ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾನಳ್ಳಿ ಈರುಳ್ಳಿ ನೀರು ಬಾಯಲ್ಲಿ!

Last Updated 26 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಎಲ್ಲ ಈರುಳ್ಳಿಗಿಂತ ಇದು ಭಿನ್ನ. ರುಚಿಯಲ್ಲಿ ಇದನ್ನು ಮೀರಿಸುವ ಈರುಳ್ಳಿ ಇಲ್ಲ. ಏಕೆಂದರೆ ಸಾಮಾನ್ಯವಾಗಿ ಎಲ್ಲ ಈರುಳ್ಳಿ ಖಾರವಾಗಿರುತ್ತದೆ. ಹೆಚ್ಚುವಾಗ ಕಣ್ಣಲ್ಲಿ ನೀರು ಬರುತ್ತದೆ. ಆದರೆ ಈ ಈರುಳ್ಳಿಯ ವೈಶಿಷ್ಟ್ಯವೆಂದರೆ ಇದರ ರುಚಿ ಸಿಹಿಯಾಗಿರುವುದು.

ಇಂಥ ಅಪರೂಪದ ಈರುಳ್ಳಿಯ ತವರು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ವಾನಳ್ಳಿ. ಅದಕ್ಕೇ ಇದು `ವಾನಳ್ಳಿ ಈರುಳ್ಳಿ' ಎಂದೇ ಪ್ರಸಿದ್ಧಿ. ಇದರಲ್ಲಿ ಎರಡು ರೀತಿಯ ತಳಿಯಿವೆ. ಒಂದು ಸೇಬಿನ ಬಣ್ಣದ್ದು, ಇನ್ನೊಂದು ಬೆಳ್ಳಗಿನದ್ದು. ಸಾಮಾನ್ಯ ಈರುಳ್ಳಿಗಳಲ್ಲಿ ದಪ್ಪ ಪದರುಗಳಿದ್ದರೆ, ಇದರಲ್ಲಿ ಪದರುಗಳು ತೆಳುವಾಗಿರುತ್ತದೆ. ಈ ಈರುಳ್ಳಿ ಸಾಂಬಾರಿಗೆ, ಬೋಂಡಕ್ಕೆ, ಸಲಾಡ್, ಚಟ್ನಿಗೆ ಹಾಕಿದರೆ `ವಾವ್' ಎನ್ನುವಂಥ ರುಚಿ.

ಬೀಜೋತ್ಪಾದನೆ ಹೀಗೆ
ನಿವೃತ್ತ ಪೋಸ್ಟ್ ಮಾಸ್ಟರ್ ಜನರಲ್ ಗೋಳಿ ಅಣ್ಣಪ್ಪ ನಾಯ್ಕ ಅವರ ಪ್ರಕಾರ ಈ ಈರುಳ್ಳಿ ಬೆಳೆಯಲು ಗದ್ದೆ ಉಳುಮೆ ಮಾಡಬೇಕಾಗಿಲ್ಲ.

`4/4 ಅಡಿ ಅಗಲ ಹಾಗೂ 10 ಅಡಿ ಉದ್ದದ ದಿಬ್ಬ (ಸಾಲು) ಮಾಡಿ ಅದಕ್ಕೆ ಕೊಟ್ಟಿಗೆ ಗೊಬ್ಬರ ಹಾಕಿ, ತುದಿ ಕತ್ತರಿಸಿದ ಈರುಳ್ಳಿಯನ್ನು ನಾಲ್ಕು ಅಂಗುಲಕ್ಕೆ ಒಂದರಂತೆ ಹುಗಿಯಬೇಕು. ಒಂದು ವಾರದ ನಂತರ ನಾಲ್ಕು ಟಿಸಿಲು ಒಡೆದು ಚಿಗುರು ಬರುತ್ತದೆ. ಒಂದೂವರೆ ತಿಂಗಳ ನಂತರ ಪ್ರತಿ ಟಿಸಿಲಿನಲ್ಲಿಯೂ ಹೂವಿನ ಗೊಂಚಲು ಬರುತ್ತದೆ. ಅದು ಬಿಳಿ ಬಣ್ಣದ್ದಾಗಿರುತ್ತದೆ. 95 ದಿನಗಳ ನಂತರ ಹಳದಿ ಬಣ್ಣ ಬರುತ್ತದೆ. ಹಳದಿ ಬಣ್ಣ ಒಡೆದು ಕಪ್ಪು ಗೆರೆ ಕಾಣಿಸುತ್ತದೆ. ಅನಂತರ ತೆಗೆದು ಪ್ಲಾಸ್ಟಿಕ್ ಕೊಡದಲ್ಲಿ ಹಾಕಿ ಗಾಳಿಯಾಡದಂತೆ ಬಟ್ಟೆ ಕಟ್ಟಿ ಮುಚ್ಚಬೇಕು. ಎರಡು ದಿನದ ನಂತರ ತೆಗೆದು ಕಂಬಳಿ ಹಾಸಿ ಅದರ ಮೇಲೆ ಹರಡಬೇಕು. ಅನಂತರ ಅದನ್ನು ಕಟ್ಟಿ ಮೇಲಿಡಬೇಕು' ಎನ್ನುತ್ತಾರೆ ಅಣ್ಣಪ್ಪ.

ಏಪ್ರಿಲ್ ತಿಂಗಳಲ್ಲಿ ಕಟ್ಟಿಟ್ಟ ಬೀಜವನ್ನು ಡಿಸೆಂಬರ್ ತಿಂಗಳಲ್ಲಿ ಬೀಜ ಹಾಕಲು ತೆಗೆಯಬೇಕು. ಗದ್ದೆ ಹದ ಮಾಡುವುದು, ನಾಟಿಗೆ ಸಿದ್ಧ ಪಡಿಸುವುದು, ಗದ್ದೆಯನ್ನು ಹದಮಾಡಿ ಹೆಂಟೆಯನ್ನು ಪುಡಿ ಮಾಡಿ ಮತ್ತೊಮ್ಮೆ ದಿಣ್ಣೆ ಮಾಡಿ ತೆಗೆದಿಟ್ಟ ಬೀಜವನ್ನು ಹಾಕಬೇಕು. ಏಳು ದಿವಸಕ್ಕೆ ಮೊಳಕೆ ಬರುತ್ತದೆ. ಅದಕ್ಕೆ ತೆಂಗಿನ ಹೆಡೆ ಹಾಕಿ ಮುಚ್ಚುತ್ತಾರೆ. ಹೆಚ್ಚು ಬಿಸಿಲು ಬಿದ್ದರೆ ಬೀಜ ಒಡೆಯುತ್ತದೆ. ಅದರ ಮೇಲೆ ನೀರು ಸಿಂಪಡಿಸುತ್ತಾ ಇರಬೇಕು. 15 ರಿಂದ 20 ದಿವಸಕ್ಕೆ ನಾಟಿ ಮಾಡಲು ಸಿದ್ಧವಾಗಿರುತ್ತದೆ. 30 ದಿನದೊಳಗೆ ನಾಟಿ ಮಾಡಿ ಮುಗಿಸಬೇಕು.

ಮೂರು ಬಾರಿ ಉಳುಮೆ
ನಾಟಿ ಮಾಡುವ ಗದ್ದೆಯನ್ನು ಮೂರು ಬಾರಿ ಉಳಬೇಕು. ಅನಂತರ ಹಲಗೆಯನ್ನು ಎತ್ತುಗಳ ಮೂಲಕ ಎಳೆದು ಸಮತಟ್ಟು ಮಾಡಬೇಕು. ಅದರಲ್ಲಿ ಕಸ ಕಡ್ಡಿಗಳನ್ನು ಹೆಕ್ಕಿ ತೆಗೆಯಬೇಕು. ಒಂದೂವರೆ ಅಡಿಗೆ ಒಂದರಂತೆ ಸಾಲಾಗಿ ನಾಟಿ ಮಾಡಲಾಗುವುದು. 1 ಎಕರೆಗೆ 30 ಟನ್ ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ. ಅದು ಮರಳು ಮಿಶ್ರಿತ ಮಣ್ಣಾದ್ದರಿಂದ ಎರಡು ಮೂರು ಕಡೆ ಬಾವಿ ತೋಡಿರುತ್ತಾರೆ. ಆ ತೋಡಿದ ಬಾವಿಯಿಂದ ಪ್ಲಾಸ್ಟಿಕ್ ಕೊಡದಲ್ಲಿ ನೀರು ಸಿಂಪಡಿಸುತ್ತಾರೆ.

ಮುಂಜಾನೆ 2 ಗಂಟೆಯಿಂದ ಬೆಳಿಗ್ಗೆ 8 ಗಂಟೆಯೊಳಗೆ ನೀರು ಹಾಕುವುದನ್ನು ಪೂರೈಸುತ್ತಾರೆ. ಹೀಗೆ ಎರಡು ಅಥವಾ ನಾಲ್ಕು ದಿನಕ್ಕೊಮ್ಮೆ ನೀರು ಹಾಕುತ್ತಾರೆ. ನಾಲ್ಕು ತಿಂಗಳಿಗೆ ಫಸಲು ಬರುತ್ತದೆ. ಬೇರೆ ತಳಿಗಳಾದ ಪೂನ ರತ್ನಾಕರ, ಪೂನ ಕೆಂಪು, ಅಣಿರೇತನ, ಮುಂತಾದವುಗಳಿಂದ ಭಿನ್ನವಾದದ್ದು. ಈ ಈರುಳ್ಳಿ ಎಷ್ಟು ರುಚಿಕರವೋ ಅದೇ ರೀತಿಯಲ್ಲಿ ಹೃದಯದ ಕಾಯಿಲೆಗಳಿಗೆ ದಿವ್ಯ ಔಷಧ ಕೂಡ.

ಆದರೆ ಮಧ್ಯವರ್ತಿಗಳ ಕಾಟ ಇಲ್ಲಿಯೂ ರೈತರನ್ನು ಬಿಟ್ಟಿಲ್ಲ. ಮಾರುಕಟ್ಟೆ ಬೆಲೆ 22 ರೂಪಾಯಿಗಳು ಇದ್ದರೆ, ರೈತರು ಮಧ್ಯವರ್ತಿಗಳಿಗೆ ಕೇವಲ 13 ರೂಪಾಯಿಗೆ ಮಾರಬೇಕಾದ ಪರಿಸ್ಥಿತಿ. ಇದೇ ಕಾರಣಕ್ಕೆ ಎಕರೆ ಒಂದಕ್ಕೆ 120 ರಿಂದ 130 ಕ್ವಿಂಟಲ್ ಈರುಳ್ಳಿ ಬೆಳೆದರೂ ರೈತರ ಮಟ್ಟಿಗೆ ಲಾಭದಾಯಕ ಆಗಿಲ್ಲ. ಹಾಗಾಗಿ ಎಷ್ಟು ಬೆಳೆದರೂ ಸಣ್ಣ ರೈತನಿಗೆ ಖರ್ಚು ತೆಗೆದು ಎರಡು ಸಾವಿರ ರೂಪಾಯಿ ಮಾತ್ರ ಸಿಗುತ್ತಿದೆ. ಅವರು ಉಪ ಉದ್ಯೋಗ ಮಾಡುವುದು ಅನಿವಾರ್ಯ. ಗೋಳಿ ಅಣ್ಣಪ್ಪ ನಾಯ್ಕರು ಈರುಳ್ಳಿ ಸಂಘದೊಂದಿಗೆ ಸೇರಿಕೊಂಡು ಸೌದಿ ಅರೇಬಿಯಾಕ್ಕೆ ರಫ್ತು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಆ ಮಾರುಕಟ್ಟೆ ನಿರ್ಮಾಣವಾದರೆ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಇಲ್ಲ ಎಂಬ ಕೊರಗು ನೀಗಬಹುದಲ್ಲವೇ? ಬೆಳೆಗಾರರ ಜೀವನ ಹಸನಾಗಬಹುದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT