ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಶೂಲಕ್ಕೆ ಪರಿಹಾರ ತಂದ ಬಾಳೆ

Last Updated 10 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಇವರ ಹೆಸರು ಕೃಷ್ಣರಾವ್ ದೇಶಪಾಂಡೆ. ಯಲಬುರ್ಗಾ ತಾಲ್ಲೂಕಿನ ಮರಡಿ ಗ್ರಾಮದ ಇವರು ಕೆಲ ವರ್ಷಗಳ ಹಿಂದೆ ದಾಳಿಂಬೆ ಕೃಷಿಕರು. ದಾಳಿಂಬೆ ಬೆಳೆ ಬೆಳೆದು, ವಿದೇಶಗಳಿಗೂ ರಫ್ತು ಮಾಡಿ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದವರು ಕೃಷ್ಣರಾವ್. ಅದಾವ ಕೆಟ್ಟ ಗಳಿಗೆಯೋ ಗೊತ್ತಿಲ್ಲ, ದಾಳಿಂಬೆ ಬೆಳೆಗೆ ದಿಢೀರನೆ ಅಂಗಮಾರಿ ರೋಗ ಬಂದೆರಗಿತು. ದಾಳಿಂಬೆ ತೋಟವೆಲ್ಲಾ ಹಾಳಾಗಿ, 16 ಲಕ್ಷ ರೂಪಾಯಿಗೂ ಹೆಚ್ಚಿನ ನಷ್ಟ ಅನುಭವಿಸಿದರು. ಈ ಕೃಷಿ ಕೈಗೊಳ್ಳಲು ಅವರು ವಿವಿಧೆಡೆಗಳಿಂದ 10ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು.

ಒಂದೆಡೆ ಬೆಳೆ ನಾಶ, ಇನ್ನೊಂದೆಡೆ ಸಾಲದ ಶೂಲ. ಆದರೆ ಕೃಷ್ಣರಾವ್‌ ಧೃತಿಗೆಡಲಿಲ್ಲ. ಸಾಲದ ತೂಗುಕತ್ತಿಯಿಂದ ಹೊರಬರಲು ಪರ್ಯಾಯ ಬೆಳೆ ಬೆಳೆಯುವ ಆಲೋಚನೆ ಮಾಡಿದರು. ಇದಕ್ಕಾಗಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿದರು.

ತಮ್ಮಲ್ಲಿರುವ ನಾಲ್ಕು ಎಕರೆ ಜಮೀನಿನಲ್ಲಿ ಇಲಾಖೆಯ ನೆರವಿನೊಂದಿಗೆ ವಿಶಿಷ್ಟ ತಂತ್ರಜ್ಞಾನ ಅಳವಡಿಸಿಕೊಂಡು, ಬಾಳೆ ಕೃಷಿಗೆ ಮುಂದಾದರು. ಇದರಿಂದಾಗಿ ಇವರ ತೋಟದಲ್ಲೀಗ ಕದಳೀವನ ತಳಿಯ ಬಾಳೆಗಿಡ ಗೊನೆಗಳಿಂದ ತುಂಬಿಹೋಗಿವೆ.  ಕೆಲವೇ ದಿನಗಳಲ್ಲಿ ಇದನ್ನು ಮಾರಿ ಪ್ರತಿ ಎಕರೆಗೆ 5 ರಿಂದ 6 ಲಕ್ಷ ರೂಪಾಯಿ ಆದಾಯ ಪಡೆಯುವ ಖುಷಿಯಲ್ಲಿದ್ದಾರೆ. 

ಏನಿದು ವಿಶೇಷ ತಾಂತ್ರಿಕತೆ
ಸಾಂಪ್ರದಾಯಿಕವಾಗಿ ಬಾಳೆ ಬೆಳೆಯುವವರು, ಒಂದು ಗುಂಡಿಗೆ ಒಂದು ಬಾಳೆ ಗಿಡವನ್ನು ನೆಟ್ಟು, ಒಂದು ಗಿಡದಿಂದ ಒಂದು ಗಿಡಕ್ಕೆ 6 ಅಡಿಗಳ ಅಂತರ ಬಿಡುತ್ತಾರೆ. ಇದರಿಂದಾಗಿ ಒಂದು ಎಕರೆಗೆ ಗರಿಷ್ಠ 1,210 ಗಿಡಗಳನ್ನು ನೆಡಲು ಸಾಧ್ಯವಿದೆ. ಆದರೆ ಕೃಷ್ಣರಾವ್‌ ಅವರು ಪ್ರತಿ ಒಂದು ಗುಂಡಿಗೆ ಮೂರು ಬಾಳೆ ಗಿಡವನ್ನು ನೆಟ್ಟು, ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ 6 ಅಡಿ ಅಂತರ ಬಿಟ್ಟು, ಒಂದು ಸಾಲಿನಿಂದ ಇನ್ನೊಂದು ಸಾಲಿಗೆ 10 ಅಡಿಗಳ ಅಂತರ ಕಾಯ್ದುಕೊಂಡಿದ್ದಾರೆ.  ಇದರಿಂದಾಗಿ ಕಳೆ ತೆಗೆಯಲು ಟ್ರ್ಯಾಕ್ಟರ್ ಬಳಸಿಕೊಳ್ಳಲು ಸಾಧ್ಯವಾಗಿದೆ.  ಗಿಡಗಳು ಎತ್ತರಕ್ಕೆ ಬೆಳೆದಂತೆ, ಕೆಳಗಡೆ ನೆರಳಾಗುವುದರಿಂದ, ಕಳೆ ಬೆಳೆಯುವುದು ಕೂಡ ಕಡಿಮೆಯಾಗಿದೆ. ಇದರಿಂದ ಕೂಲಿಕಾರರ ಕೊರತೆಯನ್ನೂ ನಿವಾರಿಸಿದಂತಾಗಿದೆ.

ಈ ಹೊಸ ವಿಧಾನವು ಬಾಳೆ ಗಿಡಗಳು ಗಾಳಿಯ ರಭಸಕ್ಕೆ ಬೀಳದಂತೆ, ಒಂದಕ್ಕೊಂದು ಗಿಡಗಳು ಆಧಾರವಾಗಲಿದ್ದು, ಇದರ ಬೇರುಗಳು ಸಹ ಒಂದಕ್ಕೊಂದು ಬೆಸೆದುಕೊಂಡು, ಗಾಳಿಯ ರಭಸವನ್ನು ತಡೆದುಕೊಳ್ಳುವ ಶಕ್ತಿ ನೀಡಲಿದೆ.   ಇದನ್ನು ಕಂಡುಹಿಡಿದವರು ಕೃಷ್ಣರಾವ್‌ ಅವರ ಮಗ ಹರ್ಷವರ್ಧನ. ಎಂಜಿನಿಯರಿಂಗ್‌ ಪದವಿ ಪಡೆದು, ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ನೌಕರಿಯಲ್ಲಿದ್ದರೂ ಕೃಷಿಯತ್ತ ಇವರ ಆಕರ್ಷಣೆ ಹಾಗೂ ಅವರ ವಹಿಸಿದ ಶ್ರಮದಿಂದ ಹೊಸ ತಂತ್ರಜ್ಞಾನದ ಅಳವಡಿಕೆ ಸಾಧ್ಯವಾಗಿದೆ ಎನ್ನುತ್ತಾರೆ ಕೃಷ್ಣರಾವ್‌.  ಹರ್ಷವರ್ಧನ ಅವರು  ಅಂತರ್ಜಾಲದಲ್ಲಿ ಕೇರಳದ ತೋಟಗಾರಿಕೆ ವಿಶ್ವವಿದ್ಯಾನಿಲಯದ ಸಂಶೋಧನೆಯ ಬಗೆಗಿನ ಮಾಹಿತಿ ಪಡೆದುಕೊಂಡು, ಹೊಸ ತಾಂತ್ರಿಕತೆ ಅಳವಡಿಸಿಕೊಂಡಿದ್ದಾರೆ.

ಈ ಹೊಸ ತಾಂತ್ರಿಕತೆಯಲ್ಲಿ ಬಾಳೆ ತೋಟದ ಸುತ್ತ, ಬದುವಿನ ಮೇಲೆ ಔಡಲ ಬೀಜದ ಗಿಡಗಳನ್ನು ಬೆಳೆದಿದ್ದು, ರಭಸವಾಗಿ ಬೀಸುವ ಗಾಳಿಯನ್ನು ಇದು ತಡೆಗಟ್ಟಲು ಸಹಕಾರಿಯಾಗಿದೆ. ಅಲ್ಲದೆ ಗೊಬ್ಬರ ಅಂಶ ಮತ್ತು ನೀರಿನ ಅಂಶ ಹೀರಿಕೊಳ್ಳುವಿಕೆಗೆ ಇದು ಸಹಕಾರಿಯಾಗಿದೆ. ಈ ವಿಧಾನದಲ್ಲಿ ಇವರು ಪ್ರತಿ ಎಕರೆಗೆ 2,178 ಗಿಡಗಳನ್ನು ಹಾಕಿದ್ದಾರೆ.  ಈ ರೀತಿಯ ವಿಧಾನವನ್ನು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಇವರೇ ಮೊದಲಿಗೆ ಅಳವಡಿಸಿದ್ದು.

ಯಶಸ್ಸಿನ ಹಾದಿ
ಅಂಗಾಂಶ ಕೃಷಿ ಬಾಳೆ ಜಿ-9 ತಳಿಯನ್ನು ಇವರು ಬೆಳೆಸುತ್ತಿದ್ದಾರೆ. ಕಾಲಕಾಲಕ್ಕೆ ಕೊಟ್ಟಿಗೆ ಗೊಬ್ಬರ ಸೇರಿದಂತೆ ಅಗತ್ಯ ಇರುವ ಎಲ್ಲಾ ಗೊಬ್ಬರಗಳನ್ನೂ ಹಾಕುತ್ತಿದ್ದಾರೆ, ಹನಿ-ನೀರಾವರಿ ಅಳವಡಿಸಿಕೊಂಡಿದ್ದಾರೆ.  ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಬನಾನಾ ಸ್ಪೆಷಲ್’ ಪೋಷಕಾಂಶಗಳ ಪುಡಿಯನ್ನು ಕಾಂಡ ಮತ್ತು ಗೊನೆಗೆ ಸಿಂಪಡಿಸುತ್ತಿದ್ದು, ಉತ್ತಮ ಇಳುವರಿಗೆ ಸಹಕಾರಿಯಾಗಿದೆ.

‘ಸಾಂಪ್ರದಾಯಿಕ ಪದ್ಧತಿಯಲ್ಲಿ ಪ್ರತಿ ಎಕರೆಗೆ ಸುಮಾರು 90 ಸಾವಿರದಷ್ಟು ಖರ್ಚು ಬರುತ್ತದೆ, ಅಲ್ಲದೆ ಎಕರೆಗೆ ಗರಿಷ್ಠ 2 ರಿಂದ 3 ಲಕ್ಷ ಆದಾಯ ಪಡೆಯಲು ಸಾಧ್ಯವಿದೆ.  ಆದರೆ ಈ ಹೊಸ ತಾಂತ್ರಿಕತೆಯಲ್ಲಿ ಪ್ರತಿ ಎಕರೆಗೆ 1.20 ಲಕ್ಷ ರೂಪಾಯಿ ಖರ್ಚು ಬರಲಿದ್ದು, ಪ್ರತಿ ಎಕರೆಗೆ 5 ರಿಂದ 6 ಲಕ್ಷ ರೂಪಾಯಿ ಆದಾಯ ಗಳಿಸಲು ಸಾಧ್ಯವಿದೆ. 

ಸಾಂಪ್ರದಾಯಕ ಪದ್ಧತಿಯಲ್ಲಿ ಎಕರೆಗೆ 25 ರಿಂದ 30 ಟನ್ ಬಾಳೆ ಬೆಳೆಯಲು ಸಾಧ್ಯವಾದರೆ, ಹೊಸ ತಾಂತ್ರಿಕತೆಯ ವಿಧಾನದಲ್ಲಿ ಎಕರೆಗೆ 50 ಟನ್ ಬಾಳೆ ಇಳುವರಿ ಪಡೆಯಬಹುದಾಗಿದೆ. ನಮ್ಮ ತೋಟದಲ್ಲಿ  ಬಾಳೆ ತೋಟದಲ್ಲಿ ಪ್ರತಿಯೊಂದು ಗೊನೆ 25 ರಿಂದ 35 ಕೆ.ಜಿ. ತೂಗುತ್ತಿದೆ. ಪ್ರತಿ ಕೆ.ಜಿಗೆ ಕನಿಷ್ಠ 10ರಿಂದ 12 ರೂಪಾಯಿ ಬೆಲೆ ದೊರೆತರೂ ಎಕರೆಗೆ ಕನಿಷ್ಠ 5 ಲಕ್ಷ ರೂಪಾಯಿ ಆದಾಯ ಬರಲಿದೆ’ ಎನ್ನುತ್ತಾರೆ ಕೃಷ್ಣರಾವ್‌. 

‘ಸಾಂಪ್ರದಾಯಕ ಬೆಳೆ ಬೆಳೆಯುವುದರ ಜೊತೆಗೆ ಆಧುನಿಕ ಹಾಗೂ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡಲ್ಲಿ, ತೋಟಗಾರಿಕೆ ಲಾಭದಾಯಕವಾಗಲಿದೆ.  ಭೂಮಿ ತಾಯಿಯನ್ನು ಪ್ರೀತಿಸುವುದರ ಜೊತೆಗೆ ಶ್ರಮವನ್ನೂ ಹಾಕಿದರೆ, ಆಕೆ ಎಂದಿಗೂ ರೈತನ ಕೈ ಬಿಡುವುದಿಲ್ಲ’ ಎನ್ನುವುದು ಅವರ ಮಾತು. ಮಾಹಿತಿಗೆ ಕೃಷ್ಣರಾವ್- 9036613409 ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಕೊಪ್ಪಳ- 08539–230170.

ಹಣಕಾಸು ನೆರವು
‘ತೋಟಗಾರಿಕೆ ಇಲಾಖೆಯಿಂದ ‘ರಾಷ್ಟ್ರೀಯ ತೋಟಗಾರಿಕೆ ಮಿಷನ್‌’ ಯೋಜನೆ ಅಡಿ ಪ್ರತಿ ಹೆಕ್ಟೇರ್‌ಗೆ 30 ಸಾವಿರ ರೂಪಾಯಿ ಸಹಾಯಧನ, ಹನಿ ನೀರಾವರಿಗೆ ಶೇ 90ರಷ್ಟು ಸಹಾಯಧನದ ಜೊತೆಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆ ಹಾಗೂ ಸಮಗ್ರ ಪೀಡೆ ನಿರ್ವಹಣೆಗೆ ಪ್ರತಿ ಹೆಕ್ಟೇರ್‌ಗೆ ತಲಾ ಒಂದು ಸಾವಿರ ರೂಪಾಯಿ, ಯಾಂತ್ರೀಕರಣ ಯೋಜನೆಯಡಿ ಸ್ಪ್ರೇಯರ್ ಮತ್ತು ಇನ್ನಿತರೆ ಉಪಕರಣಗಳ ಖರೀದಿಗೆ 30 ಸಾವಿರ ರೂಪಾಯಿ ಸಹಾಯಧನ ಕೊಡಲಾಗುವುದು. ಅಲ್ಲದೆ ಗಿಡಗಳ ನಾಟಿಗೆ ಪ್ರತಿ ಎಕರೆಗೆ 16,700 ರೂಪಾಯಿ ಸಹಾಯಧನ ಕೊಡಲಾಗುತ್ತಿದೆ’ ಎನ್ನುತ್ತಾರೆ ಕೊಪ್ಪಳ ತೋಟಗಾರಿಕೆ ಉಪನಿರ್ದೇಶಕ ಶಶಿಕಾಂತ್ ಕೋಟಿಮನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT