ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನದ ಜೈವಿಕ ಜೀವನ

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

ರಾಸಾಯನಿಕ ಗೊಬ್ಬರ, ವಿಷಯುಕ್ತ ಕೀಟನಾಶಕಗಳ ಬಳಕೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತದೆ. ಎಷ್ಟೋ ರೈತರು ಯಾವ ನಿರ್ಬಂಧವೂ ಇಲ್ಲದೇ ಸೊಪ್ಪು, ತರಕಾರಿ, ಹಣ್ಣು, ದವಸ ಧಾನ್ಯಗಳನ್ನು ರಾಸಾಯನಿಕಗಳಿಂದ, ವಿಷಗಳಿಂದ ಮಾಲಿನ್ಯ ಮಾಡಿ ಬೆಳೆಯುತ್ತಿದ್ದಾರೆ.

ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ರಾಜ್ಯದ ವಿವಿಧ ಕಡೆ ವ್ಯಕ್ತಿಗಳು, ಸಂಘ ಸಂಸ್ಥೆಗಳಿಂದ ನಡೆಯುತ್ತಿವೆ. ಬೆಂಗಳೂರು, ಮೈಸೂರು ಮತ್ತಿತರ ನಗರಗಳಲ್ಲಿ ಜೈವಿಕ ಉತ್ಪನ್ನಗಳ ಮಾರಾಟ ಮಳಿಗೆಗಳು ಸ್ಥಾಪನೆಯಾಗಿವೆ. ಇತರೇ ನಗರ - ಪಟ್ಟಣಗಳಲ್ಲಿ ಇಂತಹ ಪ್ರಯತ್ನಗಳು ಸಾಗಿವೆ.

ಹಾಸನ ನಗರದ ದಾಸರಕೊಪ್ಪಲಿನ ಕೃಷಿ ನಗರದಲ್ಲಿ ಪುಣ್ಯ ಭೂಮಿ ಸಂಸ್ಥೆಯ ಪರಿಸರಪ್ರಿಯ ಕೃಷಿಕರು `ಜೈವಿಕ ಜೀವನ~ ಎಂಬ ವಿನೂತನ ಕಾರ್ಯಕ್ರಮ ಶುರು ಮಾಡಿದ್ದಾರೆ. ಇದಕ್ಕೆ ಚಾಲನೆ ಸಿಕ್ಕಿದ್ದು ವಿಶ್ವ ಭೂಮಿ ದಿನಾಚರಣೆಯ ಸಂದರ್ಭದಲ್ಲಿ.
ಈ ಕಾರ್ಯಕ್ರಮದಲ್ಲಿ ಜೈವಿಕ ಕೃಷಿಯ ಅರಿವು ಹಾಗೂ ಜೈವಿಕ ಕೃಷಿ ಉತ್ಪನ್ನಗಳ ಮಾರಾಟ ನಡೆಯುತ್ತದೆ.

ಸ್ವತಃ ರೈತರೇ ಮಾರಾಟಗಾರರಾಗುತ್ತಾರೆ. ತರಕಾರಿ, ಸೊಪ್ಪು, ಅಕ್ಕಿ, ರಾಗಿ, ಬೆಲ್ಲ, ಅರಿಶಿಣ, ಕಾಫಿ ಪುಡಿ, ಬಾಳೆ ಹಣ್ಣು, ಮಾವು, ಸಪೋಟ, ದವಸ ಧಾನ್ಯಗಳು, ನಾಟಿ ಹಸುವಿನ ಹಾಲು... ಹೀಗೆ ಹತ್ತಿಪ್ಪತ್ತು ಪದಾರ್ಥಗಳು ಗ್ರಾಹಕರಿಗೆ ಸಿಗುತ್ತವೆ.

ಪ್ರತೀ ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯ ತನಕ `ಜೈವಿಕ ಜೀವನ~ ಕಾರ್ಯಕ್ರಮ ಜರುಗುತ್ತದೆ. ಬಳಸುತ್ತಿರುವ ರಾಸಾಯನಿಕಗಳು ಹಾಗೂ ಅವುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿವರಗಳನ್ನು ನೀಡುತ್ತಾ ಜೈವಿಕ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. `ಗ್ರಾಹಕರು ಸ್ಪಂದಿಸಿ ಆಸಕ್ತಿಯಿಂದ ಪದಾರ್ಥಗಳನ್ನು ಖರೀದಿಸುತ್ತಾರೆ~ ಎಂದು ರೈತರೊಬ್ಬರು ಹೇಳುತ್ತಾರೆ.

ಕೃಷಿ ಇಲಾಖೆಯು ಸಾವಯವ ಗ್ರಾಮ ಯೋಜನೆಯಡಿ ಮಾರುಕಟ್ಟೆ ಕಲ್ಪಿಸಲು ತುಸು ಸಹಾಯ ಮಾಡುತ್ತಿದೆ. ಆದರೆ ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು ತೊಡಗಿಸಿಕೊಂಡರೆ ಬೆಳೆಗಾರರಿಗೂ, ಬಳಕೆದಾರರಿಗೂ ಅನುಕೂಲಗಳಿವೆ.

ಜೈವಿಕ ಉತ್ಪನ್ನಗಳನ್ನು ತಂದ ರೈತರು ತಾವೇ ನಿಂತು ಮಾರಾಟ ಮಾಡಿ ಒಳ್ಳೆಯ ಬೆಲೆಯನ್ನು ಗಿಟ್ಟಿಸಿಕೊಳ್ಳುತ್ತಾರೆ. ಹಾಗೆಯೇ ಗ್ರಾಹಕರಿಗೂ ಸೂಕ್ತ ಬೆಲೆಯಲ್ಲಿ ಜೈವಿಕ ಉತ್ಪನ್ನಗಳು ಸಿಗುತ್ತಿವೆ. `ರುಚಿಕರವಾದ, ಬೇಗ ಹಾಳಾಗದ, ಜೈವಿಕ ಉತ್ಪನ್ನಗಳು ಸಿಗುವುದರಿಂದ ಸಹಜವಾಗಿಯೇ ಖುಷಿಯಾಗುತ್ತದೆ~ ಎನ್ನುವುದು ಜೈವಿಕ ಸಂತೆಯ ಖಾಯಂ ಗ್ರಾಹಕ ಶಿವರಾಜ್ ಪ್ರತಿಕ್ರಿಯೆ.

ಪ್ರತೀ ವಾರವೂ ನಾಟಿ ಹಸುವಿನ ಹಾಲು ಬೇಕೇ ಬೇಕು ಎಂದು ಮುಂಗಡವಾಗಿಯೇ ಹಣ ಕೊಡುವ ಗ್ರಾಹಕರಿದ್ದಾರೆ. ತುಸು ತಡವಾಗಿ ಬಂದರೆ ಎಲ್ಲಿ ನಮಗೆ ತರಕಾರಿಗಳು, ಸೊಪ್ಪುಗಳು ಸಿಗುವುದಿಲ್ಲವೋ ಎಂದು ಬೆಳಿಗ್ಗೆ 9.30ಕ್ಕೇ ಬಂದು ನಿಲ್ಲುವ ಗ್ರಾಹಕರೂ ಇದ್ದಾರೆ. ಇದೆಲ್ಲ ಸಂಘಟಕರಲ್ಲಿ ಉತ್ಸಾಹ, ಹುರುಪು ಹೆಚ್ಚಿಸಿದೆ.
ವಿವರಗಳಿಗೆ  96326 17530, 94489 96495.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT