ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರಧಾಮದಂತೆ ಕೂಡಲಸಂಗಮ

Last Updated 20 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಶ್ವಗುರು ಬಸವಣ್ಣನ ಕರ್ಮಭೂಮಿ ಕೂಡಲಸಂಗಮವನ್ನು ನವದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ, ಪ್ರವಾಸಿಗರನ್ನು ಸೆಳೆಯಲು ರಾಜ್ಯ ಸರ್ಕಾರ ಮುಂದಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್‌ನಲ್ಲಿ, ಕೂಡಲಸಂಗಮವನ್ನು ಅಕ್ಷರಧಾಮ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಹಿರಿಯ ಐಎಎಸ್‌ ಅಧಿಕಾರಿ ಡಾ. ಶಿವಯೋಗಿ ಕಳಸದ ಅವರನ್ನು ಯೋಜನೆ ಅನುಷ್ಠಾನಕ್ಕಾಗಿ ವಿಶೇಷ ಅಧಿಕಾರಿಯನ್ನಾಗಿ ಸರ್ಕಾರ ನಿಯೋಜಿಸಿದೆ.

12ನೇ ಶತಮಾನದಲ್ಲಿ ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದ ಬಸವಾದಿ ಶರಣರ ತತ್ವ, ವಿಚಾರಧಾರೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಉದ್ದೇಶವನ್ನು ಯೋಜನೆ ಒಳಗೊಂಡಿದೆ. ಪ್ರಸ್ತುತ ಯೋಜನೆ ನಿರೀಕ್ಷೆಯಂತೆ ಆರಂಭವಾದರೆ ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಈ ಕುರಿತು ‘ಪ್ರಜಾವಾಣಿ’ಗೆ ಸೋಮವಾರ ಮಾಹಿತಿ ನೀಡಿದ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಅಧಿಕಾರಿ ಡಾ.ಶಿವಯೋಗಿ ಕಳಸದ, ‘ಅಕ್ಷರಧಾಮ ಮಾದರಿ ಯೋಜನೆಯಡಿ ಬಸವಣ್ಣನ ಕಾರ್ಯಕ್ಷೇತ್ರಗಳಾದ ಕೂಡಲಸಂಗಮ, ಚಿಕ್ಕಸಂಗಮ, ಬಸವನ ಬಾಗೇವಾಡಿ, ಬಸವಕಲ್ಯಾಣ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿರುವ ಮಂಗಳವೇಡೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶವಿದೆ’ ಎಂದು ವಿವರಿಸಿದರು.

‘ಅಕ್ಷರಧಾಮ ಮಾದರಿಯಲ್ಲಿ ಕೂಡಲಸಂಗಮವನ್ನು ರೂಪಿಸಲು ಕನಿಷ್ಠ ₨ 100 ಕೋಟಿ ಅಗತ್ಯವಿದೆ. ಈ ಕುರಿತು ಶೀಘ್ರದಲ್ಲೇ ಅಂತಿಮ ಕ್ರಿಯಾ ಯೋಜನೆ ರೂಪಿಸಲಾಗುವುದು’ ಎಂದರು.

‘ಬಸವಣ್ಣನ ತತ್ವ ವಿಚಾರಗಳನ್ನು ಜನಸಾಮಾನ್ಯರಿಗೆ ಮನಮುಟ್ಟುವಂತೆ ಸಾಕ್ಷೀಕರಿಸಲು ಶರಣ ಗ್ರಾಮ, ಶರಣರ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸಲು ಥೀಮ್‌ಪಾರ್ಕ್‌, ಗ್ರಂಥಾಲಯ, ಶ್ರೀಕ್ಷೇತ್ರಕ್ಕೆ ಬರುವ ಯಾತ್ರಿಕರಿಗೆ ತಂಗಲು ಅತ್ಯಾಧುನಿಕ ಯಾತ್ರಿ ನಿವಾಸ ಸೇರಿದಂತೆ ಮತ್ತಿತರರ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದರು.

‘ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ವಾಸ್ತುಶಿಲ್ಪಿ ಕೂಡಲಸಂಗಮ, ಚಿಕ್ಕಸಂಗಮ, ಬಸವನ ಬಾಗೇವಾಡಿ, ಬಸವ ಕಲ್ಯಾಣಕ್ಕೆ ಭೇಟಿ ನೀಡಿ ಯೋಜನೆಯ ರೂಪುರೇಷೆ ಹೇಗಿರಬೇಕು ಎಂಬುದರ ಬಗ್ಗೆ ಅಧ್ಯಯನ ಮಾಡಿದ್ದಾರೆ. ಅವರು ಸಲ್ಲಿಸುವ ಅಧ್ಯಯನ ವರದಿ ಆಧರಿಸಿ ಮುಂದಿನ ಕಾರ್ಯ ಯೋಜನೆ ಸಿದ್ಧಗೊಳ್ಳಲಿದೆ’ ಎಂದರು.

‘ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಪಾಟೀಲ ಅವರು ಯೋಜನೆ ಅನುಷ್ಠಾನದ ಬಗ್ಗೆ ಈಗಾಗಲೇ ಎರಡು ಬಾರಿ ಸಭೆ ನಡೆಸಿ, ಸಲಹೆ–ಸೂಚನೆ ನೀಡಿದ್ದಾರೆ’ ಎಂದು ಡಾ.ಕಳಸದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT