ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಮೀರ್‌: ಸಚಿನ್‌ ಪೈಲಟ್‌ಗೆ ಅಗ್ನಿ ಪರೀಕ್ಷೆ

Last Updated 25 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಅಜ್ಮೀರ್ (ರಾಜಸ್ತಾನ): ರಾಜಸ್ತಾನದ ಪವಿತ್ರ ನಗರ ಅಜ್ಮೀರ್‌. ‘ಬಾಬಾ ಖ್ವಾಜಿ ಮೊಹಿನುದ್ದೀನ್‌ ದರ್ಗಾ’  ಇರುವುದು ಇದೇ ನಗರದಲ್ಲಿ. ಬಾಬಾ ಜಾತ್ಯತೀತ ಮನೋಧರ್ಮದ ಸೂಫಿ ಸಂತ. ಪ್ರತಿನಿತ್ಯ ಎಲ್ಲ ಜಾತಿ, ಧರ್ಮಗಳ ನೂರಾರು ಜನ ದರ್ಗಾಕ್ಕೆ ಬರುತ್ತಾರೆ. ದೇಶ, ವಿದೇಶಗಳ ಗಣ್ಯರು ಭೇಟಿ ಕೊಡುತ್ತಾರೆ.

ಪ್ರವಾಸೋದ್ಯಮ ರಾಜ್ಯ ಸರ್ಕಾರದ ಪ್ರಮುಖ ಆದಾಯ ಮೂಲಗಳ­ಲ್ಲೊಂದು. ಚಳಿಗಾಲ ರಾಜಸ್ತಾನ ಪ್ರವಾಸಕ್ಕೆ ಸಕಾಲ. ಮರಳುಗಾಡಲ್ಲಿ ಚಳಿಗಾಲ ಮುನ್ನುಡಿ ಬರೆದಿದೆ. ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ. ಈ ಹೊತ್ತಿನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಅಜ್ಮೀರವೂ ಮತದಾನಕ್ಕೆ ಸಜ್ಜಾಗುತ್ತಿದೆ.

ಅಜ್ಮೀರ, ಕೇಂದ್ರ ಸಚಿವ ಸಚಿನ್‌ ಪೈಲಟ್‌ ರಾಜಕೀಯ ಅಖಾಡ. ಲೋಕಸಭೆಯಲ್ಲಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಇತರೆ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಗುಜ್ಜರ್‌ ಸಮುದಾಯಕ್ಕೆ ಸೇರಿದವರು ಸಚಿನ್‌. ಮೊದಲ ಸ್ಥಾನದಲ್ಲಿ ಜಾಟರಿದ್ದಾರೆ.

ಸಚಿನ್‌, ಪ್ರಭಾವಿ ರಾಜಕಾರಣಿ ರಾಜೇಶ್‌ ಪೈಲಟ್‌ ಅವರ ಪುತ್ರ. ರಾಜೇಶ್‌ಪೈಲಟ್‌ ಮೂಲತಃ ಉತ್ತರ ಪ್ರದೇಶದವರಾದರೂ, ರಾಜಸ್ತಾನದ ರಾಜಕಾರಣದ ಮೇಲೆ ಪ್ರಾಬಲ್ಯ ಹೊಂದಿದ್ದರು. ದೋಸಾ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅಪ್ಪನ ಹಾದಿಯಲ್ಲಿ ಮುನ್ನಡೆಯಲು ಮಗ ಪ್ರಯತ್ನಿಸುತ್ತಿದ್ದಾರೆ. ಸಚಿನ್‌ 2004ರಲ್ಲಿ  ದೋಸಾ ಕ್ಷೇತ್ರ ಪ್ರತಿನಿಧಿಸಿದ್ದರು. ಐದು ವರ್ಷದ ಬಳಿಕ ಅಜ್ಮೀರ್‌ಗೆ ವಲಸೆ ಬಂದರು.

  ಪರಿಶಿಷ್ಟ ಪಂಗಡ ಸ್ಥಾನಮಾನಕ್ಕಾಗಿ ಗುಜ್ಜರ್‌ ಸಮಾಜ ಆರೇಳು ವರ್ಷದ ಹಿಂದೆ ಚಳವಳಿ ನಡೆಸಿತು. ಅವಕಾಶಕ್ಕಾಗಿ ಜಾಟರ ಜತೆ ಸ್ಪರ್ಧೆ ಅಸಾಧ್ಯವೆಂಬ ಕಾರಣಕ್ಕೆ ಹೋರಾಟ ಭುಗಿಲೆದ್ದಿತ್ತು. ಪರಿಶಿಷ್ಟ ಪಂಗಡದ ಮೀನಾ ಸಮುದಾಯ ಇದನ್ನು ಬಲವಾಗಿ ವಿರೋಧಿಸಿತು. ಇದರಿಂದಾಗಿ ಗುಜ್ಜರ್‌ ಚಳವಳಿ ವಿಫಲವಾಯಿತು.

ದೋಸಾದಲ್ಲಿ ಮೀನಾ ಮತ್ತು ಗುಜ್ಜರ್‌ ರಾಜಕೀಯವಾಗಿ ಸಮಬಲರು. ಎರಡು ಸಮಾಜದ ನಡುವಣ ಕಿತ್ತಾಟದ ಹಿನ್ನೆಲೆಯಲ್ಲಿ ಸಚಿನ್‌ ಅಜ್ಮೀರಕ್ಕೆ ಕ್ಷೇತ್ರ ಬದಲು ಮಾಡಿದ್ದಾರೆ. ಅಜ್ಮೀರ ಗುಜ್ಜರರಿಗೆ ಸುರಕ್ಷಿತ ಕ್ಷೇತ್ರ. ದೋಸಾ ಲೋಕಸಭೆ ಕ್ಷೇತ್ರ ಮೀನಾ ಸಮಾಜದ ಹಿಡಿತಕ್ಕೆ ಬಂದಿದೆ. ಸಮಾಜದ ನಾಯಕ ಕಿರೋರಿಲಾಲ್‌ ಮೀನ ಪ್ರತಿನಿಧಿಸಿದ್ದಾರೆ.

ಸಚಿನ್‌, ರಾಜಸ್ತಾನದ ಎರಡನೇ ತಲೆಮಾರಿನ ನಾಯಕ. ರಾಜ್ಯ ರಾಜಕಾರಣದ ಮೇಲೆ ಹಿಡಿತ ಸಾಧಿಸಲು ಹೊರಟಿದ್ದಾರೆ. ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಕೇಂದ್ರ ಸಚಿವ ಸಿ.ಪಿ.ಜೋಷಿ ಅವರ ನಡುವೆ ತಮ್ಮ ಹಾದಿ ಕಂಡುಕೊಳ್ಳಲು ಯತ್ನಿಸಿದ್ದಾರೆ. ನಿಜವಾದ ಅರ್ಥದಲ್ಲಿ ಎಂಟು ವಿಧಾನಸಭೆ ಕ್ಷೇತ್ರ ಒಳಗೊಂಡಿರುವ ಅಜ್ಮೀರ್‌ ಚುನಾವಣೆ ಸಚಿನ್‌ ಅವರಿಗೆ ಅಗ್ನಿ ಪರೀಕ್ಷೆ.

ಅಜ್ಮೀರ ಉತ್ತರ, ಅಜ್ಮೀರ ದಕ್ಷಿಣ, ಪುಷ್ಕರ್‌, ಕಿಷನ್‌ಗಡ, ನಸೀರಾಬಾದ್‌ ಕ್ಷೇತ್ರದಲ್ಲಿ  ಕಾಂಗ್ರೆಸ್, ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕೇಕಡಿಯಲ್ಲಿ  ಕಾಂಗ್ರೆಸ್ ಮತ್ತು ಬೇವಾಡದಲ್ಲಿ ಬಿಜೆಪಿಗೆ ಬಂಡಾಯ ಎದುರಾಗಿದೆ. ಮಸೂದದಲ್ಲಿ ಎರಡೂ ಪಕ್ಷಗಳ ಹಾದಿಗೆ ಬಂಡಾಯ ಅಭ್ಯರ್ಥಿಗಳು ಅಡ್ಡಿಯಾಗಿದ್ದಾರೆ.

ರಾಜ್ಯದ ಶಿಕ್ಷಣ ಸಚಿವೆ ನಸೀಂ ಅಖ್ತರ್‌ ಪುಷ್ಕರ್‌ ಕ್ಷೇತ್ರದಲ್ಲಿ ಎರಡನೇ ಸಲ ಕಣದಲ್ಲಿದ್ದಾರೆ. 2008ರ ಚುನಾವಣೆಯಲ್ಲಿ ಅಖ್ತರ್‌ ಚುನಾಯಿತ­ರಾಗಿದ್ದರು. ಸುರೇಶ್‌ ರಾವತ್‌ ಬಿಜೆಪಿಯಿಂದ ಸ್ಪರ್ಧೆ ಮಾಡಿ­ದ್ದಾರೆ. ಪುಷ್ಕರದಲ್ಲಿ ರಾವತ್‌ ಪ್ರಬಲ ಸಮುದಾಯ.

ಕೇಕಡಿಯಲ್ಲಿ  ಕಾಂಗ್ರೆಸ್ ಮುಖ್ಯ ಸಚೇತಕರಾಗಿದ್ದ ಡಾ.ರಘು ಶರ್ಮ ಕಣದಲ್ಲಿದ್ದಾರೆ. ಶರ್ಮ ಕ್ಷೇತ್ರದ ಹಾಲಿ ಶಾಸಕ. ಬಿಜೆಪಿ ಶತ್ರುಘನ್‌ ಗೌತಮ್‌ ಅವರಿಗೆ ಟಿಕೆಟ್‌ ನೀಡಿದೆ.  ಕಾಂಗ್ರೆಸ್ ಮಿತ್ರ ಪಕ್ಷ ಎನ್‌ಸಿಪಿ ಬಾಬುಲಾಲ್‌ ಅವರನ್ನು ನಿಲ್ಲಿಸಿದೆ. ಕಳೆದ ಸಲ ಬಾಬುಲಾಲ್‌್  ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಪಕ್ಷೇತರವಾಗಿ ಸ್ಪರ್ಧಿಸಿ 18 ಸಾವಿರ ಮತ ಪಡೆದಿದ್ದರು.

ನಸೀರಾಬಾದ್‌ ಕ್ಷೇತ್ರದಲ್ಲಿ ಮತ್ತೆ ಹಾಲಿ ಶಾಸಕ  ಕಾಂಗ್ರೆಸ್ಸಿನ ಮಹೇಂದ್ರ­ಸಿಂಗ್‌ ಮತ್ತು ಬಿಜೆಪಿಯ ಸವರಲಾಲ್‌ ನಡುವೆ ನೇರ ಹಣಾಹಣಿ ಏರ್ಪ­ಟ್ಟಿದೆ. ಮಾಜಿ ಸಚಿವ, ಜಾಟ್‌ ಸಮಾ­ಜದ ಸವ­ರ­ಲಾಲ್‌ ಕಳೆದ ಸಲ ಕೇವಲ 71ಮತಗಳ ಅಂ­ತ­ರದಿಂದ  ಸೋತಿ­ದ್ದರು.

ಪುದುಚೇರಿ ಮಾಜಿ ರಾಜ್ಯಪಾಲ ಗುಜ್ಜರ್‌ ಜನಾಂ­ಗದ ನಾಯಕ ಗೋವಿಂದ್‌ಸಿಂಗ್‌ 1980ರಿಂದ 2008ರವರೆಗೆ ಸತತವಾಗಿ ಇಲ್ಲಿಂದ ಆಯ್ಕೆ­ಯಾಗಿದ್ದರು. ಆನಂತರ ಮಹೇಂದ್ರ ಸಿಂಗ್‌ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಇದು ಜಾಟ್‌ ಮತ್ತು ಗುಜ್ಜರ್‌ ನಡುವಣ ಹೋರಾಟಕ್ಕೆ ಅಖಾಡವಾಗಿದೆ.

ಮಸೂದದಲ್ಲಿ ಮಾಜಿ  ಕಾಂಗ್ರೆಸ್ ಮುಖಂಡ ವಾಜಿದ್ ಖಾನ್‌ ಪಕ್ಷೇತರ ಅಭ್ಯರ್ಥಿ.  ಕಾಂಗ್ರೆಸ್ ಪದಾಧಿಕಾರಿ­ಯಾಗಿದ್ದ ಖಾನ್‌ ಕೇಕಡಿ ಮತೀಯ ಗಲಭೆ ಆರೋಪದಲ್ಲಿ ಜೈಲು ಸೇರಿದ್ದಾರೆ.  ಕಾಂಗ್ರೆಸ್ ಕೈಬಿಟ್ಟಿದ್ದರಿಂದ ಪಕ್ಷೇತರರಾಗಿ ಜೈಲಿನಿಂದಲೇ ನಾಮ ಪತ್ರ ಸಲ್ಲಿಸಿದ್ದಾರೆ.

ಜಿಲ್ಲಾ  ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇದೆ. ಸಚಿನ್‌ ಹಿರಿಯ ನಾಯಕರನ್ನು ಕಡೆಗಣಿಸುತ್ತಿದ್ದಾರೆಂಬ ಅಸ­ಮಾಧಾನವಿದೆ. ಒಳಗಿಂದೊಳಗೆ ಯುವ ನಾಯ­ಕನ ವಿರುದ್ಧ ಹಿರಿಯರು ಕತ್ತಿ ಮಸೆಯು­ತ್ತಿ­ದ್ದಾರೆ.

ಕಾಂಗ್ರೆಸ್ ಅಭಿವೃದ್ಧಿ,  ಕಲ್ಯಾಣ ಕಾರ್ಯ­ಕ್ರಮಗಳನ್ನು ಮುಂದಿಟ್ಟು­ಕೊಂಡು ಪ್ರಚಾರ ನಡೆಸಿದೆ. ಅಜ್ಮೀರ್‌ ಜಿಲ್ಲೆಯಲ್ಲಿ ಜಾತಿ ಮತ್ತು ವ್ಯಕ್ತಿ ಆಧಾರದ ಮೇಲೆ ಚುನಾವಣೆ ನಡೆದಿದೆ. ಕೇಂದ್ರ ಯುಪಿಎ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ ಹಗರಣಗಳನ್ನು ಅಜ್ಮೀರದ ಜನ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ. ರಸ್ತೆ, ನೀರು ಮತ್ತು ವಿದ್ಯುತ್‌ ಸಮಸ್ಯೆಗಳು ಮಾತ್ರ ಮುಖ್ಯ ಆಗಲಿವೆ ಎಂದು ಅಜಯ್‌ ಗುಪ್ತ ವಿವರಣೆ.

ರಾಜ್ಯ ಸರ್ಕಾರ, ಶಾಲಾ ಶಿಕ್ಷಕರ ನೇಮಕಾತಿಗೆ ‘ಎರಡು ಸಲ ಅರ್ಹತಾ ಪರೀಕ್ಷೆ’ (ಟಿಇಟಿ) ನಡೆಸಿದೆ. ಇದುವರೆಗೆ ನೇಮಕಾತಿ ಆಗಿಲ್ಲ. ಶಿಕ್ಷಕರ ನೇಮಕಾತಿ ವಿವಾದವಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಇದು  ಕಾಂಗ್ರೆಸ್‌ಗೆ ಸ್ವಲ್ಪ ಮಟ್ಟಿಗೆ
ತೊಂದರೆ ಆಗಬಹುದು. ಬಿಜೆಪಿ ಇದನ್ನೇ ಅಸ್ತ್ರವಾಗಿ ಬಳಸಿಕೊ­ಳ್ಳುತ್ತಿದೆ ಎಂದು ಗುಪ್ತ ಅಭಿಪ್ರಾಯ­ಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT