‘ಜಾತ್ ಪಾತ್ ತೋಡಕ್ ಮಂಡಲ್ (ಜಾತಿ ಗೀತಿ ನಾಶ ಮಂಡಳಿ) ಲಾಹೋರಿನ ಸಭೆಯನ್ನು ರದ್ದುಪಡಿಸದೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಭಾಷಣ ಮಾಡಲು ಅವಕಾಶ ಕೊಡಬೇಕಿತ್ತು. ದೇಶದಲ್ಲಿ ಜಾತಿ ವಿನಾಶಕ್ಕೆ ಅದೊಂದು ಕ್ರಾಂತಿಕಾರಕ ಹೆಜ್ಜೆಯೇ ಆಗುತ್ತಿತ್ತು’
‘ಮಹಾತ್ಮ ಗಾಂಧಿ ಮತ್ತು ಡಾ.ಅಂಬೇಡ್ಕರ್ ಅವರ ನಡುವಿನ ವೈಚಾರಿಕ ಸಂಘರ್ಷ ಅದೆಂಥ ದಿವ್ಯ ಬೆಳಕನ್ನು ಉಳಿಸಿಹೋಗಿದೆ ಅಲ್ಲವೆ?’

–ರಾಯಚೂರಿನ ಮಸ್ಕಿ, ಹಾಸನ ಜಿಲ್ಲೆಯ ಹೊಳೆನರಸೀಪುರ, ಬೆಳಗಾವಿ ಜಿಲ್ಲೆಯ ಅಥಣಿ ಸೇರಿದಂತೆ ರಾಜ್ಯದ ಹಲವು ಊರುಗಳ ಕಾಲೇಜು ಕ್ಯಾಂಪಸ್ಸುಗಳಲ್ಲಿ ಈಗೀಗ ವಿದ್ಯಾರ್ಥಿಗಳ ಮಧ್ಯೆ ನಡೆಯುವ ಚರ್ಚೆಯ ಒಂದು ಝಲಕ್ ಇದು. ಲಾಹೋರ್ ಸಭೆಗಾಗಿ ಡಾ. ಅಂಬೇಡ್ಕರ್ ಸಿದ್ಧಪಡಿಸಿದ್ದ ಭಾಷಣದ ಸುದೀರ್ಘ ಟಿಪ್ಪಣಿ ಸಾವಿರಾರು ವಿದ್ಯಾರ್ಥಿಗಳ ಎದೆಯೊಳಗಿನ ಹಾಡಾಗಿಬಿಟ್ಟಿದೆ.

ಕಡಲ ತೀರದ ಪುಂಜಾಲಕಟ್ಟೆ, ಸಹ್ಯಾದ್ರಿ ತಪ್ಪಲಿನ ಸಾಗರ, ಬಯಲು ಸೀಮೆಯ ಕೋಲಾರ, ಪರಂಪರೆಯ ತಾಣ ಬಾದಾಮಿ... ಹೀಗೆ ರಾಜ್ಯದ ಎಲ್ಲ ಕಡೆಗಳ ಕಾಲೇಜು ಕ್ಯಾಂಪಸ್ಸುಗಳಲ್ಲೀಗ ಅಂಬೇಡ್ಕರ್ ಚಿಂತನೆಗಳ ಹೊರಳು ನೋಟದ ಅವಸರ. ಅಲ್ಲಿನ ಪ್ರಖರ ಚರ್ಚೆಗಳಿಗೆ ಕಿವಿಗೊಟ್ಟಾಗ ದೇಶ ಕಂಡ ಆ ಮಹಾನ್ ಮಾನವತಾವಾದಿ ಪ್ರತಿಮೆಗಳಿಂದ ಎದ್ದುಬಂದು ವಿದ್ಯಾರ್ಥಿಗಳ ಹೃದಯದೊಳಗೆ ಮರುಹುಟ್ಟು ಪಡೆದಂತೆ ಭಾಸವಾಗುತ್ತಿದೆ.

ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವ ನೀತಿಯ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.ಎಸ್.ಜಾಫೆಟ್ ಹಾಗೂ ಅವರ ತಂಡ, ‘ನಾವು ಹಾಕಿದ ಶ್ರಮವೆಲ್ಲ ಸಾರ್ಥಕವಾಯಿತು’ ಎಂದು ಮಂದಹಾಸ ಬೀರುತ್ತಿದೆ.

ಬಾಬಾಸಾಹೇಬರ 125ನೇ ಹುಟ್ಟುಹಬ್ಬ ಹಾಗೂ ಅವರು ಕಡಲು ದಾಟಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ (ಇಂತಹ ಸಾಧನೆ ಮಾಡಿದ ದೇಶದ ಮೊದಲ ದಲಿತ ಪ್ರತಿಭೆ ಅವರು) ನೂರನೇ ವರ್ಷ ಒಟ್ಟೊಟ್ಟಿಗೆ ಸಂಗಮಿಸಿದ ಸಂದರ್ಭವನ್ನು ಸ್ಮರಣೀಯವಾಗಿಸಲು ಜಾಫೆಟ್ ಅವರ ತಂಡ ಅಂಬೇಡ್ಕರ್ ಅಧ್ಯಯನ ಕೇಂದ್ರದ ಮೂಲಕ ತುಳಿದ ಹೆಜ್ಜೆ ವಿಶಿಷ್ಟವಾದುದು. ರಾಜ್ಯದಾದ್ಯಂತ ‘ಪ್ರಜಾತಂತ್ರ ಹಾಗೂ ಯುವಜನತೆಗಾಗಿ ಅಂಬೇಡ್ಕರ್’ ಎಂಬ ಅಭಿಯಾನವನ್ನು ಅದು ಆರಂಭಿಸಿತು. ಸುಮಾರು 50 ಸಾವಿರ ವಿದ್ಯಾರ್ಥಿಗಳನ್ನು ಈ ಅಭಿಯಾನ ತಲುಪಿದ್ದು, ಸಾವಿರಾರು ಯುವಕರ ಎದೆಗೆ ಅಂಬೇಡ್ಕರ್ ವಿಚಾರಧಾರೆ ಬಿದ್ದಿದೆ.

‘ಹೌದು, ನಿಜಕ್ಕೂ ಅಂಬೇಡ್ಕರ್ ಅಂದರೆ ಯಾರು’ ಎಂಬ ಪ್ರಶ್ನೆಯನ್ನು ಯಾರ ಮುಂದಿಟ್ಟರೂ ದಲಿತ ಚಳವಳಿ ಮುಂದಾಳುಗಳು ಸೇರಿದಂತೆ ಎಲ್ಲರೂ ‘ಸಂವಿಧಾನ ಶಿಲ್ಪಿ’, ‘ಸಮಾಜ ಸುಧಾರಕ’ ಎಂಬ ಸಿದ್ಧ ಉತ್ತರಕ್ಕೆ ನಿಂತು ಬಿಡುತ್ತಾರೆ. ಇಂತಹ ಸಿದ್ಧ ಚೌಕಟ್ಟಿನ ಆಚೆಗೆ ಅವರನ್ನು ಅರ್ಥ ಮಾಡಿಸಲು ಈ ಅಭಿಯಾನ ತವಕಿಸುತ್ತಿದೆ.

ಅಂಬೇಡ್ಕರ್ ಅವರ ‘ಜಾತಿ ವಿನಾಶ’, ‘ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಹಾಗೂ ‘ಪ್ರಭುತ್ವ ಮತ್ತು ಅಲ್ಪ ಸಂಖ್ಯಾತರು’ ಕೃತಿಗಳಲ್ಲಿ ಭಾರತದ ಸಾಮಾಜಿಕ–ರಾಜಕೀಯ–ಆರ್ಥಿಕ ಕ್ಷೇತ್ರಗಳ ವಿಷಯವಾಗಿ ತಲಸ್ಪರ್ಶಿಯಾದ ವಿಶ್ಲೇಷಣೆ ಇದೆ. ಪ್ರಜಾತಾಂತ್ರಿಕ ಪರ್ಯಾಯಗಳ ಬೆಳಕು ಸಹ ಆ ಕೃತಿಗಳಲ್ಲಿದೆ. ‘ಅಂಬೇಡ್ಕರ್ ಚಿಂತನೆಗಳ ಪ್ರವೇಶಿಕೆ’ ಎಂಬ ಪುಸ್ತಕದ ಮೂಲಕ ಆ ಅಪ್ಪಟ ಸಮಾಜವಾದದ ಗಹನ ವಿಶ್ಲೇಷಣೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವ ನೀತಿಯ ಅಧ್ಯಯನ ಕೇಂದ್ರ ದೊಡ್ಡ ಹಾದಿಯನ್ನೇ ನಿರ್ಮಿಸಿದೆ. ಆ ಕೃತಿಯನ್ನು ಬರಿ ಐದು ರೂಪಾಯಿಗೆ ಹಂಚಲಾಗುತ್ತಿದೆ.

‘ಅಂಬೇಡ್ಕರ್ ಅವರೂ ಸೇರಿದಂತೆ ಸಮಾನತೆ ಹಾಗೂ ಸ್ವಾತಂತ್ರ್ಯದ ಕನಸು ಕಂಡ ಮಹಾನ್ ನೇತಾರರ ಕೃತಿಗಳನ್ನು ಯುವ ಜನಾಂಗ ಓದಿ ಅರ್ಥೈಸಿಕೊಳ್ಳುವ ತುರ್ತಿನ ಸಂದರ್ಭ ಇದು. ಅಂಥ ಓದು ಮತ್ತು ಸ್ವತಂತ್ರ ವಿಶ್ಲೇಷಣೆಗಳ ಮೂಲಕ ಯುವಜನ ತಮ್ಮ ನೆಲೆ ಹಾಗೂ ನಿಲುವುಗಳನ್ನು ರೂಪಿಸಿಕೊಳ್ಳುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯ’ ಎನ್ನುತ್ತಾರೆ ಅಭಿಯಾನದ ನೇತೃತ್ವ ವಹಿಸಿದ ಪ್ರೊ.ವಿ.ಎಸ್. ಶ್ರೀಧರ್, ಶಿವಸುಂದರ್ ಹಾಗೂ ಪ್ರದೀಪ್ ರಾಮಾವತ್.

ಗದಗ ಕಾಲೇಜಿನಲ್ಲಿ ನಡೆದ ಅಭಿಯಾನದ ಕಲಾಪದಲ್ಲಿ ಒಂದು ಪ್ರಸಂಗ. ಹುಡುಗಿಯೊಬ್ಬಳು ಪ್ರಶ್ನೆ ಹಾಕುತ್ತಾಳೆ: ‘ಜಾತಿ ವಿನಾಶ ಆಗಬೇಕೆನ್ನುವುದು ಅಂಬೇಡ್ಕರ್ ಅವರ ಅಪೇಕ್ಷೆ ಆಗಿತ್ತಲ್ಲವೆ? ಶಾಲೆಗೆ ಪ್ರವೇಶ ಪಡೆಯಲು, ಉದ್ಯೋಗ ಗಿಟ್ಟಿಸಲು, ಬೇರೆ ಯಾವುದೇ ಕಾರಣಕ್ಕೆ ಅರ್ಜಿ ಹಾಕಲು ಹೋದರೆ ಜಾತಿ ಕಾಲಂ ಕಣ್ಣಿಗೆ ಕುಕ್ಕುತ್ತದೆ. ಅಲ್ಲದೆ, ಸರ್ಕಾರವೇ ಮುಂದೆ ನಿಂತು ಜಾತಿ ಜನಗಣತಿ ಮಾಡುತ್ತದೆ. ಪರಿಸ್ಥಿತಿ ಹೀಗಿರುವಾಗ ಜಾತಿ ವಿನಾಶ ಸಾಧ್ಯವೇ? ಮೀಸಲಾತಿಯೂ ಜಾತಿಯನ್ನು ಉಳಿಸಿ ಪೋಷಣೆ ಮಾಡುವುದಿಲ್ಲವೆ?’

ಅದಕ್ಕೆ ಪ್ರೊ.ಶ್ರೀಧರ್ ಕೊಟ್ಟ ಉತ್ತರ ಹೀಗಿದೆ: ‘ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು ಮುಕ್ತಗೊಳಿಸಲು ಮಹಾತ್ಮ ಗಾಂಧಿ ಸೇರಿದಂತೆ ಹಲವು ನೇತಾರರ ಮುಂದಾಳತ್ವದಲ್ಲಿ ಬಹುದೊಡ್ಡ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಆದರೆ, ಸ್ವಾತಂತ್ರ್ಯ ಎಂಬ ಪರಿಕಲ್ಪನೆಗೆ ದಮನಿತ ಜನರ ಬದುಕಿನ ಆಶಯಗಳ ಸತ್ವವನ್ನು ತುಂಬಿದವರು ಮಾತ್ರ ಅಂಬೇಡ್ಕರ್. ಆ ಮೂಲಕ ಸ್ವಾತಂತ್ರ್ಯದ ಅರ್ಥವನ್ನು ಅವರು ಪೂರ್ಣಗೊಳಿಸಿದರು.

‘ರಾಜಕೀಯ ಸ್ವಾತಂತ್ರ್ಯ ಖಾತರಿಯಾಗಿರುವ ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಇನ್ನೂ ದೂರದ ಕನಸಾಗಿದೆ. ಸ್ಲಮ್ಮುಗಳು ಹಾಗೂ ರೈತರ ಆತ್ಮಹತ್ಯೆಯಲ್ಲಿ ಅಸಮಾನತೆ ಪ್ರತಿಫಲನ ಆಗುತ್ತಲೇ ಇದೆ. ಅದನ್ನು ಹೋಗಲಾಡಿಸಲು ಮೀಸಲಾತಿ ಅನಿವಾರ್ಯವಾಗಿದೆ. ಸಮಾನತೆ ಸಾಧಿಸಿದ ಕ್ಷಣವೇ ಮೀಸಲಾತಿ ರದ್ದುಗೊಳಿಸಲು ಯಾರ ಆಕ್ಷೇಪವೂ ಇರಲಾರದು’.

ಸಾಗರ ಕಾಲೇಜಿನಲ್ಲಿ ಒಂದು ವಿಶಿಷ್ಟ ಪ್ರಯೋಗ ಮಾಡಲಾಯಿತು. ಅಭಿಯಾನಕ್ಕಿಂತ ಮುಂಚೆ ‘ಪ್ರವೇಶಿಕೆ’ ಕೃತಿಯನ್ನು ಎಲ್ಲರಿಗೂ ಹಂಚಲಾಗಿತ್ತು. ಅಭಿಯಾನದ ದಿನ ಉಪನ್ಯಾಸಕರಿಗಿಂತ ವಿದ್ಯಾರ್ಥಿಗಳಿಗೇ ಮಾತನಾಡುವ ತವಕ. ಒಂದು ಇಡೀ ದಿನ ಚರ್ಚೆ ನಡೆಯಿತು.

‘ಜಾತಿ ವ್ಯವಸ್ಥೆಯ ಮುಖ್ಯ ಉದ್ದೇಶ ಜನಾಂಗೀಯ ಹಾಗೂ ವಂಶಾವಳಿಯ ಪರಿಶುದ್ಧತೆಯನ್ನು ಕಾಪಾಡುವುದು ಎಂಬ ವಾದ ಬಲು ಹಿಂದಿನಿಂದಲೂ ಇದೆ. ಜನಾಂಗೀಯ ಶಾಸ್ತ್ರಜ್ಞರ ಪ್ರಕಾರ ಶುದ್ಧ ಜನಾಂಗ ಎಂಬುದು ಅಸ್ತಿತ್ವದಲ್ಲೇ ಇಲ್ಲ. ಜಗತ್ತಿನಾದ್ಯಂತ ಜನಾಂಗೀಯ ಸಂಕರವೇ ಕಂಡುಬರುತ್ತದೆ. ಭಾರತದಲ್ಲೂ ವಿದೇಶಿ ಅಂಶ ಕಲಬೆರಕೆ ಆಗದಂತಹ ಯಾವ ಜಾತಿಯೂ ಉಳಿದಿಲ್ಲ ಎಂಬುದನ್ನು ಅಂಬೇಡ್ಕರ್ ಸಮರ್ಥವಾಗಿ ಬಿಂಬಿಸಿದ್ದರು...’ ಹೀಗೇ ಸಾಗಿತ್ತು ಅಲ್ಲಿನ ವಿದ್ಯಾರ್ಥಿಗಳ ಚರ್ಚಾಲಹರಿ.

ಅಭಿಯಾನದ ಮೂಲಕ ಅಂಬೇಡ್ಕರ್ ವಿಚಾರಧಾರೆ ಅಷ್ಟಷ್ಟೇ ಒಳಗೆ ಇಳಿಯುತ್ತಾ ಹೋದಂತೆ ದಲಿತ ವಿದ್ಯಾರ್ಥಿಗಳು ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. ಚಿಕ್ಕಬಳ್ಳಾಪುರದ ಸರ್ಕಾರಿ ಕಾಲೇಜಿನಲ್ಲಿ ನಡೆದ ಸಂವಾದ ಕೆಲವು ಯುವಕರನ್ನು ಬಲು ಗಾಢವಾಗಿ ತಟ್ಟಿದೆ.

‘ಬಾಬಾಸಾಹೇಬರನ್ನು ಒಂದು ನಿಕೃಷ್ಟ ಜಾತಿಯ ಪ್ರತಿನಿಧಿಯನ್ನಾಗಿ ಸಂಕುಚಿತಗೊಳಿಸಿ ಏಕೆ ನೋಡಲಾಗುತ್ತಿದೆ’ ಎಂದು ದಿಲೀಪ್‌ಕುಮಾರ್ ಪ್ರಶ್ನಿಸುತ್ತಿದ್ದಾಗ ಆತನ ಕೆನ್ನೆಯ ಮೇಲೆ ಕಣ್ಣೀರ ಹನಿಗಳು ಜಾರುತ್ತಿದ್ದವು. ಇಷ್ಟುದಿನ ಅವರನ್ನು ನಾವು ಅರ್ಥಮಾಡಿಕೊಳ್ಳಲು ಸೋತಿದ್ದೆವಲ್ಲ ಎಂಬ ನೋವು ಅದೇ ಕಾಲೇಜಿನ ರಮೇಶ್, ಅಂಬರೀಷ್ ಅವರಂತೆಯೇ ರಾಜ್ಯದ ನೂರಾರು ವಿದ್ಯಾರ್ಥಿಗಳಿಂದ ವ್ಯಕ್ತವಾಗಿದೆ.

ಪರಿಶಿಷ್ಟರ ಹಾಸ್ಟೆಲ್‌ಗಳಲ್ಲಿ ಸಲ್ಮಾನ್ ಖಾನ್ ಅವರ ಸಿನಿಮಾ ಅಥವಾ ಕಾಲೇಜಿನಲ್ಲಿ ಹರಡುವಂತಹ ಗಾಸಿಪ್ ಕುರಿತ ಚರ್ಚೆ ಸಂಪೂರ್ಣ ಹಿಂದಕ್ಕೆ ಸರಿದಿದ್ದು ಅಂಬೇಡ್ಕರ್ ಅವರ ‘ಜಾತಿ ವಿನಾಶ’ ಹಾಗೂ ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಕುರಿತ ಸಂವಾದಗಳ ಸದ್ದು ಕೇಳಿಬರುತ್ತಿದೆ. ರೋಹಿತ್ ವೇಮುಲ ಅವರು ಪ್ರತಿಪಾದಿಸಿದ ಸಿದ್ಧಾಂತಗಳ ಜತೆಗಿನ ಅನುಸಂಧಾನವೂ ಅಲ್ಲಲ್ಲಿ ಸಣ್ಣದಾಗಿ ಶುರುವಾಗಿದೆ.

ದಲಿತೇತರ ವಿದ್ಯಾರ್ಥಿಗಳಲ್ಲೂ ಅಭಿಯಾನ ಹೊಸ ಬೆಳಕು ಮೂಡಿಸಿದೆ. ದಲಿತ ಚಳವಳಿಯನ್ನು ಅವರಿಗೆ ವಾಸ್ತವಿಕ ನೆಲೆಗಟ್ಟಿನಲ್ಲಿ ನೋಡಲು ಸಾಧ್ಯವಾಗಿದೆ.

ನಾಯಿಗಳು ಸಹ ಕುಡಿಯಬಹುದಾಗಿದ್ದ ಕೆರೆಯ ನೀರನ್ನು ದಲಿತರು ಬಳಸಲು ನಮ್ಮ ಹಿರಿಯರು ಅವಕಾಶವನ್ನೇ ನೀಡಿರಲಿಲ್ಲ. ಕೆರೆ ನೀರು ಬಳಸುವ ಹಕ್ಕಿಗಾಗಿ ಡಾ. ಅಂಬೇಡ್ಕರ್ ಅವರು ಚೌದಾರ್‌ನಲ್ಲಿ ಆಂದೋಲನವನ್ನೇ ನಡೆಸಬೇಕಾಯಿತು. ಕುಡಿಯಲು ನೀರನ್ನೂ ನೀಡದ ವ್ಯವಸ್ಥೆಗೆ ಸಮಾಜ ಎನ್ನಲಾದೀತೇ ಎಂದು ಪ್ರಶ್ನಿಸುತ್ತಾಳೆ ಪುಂಜಾಲಕಟ್ಟೆ ಕಾಲೇಜಿನ ವಿದ್ಯಾರ್ಥಿನಿ ಕಾವ್ಯ. ಅದೇ ಪ್ರಶ್ನೆ ಬೀದರ್ ಕಾಲೇಜಿನ ದಮ್ಮಶೀಲನನ್ನೂ ಕಾಡಿದೆ.

ಅಭಿಯಾನದ ಮುಖ್ಯ ಗುರಿಯಾಗಿದ್ದುದು ಸರ್ಕಾರಿ ಕಾಲೇಜುಗಳು. ಅಲ್ಲಿನ ವಾತಾವರಣ ಸಾಮಾಜಿಕ ಸ್ಥಿತಿ–ಗತಿ ಅಧ್ಯಯನಕ್ಕೂ ಪೂರಕವಾಗಿವೆ. ಸರ್ಕಾರಿ ಕಾಲೇಜುಗಳಲ್ಲಿ ದಲಿತೇತರ ವಿದ್ಯಾರ್ಥಿಗಳ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಗೌಣವಾಗಿದೆ. ಅಲ್ಪ ಸಂಖ್ಯಾತರು ಸಿಕ್ಕುತ್ತಾರೆಯೇ ಹೊರತು ಅನ್ಯಜಾತಿಯವರು ತೀರಾ ವಿರಳ.

ಚಿಕ್ಕಬಳ್ಳಾಪುರದ ಸಂವಾದದಲ್ಲಿ ಪ್ರಶ್ನೆಗಳ ಸುರಿಮಳೆಯೊಂದು ಸುರಿಯಿತು. ಅದು ಗುಡುಗು, ಮಿಂಚುಗಳಿಂದಲೂ ಕೂಡಿತ್ತು ಎನ್ನಿ. ‘ಮೇಲ್ಜಾತಿಗಳಲ್ಲಿ ಬಡವರಿಲ್ಲವೆ? ಪ್ರತಿಭೆ ಇಲ್ಲದವರಿಗೆ ಅವಕಾಶ ಕೊಡುವುದರಿಂದ ಸಾಮಾಜಿಕ ಅನ್ಯಾಯ ಆಗುವುದಿಲ್ಲವೆ? ದೇಶದ ಅಭಿವೃದ್ಧಿ ಕುಂಠಿತಗೊಳ್ಳುವುದಿಲ್ಲವೆ? ಉಚಿತ ಸೌಲಭ್ಯ ಕೊಡುತ್ತಿದ್ದರೂ ದಲಿತರು ಏಕೆ ಉದ್ಧಾರವಾಗಿಲ್ಲ? ಶಿಕ್ಷಣದಲ್ಲಿ ಬೇಕಾದರೆ ಮೀಸಲಾತಿ ಕೊಡಬಹುದು, ಉದ್ಯೋಗದಲ್ಲಿ ಏಕೆ?’
‘ಅಸ್ಪೃಶ್ಯತೆಯ ಕಳಂಕದ ವಿರುದ್ಧ ಹೋರಾಡಲು ವ್ಯಯ ಮಾಡಬೇಕಾದ ಅಗಾಧ ಶಕ್ತಿ ಸಾಮರ್ಥ್ಯಗಳು ದಲಿತರಲ್ಲೇ ಉಳಿದಿದ್ದರೆ ಅದನ್ನು ಅವರು ತಮ್ಮ ಇಡೀ ದೇಶದ ಶಿಕ್ಷಣ ಮತ್ತು ಸಂಪನ್ಮೂಲಗಳ ಅಭಿವೃದ್ಧಿಯಲ್ಲಿ ತೊಡಗಿಸುವುದು ಸಾಧ್ಯವಾಗುತ್ತಿತ್ತು.

ದಮನಿತ ವರ್ಗಗಳಿಗೆ ಆತ್ಮ ಗೌರವ ಮತ್ತು ಸ್ವಾತಂತ್ರ್ಯ ದೊರೆತಿದ್ದರೆ ಅವರು ತಮ್ಮ ಉನ್ನತಿಗಳನ್ನು ಸಾಧಿಸುವುದು ಮಾತ್ರವಲ್ಲ; ತಮ್ಮ ಶ್ರಮ, ಬುದ್ಧಿಶಕ್ತಿ ಮತ್ತು ಧೈರ್ಯಗಳಿಂದ ದೇಶದ ಶಕ್ತಿ ಹಾಗೂ ಏಳಿಗೆಗೂ ಕೊಡುಗೆ ನೀಡುತ್ತಿದ್ದರು’ ಎಂದು ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದರು.

ಅಂಬೇಡ್ಕರ್ ಅವರ ಈ ಮಾತನ್ನು ನೆನಪಿಸುತ್ತಲೇ ಶಿವಸುಂದರ್ ಹೇಳುತ್ತಾರೆ: ನಿರುದ್ಯೋಗ ಸಮಸ್ಯೆಗೆ ಮೀಸಲಾತಿ ಕಾರಣವಲ್ಲ. ಜನಸಂಖ್ಯೆಗೆ ತಕ್ಕಂತೆ ಸರ್ಕಾರ ಉದ್ಯೋಗ ಸೃಷ್ಟಿಸಲು ವಿಫಲವಾಗಿರುವ ಸಂಕೇತ ಅದು. ಎಲ್ಲದಕ್ಕೂ ಮೀಸಲಾತಿ ಕಂಟಕ ಎನ್ನುವಂತೆ ಬಣ್ಣಿಸುವುದು ಸರಿಯಲ್ಲ. ದಮನಿತರ ಅಗಾಧ ಸಂಖ್ಯೆಯನ್ನು ಗಮನಿಸಿ ಸರ್ಕಾರ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಕಲ್ಪಿಸುವ ಅಗತ್ಯವಿದೆ’

ಅಭಿಯಾನ ಆರಂಭಿಸುವ ಯೋಚನೆ ಬಂದಮೇಲೆ ಅದನ್ನು ಕಾರ್ಯಗತಗೊಳಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅಂಬೇಡ್ಕರ್ ಅವರ ಗಹನವಾದ ಸಾಹಿತ್ಯವನ್ನು ಯಥಾವತ್ತಾಗಿ ಒಯ್ದಿದ್ದರೆ ವಿದ್ಯಾರ್ಥಿಗಳಿಗೆ ಅರಗಿಸಿಕೊಳ್ಳಲು ಕಷ್ಟ ಆಗುತ್ತಿತ್ತು. ಹೀಗಾಗಿ ಮೂರೂ ಕೃತಿಗಳ ಕೆನೆರೂಪದ ತಿರುಳನ್ನು ತೆಗೆದು ‘ಪ್ರವೇಶಿಕೆ’ ಸಿದ್ಧಪಡಿಸಿದೆವು. ಆಸಕ್ತಿ, ಓದಿನ ದಾಹ ಹೆಚ್ಚಿದ್ದವರಿಗೆ ಮೂಲಕೃತಿಗಳನ್ನೇ ಒದಗಿಸುವುದು ನಮ್ಮ ಯೋಚನೆಯಾಗಿತ್ತು ಎನ್ನುತ್ತಾರೆ ಜಾಫೆಟ್.

ಅಂಬೇಡ್ಕರ್ ಎಂದರೆ ಸಂವಿಧಾನಶಿಲ್ಪಿ, ದಲಿತರ ಉದ್ಧಾರಕ ಎಂದಷ್ಟೇ ಪರಿಚಯಿಸುವವರು ನಮಗೆ ಬೇಕಿರಲಿಲ್ಲ. ಅವರ ವಿಚಾರಧಾರೆ ಹಾಗೂ ವ್ಯಕ್ತಿತ್ವದ ಕುರಿತು ತಲಸ್ಪರ್ಶಿಯಾಗಿ ಮಾತನಾಡುವವರನ್ನು ತಯಾರು ಮಾಡಬೇಕಿತ್ತು. ಹೀಗಾಗಿ ರಾಜ್ಯದಾದ್ಯಂತ 150 ಉಪನ್ಯಾಸಕರನ್ನು ಕಲೆಹಾಕಿ ಕಾರ್ಯಾಗಾರ ಏರ್ಪಡಿಸಿದೆವು ಎಂದು ವಿವರಿಸುತ್ತಾರೆ. ಸುಖದೇವ್ ಥೋರಟ್, ಪ್ರೊ. ಹರಗೋಪಾಲ್, ಪ್ರೊ. ಆನಂದ, ಪ್ರೊ. ಫಣಿರಾಜ್, ವಿಕಾಸ ಮೌರ್ಯ, ನೂರ್ ಶ್ರೀಧರ್, ಕೆ.ಆರ್.ದಿಶಾ, ಡಾ.ಉಮಾಶಂಕರ್ ಮೊದಲಾದವರು ಎರಡು ದಿನಗಳ ಈ ಕಾರ್ಯಾಗಾರದಲ್ಲಿ ಪಾಠ ಮಾಡಿದರು.

ಅಂಬೇಡ್ಕರ್ ವಿಚಾರಧಾರೆಗಳ ಮೇಲೆ ಒಳನೋಟ ಬೀರಿದರು. ಕಾರ್ಯಾಗಾರ ಮುಗಿಯುವ ಹೊತ್ತಿಗೆ 150 ಸಂಪನ್ಮೂಲ ವ್ಯಕ್ತಿಗಳು ತಯಾರಾಗಿದ್ದರು. ಬಳಿಕ ಜಿಲ್ಲೆಗೆ ಒಬ್ಬರಂತೆ ಸಮನ್ವಯಾಧಿಕಾರಿಯನ್ನು ನೇಮಕ ಮಾಡಲಾಯಿತು. ಅಷ್ಟರಲ್ಲಿ ಪುಸ್ತಕ ಮುದ್ರಣಗೊಂಡು ಬಂದಿತ್ತು. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ದಲಿತ ಚಿಂತನೆಗೆ ಹೊಸದಿಕ್ಕು ನೀಡಿದ ದೇವನೂರ ಮಹಾದೇವ ಅವರು ಈ ‘ರಥ’ವನ್ನು ಉರುಳುವಂತೆ ಮಾಡಿದರು. ಹಾಗೆ ಆರಂಭವಾದ ಅಭಿಯಾನಕ್ಕೆ ಈಗ ಭರ್ತಿ ಪ್ರವಾಹ ಎಂದು ಅವರು ಹೆಮ್ಮೆಯಿಂದ ಸ್ಮರಿಸುತ್ತಾರೆ.

ಮೊದಲು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ. ಸಂವಾದ ಮುಗಿಸಿ ಹೊರಹೋಗುವಾಗ ಕೈಯಲ್ಲೊಂದು ‘ಪ್ರವೇಶಿಕೆ’ ಪುಸ್ತಕ. ಇದು ಅಭಿಯಾನದ ಸ್ಥೂಲನೋಟ. ದಲಿತ ವಿದ್ಯಾರ್ಥಿಗಳಿಗೆ ತಾವು ಅದುವರೆಗೆ ಕಾಪಿಟ್ಟುಕೊಂಡು ಬಂದ ಒಳತೋಟಿಯನ್ನು ಹೊರಜಗತ್ತಿನೊಂದಿಗೆ ತೆರೆದುಕೊಳ್ಳುವ ತವಕ. ಅದರೊಟ್ಟಿಗೆ ಭಾವೋದ್ವೇಗಗಳ ತಲ್ಲಣ. ದಲಿತೇತರ ವಿದ್ಯಾರ್ಥಿಗಳಿಗೆ ಮೀಸಲಾತಿ ಕುರಿತು ಪ್ರಶ್ನೆ ಎಸೆಯುವ ಆಸೆ. ಮಹಾಪೂರದಂತೆ ಹರಿದು ಬರುತ್ತಿದ್ದ ವಿದ್ಯಾರ್ಥಿಗಳ ಅಂತರಂಗದ ಮಾತುಗಳಿಗೆ ಅಲ್ಲಿ ಯಾರೂ ಕಟ್ಟೆ ಕಟ್ಟಲಿಲ್ಲ.

ಜಾತಿ ಹಾಗೂ ಲಿಂಗ ಸಮಾನತೆ ಆಸೆಹೊತ್ತ ಯುವ ಮನಸ್ಸುಗಳಲ್ಲಿ ಏನೇನೋ ಗೊಂದಲ. ಅಂತಹ ಗೊಂದಲಗಳಿಂದ ನಿರ್ಮಾಣವಾದ ಕಗ್ಗಂಟುಗಳೆಲ್ಲ ಸಂವಾದದಲ್ಲಿ ಕರಗಿಹೋದಾಗ ನೂರಾರು ವಿದ್ಯಾರ್ಥಿಗಳ ಕಣ್ಣುಗಳಲ್ಲಿ ಮಿಂಚು ಕಂಡೆವು ಎಂದು ಶಿವಸುಂದರ್ ಅವರು ಅಭಿಯಾನದ ಭಾವುಕ ಕ್ಷಣಗಳನ್ನು ಕಟ್ಟಿಕೊಡುತ್ತಾರೆ. ವಿದ್ಯಾರ್ಥಿನಿಯರೇ ಹೆಚ್ಚಿನ ಪ್ರಮಾಣದಲ್ಲಿ ಸಂವಾದದಲ್ಲಿ ಭಾಗವಹಿಸಿದ್ದು ಈ ಅಭಿಯಾನದ ಮತ್ತೊಂದು ವಿಶೇಷ. ಅವರ ಪ್ರಕಾರ, ಲಿಂಗ ಸಮಾನತೆಗೆ ಅಂಬೇಡ್ಕರ್ ಅವರಂತೆ ಶ್ರಮಿಸಿದ ಬೇರೊಬ್ಬ ನಾಯಕನಿಲ್ಲ.

‘ದಲಿತೇತರರಾದ ಉಪನ್ಯಾಸಕರೂ ಸಹಕಾರ ಕೊಟ್ಟಿದ್ದಾರೆ. ‘ಪ್ರವೇಶಿಕೆ’ ಓದಿದ ಹಲವರು ಎಷ್ಟೋ ವಿಚಾರಗಳು ಗೊತ್ತೇ ಇರಲಿಲ್ಲ ಎಂದು ಹೇಳುತ್ತಿದ್ದಾರೆ. ಅಂಬೇಡ್ಕರ್ ಅವರ ಬಗೆಗೆ ಬೌದ್ಧಿಕವಲಯ ಹೊಂದಿದ್ದ ಪೂರ್ವಗ್ರಹಗಳನ್ನು ತಕ್ಕಮಟ್ಟಿಗೆ ಹೋಗಲಾಡಿಸಲು ಸಾಧ್ಯವಾಗಿದೆ. ಸಂಶಯದ ದೃಷ್ಟಿಯಿಂದ ನೋಡುತ್ತಿರುವವರು ಇಲ್ಲವೇ ಇಲ್ಲ ಎಂದೇನೂ ನಾವು ಹೇಳುತ್ತಿಲ್ಲ. 2–3 ಕಡೆ ನಮ್ಮ ಕಾರ್ಯಕ್ರಮ ಹಾಳು ಮಾಡಲೆಂದು ಅದೇ ಸಮಯದಲ್ಲಿ ಬೇರೊಂದು ಸಮಾರಂಭ ಏರ್ಪಡಿಸಲಾಗಿತ್ತು. ಅಂತಹ ನಡೆಗಳಿಂದ ನಮಗೇನು ಬೇಸರವಿಲ್ಲ. ಅಭಿಯಾನಕ್ಕೆ ಸಿಕ್ಕ ಪ್ರತಿಕ್ರಿಯೆ ಅದ್ಭುತವಾಗಿದೆ’ ಎಂದು ಪ್ರದೀಪ್ ಹೇಳುತ್ತಾರೆ.

ಎಷ್ಟೇ ಹೊಸ ಚಿಂತನೆಗಳು ಹರಿದಾಡಿದರೂ ಒಂದಲ್ಲ ಒಂದು ನೆಲೆಯಲ್ಲಿ ಮೀಸಲಾತಿ ಪ್ರಶ್ನೆಯೇ ಅಭಿಯಾನದಲ್ಲಿ ಮತ್ತೆ ಮತ್ತೆ ಗಿರಕಿ ಹೊಡೆದಿದೆ. ‘ಸ್ವತಃ ಅಂಬೇಡ್ಕರ್ ಅವರು ಮೀಸಲಾತಿ ಹತ್ತು ವರ್ಷ ಸಾಕು ಎಂದಿರಲಿಲ್ಲವೆ’ ಎಂಬ ಸವಾಲಿಗೆ, ‘ಸ್ವಾತಂತ್ರ್ಯ ಸಿಕ್ಕು 70 ವರ್ಷಗಳು ಆಗುತ್ತಾ ಬಂದರೂ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನಲ್ಲಿ ಎಷ್ಟು ಜನ ದಲಿತ ನ್ಯಾಯಮೂರ್ತಿಗಳಿದ್ದಾರೆ’ ಎಂಬ ಪಾಟೀಸವಾಲು ಮುಖಾಬಿಲೆಯಾಗಿದೆ.

‘ದೇಶದ ಪ್ರಮುಖ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರ ವರ್ಗ ಯಾವ ಜಾತಿಗಳಿಗೆ ಸೇರಿದೆ’ ಎಂಬ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಈಗ ಯಾವುದೇ ಗೊಂದಲವನ್ನೂ ಉಳಿಸಿದಂತಿಲ್ಲ. ಏಕೆಂದರೆ ‘ದಲಿತೇತರರು’ ಎಂಬ ಉತ್ತರ ಕೋರಸ್‌ನಲ್ಲಿ ಬರುತ್ತದೆ. ‘ನಮ್ಮ ಊರಿನ ಕೇರಿಗಳಲ್ಲಿ ಜಾತಿಗಳು ಅಗೋಚರ ಆಗಿರಬಹುದು. ಆದರೆ, ಬೇರೊಂದು ಸ್ವರೂಪದಲ್ಲಿ ಅವುಗಳು ಕಾರ್ಪೋರೇಟ್‌ನ ಕಾರಿಡಾರ್‌ಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಖಾಸಗಿ ರಂಗದಲ್ಲಿ ದಲಿತೇತರರೇ ಉದ್ಯೋಗಿಗಳಾಗಿದ್ದಾರೆ’ ಎಂದು ಪ್ರದೀಪ್ ಹೇಳುತ್ತಾರೆ.

‘ಸಂವಿಧಾನದ ಒಟ್ಟು ಬಂಧ ಗಟ್ಟಿಯಾಗಿದ್ದರೂ ಅಲ್ಲಲ್ಲಿ ಸಡಿಲವಾದಂತೆ ಭಾಸವಾಗುವುದಿಲ್ಲವೆ’ ಎಂಬ ಸಂಶಯದೊಟ್ಟಿಗೆ ‘ಸಂವಿಧಾನದ ಮೂಲ ಆಶಯ ಸಮಾಜವಾದದ ಸ್ಥಾಪನೆ. ಆ ಆಶಯ ಎಲ್ಲಿ ನಿಜವಾಗಿದೆ’ ಎಂಬ ಪ್ರಶ್ನೆಯೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ಹುಡುಗಿಯನ್ನು ಕಾಡಿದೆ.

‘ಹೌದು, ಸಂವಿಧಾನದ ಬಂಧ ಅಲ್ಲಲ್ಲಿ ಸಡಿಲವಾಗಿದೆ. ಇದಕ್ಕೆ ಆಗಿನ ರಾಷ್ಟ್ರೀಯ ನಾಯಕರು ಕಾರಣವೇ ಹೊರತು ಅಂಬೇಡ್ಕರ್ ಹೊಣೆಯಲ್ಲ. ಅಂಬೇಡ್ಕರ್ ಅವರ ಪೂರ್ಣ ಇಚ್ಛೆಯಂತೆಯೇ ಸಂವಿಧಾನ ರಚನೆಯಾಗಿದ್ದರೆ ಅದು ಇನ್ನಷ್ಟು ಪ್ರಬಲವಾಗಿರುತ್ತಿತ್ತು’ ಎನ್ನುವ ಉತ್ತರ ಕೊಡುತ್ತಾರೆ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾದ ಪೀರ್‌ಬಾಷಾ. ‘ಭಾರತದ ಪ್ರಭುತ್ವಗಳು ಕಾಲ–ಕಾಲಕ್ಕೆ ಸಮಾಜವಾದವನ್ನು ನಾಶಮಾಡುತ್ತಲೇ ಬಂದಿವೆ. 1990ರ ದಶಕದ ಬಳಿಕ ಈ ನಾಶಪ್ರವೃತ್ತಿ ವೇಗ ಪಡೆದುಕೊಂಡಿದೆ. ಸದ್ಯದ ಸರ್ಕಾರವಂತೂ ಬಂಡವಾಳ ಎಂಬ ಹುಚ್ಚು ಕುದುರೆಯ ಮೇಲೆ ಓಟ ನಡೆಸಿದ್ದು, ಸಾಮ್ರಾಜ್ಯಶಾಹಿ ವ್ಯವಸ್ಥೆಯ ಮರುಸ್ಥಾಪನೆಗೆ ಹವಣಿಸುತ್ತಿದೆ’ ಎನ್ನುತ್ತಾರೆ.

‘ಮೇಲ್ಜಾತಿಗಳ ಹುಡುಗಿಯರು ಮೀಸಲಾತಿ ಲಾಭ ಪಡೆಯಲು ದಲಿತ ಹುಡುಗರನ್ನು ಪ್ರೀತಿಸಿ ಮದುವೆಯಾಗುವುದು ನಿಮಗೆ ಗೊತ್ತೆ’ ಎಂದು ಕೇಳುವ ಮೂಲಕ ಗದುಗಿನ ವಿದ್ಯಾರ್ಥಿಯೊಬ್ಬ ಅಭಿಯಾನದ ಚರ್ಚೆಗೆ ಮತ್ತೊಂದು ಮಜಲು ಒದಗಿಸಿದ್ದಾನೆ. ‘ಮೀಸಲಾತಿ ಸೌಲಭ್ಯಕ್ಕಾಗಿ ಮದುವೆಯೇ’ ಎಂಬ ಸೋಜಿಗದ ಜತೆ–ಜತೆಗೆ ‘ಅದೊಂದು ಬಾಲಿಶವಾದ ನಡೆ’ ಎನ್ನುವ ಆಕ್ರೋಶವೂ ವ್ಯಕ್ತವಾಗಿದೆ. ಜಾತಿ ನಾಶ ಮಾಡಲು ಸುಲಭೋಪಾಯ ಎಂದರೆ ಸ್ವಜಾತಿ ಮದುವೆ ಮೇಲೆ ನಿರ್ಬಂಧ ವಿಧಿಸುವುದು ಎಂಬ ಸಲಹೆ ಕೂಡ ಈ ಚರ್ಚೆಯ ಮಥನದಿಂದ ಬಂದ ನವನೀತವಾಗಿದೆ.

ನಮ್ಮಲ್ಲಿ ಯಾವ ಭೇದವೂ ಇಲ್ಲ. ಜಾತಿ ಕುರಿತು ಪ್ರಶ್ನೆ ಎತ್ತುವ, ಪುರೋಹಿತಶಾಹಿ ಕುರಿತು ಪ್ರಸ್ತಾವ ಮಾಡುವ ಮೂಲಕ ಈ ಅಭಿಯಾನವೇ ಮೇಲ್ವರ್ಗ ಮತ್ತು ಕೆಳವರ್ಗದ ಮಧ್ಯೆ ವೈಷಮ್ಯ ಬೆಳೆಸಿದಂತೆ ಆಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಅಲ್ಲಲ್ಲಿ ನೇರವಾಗಿಯೇ ಎತ್ತಲಾಗಿದೆ. ‘ಪುರೋಹಿತಶಾಹಿ ಎಂದೊಡನೆ ಬ್ರಾಹ್ಮಣರನ್ನು ಉದ್ದೇಶಿಸಿ ಹೇಳಿದ್ದಲ್ಲ.

ಎಲ್ಲ ಜಾತಿಗಳಲ್ಲಿರುವ ಜಾತಿ ಪೋಷಣೆಯ ವರ್ಗ ಅದು. ಜಾತಿ ಎನ್ನುವುದು ಇಂತಹ ವರ್ಗದ ಕರಳು ಬಳ್ಳಿಯಲ್ಲಿ ಬೇರುಬಿಟ್ಟಿದೆ. ಹೃದಯದೊಳಗೆ ಬೆಳೆದುನಿಂತಿದೆ. ಅದು ವಿನಾಶ ಆಗುವವರೆಗೆ ಇಂತಹ ಚರ್ಚೆಗಳು ಇದ್ದುದೇ ಎನ್ನುತ್ತಾರೆ ಡಾ. ಉಮಾಶಂಕರ್. ಕಾಲೇಜಿನಲ್ಲಿ ನನಗೆ ಎಂದಿಗೂ ಜಾತಿಯ ತಾರತಮ್ಯದ ಅನುಭವ ಆಗಿಲ್ಲ. ಅದೇ ಮನೆಗೆ ಹೋದಾಗ ಭೇದಭಾವದ ಬಿಸಿ ತಟ್ಟುತ್ತದೆ.

ನಮ್ಮ ಕಾಲೇಜು ಕ್ಯಾಂಟೀನ್‌ನಲ್ಲಿ ಒಟ್ಟಾಗಿ ಊಟ ಮಾಡುವ ಗೆಳೆಯ, ಆತನ ಮನೆಗೆ ಹೋದಾಗ ಅಡುಗೆ ಕೋಣೆಗೆ ಬಿಟ್ಟುಕೊಳ್ಳುವುದಿಲ್ಲ. ಇದಕ್ಕೆ ಹೇಗೆ ಪ್ರತಿಕ್ರಿಯಿಸುವುದು ಎನ್ನುವ ನೋವು ತುಮಕೂರಿನ ವಿದ್ಯಾರ್ಥಿಯನ್ನು ಕಾಡಿದೆ. ‘ಸಮಾನತೆಯ ಸಂದೇಶ ಸಾರಲು ನಾವೆಲ್ಲ ನೆರೆದಿದ್ದೇವೆ. ದಲಿತೇತರರನ್ನು ತೆಗಳಿದರೆ ಚಪ್ಪಾಳೆ ತಟ್ಟುವ ನನ್ನ ಗೆಳತಿ, ದಲಿತರದತ್ತ ವಿಮರ್ಶಾನೋಟ ಹೊರಳಿದಾಗ ಸುಮ್ಮನೆ ಕೂರುತ್ತಾಳೆ’ ಎಂಬ ತಕರಾರು ಎತ್ತಿದ ರಾಮದುರ್ಗದ ಹುಡುಗಿಯೊಬ್ಬಳು ಗಂಭೀರ ಚರ್ಚೆಯ ನಡುವೆ ನಗು ಉಕ್ಕಿಸಿದ್ದಾಳೆ.

ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಹಳ್ಳಿಗಳ ಬ್ರಾಹ್ಮಣೇತರ ಜಾತಿಗಳ ಜನ ಅಕ್ಷರಾಭ್ಯಾಸಕ್ಕೆ ಎಷ್ಟೊಂದು ಹರಸಾಹಸ ನಡೆಸಬೇಕಾಯಿತು ಎನ್ನುವುದನ್ನು ನಿಮ್ಹಾನ್ಸ್‌ನ ನಿವೃತ್ತ ವೈದ್ಯ ಡಾ. ಶ್ಯಾಮಸುಂದರ್ ಬಲು ವಿಷಾದದಿಂದ ವಿವರಿಸುತ್ತಾರೆ.

‘ನಮ್ಮ ತಾತನವರೆಗೆ ಪೂರ್ವಜರೆಲ್ಲ ಅನಕ್ಷರಸ್ಥರು. ತಂದೆಗೆ ಬಾಲ್ಯದಲ್ಲೇ ಓದುವ ತವಕ. ಆದರೆ, ತಾತ ಅವರನ್ನು ಕುರಿ ಕಾಯಲು ಅಟ್ಟಿದರು. ಛಲಬಿಡದ ನಮ್ಮ ತಂದೆ ತಮ್ಮ 20ನೇ ವಯಸ್ಸಿನಲ್ಲಿ ‘ಅಆಇಈ’ ಕಲಿಕೆ ಆರಂಭಿಸಿದರು. ಕೂಲಿ ಮಠದಲ್ಲಿ ಕೂರಿಸಲು ಶಾನುಭೋಗರಿಂದ ತಗಾದೆ. ಪಟ್ಟು ಸಡಿಲಿಸದ ನಮ್ಮ ತಂದೆ ಮೆಟ್ರಿಕ್ಯುಲೇಷನ್‌ವರೆಗೆ ಓದಿದರು. ಆದರೆ, ನನ್ನ ಓದಿಗೆ ಯಾವ ತೊಂದರೆಯೂ ಆಗಲಿಲ್ಲ. ಅವರಿಗೆ ಶಿಕ್ಷಣದ ಮಹತ್ವ ಗೊತ್ತಿದ್ದರಿಂದ ನಾನು ಪದವಿ ಪೂರೈಸಲು ಸುಲಭ ಸಾಧ್ಯವಾಯಿತು.

ವೈದ್ಯ ಕೋರ್ಸ್ ಅಧ್ಯಯನದ ಅವಕಾಶವೂ ಸಿಕ್ಕಿತು. ಹೀಗೆ ನಮ್ಮ ಕುಟುಂಬದಲ್ಲಿ ಪದವೀಧರನೊಬ್ಬ ತಯಾರಾಗಲು ಬರೋಬ್ಬರಿ ಮೂರು ತಲೆಮಾರುಗಳು ಬೇಕಾದವು’ ಎಂದು ಅವರು ಹೇಳುತ್ತಾರೆ. ‘ದಲಿತ ಸಮುದಾಯದ ಹಲವು ಪೀಳಿಗೆಗಳನ್ನು ಅಕ್ಷರದಿಂದ ದೂರವಿಟ್ಟ ನಮ್ಮ ಸಮಾಜ ಅದೆಂತಹ ಅನಾಹುತ ಮಾಡಿದೆ ಎಂಬ ಸಂಗತಿಗಳ ಮೇಲೆ ಇಂತಹ ಪ್ರಕರಣಗಳು ಬೆಳಕು ಚೆಲ್ಲುತ್ತವೆ’ ಎಂದು ಶ್ರೀಧರ್ ಹೇಳುತ್ತಾರೆ.

‘ಅಭಿಯಾನದಿಂದ ಯುವಕರನ್ನು ಯಾವ ರೀತಿ ಅರ್ಥೈಸಿಕೊಳ್ಳಲು ಸಾಧ್ಯವಾಗಿದೆ’ ಎಂಬ ಪ್ರಶ್ನೆಗೆ ‘ಯುವಪೀಳಿಗೆ ಕೆಟ್ಟಿಲ್ಲ. ಅವರಲ್ಲೂ ಗ್ರಹಿಕೆ–ಸ್ಪಂದನೆ ಅಪಾರವಾಗಿದೆ. ಆಧುನಿಕ ಅವತಾರ ಅವರ ಅಂತರಂಗ ಮುಚ್ಚಿದೆಯಷ್ಟೆ. ಸಮಾಜವಾದದ ತೊರೆ ಕ್ಯಾಂಪಸ್ಸುಗಳಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಯಾವುದೇ ಸಿದ್ಧಾಂತವನ್ನು ಕುರುಡಾಗಿ ಒಪ್ಪಿಕೊಳ್ಳದೆ ಸ್ವತಂತ್ರವಾಗಿ ವಿಶ್ಲೇಷಿಸುವ, ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುವ ಮನೋಭಾವ ಅವರಲ್ಲಿ ಬೆಳೆಯಬೇಕಿದೆ’ ಎಂದು ಶಿವಸುಂದರ್ ಉತ್ತರಿಸುತ್ತಾರೆ.

‘ಅಂಬೇಡ್ಕರ್ ಅವರು ವೈಚಾರಿಕ ಎಚ್ಚರವಾಗಿ ಮತ್ತು ಪ್ರತಿಮೆಯಾಗಿ ಜನರನ್ನು ಮುಟ್ಟಿದ್ದಾರೆ. ಅವರು ಬರೆದ ಪುಸ್ತಕಗಳನ್ನು ಓದಿದ ಬಳಿಕ ಅನೇಕಾನೇಕರಿಗೆ ಅಸ್ಪೃಶ್ಯತೆ ಹಾಗೂ ತಾರತಮ್ಯದ ಅರಿವಾಗಿದೆ. ಅಂಬೇಡ್ಕರ್ ಪುಸ್ತಕಗಳ ಅಧ್ಯಯನ ಎಂದರೆ ಅದು ಸಮಾಜದ ಪೊರೆ ಕಳಚಿದಂತೆ, ಹೊಸ ಮನುಷ್ಯರಾದಂತೆ ಎನ್ನುತ್ತಾರೆ ದೇವನೂರ ಮಹಾದೇವ. ಅಂತಹ ಪೊರೆ ಕಳಚಿಸುವ ಕೆಲಸವನ್ನು ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವ ನೀತಿಯ ಅಧ್ಯಯನ ಕೇಂದ್ರ ಅರ್ಥಪೂರ್ಣವಾಗಿ ಮಾಡಿದೆ.

ಅಭಿಯಾನದಲ್ಲಿ ಪದೇ ಪದೇ ಕೇಳಲಾದ ಪ್ರಶ್ನೆಗಳು

* ಮೇಲ್ಜಾತಿಗಳಲ್ಲಿ ಬಡವರಿಲ್ಲವೆ? ದಲಿತರಿಗಷ್ಟೇ ಉದ್ಯೋಗಗಳಲ್ಲಿ ಮೀಸಲಾತಿ ಏಕೆ?

* ದೇಶದಲ್ಲಿ ಅಸ್ತಿತ್ವದಲ್ಲಿರುವುದು ಅಂಬೇಡ್ಕರ್ ಅವರೇ ಬರೆದ ಸಂವಿಧಾನವಲ್ಲವೆ? ನಾವು ಕಾಣುತ್ತಿರುವ ಅಸಮಾನತೆಗೆ
ಅವರೂ ಹೊಣೆಯಲ್ಲವೆ?

* ದೇಶದ ಇತರ ಮಹಾನ್ ನಾಯಕರನ್ನು ಬಿಟ್ಟು ಅಂಬೇಡ್ಕರ್ ಅವರ ಕುರಿತೇ ಚರ್ಚೆ ಏಕೆ?

* ಕೇವಲ ನಿಮ್ನ ವರ್ಗಗಳಿಗೆ ಹೋರಾಟ ನಡೆಸಿರುವ ಅವರನ್ನು ಇಡೀ ಸಮಾಜದ ನಾಯಕ ಎನ್ನಲು ಹೇಗೆ ಸಾಧ್ಯ?

* ಅಂಬೇಡ್ಕರ್ ಅವರ ಬಯಕೆಯಂತೆ ಈಗ ಅಸ್ಪೃಶ್ಯತೆ ರದ್ದಾಗಿದೆಯಲ್ಲ? ಇನ್ನು ಜಾತಿ ವಿನಾಶದ ಮಾತೇಕೆ?

* ಅಂಬೇಡ್ಕರ್ ಹಿಂದೂ ಧರ್ಮ ತೊರೆದದ್ದು ತಪ್ಪಲ್ಲವೇ? ಬೌದ್ಧ ಧರ್ಮದಲ್ಲಿ ಎಲ್ಲಕ್ಕೂ ಉತ್ತರಗಳಿವೆಯೆ? ಅಲ್ಲಿ
ಅಸಮಾನತೆ–ತಾರತಮ್ಯ ಇಲ್ಲವೆ?

* ಅಂಬೇಡ್ಕರ್ ಅವರು ಇಸ್ಲಾಂ ಧರ್ಮಕ್ಕೆ ಏಕೆ ಮತಾಂತರ ಆಗಲಿಲ್ಲ?

* ಐದು ಬೆರಳುಗಳು ಒಂದೇ ಸಮನಾಗಿರಲ್ಲ, ಇರಲೂಬಾರದು. ಒಬ್ಬೊಬ್ಬರಿಗೆ ಒಂದೊಂದು ಸಾಧ್ಯ. ಇದನ್ನು ಅಸಮಾನತೆ ಎನ್ನಬಹುದೆ?

* ದೇಶದಲ್ಲಿ ಪ್ರಜಾತಂತ್ರ ಹೆಚ್ಚಾಗಿರುವುದೇ ಸಮಸ್ಯೆಯಲ್ಲವೆ?
ಈ ಪ್ರಶ್ನೆಗಳಿಗೆ ‘ಪ್ರವೇಶಿಕೆ’ ಪುಸ್ತಕದಲ್ಲಿ ಉತ್ತರಗಳಿವೆ

ಮತ್ತೆ ಅಭಿಯಾನ
ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವ ನೀತಿಯ ಅಧ್ಯಯನ ಕೇಂದ್ರ ಆರಂಭಿಸಿರುವ ಈ ಅಭಿಯಾನದ ಮೊದಲ ಹಂತ ಮಾ. 31ರಂದು ಕೊನೆಗೊಳ್ಳಲಿದೆ. ಆದರೆ, ರಾಜ್ಯದ ಮೂಲೆ–ಮೂಲೆಗಳಿಂದ ಈ ಕಾರ್ಯಕ್ರಮ ನಡೆಸಲು ಬೇಡಿಕೆ ಬರುತ್ತಲೇ ಇದೆ. ಹೀಗಾಗಿ ಎಷ್ಟೋ ಕಡೆ ನಿಗದಿತ ಕಾರ್ಯಕ್ರಮದ ಪಟ್ಟಿಯನ್ನೂ ಮೀರಿ ಅಭಿಯಾನ ಸಂಘಟಿಸಲಾಗುತ್ತಿದೆ. ಹಲವು ಕಾಲೇಜುಗಳಿಗೆ ಸಂವಾದ ಏರ್ಪಡಿಸಲು ಅಗತ್ಯವಾದ ಸಹಕಾರ ನೀಡಲಾಗುತ್ತಿದೆ.

ವಿದ್ಯಾರ್ಥಿಗಳು ಎಷ್ಟರಮಟ್ಟಿಗೆ ಅಂಬೇಡ್ಕರ್ ಅವರನ್ನು ಅರಗಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯಲು ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಲು ನಿರ್ಧರಿಸಲಾಗಿದೆ. ಹೆಚ್ಚಿನ ಆಸಕ್ತಿ ಇರುವವರಿಗೆ ವಿಭಾಗ ಮಟ್ಟದಲ್ಲಿ ಕಾರ್ಯಾಗಾರ ನಡೆಸುವ ಆಲೋಚನೆ ಇದೆ ಎಂದು ಜಾಫೆಟ್ ಹೇಳುತ್ತಾರೆ.

‘ಅಭಿಯಾನದ ಖರ್ಚಿಗೆ ಹಣ ಹೊಂದಿಸಿದ್ದು ಹೇಗೆ’ ಎಂದು ಕೇಳಿದರೆ, ‘ರಾಜ್ಯ ಸರ್ಕಾರ ಪ್ರತಿಯೊಂದೂ ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ ₹ 50 ಲಕ್ಷ ಅನುದಾನ ನೀಡಿತ್ತು. ಜಾತಿಗಳ ಅಧ್ಯಯನಕ್ಕಾಗಿ ಅದರಲ್ಲಿ ಸ್ವಲ್ಪ ಮೊತ್ತ ಖರ್ಚಾಗಿತ್ತು. ಮಿಕ್ಕ ಹಣವನ್ನೂ ಅರ್ಥಪೂರ್ಣವಾಗಿ ವ್ಯಯಿಸಬೇಕು ಎಂಬ ಯೋಚನೆ ಬಂದಾಗ ಮೊಳಕೆ ಒಡೆದದ್ದು ಅಭಿಯಾನದ ವಿಚಾರ.

ಸುಮ್ಮನೆ ಭಾಷಣ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಯುವಕರನ್ನು ಚಿಂತನೆಗೆ ಹಚ್ಚಬೇಕು ಎಂಬ ಉದ್ದೇಶದಿಂದ ‘ಪ್ರವೇಶಿಕೆ’ ಪುಸ್ತಕ ಸಿದ್ಧಪಡಿಸಿ, ಐದು ರೂಪಾಯಿ ಸಾಂಕೇತಿಕ ದರದಲ್ಲಿ ಹಂಚಲು ನಿರ್ಧರಿಸಿದೆವು. ಪ್ರಿಂಟ್ ಹಾಕಿಸಿದ 15 ಸಾವಿರ ಪ್ರತಿಗಳು ನೋಡನೋಡುತ್ತಿದ್ದಂತೆ ಖಾಲಿಯಾದವು. ಮರು ಮುದ್ರಣಕ್ಕೆ ಬೇಡಿಕೆ ಹೆಚ್ಚಾಗಿದೆ’ ಎಂದು ವಿವರಿಸುತ್ತಾರೆ.

‘ಜಾತಿ ವಿನಾಶ’ ಕೃತಿಯನ್ನೂ ಮುದ್ರಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳ ಅಂಬೇಡ್ಕರ್ ಓದಿನ ಹಸಿವು ತಣಿಸುವುದು ನಮ್ಮ ಗುರಿಯಾಗಿದೆ ಎನ್ನುತ್ತಾರೆ ಅವರು. ಅಭಿಯಾನದ ಪೂರ್ವತಯಾರಿ ಎಷ್ಟೊಂದು ಅಚ್ಚುಕಟ್ಟು ಎಂದರೆ ಕಾರ್ಯಕ್ರಮ ನಡೆಯುವ ಕಾಲೇಜಿಗೆ ಸಿದ್ಧ ಪರಿಕರಗಳೊಂದಿಗೆ ಈ ತಂಡ ಹೋಗುತ್ತದೆ. ಪ್ರಾಚಾರ್ಯರು ಹಾಗೂ ಅಧ್ಯಾಪಕರ ಜತೆ ಚರ್ಚೆ ನಡೆಸಿ, ಪ್ರತಿಕ್ರಿಯೆ ದಾಖಲಿಸುತ್ತದೆ.

ಕಾರ್ಯಕ್ರಮದಲ್ಲಿ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಒಂದಿಷ್ಟು ಮಾರ್ಪಾಡು ಮಾಡಿಕೊಳ್ಳಲು ಮುಕ್ತ ಅವಕಾಶವಿದೆ. ಕಾರ್ಯಕ್ರಮದ ದಿನ ವ್ಯತಿರಿಕ್ತ ಪ್ರತಿಕ್ರಿಯೆಗಳಿಗೆ ಮೊದಲ ಆದ್ಯತೆ. ಸಂಶಯಗಳು ಮೊದಲು ನಿವಾರಣೆ ಆಗಬೇಕು ಎನ್ನುವುದು ಸಂಘಟಕರ ಅಭಿಲಾಷೆ. ಕಾರ್ಯಕ್ರಮ ಮುಗಿದ ಬಳಿಕ ಎಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು, ಆಸಕ್ತಿ ಎಷ್ಟು ಜನರಿಗಿತ್ತು, ಯಾವ ವಿಷಯಗಳು ಹೆಚ್ಚಾಗಿ ಚರ್ಚೆಗೆ ಒಳಗಾದವು, ಪ್ರಶ್ನೋತ್ತರ ಎಷ್ಟು ಸಮಯ ನಡೆಯಿತು, ಗುಣಮಟ್ಟ ಹೇಗಿತ್ತು ಎಂಬಿತ್ಯಾದಿ ವಿವರಗಳನ್ನು ಪಡೆಯಲಾಗುತ್ತದೆ.

ಸಾಮಾಜಿಕ ಜಾಲತಾಣಗಳಲ್ಲೂ ಅಭಿಯಾನ ಸದ್ದು ಮಾಡಿದೆ. ಹಲವು ಉಪನ್ಯಾಸಗಳು ಯೂಟ್ಯೂಬ್‌ನಲ್ಲಿ ಲಭ್ಯವಿವೆ. ಸಾವಿರಾರು ವಿದ್ಯಾರ್ಥಿಗಳು ಈ ಭಾಷಣಗಳನ್ನು ಕೇಳಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಅಂಬೇಡ್ಕರ್ ಅಧ್ಯಯನ ಕೇಂದ್ರಗಳಿಂದ ಅಭಿಯಾನದ ರೂಪು–ರೇಷೆ ಕುರಿತು ಮಾಹಿತಿ ಪಡೆಯಲಾಗಿದೆ. ಬೇರೆ ರಾಜ್ಯಗಳ ಕೆಲವು ವಿಶ್ವವಿದ್ಯಾಲಯಗಳು ‘ಪ್ರವೇಶಿಕೆ’ ಪುಸ್ತಕದ ಅನುವಾದಕ್ಕಾಗಿ ದುಂಬಾಲು ಬಿದ್ದಿವೆ. ‘ನಮ್ಮ ಅನುಭವವನ್ನು ಎಲ್ಲರೊಂದಿಗೂ ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ’ ಎಂದು ಪ್ರದೀಪ್ ಹೇಳುತ್ತಾರೆ.

ಅಂಬೇಡ್ಕರ್ ಚಿಂತನೆಯನ್ನು ಯುವ ಸಮುದಾಯದತ್ತ ಒಯ್ದು ಚರ್ಚೆಯ ಹರವನ್ನು ವಿಸ್ತರಿಸಲು ಇಂತಹ ಇನ್ನಷ್ಟು ಕಾರ್ಯಕ್ರಮ ಹಾಕಿಕೊಳ್ಳುವ ಯೋಚನೆ ಇದೆ ಎಂದು ಜಾಫೆಟ್ ಅವರು ತಮ್ಮ ಕನಸು ಹಂಚಿಕೊಳ್ಳುತ್ತಾರೆ.

ಎಡಪಂಥೀಯ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ ನಾನು ಅಂಬೇಡ್ಕರ್ ಅವರನ್ನು ಗಂಭೀರವಾಗಿ ಓದಲು ಆರಂಭಿಸಿದ್ದು ಕಳೆದ ಎರಡು ವರ್ಷಗಳಿಂದ. ಈ ಅಭಿಯಾನ ಆರಂಭವಾದ ಮೇಲೆ ನಾನು ಹಲವಾರು ಊರುಗಳಿಗೆ ಹೋಗಿ ಮಾತನಾಡಿದ್ದೇನೆ. ಯುವಕರಿಗೆ ಅಂಬೇಡ್ಕರ್ ಅವರ ವಿಚಾರ ತಿಳಿಸಲು ನಾವು ಎಷ್ಟು ಹಿಂದೆ ಬಿದ್ದಿದ್ದೆವು ಎನ್ನುವುದು ಅರ್ಥವಾಗಿದೆ. ಅಭಿಯಾನ ಇನ್ನಷ್ಟು ದಿನ ಮುಂದುವರೆಯಬೇಕು. ವಿದ್ಯಾರ್ಥಿಗಳಿಗೆ 2–3 ದಿನದ ಕಾರ್ಯಾಗಾರ ಮಾಡಬೇಕು.
–ಚಾರ್ವಾಕ ರಾಘು, ಸಾಗರ

ಸಂವಿಧಾನದ ರೂವಾರಿ ಎಂಬುದರಾಚೆಗೆ ಅಂಬೇಡ್ಕರ್ ಅವರ ಚಿಂತನೆಗಳ ಕುರಿತು ವಿದ್ಯಾರ್ಥಿ ಸಮುದಾಯಕ್ಕೆ ಹೆಚ್ಚೇನು ತಿಳಿದಿರಲಿಲ್ಲ. ಅವರ ವಿಚಾರಧಾರೆಗಳ ಪ್ರಸ್ತುತತೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಕಾರ್ಯಾಗಾರ ಏರ್ಪಡಿಸಿರುವುದು ಸಕಾಲಿಕವಾಗಿದೆ. ಪ್ರಜಾಸತ್ತೆಯನ್ನು ಬಲಪಡಿಸಲು ಇಂತಹ ಯತ್ನಗಳು ಸಹಕಾರಿಯಾಗಿವೆ.
–ಎಂ.ಕೆ. ಮಾಧವಿ, ಮಂಡ್ಯ

ಅಂಬೇಡ್ಕರ್ ಅವರ ವಿಚಾರಗಳನ್ನು ಯುವ ಜನತೆಗೆ ತಲುಪಿಸಲು ಇಂತಹ ಅಭಿಯಾನಗಳು ಅಗತ್ಯ. ವಿದ್ಯಾರ್ಥಿಗಳು ಭಿನ್ನವಾಗಿ ಯೋಚಿಸುವಂತೆ ಅಭಿಯಾನ ಪ್ರೇರೇಪಿಸಿದೆ. ಅಂಬೇಡ್ಕರ್ ಅವರು ‘ಪ್ರಾಚೀನ ಭಾರತದಲ್ಲಿ ಕ್ರಾಂತಿ–ಪ್ರತಿಕ್ರಾಂತಿ’ ಕೃತಿಯಲ್ಲಿ ಜಾತಿಯನ್ನು ಹೇಗೆ ಚಕ್ರವ್ಯೂಹವಾಗಿ ರೂಪಿಸಲಾಯಿತು ಎಂಬುದನ್ನು ಮನದಟ್ಟು ಮಾಡಿ ಕೊಟ್ಟಿದ್ದಾರೆ. ಅವರ ಸಾಹಿತ್ಯದ ಅವಲೋಕನ ವಿದ್ಯಾರ್ಥಿಗಳಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
– ಡಾ.ಕೆ.ಪ್ರಭಾಕರ್, ಶಿವಮೊಗ್ಗ

ಅಂಬೇಡ್ಕರ್ ಅವರಂತಹ ಧೀಮಂತ ವ್ಯಕ್ತಿಯನ್ನು ನಾವು ಇದುವರೆಗೆ ದಲಿತ ವರ್ಗಕ್ಕೆ ಸೀಮಿತಗೊಳಿಸಿ ಬಿಟ್ಟಿದ್ದೆವಲ್ಲ! ಮಹಿಳೆಯರ ಚಿಂತಾಜನಕ ಪರಿಸ್ಥಿತಿ ಅರಿತು, ಅದರಿಂದ ಬಿಡುಗಡೆ ಕೊಡಿಸಲು ಸಹ ಅವರು ಯತ್ನಿಸಿದ್ದರು. ಅವರ ಸಾಹಿತ್ಯ ನಮ್ಮ ಆಲೋಚನೆಗೆ ಹೊಸ ದಿಕ್ಕು ನೀಡಿದೆ.
– ಎಚ್.ಎಸ್.ಪೂಜಾ, ಮಂಡ್ಯ

ಮೀಸಲಾತಿ ಕುರಿತಂತೆ ನಮ್ಮಲ್ಲಿದ್ದ ಪೂರ್ವಗ್ರಹಗಳೆಲ್ಲ ದೂರವಾಗಿವೆ. ಅಂಬೇಡ್ಕರ್ ಅವರ ಸಾಹಿತ್ಯವನ್ನು ಇನ್ನಷ್ಟು–ಮತ್ತಷ್ಟು ಓದುವ ಹಂಬಲ ಉಂಟಾಗಿದೆ.
–ಎಂ.ಹನುಮಂತ, ಹೊಸಪೇಟೆ

ಅಂಬೇಡ್ಕರ್ ಅವರ ಕುರಿತು ನಮಗಿದ್ದ ತಪ್ಪು ಕಲ್ಪನೆಗಳನ್ನೆಲ್ಲ ಈ ಅಭಿಯಾನ ಹೋಗಲಾಡಿಸಿದೆ.
ಇಂತಹ ಕಾರ್ಯಕ್ರಮಗಳು ಪ್ರತಿ ಕಾಲೇಜಿನಲ್ಲೂ ನಡೆಯಬೇಕು. ವಿದ್ಯಾರ್ಥಿ ಸಮುದಾಯಕ್ಕೆ ವಸ್ತುನಿಷ್ಠ ಮಾಹಿತಿ ಸಿಗಬೇಕು. ಹೊಸ–ಹೊಸ ಚರ್ಚೆಗಳು ಆರಂಭವಾಗಬೇಕು.
– ಜಯಶ್ರೀ ಬೇರ್ಗಿ, ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.