ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ಆಧಾರಿತ ಸಲಹೆ

ದ್ರಾಕ್ಷಿ ಕೃಷಿ
Last Updated 22 ಫೆಬ್ರುವರಿ 2016, 19:58 IST
ಅಕ್ಷರ ಗಾತ್ರ

ಹೈನುಗಾರಿಕೆ ಮತ್ತು ರೇಷ್ಮೆ ಕೃಷಿಗೆ ಹೆಸರುವಾಸಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆ, ದ್ರಾಕ್ಷಿ ಬೆಳೆಯುವುದರಲ್ಲೂ ಮುಂಚೂಣಿಯಲ್ಲಿದೆ. ಪ್ರಮುಖವಾಗಿ ದಿಲ್‌ಖುಷ್, ಕೃಷ್ಣ, ಶರದ್, ಬೆಂಗಳೂರು ಬ್ಲೂ ಇತ್ಯಾದಿ ತಳಿಗಳನ್ನು ಇಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇದಲ್ಲದೆ ತರಕಾರಿ ಬೆಳೆಗಳಾದ ಕ್ಯಾಪ್ಸಿಕಂ, ಎಲೆಕೋಸು, ಹೂಕೋಸು, ಟೊಮೊಟೊ, ಆಲೂಗಡ್ಡೆ ಇತ್ಯಾದಿ ಮತ್ತು ಹೂವಿನ ಬೆಳೆಗಳಾದ ಗುಲಾಬಿ, ಚೆಂಡು, ಸೇವಂತಿಗೆ ಇತ್ಯಾದಿ ಬೆಳೆಗಳನ್ನು ಇಲ್ಲಿ ಸಾಮಾನ್ಯವಾಗಿ ಬೆಳೆಯಲಾಗುತ್ತಿದೆ.

ಇವೆಲ್ಲಾ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಸಲುವಾಗಿ ಇಲ್ಲಿ ಅಂತರ್ಜಲವನ್ನು ಮಿತಿಮೀರಿ ಬಳಸಲಾಗುತ್ತಿದೆ. ಹಲವು ಕಡೆಗಳಲ್ಲಿ ಅಂತರ್ಜಲದ ಮಟ್ಟವು ಒಂದು ಸಾವಿರ ಅಡಿಗಳಿಗಿಂತ ಹೆಚ್ಚು ಆಳಕ್ಕೆ ಕುಸಿದಿದೆ. ರಾಸಾಯನಿಕ ಗೊಬ್ಬರಗಳು, ಕಳೆನಾಶಕಗಳು ಹಾಗೂ ಇತರೆ ರಾಸಾಯನಿಕಗಳ ಅತಿಯಾದ ಬಳಕೆಯಿಂದ ಈ ಜಿಲ್ಲೆಯಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ.

ಮೇಲೆ ತಿಳಿಸಿದ ಎಲ್ಲಾ ಸಮಸ್ಯೆಗಳನ್ನು ನಿಖರವಾಗಿ ಗುರುತಿಸಲು ಹಾಗೂ ಬಗೆಹರಿಸಲು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಕೃಷಿ ಹವಾಮಾನ ವಿಭಾಗವು ಹವಾಮಾನ  ಬದಲಾವಣೆಗೆ ಹೊಂದಿಕೊಳ್ಳುವ ‘ಕೃಷಿ ರಾಷ್ಟ್ರೀಯ ಯೋಜನೆ’ ಅಡಿ ರೈತರಿಗೆ ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ವಾರಕ್ಕೆ ಎರಡು ಬಾರಿ ತಲುಪಿಸುತ್ತಿದೆ.

ಸದ್ಯ ಇದು ಪಟ್ರೇನಹಳ್ಳಿ ಹಾಗೂ ನಾಯನಹಳ್ಳಿ ಗ್ರಾಮಗಳ ರೈತರಿಗೆ ಮೀಸಲಿದೆ. ಈ ಯೋಜನೆಯಡಿ ಮುಂದಿನ ಐದು ದಿನಗಳಲ್ಲಿ ಇರಬಹುದಾದಂತಹ ವಾತಾವರಣದ ಬಗ್ಗೆ ಮಾಹಿತಿ ನೀಡುವುದು ಪ್ರಮುಖ ಉದ್ದೇಶ. ಇದಲ್ಲದೆ ಕಾಲಕಾಲಕ್ಕೆ ಉಂಟಾಗುವ ಹವಾಮಾನ ವೈಪರೀತ್ಯದ (ಸಿಡಿಲು, ಆಲಿಕಲ್ಲು, ಚಂಡಮಾರುತ) ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಸುಮಾರು 100 ರೈತರಿದ್ದಾರೆ. ಅವರಲ್ಲಿ ಸುಮಾರು 40–60 ಎಕರೆಗಳಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದಾರೆ.

ನೀರಿನ ಸದ್ಬಳಕೆ (ಕಡಿಮೆ ನೀರು ಹೆಚ್ಚು ಇಳುವರಿ): ಈ ಯೋಜನೆ ಮೂಲಕ ರೈತರಿಗೆ ಹನಿ ನೀರಾವರಿ, ತುಂತುರು ನೀರಾವರಿ, ಮಣ್ಣಿನ ಹೊದಿಕೆ ಇತ್ಯಾದಿ ತಂತ್ರಜ್ಞಾನವನ್ನು ಕಡ್ಡಾಯವಾಗಿ ಬಳಸಲು ಸಲಹೆ ನೀಡಲಾಗುತ್ತಿದೆ. ಈ ವಿಧಾನಗಳಿಂದ ಈ ಪ್ರದೇಶಗಳಲ್ಲಿ ನೀರನ್ನು ಪರಿಣಾಮಕಾರಿಯಾಗಿ ಬೆಳೆಗಳಿಗೆ ಬಳಸಲು ಸಹಾಯವಾಗುತ್ತಿದೆ. ಈ ವಿಧಾನಗಳಿಂದ ನೀರು ಅನವಶ್ಯಕವಾಗಿ ಆವಿಯಾಗುವುದನ್ನು ತಪ್ಪಿಸಬಹುದು ಹಾಗೂ ಗಿಡಗಳಿಗೆ ಅಗತ್ಯವಾಗಿರುವ ನೀರು ಪರಿಣಾಮಕಾರಿಯಾಗಿ ಸಿಗುವುದು. ಈ ವಿಧಾನಗಳ ಬಳಕೆಯಿಂದ ಸುಮಾರು ಪ್ರತಿಶತ 40ರಷ್ಟು ಉಳಿತಾಯವಾಗುತ್ತಿದೆ.

ಕೀಟಗಳು, ರೋಗಗಳು ಹಾಗೂ ಪಕ್ಷಿಗಳ ಪರಿಣಾಮಕಾರಿ ನಿರ್ವಹಣೆ
ಹವಾಮಾನ ಮುನ್ಸೂಚನೆಯು ಕೀಟಗಳ ಹಾಗೂ ರೋಗಗಳ ಮುನ್ಸೂಚನೆ ನೀಡಲು ಬಹು ಉಪಯುಕ್ತವಾಗಿದೆ. ಶೇ 80ಕ್ಕಿಂತ ಕಡಿಮೆ ಆರ್ದ್ರತೆ (ಗಾಳಿಯ ತೇವಾಂಶ) ಇದ್ದರೆ ಬೂದಿರೋಗ ಹರಡುತ್ತದೆ. ಹೆಚ್ಚಿನ ಆರ್ದ್ರತೆ, ತುಂತುರು ಮಳೆ ಮತ್ತು ಕಡಿಮೆ ಉಷ್ಣಾಂಶ ಕೂಡ ಬೂಜುರೋಗ ಹರಡುವ ಸಾಧ್ಯತೆ ಹೆಚ್ಚು.

ಈ ರೋಗಗಳು ದ್ರಾಕ್ಷಿ ಬೆಳೆಯಲ್ಲಿ ಹೆಚ್ಚು ನಷ್ಟವನ್ನುಂಟು ಮಾಡುತ್ತವೆ. ನಮ್ಮ ಕೃಷಿ ಹವಾಮಾನ ಆಧಾರಿತ ಸಲಹೆಗಳ ಮೂಲಕ ಈ ರೋಗಗಳನ್ನೂ ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ.

ಈಗ ನಡೆದಿರುವ ಯೋಜನೆ ಅಡಿ ಪಕ್ಷಿಗಳನ್ನು ನಿಯಂತ್ರಿಸಲು ದ್ರಾಕ್ಷಿ ತೋಟದ ಸುತ್ತಲೂ ನೈಲಾನ್ ಪರದೆಯನ್ನು ಹಾಕಿಸಲು ರೈತರಿಗೆ ಸಲಹೆ ನೀಡಲಾಗಿದೆ. ಇದರಿಂದಾಗಿ ಪಕ್ಷಿಗಳಿಂದ ಆಗಬಹುದಾಗಿದ್ದ ಇಳುವರಿ ನಷ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಣವಾಗಿವೆ.

ಅಷ್ಟೇ ಅಲ್ಲದೇ, ಸರಿಯಾದ ಸಮಯಕ್ಕೆ ರೈತರಿಗೆ ಕೃಷಿ ಹವಾಮಾನ ಆಧಾರಿತ ಸಲಹೆಗಳನ್ನು ನೀಡಿದ್ದರಿಂದ ರೈತರಿಗೆ ಉಳುಮೆ, ನೀರಾವರಿ, ಕಳೆ ನಿರ್ವಹಣೆ, ರಾಸಾಯನಿಕಗಳ ಸಿಂಪಡಣೆ, ಕಟಾವು ಇತ್ಯಾದಿ ಕೃಷಿ ಚಟುವಟಿಕೆಗಳನ್ನು ತೀರ್ಮಾನಿಸಲು ಸಹಾಯವಾಗಿದೆ. ಈ ಯೋಜನೆಯಿಂದ ಸರಿಯಾದ ಮತ್ತು ಪರಿಣಾಮಕಾರಿಯಾದ ಕೃಷಿ ಸಾಧ್ಯ.

ಕೀಟನಾಶಕಗಳ ವೆಚ್ಚ, ಕೂಲಿಯ ವೆಚ್ಚ, ರಾಸಾಯನಿಕ ಗೊಬ್ಬರಗಳ ವೆಚ್ಚಗಳನ್ನು ಕಡಿಮೆಗೊಳಿಸಬಹುದಾಗಿದೆ. ಹೀಗಾಗಿ ದ್ರಾಕ್ಷಿ ಇಳುವರಿ ಶೇ 15ರಿಂದ 20ರಷ್ಟು ಹೆಚ್ಚು ಪಡೆಯಬಹುದಾಗಿದೆ. ಕೃಷಿ ಮತ್ತು ಹವಾಮಾನ ಬದಲಾವಣೆ ಜಾಗೃತಿ ಕಾರ್ಯಕ್ರಮಗಳ ಅಡಿಯಲ್ಲಿ ಕಳೆದ ವರ್ಷ ಸುಮಾರು 200 ರೈತರು ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ಸ್ವೀಕರಿಸಲು ಅಂತರ್ಜಾಲ ಪೋರ್ಟಲ್‌ನಲ್ಲಿ (farmers web portal) ನೋಂದಾಯಿಸಿಕೊಂಡಿದ್ದಾರೆ.

(ಲೇಖಕರು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಹವಾಮಾನ ವಿಭಾಗದ ಮುಖ್ಯಸ್ಥರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT