ‘ಮಲ್ಯ ಎಸ್ಟೇಟ್‌’ ಕಾಣಿಸುತ್ತದೆ.

ಅಡಿಕೆ, ತೆಂಗು, ಮಾವು ಗಿಡಗಳಿಂದ ತುಂಬಿರುವ ಈ ಬೃಹತ್‌ ತೋಟದ ಮುಂದೆ ಸಾಗುತ್ತಿದ್ದಂತೆ ಈ ಎಸ್ಟೇಟ್‌ ಯಜಮಾನ ಶಂಕರನಾರಾಯಣ ಭಟ್‌ ಅವರ ಮನೆ ಇದೆ. ಮನೆಯ ಮುಂಭಾಗದಲ್ಲಿ ಇರುವ ಎರಡು ಎಕರೆ ತೋಟದಲ್ಲಿ ತಹರೇವಾರಿ ತರಕಾರಿ ಮೇಳೈಸಿದೆ. ಒಂದಕ್ಕೊಂದು ಭಿನ್ನ ಎನ್ನುವಂಥ ತರಕಾರಿಗಳು ಅಲ್ಲಿ ತುಂಬಿಕೊಂಡಿವೆ.

ಇವೆಲ್ಲಾ ಇವೆ...
ತೋಟದ ಸಮೀಪ ಹೋದಂತೆಯೇ ಕಾಣಿಸುವುದು ಬೀನ್ಸ್‌. ಈ ಬೀನ್ಸ್ ಅನ್ನು ಕರಾವಳಿಯಲ್ಲಿ ಬೆಳೆಸಿ ಯಶಸ್ವಿಯಾದವರಲ್ಲಿ ಶಂಕರನಾರಾಯಣ ಭಟ್ಟರೇ ಮೊದಲಿಗರು ಎನ್ನಬಹುದೇನೋ. ಇದರ ಜೊತೆಗೆ ಆರು ಜಾತಿಯ ಅಲಸಂದೆಗಳನ್ನು ಭಟ್ಟರು ಬೆಳೆಸಿದ್ದಾರೆ. ಇದರಲ್ಲಿ ಕೂಡ ಭಿನ್ನತೆ ಇದೆ. ಏಕೆಂದರೆ ಸಾಮಾನ್ಯವಾಗಿ ಬಿಳಿ ಅಲಸಂದೆ ಬಿಟ್ಟರೆ ಕೆಂಪು ಅಲಸಂದೆ ಕಾಣಬಹುದು.

ಆದರೆ ಭಟ್ಟರ ತೋಟದಲ್ಲಿ ಹಸಿರು ಮೀಟರ್‌ ಅಲಸಂದೆಯೂ ಇದೆ. ಕೆಂಪು ಅಲಸಂದೆ ಸಾಮಾನ್ಯ ಅಲಸಂದೆಗಿಂತ ತುಸು ಭಿನ್ನವಾಗಿದ್ದು, ನೋಡಲು ಆಕರ್ಷಕವಾಗಿದೆ. ಅಲಸಂದೆಯಿಂದ ಅತ್ತ ಕಣ್ಣಾಡಿಸಿದರೆ ಹಿರಿಹಿರಿ ಹಿಗ್ಗುತ್ತಿರುವ ಹೀರೇಕಾಯಿ ಕಾಣಿಸುತ್ತದೆ. ಕೇವಲ ‘ಕಾಣಿಸುತ್ತದೆ’ ಎನ್ನುವುದಕ್ಕಿಂತ ಸೆಳೆಯುತ್ತದೆ ಎನ್ನಬಹುದೇನೋ. ಏಕೆಂದರೆ ಈ ಹೀರೆಕಾಯಿಯ ಗಾತ್ರ ಅದ್ಭುತವಾದದ್ದು.

ಇವು ಗಾತ್ರದಲ್ಲಿ ಮಾತ್ರವಲ್ಲದೇ ರುಚಿಯಲ್ಲಿಯೂ ಉಳಿದ ಹೀರೇಕಾಯಿಗಳನ್ನು ಮೀರಿಸುತ್ತವೆ. ಏಕೆಂದರೆ ಈ ಹೀರೇಕಾಯಿ ಎಳತು ಇದ್ದಾಗ ಮುಳ್ಳುಸೌತೆ ತಿಂದಷ್ಟೇ ರುಚಿ. ಆದುದರಿಂದಲೇ ಈ ಹೀರೇಕಾಯಿಯನ್ನು ಸಲಾಡ್‌ಗೆ ಹೆಚ್ಚಿಗೆ ಬಳಸಲಾಗುತ್ತದೆ ಎನ್ನುತ್ತಾರೆ ಶಂಕರನಾರಾಯಣ ಭಟ್ಟರು.

ಈ ಹೀರೇಕಾಯಿಯ ಗೊಂಚಲಿನ ಜೊತೆಗೇ ಕೇರಳದ ತಳಿ ಹೀರೇಕಾಯಿ ಕೂಡ ಇವರ ತೋಟದಲ್ಲಿ ಜಾಗ ಪಡೆದಿದೆ. ಇದರೊಟ್ಟಿಗೆಯೇ ಉದ್ದನೆ ಜುಟ್ಟು ಇರುವ ಬೃಹತ್ ಹೀರೇಕಾಯಿ, ಜುಟ್ಟು ಸಣ್ಣಕ್ಕಿರುವ ನಯವಾದ ಆರು ಅಡಿಯ ಹೀರೇಕಾಯಿ ಚಪ್ಪರದಲ್ಲಿ ಆಕರ್ಷಣೀಯವಾಗಿ ಕಾಣಿಸುತ್ತದೆ.

ಹೀರೇಕಾಯಿಯಿಂದ ದೃಷ್ಟಿ ಪಕ್ಕಕ್ಕೆ ಸರಿಸಿದರೆ ಪಡವಲ ಕಾಯಿಯ ಬಳ್ಳಿಗಳು ಕಾಣಿಸುತ್ತವೆ. ಬಿಳಿ, ಹಸಿರು, ಬಿಳಿಹಸಿರು ಮಿಶ್ರಿತ... ಹೀಗೆ ವಿಭಿನ್ನ ಬಣ್ಣಗಳ ಪಡುವಲಗಳು ಅಲ್ಲಿವೆ. ಅದು ಕೂಡ ತನ್ನ ಬೃಹತ್‌ ಗಾತ್ರದಿಂದ ಬಳ್ಳಿಗೆ ಭಾರವಾಗಿ ನೆಲ ನೋಡುತ್ತಿದೆ. ಹಾಗೆಯೇ, ಚಪ್ಪರಕ್ಕೆ ಭಾರವಾಗಿ ನೆಲಕ್ಕೆ ತಳ್ಳಿರುವಂತೆ ಕಾಣಿಸುವ ಸುಮಾರು ಎಂಟು ಅಡಿ ಉದ್ದದ ಹಾಗಲಕಾಯಿಯೂ ಅವರಲ್ಲಿದೆ.

ಇನ್ನು, ಸೋರೆಕಾಯಿಯಂತೂ ಅಚ್ಚರಿ ಮೂಡಿಸುವ ರೀತಿಯಲ್ಲಿ ಬೆಳೆದು ನಿಂತಿದೆ. ಇದರ ಹೆಸರು ‘ಹವಾಯಿ ಸೋರೆ’. ಏಕೆಂದರೆ ಈ ಸೋರೆಯ ಬೀಜವನ್ನು ಹವಾಯಿ ದೇಶದಿಂದ ತಂದು ಬಿತ್ತಲಾಗಿದೆ. ಅದರ ಪಕ್ಕದಲ್ಲಿ ಈ ಸೋರೆಯ ಬುರುಡೆಯಿಂದ ರಚಿಸಲಾಗಿರುವ ಆಲಂಕಾರಿಕ ಪಾಟ್ ಕೂಡ ಭಟ್ಟರು ತೋಟದ ಸಮೀಪ ಇಟ್ಟಿದ್ದು ಅದು ಕೂಡ ಗಮನ ಸೆಳೆಯುತ್ತದೆ.

ಅದರಂತೆಯೇ ಇಂಗ್ಲೆಂಡ್‌ ತಳಿಯಾಗಿರುವ ಚೀನಿಕಾಯಿ ಕೂಡ ತೋಟದಲ್ಲಿದೆ. ಇದರ ಹೆಸರು ‘ಬಟನೆಸ್ ಸ್ಕಾಚ್’. ಅತ್ಯಂತ ರುಚಿಕರವಾಗಿರುವ ಇದನ್ನು ಸಲಾಡ್‌ ಹಾಗೂ ಪಾಯಸಕ್ಕೆ ಬಳಸಿದರೆ ಬಾಯಿ ಚಪ್ಪರಿಸಬೇಕು ಎನ್ನುತ್ತಾರೆ ಭಟ್ಟರು. ಅಂದ ಹಾಗೆ ಒಂದು ಚೀನಿ ಕಾಯಿ 5 ರಿಂದ 8 ಕೆ.ಜಿ. ತೂಗುತ್ತದೆ! ಮೂಸಂಬಿ ಆಕಾರದ, ಗೋಳಿಯಾಕಾರದ ಕುಂಬಳಕಾಯಿಯೂ ಇವರಲ್ಲಿದೆ.

ಇಷ್ಟೆಲ್ಲ ಅದ್ಭುತಗಳನ್ನು ನೋಡುತ್ತಾ ಕಣ್ಣು ತುಂಬಿಸಿಕೊಳ್ಳುವಷ್ಟರಲ್ಲಿಯೇ ಕೆಸುವಿನ ಗಿಡ ಇನ್ನಷ್ಟು ಕುತೂಹಲವನ್ನು ಕೆರಳಿಸುತ್ತದೆ. ಅಮೆರಿಕದಿಂದ ಬೀಜ ತಂದು ಬೆಳೆಸಿದ ಈ ಕೆಸುವಿನ ಎತ್ತರ 12 ಅಡಿ! ಒಂದು ಕೆಸುವಿನ ಗಿಡದಿಂದ ಗಂಟನ್ನು ಮುರಿದು ಭಟ್ಟರು ಸಿಪ್ಪೆ ತೆಗೆದು ತಿನ್ನಲು ಕೊಟ್ಟರು. ಕೆಸುವಿನ ಗಿಡ ಸಾಮಾನ್ಯವಾಗಿ ಕೆರೆತ ತರವಂಥದ್ದು. ಅದಕ್ಕಾಗಿಯೇ ತಿನ್ನುವಾಗ ಹೆದರಿಕೆಯಾಯಿತು.

‘ಹೆದರಬೇಡಿ, ತಿಂದು ಆಮೇಲೆ ಮಾತಾಡಿ’ ಎಂದರು ಭಟ್ಟರು. ಆದರೂ ಹೆದರುತ್ತಲೇ ಅದನ್ನು ಬಾಯಲ್ಲಿ ಇಟ್ಟೆ. ಬಾಯಲ್ಲಿ ಇಡುತ್ತಿದ್ದಂತೆಯೇ ಆಹಾ! ಎಂಬ ನುಡಿ ಅರಿವಿಲ್ಲದಂತೆಯೇ ಬಂತು. ಅಷ್ಟು ರುಚಿ ಅದರದ್ದು. ಇವರ ತೋಟದಲ್ಲಿ ಥರಾವರಿ ಸೌತೆಕಾಯಿಗಳಿವೆ. ಉರುಟಾದ ಕುಂಬಳ ಕಾಯಿಯಂತೆ ಕಾಣುವ ಸೌತೆ, ಮಡೆ ಸೌತೆ, ಮೂಸಂಬಿಯಾಕಾರದ ಸೌತೆ ಇಲ್ಲಿವೆ. ಇದಕ್ಕೆಲ್ಲಾ ಮುಕುಟವಿಟ್ಟಂತೆ ಬಳ್ಳಿ ಬಟಾಟೆ ಗಮನ ಸೆಳೆಯುತ್ತದೆ.

ಬೇರೆಲ್ಲೂ ಕಾಣಸಿಗದ ಚಪ್ಪರದ ಮೇಲೆ ಬೇರೆ ಬೇರೆ ಗಾತ್ರದಲ್ಲಿ ಬಟಾಟೆಯನ್ನೂ ಇಲ್ಲಿ ಬೆಳೆಯಲಾಗಿದೆ. ಇವರು ಹಿಂದೊಮ್ಮೆ ತಮ್ಮ ತೋಟದಲ್ಲಿಯೇ ಬೃಹತ್‌ ತರಕಾರಿ ಮೇಳ ಆಯೋಜಿಸಿದ್ದರು. ಈ ಎಲ್ಲ ವಿಶಿಷ್ಟ ತರಕಾರಿಗಳನ್ನು ಅವರು ಪ್ರದರ್ಶನಕ್ಕಿಟ್ಟಿದ್ದರು. ಕರ್ನಾಟಕದ ಮೂಲೆ ಮೂಲೆಗಳಿಂದ 500ಕ್ಕೂ ಹೆಚ್ಚು ಕೃಷಿಕರು ಈ ತರಕಾರಿಗಳನ್ನು ಕಾಣಲು ಬಂದಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT