ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ರಪಂಕ್ತಿಯ ಕನ್ನಡ ಪರಿಚಾರಕ ಹಾಲಂಬಿ

Last Updated 24 ಏಪ್ರಿಲ್ 2016, 19:34 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಕನ್ನಡದ ಅಗ್ರಪಂಕ್ತಿಯ ಪರಿಚಾರಕರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ  ಪರಿಷತ್ತನ್ನು ಕಟ್ಟಿ ಬೆಳೆಸಿದ್ದಾರೆ. ಕನ್ನಡಕ್ಕೆ  ಯಾವುದೇ ರೀತಿಯ ಧಕ್ಕೆಯಾದಾಗ, ಆತಂಕ ಉಂಟಾದಾಗ ಎಚ್ಚೆತ್ತು ಎಲ್ಲರನ್ನೂ ಜಾಗೃತಗೊಳಿಸುತ್ತಿದ್ದರು.

ಅವರು ಕಾರ್ಮಿಕ  ನಾಯಕರೂ ಆಗಿದ್ದರು. ಕಾರ್ಮಿರಿಗೆ ಅನ್ಯಾಯವಾದಾಗ ಅವರ ಪರ ಎದ್ದು ನಿಲ್ಲುತ್ತಿದ್ದರು. ಕನ್ನಡ ಎಂ.ಎ. ಮಾಡಿದ್ದರೂ  ಮಾಸ್ತರಿಕೆ ಮಾಡದೆ ಕಾರ್ಮಿಕ ನಾಯಕರಾದವರು. ಹೊಟೇಲು ಉದ್ಯಮಿಗಳ ಸಂಘ, ಬೆಂಗಳೂರು ವಿವಿ ನೌಕರರ ಗೃಹನಿರ್ಮಾಣ ಸಂಘದಲ್ಲಿ ಇಪ್ಪತ್ತು ವರ್ಷ ಅಧ್ಯಕ್ಷರಾಗಿದ್ದರೆಂದರೆ ಕಾರ್ಮಿಕರು ಅವರ ಬಗ್ಗೆ ಇಟ್ಟಿರುವ ನಂಬಿಕೆಯೇ ಕಾರಣ.

ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ ಅವರ ಗರಡಿಯಲ್ಲಿ ಬೆಳೆದವರು ಹಾಲಂಬಿ.  ಸುಮಾರು ನಲವತ್ತು ವರ್ಷಗಳ ಕಾಲ ಜಿಎಸ್‌ಎಸ್‌ ನೆರಳಿನಲ್ಲಿಯೇ ಇದ್ದವರು. ಕನ್ನಡ ಸೇವೆಗೆ ಬದುಕನ್ನು ಮುಡಿಪಾಗಿಡಲು ಜಿಎಸ್‌ಎಸ್‌ ಅವರೇ ಪ್ರೇರಣಾಶಕ್ತಿಯಾಗಿದ್ದರು.

ಕಳೆದ ಮೂರು ದಶಕಗಳಿಂದ ಅನೇಕ ಸಂಸ್ಥೆಗಳ ಜವಾಬ್ದಾರಿ ಹೊತ್ತುಕೊಂಡಿದ್ದರೂ ಅಪ್ರಮಾಣಿಕತೆ, ಭ್ರಷ್ಟಾಚಾರ ಹತ್ತಿರ ಸುಳಿಯದಂತೆ ನಡೆದುಕೊಂಡಿದ್ದರು. ನಾಲ್ಕು ವರ್ಷಗಳಿಂದ ಡಯಾಲಿಸಿಸ್‌ ನಲ್ಲಿದ್ದರೂ ಸಭೆಗಳಲ್ಲಿ ಚಟುವಟಿಕೆಯಿಂದ ಓಡಾಡಿಕೊಂಡಿದ್ದರು. ಅನೇಕ ಸಲ ಡಯಾಲಿಸ್‌ ಮುಗಿಸಿಕೊಂಡು ನೇರವಾಗಿ ಸಭೆಗಳಿಗೆ ಬರುತ್ತಿದ್ದರು. ಅವರು ಹೋದಲ್ಲೆಲ್ಲ ಅವರಿಗೆ ಬೆಂಬಲವಾಗಿ ಅವರ ಪತ್ನಿ ಸರೋಜಾ ಇರುತ್ತಿದ್ದರು. ರಾಜ್ಯದಾದ್ಯಂತ ಪರಿಷತ್ತಿನ ಕೆಲಸಕ್ಕೆ ಸುತ್ತಾಡುವಾಗಲೂ ಔಷಧಿಯ ಪೆಟ್ಟಿಗೆ ಹಿಡಿದುಕೊಂಡು ಕಾಳಜಿಯಿಂದ ನೋಡಿಕೊಂಡಿದ್ದಾರೆ.

ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಾಮಾಜಿಕ ನ್ಯಾಯದ ಪರವಾಗಿ ನಡೆದುಕೊಂಡಿದ್ದರು. ಅವರು ನಡೆಸಿದ ಮೂರು ಸಮ್ಮೇಳನಗಳಲ್ಲಿಯೂ ತಮ್ಮ ಜಾತಿಯವರನ್ನು ಅಧ್ಯಕ್ಷರನ್ನಾಗಿ ಮಾಡದೆ ಅಲ್ಪಸಂಖ್ಯಾತರು, ದಲಿತರಿಗೆ ಅವಕಾಶ ನೀಡಿದ್ದರು. 61ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನ್ನಾಗಿ ನನ್ನನ್ನು ಆಯ್ಕೆ ಮಾಡಿದ ಅವರು ನನ್ನ ಭಾಷಣದ ವಿಚಾರದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ.

ಅವರು ಪ್ರಸಾರಾಂಗದ ಉಪನಿರ್ದೇಶಕರಾಗಿದ್ದಾಗ ಕಾವ್ಯಗಳ  ಕುರಿತು ಪ್ರಚಾರೋಪನ್ಯಾಸಗಳನ್ನು ನಡೆಸುತ್ತಿದ್ದರು. ಒಮ್ಮೆ ದೊಡ್ಡ ಬಳ್ಳಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿ.ಪಿ.ರಾಜರತ್ನಂ ಅವರ ಕಾವ್ಯದ ಕುರಿತು ಭಾಷಣ ಮಾಡಲು ನನ್ನನ್ನು ಆಹ್ವಾನಿಸಿದ್ದರು. ನಾನು ಸಿದ್ಧತೆ ಮಾಡಿಕೊಳ್ಳದ ಕಾರಣ ಕಾರ್ಯಕ್ರಮಕ್ಕೆ ಹೋಗದೆ ಗ್ರಂಥಾಲಯದಲ್ಲಿ ಕುಳಿತಿದ್ದೆ. ನಾನು ಅಲ್ಲೇ ಇರುತ್ತಿದ್ದೇನೆ ಎಂದು ಅರಿತ ಹಾಲಂಬಿ ನನ್ನನ್ನು ಹುಡುಕಿಕೊಂಡು ಬಂದಿದ್ದರು. ನಾನು ಕಪಾಟುಗಳ ಮಧ್ಯೆ ಅಡಗಿ ಕುಳಿತು ಅವರನ್ನು ಗ್ರಂಥಾಲಯದ ತುಂಬ ಓಡಾಡಿ ಸುಸ್ತಾಗುವಂತೆ ಮಾಡಿದ್ದೆ. ನಂತರ  ಜಿ.ಪಿ.ರಾಜರತ್ನಂ ಅವರ ಕವಿತೆಗಳ ಬಗ್ಗೆ ಸಭಿಕರು ಹುಬ್ಬೇರಿಸುವಂತೆ ಅವರೇ ಭಾಷಣ ಮಾಡಿದ್ದರು. ‘ಉಪನ್ಯಾಸಕರು ಬರದೇ ಇದ್ದದ್ದೇ ಒಳ್ಳೆಯದಾಯಿತು’ ಎಂದು ಜನ ಪ್ರಶಂಸೆ ಮಾಡಿದ ನಂತರ ನನ್ನ ಮೇಲಿದ್ದ ಕೋಪ ಕಡಿಮೆಯಾಗಿತ್ತು. ಅವರು ವಾಗ್ಮಿಯೂ ಆಗಿದ್ದರು.

ಒಮ್ಮೆ ಜ್ಞಾನಭಾರತಿ ಬಳಿಯ ಕೆಂಗುಂಟೆ ಗುಡ್ಡದಲ್ಲಿ ಗ್ರಾಮದೇವತೆಗಳ ಕುರಿತು ಉಪನ್ಯಾಸ ನೀಡಿದ್ದೆ. ಹಾಲಂಬಿಯವರು ಸಭೆಯ ಅಧ್ಯಕ್ಷರಾಗಿದ್ದರು. ಅಲ್ಲಿ ನನ್ನ ಹಾಸ್ಯ ಭಾಷಣದಿಂದ ಜನ ಕುರ್ಚಿಯಿಂದ  ಬಿದ್ದು ನಗುವಂತಾಗಿದ್ದರು.  ಹಾಲಂಬಿಯವರು ಕೂಡಾ ಕುರ್ಚಿಯಿಂದ ಬಿದ್ದಿದ್ದರು. ಈ ಘಟನೆಯನ್ನು ಇತ್ತೀಚಿನವರೆಗೂ ನೆನೆದು ನಗುತ್ತಿದ್ದರು.

ಹಾಲಂಬಿಯವರು ಮೇಲ್ವರ್ಗದಲ್ಲಿ ಹುಟ್ಟಿದ್ದರೂ ದಲಿತರ ನೋವುಗಳನ್ನು ಅರಿತಿದ್ದರು. ಚಾಮರಾಜನಗರದಲ್ಲಿ ಎರಡು ವರ್ಷದ ಹಿಂದೆ ದಲಿತ ಸಮ್ಮೇಳನ ನಡೆಸಿದ್ದರು. ಅವರು ಅಪ್ಪಟ ಜಾತ್ಯತೀತರಾಗಿದ್ದರು.

ತಮಗೆ ಇಷ್ಟ ಇಲ್ಲದ ವಿಚಾರಕ್ಕೆ ಜಗಳಕ್ಕೆ ನಿಲ್ಲುತ್ತಿದ್ದರು. ಕನ್ನಡದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಗೋಕಾಕ್‌ ಚಳವಳಿಯಲ್ಲಿ ಜೈಲಿಗೂ ಹೋಗಿದ್ದರು. ಕನ್ನಡದ ವಿಚಾರದಲ್ಲಿ ದೃಢ ನಿಲುವು ಹೊಂದಿದ್ದರು.  ವಿಚಾರಸಂಕಿರಣಗಳಲ್ಲಿ  ಕನ್ನಡ ಹೋರಾಟಗಾರರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಅವರದು ಪ್ರಭಾವಶಾಲಿ ವ್ಯಕ್ತಿತ್ವ. ಆತ್ಮಸ್ಥೈರ್ಯ ದೊಡ್ಡದು. ಸುಧಾರಣಾ ಮನೋಭಾವ, ಕ್ರಾಂತಿಕಾರಿ ಗುಣಕ್ಕೆ ಅವರ ಹಿಂದೆ ಜನ ಸೇರುತ್ತಿದ್ದರು. ಅಂಥವರು ಇನ್ನಷ್ಟು ದಿನ ಇರಬೇಕಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT