ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಹೃದಯಾಘಾತ

Last Updated 24 ಜೂನ್ 2016, 19:30 IST
ಅಕ್ಷರ ಗಾತ್ರ

ಸಣ್ಣ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ದಕ್ಷಿಣ ಭಾರತದಲ್ಲಿ 10 ವರ್ಷದ ಹಿಂದೆ ಹೃದಯಾಘಾತವಾಗುವ ಸರಾಸರಿ ವಯಸ್ಸು 56 ಇತ್ತು. ಇದೀಗ ಅದು 38ಕ್ಕೆ ಇಳಿದಿದೆ. ಇದಕ್ಕೆ ಕಾರಣಗಳು ಏನು ಎಂಬ ಬಗ್ಗೆ ಒಂದು ವಿಶ್ಲೇಷಣೆ ಇಲ್ಲಿದೆ.

‘ಕಾರು ಓಡಿಸುತ್ತಿದ್ದ ಚಾಲಕನಿಗೆ ಹೃದಯಾಘಾತ. ಆತನ ವಯಸ್ಸು ಕೇವಲ 21’ ಎಂಬ ಸುದ್ದಿಯೊಂದು ಇತ್ತೀಚೆಗೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯವಿತ್ತು. ಅದೆಂದರೆ ಚಾಲಕ ಆರು ತಿಂಗಳಿನಿಂದ ಎದೆನೋವಿನಿಂದ ಬಳಲುತ್ತಿದ್ದರು ಎಂದು  ಅವರ ಕುಟುಂಬವೇ ತಿಳಿಸಿತ್ತು.

ಚಾರಣಕ್ಕೆ ಹೊರಟಿದ್ದ ಯುವ ಪತ್ರಕರ್ತರೊಬ್ಬರು ತೀವ್ರ  ಹೃದಯಾಘಾತದಿಂದ ಮೃತಪಟ್ಟ ವರದಿ ಕೆಲವು ತಿಂಗಳ ಹಿಂದೆ ಬಂದಿತ್ತು. ಆ ಯುವಕನ ವಯಸ್ಸು ಕೇವಲ 27. ಹೀಗೆ  ಸಣ್ಣ  ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. 

ಹೃದಯಾಘಾತಕ್ಕೆ ನಿರ್ದಿಷ್ಟ ಕಾರಣಗಳನ್ನು ವೈದ್ಯಕೀಯ ವಿಜ್ಞಾನ ನೀಡುತ್ತದೆಯಾದರೂ ಇತ್ತೀಚಿನ ದಿನಗಳಲ್ಲಿ ಇಂತಹುದೇ ಕಾರಣಕ್ಕೆ ಆಗಿದೆ  ಎಂಬುದನ್ನು ಪತ್ತೆಹಚ್ಚುವುದೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ವೈದ್ಯರು.

ಅಕಾಲಿಕ ಹೃದಯಾಘಾತ ಎಂದಾಗ ಇದಕ್ಕೂ ವಯಸ್ಸು ಇದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಚಿಕ್ಕ ವಯಸ್ಸಿನಲ್ಲಿ ವ್ಯಕ್ತಿಯೊಬ್ಬನಿಗೆ ಹೃದಯಾಘಾತವಾದರೆ  ಆ ಕುಟುಂಬವೇ ಕತ್ತಲೆಗೆ ದೂಡಿದಂತೆ.

ಈ ನಿಟ್ಟಿನಲ್ಲಿ ಹೃದಯಾಘಾತದ ಕಾರಣಗಳು? ಅದರಿಂದ ಪಾರಾಗುವ ಬಗೆ? ಇತ್ತೀಚಿನ ವೈದ್ಯ ವಿಜ್ಞಾನದ ಬೆಳವಣಿಗೆಗಳ ಕುರಿತು ಬೆಂಗಳೂರಿನ ಮಾರತ್ತಹಳ್ಳಿಯ ಸಾಕ್ರ ವರ್ಲ್ಡ್‌ ಹಾಸ್ಪಿಟಲ್‌ನಲ್ಲಿ ಹೃದಯ ಶಸ್ತ್ರ ಚಿಕಿತ್ಸಕರಾಗಿರುವ ಡಾ. ಆದಿಲ್‌ ಸಾದಿಕ್‌ ಅವರು ಇಲ್ಲಿ ತಮ್ಮ ವಿಚಾರವನ್ನು ಹಂಚಿಕೊಂಡಿದ್ದಾರೆ.

‘ಇಲ್ಲಿ ಎರಡು ರೀತಿಯ ವಯಸ್ಸನ್ನು ನಾವು ವಿಂಗಡಿಸಬಹುದು. ಒಂದು ಬಾಲ್ಯಾವಸ್ಥೆಯಲ್ಲೇ ಹೃದಯಾಘಾತ. ಇವರ ವಯಸ್ಸು 20ಕ್ಕಿಂತ ಕಡಿಮೆ ಇರುತ್ತದೆ. ಮತ್ತೊಂದು 20 ವರ್ಷಕ್ಕಿಂತ ಹೆಚ್ಚಿನವರಿಗೆ ಹೃದಯಾಘಾತ.

ಇವರಿಗೆ  ಹೃದಯಾಘಾತವಾದಾಗ ರಕ್ತನಾಳಗಳಲ್ಲಿ ಗೊತ್ತಾಗುತ್ತದೆ. ಹೀಗೆ ಆಗುವುದು ಸಾಮಾನ್ಯವಾಗಿ 50 ರಿಂದ 60 ವರ್ಷ ಆದ ಮೇಲೆಯೇ. ಇದಕ್ಕೆ ಪ್ರಮುಖವಾಗಿ ಏಳು ಕಾರಣಗಳನ್ನು ಪಟ್ಟಿ ಮಾಡಬಹುದು.

ಧೂಮಪಾನ, ನಿಯಂತ್ರಣವಿಲ್ಲದ ಮಧುಮೇಹ, ಕೊಲೆಸ್ಟ್ರಾಲ್‌ ಮತ್ತು ಕುಟುಂಬದ ಇತಿಹಾಸ, ಡಯಟ್‌ ಕೊರತೆ, ವ್ಯಾಯಾಮ, ರಕ್ತದ ಒತ್ತಡ, ಜೀವನಶೈಲಿ ಹೀಗೆ.

ಈ ಮೊದಲು ಹೃದಯಾಘಾತದ ವಯಸ್ಸು ದಕ್ಷಿಣ ಭಾರತದಲ್ಲಿ ಸರಾಸರಿ 56 ವರ್ಷವಿತ್ತು. ಆದರೆ ಇದು ಈಗ ಕಡಿಮೆಯಾಗಿದೆ. 10 ವರ್ಷದ ಹಿಂದೆ ಇದು 56 ರಿಂದ 48 ಆಯಿತು. ಈಗ 38 ವರ್ಷಕ್ಕೆ ಇಳಿದಿದೆ. ಹೀಗೆ ಕಡಿಮೆ ಆಗಲು ಮೊದಲೇ ಹೇಳಿದ ಕಾರಣಗಳಲ್ಲದೆ ಇನ್ನೂ ಕೆಲವು ಇರಬಹುದು.

ಇಂದು ಜನರ ಆಹಾರಪದ್ಧತಿ ಬದಲಾಗಿದೆ. ಕೆಲಸದ ರೀತಿ ಬದಲಾಗಿದೆ. ಸಾಮಾನ್ಯವಾಗಿ ಸೋಮವಾರದಿಂದ ಶುಕ್ರವಾರದವರೆಗೆ ಹೆಚ್ಚು ಕೆಲಸ ಮಾಡುತ್ತಾರೆ.

ಇನ್ನು ಉಳಿದ ಎರಡು ದಿನ ಏನೂ ಮಾಡದೆ ಸೋಮಾರಿಗಳಾಗಿ ಇದ್ದು ಬಿಡುತ್ತಾರೆ. ಶನಿವಾರ ಅಂತೂ ಮದ್ಯಪಾನ, ಪಾರ್ಟಿ ಮಾಡಲೆಂದೇ ಮೀಸಲಿಡುತ್ತಾರೆ. ಇದೆಲ್ಲ ನಗರದ ಜೀವನಶೈಲಿ. 

ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡುವವರು ‘ಟಾರ್ಗೆಟ್‌’ ಇಟ್ಟುಕೊಂಡು ಇಂತಿಷ್ಟು ದಿನ ಇಷ್ಟೇ ಕೆಲಸ ಮಾಡಬೇಕು ಎಂದು ನಿರ್ಧರಿಸಿ ಕೊಳ್ಳುತ್ತಾರೆ. ಅದಕ್ಕೆಂದೇ ಹೆಚ್ಚಿನ ಅವಧಿ ಕೆಲಸ ಮಾಡಬೇಕಾಗುತ್ತದೆ.

ಆಗ ನಿದ್ರೆ, ಆಹಾರ, ವಿಶ್ರಾಂತಿ ಎಲ್ಲವನ್ನೂ ಮರೆಯುತ್ತಾರೆ. ಇವೆಲ್ಲದರಿಂದ ಒಳ್ಳೆಯ  ಹೃದಯವೂ ತನ್ನ ಶಕ್ತಿ ಕಳೆದುಕೊಳ್ಳುತ್ತ ಬರುತ್ತದೆ. ಅದರಲ್ಲೂ ಬ್ಲಾಕ್ ಆಗಬಹುದು.

ಚಿಕ್ಕವಯಸ್ಸಿನ ಅಂದರೆ 13 ಮತ್ತು 14 ವರ್ಷ ವಯಸ್ಸಿನ ಮಕ್ಕಳಿಗೂ ಹೃದಯಾಘಾತವಾಗಬಹುದೇ ಎಂಬ ಪ್ರಶ್ನೆ ಎಲ್ಲ ದೇಶಗಳ ಹೃದಯತಜ್ಞರನ್ನು  ಕಾಡುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ. ಆಲ್‌ಕಪ (Alcapa) ಎಂಬ ಕಾಯಿಲೆ ಇದೆ.

ಇನ್ನೊಂದು ಕಾಯಿಲೆ ಟಾಕಾಯಾಸು  ಅರ್ಥರೈಟಿಸ್‌ (Takayasu arteritis).  ಅವುಗಳಿಂದಾಗಿ ರೋಗಿಗೆ ಹೃದಯಾಘಾತವಾಗಬಹುದು. ಕೆಲವು ಕುಟುಂಬದ ಸದಸ್ಯರಿಗೆ ಒಂದು ರೀತಿಯ ಫ್ಯಾಟ್‌ನಿಂದಲೂ ಚಿಕ್ಕವಯಸ್ಸಿನಲ್ಲೇ ಹೃದಯಾಘಾತವಾಗಬಹುದು. ಇನ್ನು ಚಿಕ್ಕವಯಸ್ಸಿನವರು ಮಾದಕ ಪದಾರ್ಥಗಳನ್ನು ಬಳಸುತ್ತಾರೆ. ಹೃದಯಾಘಾತಕ್ಕೆ ಇದೂ ಒಂದು ಕಾರಣವಾಗಿದೆ.

ಹೃದಯಘಾತ ಇಷ್ಟು ವಯಸ್ಸಿನವರಿಗೇ ಆಗುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಜನರ ಜೀವನಪದ್ಧತಿ ಬದಲಾಗಿದೆ. ದಕ್ಷಿಣ  ಭಾರತದಲ್ಲಿ ವಂಶ ಪಾರಂಪರ್ಯ ಕಾರಣಗಳು ಹೆಚ್ಚಿವೆ.

ಹೃದಯಾಘಾತವಾಗುವ ಮೊದಲೇ  ಪತ್ತೆ ಹಚ್ಚಲು ಸಾಧ್ಯವಿದೆ. ಮುನ್ನೆಚ್ಚರಿಕೆಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕಷ್ಟೆ. ವರ್ಷಕ್ಕೆ ಒಂದು ಬಾರಿ ರಕ್ತಪರೀಕ್ಷೆ, ಹಿಮೊಗ್ಲೋಬಿನ್‌, ಕಿಡ್ನಿ, ಕೊಲೆಸ್ಟ್ರಾಲ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇಸಿಜಿ, ಎಕೊ, ಟಿಎಂಟಿ – ಹೀಗೆ ಹೃದಯದ ಕಾಯಿಲೆ ಕಂಡುಹಿಡಿಯಲು ನಾನಾ ಪರೀಕ್ಷೆಗಳಿವೆ.  ಶೇ. 80ರಿಂದ 85ರಷ್ಟು ರೋಗವನ್ನು ತಡೆಯಬಹುದು.

ಎಷ್ಟು ವಯಸ್ಸಿನಿಂದ ಈ ಪರೀಕ್ಷೆಗಳನ್ನು ಮಾಡಿಸಬೇಕು ಎಂದು  ಕೆಲವು ರೋಗಿಗಳು ಪ್ರಶ್ನಿಸುತ್ತಾರೆ. ಆಗೆಲ್ಲ ನಾವು ಹೇಳೋದು, ಕುಟುಂಬದಲ್ಲಿ ಯಾರಿಗಾದರೂ ಮಧುಮೇಹ, ಬಿಪಿ ಇದೆಯೇ ಎಂದು. ರೋಗಿಗಳ ಹಿಸ್ಟರಿ ಆಧರಿಸಿ ಮುನ್ನೆಚ್ಚರಿಕೆ ಪರೀಕ್ಷೆಗಳನ್ನು ಮಾಡಲು ತಿಳಿಸುತ್ತೇವೆ.

ಸಾಮಾನ್ಯವಾಗಿ  ಕುಟುಂಬದಲ್ಲಿ ಯಾರಿಗೆ ತೊಂದರೆ ಇಲ್ಲದ ವರು ವರ್ಷಕ್ಕೆ ಒಂದು ಬಾರಿ ಇಲ್ಲವೇ ಎರಡು ವರ್ಷಕ್ಕೆ ಒಂದು ಬಾರಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ವಿದೇಶಗಳಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೋಗಿಗಳಿಗೆ ಬೈಪಾಸ್‌ ಸರ್ಜರಿ ಮಾಡುವುದು ಭಾರಿ ಭಾರಿ ಕಡಿಮೆ. ಆದರೆ ಭಾರತದಲ್ಲಿ ಹೆಚ್ಚು. ಭಾರತದಲ್ಲಂತೂ ಕಡಿಮೆ ವಯಸ್ಸಿನವರಿಗೆ ಬೈಪಾಸ್‌ ಸರ್ಜರಿ ಮಾಡಲೇಬೇಕಾದ ಅನಿವಾರ್ಯತೆ ಇದೆ.

ದಪ್ಪಗಿದ್ದವರಿಗೆ ಮಾತ್ರ ಆಗಲ್ಲ: ದಪ್ಪಗಿರುವವರಿಗೆ ಮಾತ್ರವೇ ಹೃದಯಾಘಾತ ವಾಗುತ್ತದೆ ಎಂದು ಹೇಳಲು ಆಗದು; ಕೃಶಕಾಯ ದವರಿಗೂ ಆಗಬಹುದು. ಆದರೆ ಕಾರಣಗಳು ಮಾತ್ರ ಬೇರೆ ಬೇರೆ.

ಹೃದಯಾಘಾತದ ನಂತರ ಯಾವ ಮುನ್ನೆಚ್ಚರಿಕೆ: ಯಾವ ಕಾರಣಕ್ಕೆ ಹೃದಯಾಘಾತವಾಗಿದೆ ಎಂದು ತಿಳಿಯಲು ಆ್ಯಂಜಿಯೊಗ್ರಾಂ ಮಾಡಬೇಕು. ಆಘಾತದ ಪ್ರಮಾಣ ತಿಳಿಯಬೇಕು.

ಸಾಮಾನ್ಯ ಹೃದಯ ಶೇ. 60ರಷ್ಟು ಕಾರ್ಯನಿರ್ವಹಿಸುತ್ತದೆ. ರೋಗಪೀಡಿತವಾದ ಶೇ. 40 ಇಲ್ಲವೇ 30ಕ್ಕೆ ಕುಸಿಯಬಹುದು. ಹೃದಯದ ಸ್ನಾಯು ಒಮ್ಮೆ ಬಲ ಕಳೆದುಕೊಂಡರೆ ಮತ್ತೆ ಶಕ್ತಿ ಪಡೆಯುವುದಿಲ್ಲ, ಅದಕ್ಕೆ ಔಷಧ ಮಾತ್ರ ನೀಡಬಹುದು. ಮತ್ತೊಮ್ಮೆ ಆಘಾತವಾಗದಂತೆ ತಡೆಯಬೇಕು.

ಕೊಲೆಸ್ಟ್ರಾಲ್‌ ಕೊಡುಗೆ: ಹೃದಯಾಘಾತಕ್ಕೆ ಕೊಲೆಸ್ಟ್ರಾಲ್‌ ಕೊಡುಗೆ  ಇಷ್ಟೇ ಎಂದು ಹೇಳಲು ಸದ್ಯಕ್ಕೆ ವೈದ್ಯವಿಜ್ಞಾನ ಶಕ್ತಿ ಹೊಂದಿಲ್ಲ.  ಕೊಲೆಸ್ಟ್ರಾಲ್‌ ಕಡಿಮೆ ಇದ್ದ ಮಾತ್ರ ಆಘಾತ ಆಗುವುದೇ ಇಲ್ಲ ಎಂದಲ್ಲ.

ಶಸ್ತ್ರಚಿಕಿತ್ಸೆ ನಂತರ ಉಳಿವಿನ ಸಾಧ್ಯತೆ: ಬೈಪಾಸ್‌ ಆದ ನಂತರ 15 ವರ್ಷ ಉಳಿಯುವ ಸಾಧ್ಯತೆ ಇದೆ. ಆದರೆ ಆನಂತರ ರೋಗಿ ಆರೋಗ್ಯವನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂಬುದನ್ನು ಇದು  ಆಧರಿಸಿರುತ್ತದೆ.

ಮೃತಪಟ್ಟ ನಂತರ ಕಾರಣ ಪತ್ತೆ ಅಸಾಧ್ಯ: ತೀವ್ರ ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟ ನಂತರ ಯಾವ ಕಾರಣಕ್ಕೆ ಆಗಿದೆ ಎಂದು ತಿಳಿಯುವುದು ಹಲವು ಬಾರಿ ಅಸಾಧ್ಯ. ಸ್ವಲ್ಪ ಸುಳಿವು ಸಿಗಬಹುದು.

ಕುಟುಂಬದ ಎಚ್ಚರಿಕೆ ಅಗತ್ಯ: ಹೃದಯಾಘಾತ ಆಗಿ ಬದುಕಿದ ವ್ಯಕ್ತಿಯ ಬಗ್ಗೆ ಅವರ ಕುಟುಂಬದ ಸದಸ್ಯರು ಎಚ್ಚರಿಕೆ ವಹಿಸಬೇಕು. ತಂದೆ ತಾಯಿ ತಮ್ಮ ಜೀವನಶೈಲಿ ಬದಲಾಯಿಸಿ ಕೊಂಡರೆ ಅವರ ಮುಂದಿನ ಪೀಳಿಗೆ ಆರೋಗ್ಯ ಚೆನ್ನಾಗಿರುತ್ತದೆ. ತಲೆಮಾರುಗಳ ಅಂತರಕ್ಕೆ ಹೃದಯದ ಕಾಯಿಲೆ ಪ್ರಮಾಣ ಹೆಚ್ಚುತ್ತದೆ.

ಹೊಸ ಬೆಳವಣಿಗೆಗಳು: ಹೃದಯ ಚಿಕಿತ್ಸೆಯಲ್ಲಿ ಇಂದು ಅತ್ಯಾಧುನಿಕ ಪದ್ಧತಿಗಳು ಬಳಕೆಗೆ ಬಂದಿವೆ. ಒಂದು ಶಸ್ತ್ರಚಿಕಿತ್ಸೆ ಇಲ್ಲದೆ ಮತ್ತೊಂದು ಶಸ್ತ್ರಚಿಕಿತ್ಸೆಯ ಸಹಿತ. ಕೀ ಹೋಲ್‌ ಸರ್ಜರಿ ಬಳಕೆಯಲ್ಲಿದೆ.  ಕೃತಕ ಹೃದಯ ಜೋಡಣೆ ಸಾಧ್ಯವಿದೆ. ಸ್ಟೆಂಟ್‌ಗಳಲ್ಲಿ ಹಲವು ವಿಧಗಳನ್ನು ಬಳಸುತ್ತಿದ್ದಾರೆ.  ಇವುಗಳಿಂದ ರೋಗಿ ಬೇಗ ಚೇತರಿಸಿಕೊಳ್ಳುತ್ತಾರೆ.  

5000 ಹೃದಯ ಶಸ್ತ್ರಚಿಕಿತ್ಸೆ
ಡಾ. ಆದಿಲ್‌ ಸಾದಿಕ್‌ ಅವರು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್‌ ಪದವಿ  ನಂತರ ಎಂಎಸ್ ಅನ್ನು ಮಣಿಪಾಲದ ಕಸ್ತೂರಬಾ ಮೆಡಿಕಲ್‌ ಕಾಲೇಜಿನಲ್ಲಿ ಮುಗಿಸಿದರು.

ನಂತರ ಅಮೆರಿಕದ ಅಟ್ಲಾಂಟದಲ್ಲಿನ ಎಮರಿ ಸ್ಕೂಲ್‌ ಆಫ್‌ ಮೆಡಿಸಿನ್‌ನಲ್ಲಿ ಹೆಚ್ಚಿನ ಅಧ್ಯಯನ ನಡೆಸಿದರು. ರೋಬೊಟಿಕ್‌ ಕಾರ್ಡಿಯಾಕ್‌ ಸರ್ಜರಿ ಇವರ ವಿಶೇಷ. ಈವರೆಗೆ 5000 ಹೃದಯ ಶಸ್ತ್ರಚಿಕಿತ್ಸೆ, 1500 ಥೋರಸಿಕ್‌ ಸರ್ಜರಿ, 65 ಹೃದಯ ಮತ್ತು ಶ್ವಾಸಕೋಶ ಕಸಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT