ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಕಾಡೆಮಿಗಳಲ್ಲಿ ಸರ್ಕಾರದ ಹಸ್ತಕ್ಷೇಪ ನಿಲ್ಲಿಸಿ'

ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಬರಗೂರು ಒತ್ತಾಯ
Last Updated 27 ಮೇ 2013, 11:11 IST
ಅಕ್ಷರ ಗಾತ್ರ

ಧಾರವಾಡ: ಸಾಂಸ್ಕೃತಿಕ ಅಕಾಡೆಮಿಗಳ, ಮಂಡಳಿಗಳ ಮೇಲೆ ಯಾವುದೇ ಸರ್ಕಾರಗಳು ಹಸ್ತಕ್ಷೇಪ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಇದನ್ನು ಸಾಧಿಸಲು ಸಾಹಿತಿಗಳು, ಚಿಂತಕರು ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಬೇಕು ಎಂಬ ಒಕ್ಕೊರಲ ಒತ್ತಾಯ ಭಾನುವಾರ ಇಲ್ಲಿ ನಡೆದ ಎಂಟನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಕೇಳಿ ಬಂತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಚಿಂತಕ ಡಾ.ಬರಗೂರು ರಾಮಚಂದ್ರಪ್ಪ ಅವರು, ಸರ್ಕಾರ ಸಾಂಸ್ಕೃತಿಕ ಸಂಸ್ಥೆಗಳ ಚಟುವಟಿಕೆಗಳಲ್ಲಿ ಹೇಗೆ ಮೂಗು ತೂರಿಸುತ್ತದೆ ಎಂಬುದನ್ನು ವಿವರವಾಗಿ ಬಿಡಿಸಿಟ್ಟರು. ಅದರ ಮುಂದುವರಿದ ಭಾಗವನ್ನು ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಪೂರ್ಣಗೊಳಿಸಿದರು.

`ಅಧಿಕಾರಕ್ಕೆ ಬಂದ ಯಾವುದೇ ಪಕ್ಷದ ಸರ್ಕಾರ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದಿಲ್ಲ. ಇದು ಗೊತ್ತಿದ್ದೇ ಬೇಕೆಂತಲೇ ಸಾಂಸ್ಕೃತಿಕ ಅಕಾಡೆಮಿಗಳ ಕಾರ್ಯಚಟುವಟಿಕೆ ಗಳಲ್ಲಿ ಮೂಗು ತೂರಿಸುತ್ತದೆ. ವಿವಿಧ ಅಕಾಡೆಮಿಗಳು ಕ್ರಿಯಾ ಯೋಜನೆ ರೂಪಿಸಿ ಅದರ ಅನುಮೋದನೆ ಪಡೆದ ಬಳಿಕವಷ್ಟೇ ಜಾರಿಗೆ ತರಬೇಕು. ಈ ನಿರ್ಧಾರವನ್ನು ಪಾಲಿಸಲೇಬೇಕು ಎಂದು ಸರ್ಕಾರ ಹುಕುಂ ಹೊರಡಿಸಿತು. ಮುಂದೊಂದು ದಿನ ತಾನು ಸೂಚಿಸಿದವರಿಗೇ ಪ್ರಶಸ್ತಿ ನೀಡಬೇಕು ಎನ್ನುತ್ತದೆ. ಹಾಗಿದ್ದ ಮೇಲೆ ತಾನೇ ರಚಿಸಿದ ತಜ್ಞರ ಸಮಿತಿಯ ನಿರ್ಧಾರವನ್ನು ಧಿಕ್ಕಿರಿಸಿದಂತಲ್ಲವೇ' ಎಂದು ಡಾ.ಬರಗೂರು ಪ್ರಶ್ನಿಸಿದರು.

`ಇದ್ದುದರಲ್ಲಿ ಸಾಹಿತಿಗಳಿಗೆ ಅಲ್ಪಸ್ವಲ್ಪ ಮರ್ಯಾದೆ ಇದೆ. ಸಾಹಿತಿಗಳ ಬಗ್ಗೆ ಜನರಲ್ಲಿ ಗೌರವ ಇರುತ್ತದೆ. ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಜದ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಬೇಕಾದ ಅಗತ್ಯವಿದೆ' ಎಂದರು.

`ಮಾಧ್ಯಮ'ಗಳು ಇಂದು `ಉದ್ಯಮ'ಗಳಾಗಿ ಬದಲಾಗಿವೆ. ಪತ್ರಿಕಾ ಮಾಧ್ಯಮ, ಪುಸ್ತಕ ಮಾಧ್ಯಮಗಳೆಲ್ಲ ಇಂದು ಉದ್ಯಮಿಗಳು. ಪುಸ್ತಕ ಮಾಧ್ಯಮವಾದ ಸಂದರ್ಭದಲ್ಲಿ ಮೌಲಿಕ ಕೃತಿಗಳು ಪ್ರಕಟವಾಗುತ್ತಿದ್ದವು. ಆದರೆ ಪ್ರತಿಯೊಂದನ್ನೂ ಸರಕು ಎಂದು ಭಾವಿಸಲಾಗುತ್ತಿರುವ ಜಾಗತೀಕರಣದ ಈ ದಿನಗಳಲ್ಲಿ `ಜೀವಿಸುವುದು ಹೇಗೆ', `ಊಟ ಮಾಡುವುದು `ಹೇಗೆ ಎಂಬಂತಹ ಕೃತಿಗಳೂ ಪ್ರಕಟವಾಗಿ ಮಾರಾಟವೂ ಆಗುತ್ತಿವೆ ಎಂದು ವಿಷಾದಿಸಿದರು.

ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ, `ವಿವಿಧ ಅಕಾಡೆಮಿ ಅಧ್ಯಕ್ಷರ ಅವಧಿಯು ಈ ಮುಂಚೆ ಮೂರು ವರ್ಷಗಳದ್ದಾಗಿತ್ತು. ಆದರೆ ಚಂದ್ರಹಾಸ ಗುಪ್ತಾ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಸಮಯದಲ್ಲಿ ಅಧ್ಯಕ್ಷರ ನೇಮಕ ಪತ್ರದಲ್ಲಿ `ಅಧಿಕಾರವಧಿ ಮೂರು ವರ್ಷ, ಇಲ್ಲವೇ ಸರ್ಕಾರದ ಮುಂದಿನ ಆದೇಶದವರೆಗೆ' ಎಂಬ ಸಾಲನ್ನು ಸೇರಿಸಿದರು. ಒಬ್ಬ ಅಧಿಕಾರಿ ಮಾಡಿದ ನಿರ್ಧಾರವೇ ಇನ್ನೂ ಚಾಲ್ತಿಯಲ್ಲಿದೆ. ಇದನ್ನು ವಾಪಸ್ ಪಡೆಯಬೇಕು ಎಂದು ನಾನು ಆ ಅಧಿಕಾರಿಯೊಂದಿಗೆ ಜಗಳವಾಡಿದ್ದೆ. ಆದರೆ ಅದಿನ್ನೂ ಹಾಗೆಯೇ ಉಳಿದಿದೆ' ಎಂದರು.

`ವಿಶ್ವವಿದ್ಯಾಲಯಗಳ ಸ್ವಾಯತ್ತತೆ, ಅಸ್ತಿತ್ವಕ್ಕೆ ಧಕ್ಕೆ ಬಂದ ಸಂದರ್ಭದಲ್ಲಿ ಧ್ವನಿ ಎತ್ತಬೇಕು ಎಂದು ಧಾರವಾಡದ ಸಾಹಿತಿಗಳಿಗೆ ಮನವಿ ಮಾಡಿದ್ದೆ. ಆದರೆ ಅವರಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ' ಎಂದು ಕರ್ನಾಟಕ ವಿ.ವಿ. ಕುಲಪತಿ ಡಾ.ಎಚ್.ಬಿ.ವಾಲೀಕಾರ ವಿಷಾದಿಸಿದರು. 

ಕಾರ್ಯಕ್ರಮದಲ್ಲಿ ಸಮ್ಮೇಳನದ ಅಧ್ಯಕ್ಷೆ ಡಾ.ಸರೋಜಿನಿ ಶಿಂತ್ರಿ ಅವರನ್ನು ಸನ್ಮಾನಿಸಲಾಯಿತು.  ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಇತರರು ಮಾತನಾಡಿದರು. ಸಾಹಿತಿ ಮೋಹನ ನಾಗಮ್ಮನವರ ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT