ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಚೀಟಿಗಳಲ್ಲಿ ಸಂಗೀತ ದಿಗ್ಗಜರು

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಅಂಚೆ ಚೀಟಿ ಕೇವಲ ಸಂದೇಶ ಸಾಗಿಸುವ ಸಣ್ಣ ಬಣ್ಣದ ಕಾಗದದ ತುಂಡು ಮಾತ್ರವಲ್ಲ. ಆಯಾ ದೇಶದ ನೈಜ ಆಶೋತ್ತರಗಳ ಪ್ರತಿಬಿಂಬ. ಅಂಚೆ ಚೀಟಿ ನಿರ್ದಿಷ್ಟ ದೇಶದ ಅಧ್ಯಯನಕ್ಕೊಂದು ಬೆಳಕಿಂಡಿ.

ಸಂಗೀತವೆಂದರೆ ಯಾರ ಕಿವಿಯಾಗಲಿ ಅರಳುವುದು ಸಹಜ. ಎಂಥವರ ಹೃದಯವನ್ನಾದರೂ ಮೀಟಬಲ್ಲಂತಹ ಚುಂಬಕ ಶಕ್ತಿ ಸಂಗೀತಕ್ಕಿದೆ. ಸಂಗೀತಕ್ಕಾಗಲಿ, ಸಂಗೀತಗಾರರಿಗಾಗಲೀ ದೇಶ-ಭಾಷೆಗಳ ಅಡ್ಡಗೋಡೆಗಳಿಲ್ಲ. ನಾದ ಎಂತಹವರನ್ನೂ ಮೋಹಗೊಳಿಸಬಲ್ಲದು. ಹಕ್ಕಿಗಳ ಕಲರವದಲ್ಲಿ, ಬೀಸುವ ಗಾಳಿಯಲ್ಲಿ ಹರಿಯುವ ನದಿಯಲ್ಲಿ ಹೀಗೆ ಸಂಗೀತ ಇಲ್ಲದ ಸ್ಥಳ ಅಪರೂಪ. ಸಂಗೀತದಂತೆ ಜಗತ್ತನ್ನೇ ಬೆಸೆಯುವ ಇನ್ನೊಂದು ಸಾಧನ ಅಂಚೆ. ಸಂಗೀತ ಪ್ರೇಮಿಗಳಂತೆ ಅಂಚೆ ಚೀಟಿ ಹವ್ಯಾಸಿಗಳೂ ವಿಶ್ವವ್ಯಾಪಿ. ಈ ಹವ್ಯಾಸಕ್ಕೂ ದೇಶ-ಭಾಷೆಗಳ ಎಲ್ಲೆಗಳಿಲ್ಲ. 

ಪಾರಿವಾಳಗಳಿಂದ ನಡೆಯುತ್ತಿದ್ದ ಪತ್ರ ವಿನಿಮಯ ಪದ್ಧತಿಗೆ ಅಂಚೆ ವ್ಯವಸ್ಥೆಯ ರೂಪ ಬಂದು ಕಾಲಕ್ರಮೇಣ ಆಧುನಿಕ ಅಂಚೆ ಜಾಲ ವಿಶ್ವದಾದ್ಯಂತ ಹರಸಿಕೊಂಡು ವ್ಯಾಪಕವಾಗಿದ್ದು ಈಗ ಚರಿತ್ರೆಯ ಭಾಗ.

ಭಾರತದುದ್ದಕ್ಕೂ ಅನೇಕ ಸಂಸ್ಥಾನಗಳು ತಮ್ಮ ಸಂದೇಶ ವಾಹಕ ವ್ಯವಸ್ಥೆಯನ್ನು ಹೊಂದಿದ್ದವು. ಮೈಸೂರು ಅರಸರೂ ಮೈಸೂರು ಅಂಚೆ ಎಂಬ ಅಂಚೆ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದರು. ಬ್ರಿಟಿಷ್ ಆಡಳಿತ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಮೇಲೆ ಕೇಂದ್ರೀಕೃತ ಇಂಪೀರಿಯಲ್ ಪೋಸ್ಟ್‌ಗೆ ಎಲ್ಲಾ ಭಾರತೀಯ ದೇಸಿ ಅಂಚೆಗಳೂ ಸೇರಿಹೋದವು.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಆಧುನಿಕ ಅಂಚೆ ವ್ಯವಸ್ಥೆಯನ್ನು ದೇಶದಾದ್ಯಂತ ತಂದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ನಮ್ಮದೇ ಅಂಚೆ ವ್ಯವಸ್ಥೆ ರೂಪುಗೊಂಡು ಜಾರಿಯಾಯಿತು.  ೧೯೪೭ರ ನಂತರ ನಮ್ಮ ದೇಶದಲ್ಲಿ ೩೦೦೦ಕ್ಕೂ ಹೆಚ್ಚು ಅಂಚೆ ಚೀಟಿಗಳು ಬಿಡುಗಡೆಗೊಂಡಿವೆ. ಇವುಗಳಲ್ಲಿ ಒಂದೇ ಸಲ ಮುದ್ರಣಗೊಳ್ಳುವ ಸ್ಮರಣಾರ್ಥ ಅಂಚೆ ಚೀಟಿಗಳು, ನಿರಂತರ ಉಪಯೋಗಕ್ಕಾಗಿ ಬಳಸುವ, ಹಲವಾರು ಭಾರಿ ಮುದ್ರಣವಾಗುವ ಅಂಚೆ ಚೀಟಿಗಳು ಇವೆ.

ವ್ಯಕ್ತಿಗಳು, ಸ್ಥಳಗಳು, ಘಟನೆಗಳು, ಆಚರಣೆಗಳು, ಪ್ರಾಣಿ ಪಕ್ಷಿ, ಪರಿಸರ, ಸಾಂದರ್ಭಿಕವಾದ ಅಂಚೆ ಚೀಟಿಗಳು - ಹೀಗೆ ಆಯಾ ದೇಶದ ವಿಷಯ  ವಿಶೇಷಗಳನ್ನು ಹೊತ್ತು ತರುವ ಅಂಚೆ ಚೀಟಿಗಳು ಸದಾ ಬೇಡಿಕೆಯಲ್ಲಿರುವ ಅಂಚೆ ಚೀಟಿಗಳು. ಈಗಂತೂ ಇ–ಮೇಲ್, ಎಸ್.ಎಂ.ಎಸ್. ಕೊರಿಯರ್‌ಗಳಿಂದಾಗಿ ಅಂಚೆ ಉಪಯೋಗ ಕೊಂಚ ಕುಂದಿದೆಯಾದರೂ ಸ್ಮರಣಾರ್ಥ ಅಂಚೆ ಚೀಟಿಗಳಿಗೆ ಇರುವ ಬೇಡಿಕೆ ಕುಗ್ಗಿಲ್ಲ. ಜಾಗತಿಕ ಹವ್ಯಾಸಗಳಲ್ಲಿ ಅಂಚೆಚೀಟಿಗಳ ಸಂಗ್ರಹಕ್ಕೆ ಅಗ್ರಸ್ಥಾನ. ಅಂಚೆ ಚೀಟಿಗಳಿಗೆ ದೊಡ್ಡ ಮಾರುಕಟ್ಟೆ ಜಾಲವೂ ಇದೆ. ಹಳೇ ಅಂಚೆ ಚೀಟಿಗಳನ್ನು ಮಾರುವ ಕೊಳ್ಳುವ ದಳ್ಳಾಳಿ ಸಂಸ್ಥೆಗಳೂ ಇವೆ. ಹರಾಜು ಕಟ್ಟೆಗಳೂ ಅಂಚೆಚೀಟಿ ಕ್ರಯ ವಿಕ್ರಯಕ್ಕೆಂದೇ ಇವೆ.

ಭಾರತದಲ್ಲಿ ಅಂಚೆಚೀಟಿ ಮುದ್ರಣ- ಮಾರಾಟಕ್ಕೆ ಭಾರತೀಯ ಅಂಚೆ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗವೇ ಇದೆ. ಆಯಾ ಕಾಲಕ್ಕೆ ಮಹತ್ವದ ವಿಷಯಗಳ ಮೇಲೆ ಅಂಚೆ ಚೀಟಿಗಳನ್ನು ತಯಾರುಮಾಡುವ ಹೊಣೆ ಇರುವ ಈ ವಿಭಾಗದಿಂದ ಹೊರಬಂದಿರುವ ಅಂಚೆಚೀಟಿಗಳಲ್ಲಿ ಉತ್ತರ ಭಾರತದ ರಾಜ್ಯಗಳದ್ದೇ ಸಿಂಹಪಾಲು. ದಕ್ಷಿಣದಲ್ಲಿ ತಮಿಳುನಾಡು, ಕೇರಳಗಳು ಸಾಕಷ್ಟು ತಮ್ಮ ರಾಜ್ಯದ ವ್ಯಕ್ತಿ ವಿಶೇಷಗಳ ಅಂಚೆ ಚೀಟಿಗಳನ್ನು ಪಡೆದಿವೆ.

ಸ್ವಾತಂತ್ರ್ಯಾ ನಂತರ ಕರ್ನಾಟಕದ ಪಾಲಿಗೆ ಬಂದಿರುವ ಅಂಚೆ ಚೀಟಿಗಳು ಕೇವಲ ೫೦-೫೫. ಉತ್ತರ ಹಾಗೂ ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆ, ಕರ್ನಾಟಕದ ಅನೇಕ ಗಣ್ಯರು, ಸ್ಮಾರಕಗಳು, ವಿಶೇಷ ಘಟನೆಗಳು (ಉದಾಹರಣೆಗೆ ವಿಶ್ವ ಕನ್ನಡ ಸಮ್ಮೇಳನ ವಿಧಾನಸೌಧಕ್ಕೆ ೫೦) ಅಂಚೆ ಚೀಟಿಗಳಲ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಅಂಚೆ ಇಲಾಖೆ ಮಾತ್ರ ಹೊಣೆಯಲ್ಲ,  ನಮ್ಮ ಉದಾಸೀನವೂ ಕಾರಣ. ಸಂಗೀತ ಕ್ಷೇತ್ರದಲ್ಲಿ ಕರ್ನಾಟಕ್ಕೆ ರಾಷ್ಟ್ರಮಟ್ಟದಲ್ಲಿ ವಿಶೇಷ ಗೌರವವಿದೆ. ಹಿಂದೂಸ್ಥಾನಿ ಮತ್ತು ಕರ್ನಾಟಕ ಎರಡೂ ಸಂಗೀತ ಪ್ರಕಾರಗಳಿಗೂ ಸಮಾನ ಗೌರವ ಕೊಟ್ಟಿರುವ ವಿರಳ ರಾಜ್ಯ ಕರ್ನಾಟಕ.

ಬಹುದಿನಗಳ ನಿರೀಕ್ಷೆಯ ಬಳಿಕ ಅಂಚೆ ಇಲಾಖೆ ಸಂಗೀತವನ್ನೇ ಕೇಂದ್ರವನ್ನಾಗಿಟ್ಟುಕೊಂಡು ಅಂಚೆಚೀಟಿಗಳ ಗೊಂಚಲನ್ನು ಬಿಡುಗಡೆ ಮಾಡುತ್ತಿದೆ. ವಿಶೇಷ ಅಂಚೆ ಚೀಟಿಗಳಲ್ಲಿ ಕಾಣಿಸಿಕೊಳ್ಳುತ್ತಿರುವವರೆಲ್ಲಾ ಸಂಗೀತ ಕ್ಷೇತ್ರದ ದಿಗ್ಗಜರು. ಅವರಲ್ಲಿ ನಾಲ್ವರು ಕನ್ನಡಿಗರೆನ್ನುವುದು ಹೆಮ್ಮೆಯ ಸಂಗತಿ.

ಪಂಡಿತ್ ರವಿಶಂಕರ್, ಪಂಡಿತ್ ಭೀಮಸೇನ ಜೋಷಿ, ವಿದುಷಿ ಡಿ.ಕೆ. ಪಟ್ಟಮ್ಮಾಳ್, ವಿದುಷಿ ಗಂಗೂಬಾಯಿ ಹಾನಗಲ್, ಪಂಡಿತ ಕುಮಾರ ಗಂಧರ್ವ, ಪಂಡಿತ್ ವಿಲಾಯತ್ ಖಾನ್, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಹಾಗೂ ಪಂಡಿತ್ ಅಲಿ ಅಕ್ಬರ್ ಖಾನ್ ಇವರೇ ಸ್ಮರಣಾರ್ಥ ಅಂಚೆ ಚೀಟಿ ಗೊಂಚಲಿನಲ್ಲಿ ಕಾಣಿಸಿಕೊಳ್ಳುವ ಸಂಗೀತ ದಿಗ್ಗಜರು.

ವಿದುಷಿ ಡಿ.ಕೆ ಪಟ್ಟಮ್ಮಾಳ್ ಅವರನ್ನು ಹೊರತುಪಡಿಸಿದರೆ ಉಳಿದವರು ಹಿಂದೂಸ್ತಾನಿ ಪ್ರಕಾರಕ್ಕೆ ಸೇರಿದವರು. ಗಾಯನ ಹಾಗೂ ವಾದನಗಳಲ್ಲಿ ಎತ್ತರದ ಸಾಧನೆ ಮಾಡಿರುವ ಇವರಲ್ಲಿ ನಾಲ್ವರು ಹಿಂದೂಸ್ತಾನಿ ಗಾಯಕರು ಕನ್ನಡ ನಾಡಿನವರು.
ಮಹಾನ್ ಸಂಗೀತ ದಿಗ್ಗಜರ ಅಂಚೆ ಚೀಟಿ ಆಲ್ಬಂ ಬಿಡುಗಡೆ ಬೆಂಗಳೂರಿನ ಕನ್ನಡ ಭವನದಲ್ಲಿ ಸೆಪ್ಟೆಂಬರ್ ೩ ಬುಧವಾರ ನೆರವೇರಲಿದೆ. ಈ ಸಮಾರಂಭದಲ್ಲಿ ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಕಚೇರಿಗಳಿರುವುದು ಔಚಿತ್ಯ ಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT