ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರ ಪರ ಸಿ.ಎಂ.ಗೆ ಬರಗೂರು ಪತ್ರ

Last Updated 21 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ನಿವಾರಿಸುವಂತೆ ಒತ್ತಾಯಿಸಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ  ಪತ್ರ ಬರೆದಿದ್ದಾರೆ.

‘ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಇತ್ತೀಚೆಗೆ ಪ್ರತಿಭಟನೆ ಕೈಗೊಂಡಿದ್ದ  ಸಂದರ್ಭದಲ್ಲಿ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಸಮಿತಿಯೊಂದನ್ನು ರಚಿಸಲು ಒಪ್ಪಿಕೊಂಡಿತ್ತು. ಆದರೆ, ಇದುವರೆಗೂ ಸಮಿತಿಯನ್ನು ರಚಿಸದ  ಸರ್ಕಾರ ಮಾತಿಗೆ ತಪ್ಪಿದೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

‘ಉಪನ್ಯಾಸಕರ ಬೇಡಿಕೆಯಂತೆ ಸಮಸ್ಯೆ ಪರಿಹಾರಕ್ಕೆ ಸಮಿತಿಯನ್ನು  ತಕ್ಷಣ ರಚಿಸಬೇಕು. ಈ ಸಮಿತಿಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು, ಇಬ್ಬರು ಪ್ರಾಂಶುಪಾಲರು, ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವ ಇಬ್ಬರು ವಿಧಾನ ಪರಿಷತ್‌ ಸದಸ್ಯರು ಇರಬೇಕು. ಅತಿಥಿ ಉಪನ್ಯಾಸಕರ ಕೆಲಸಕ್ಕೂ ಕುತ್ತು ತರದೆ ಹೊಸ ನಿರುದ್ಯೋಗಿಗಳ ಅವಕಾಶವನ್ನೂ ತಪ್ಪಿಸದೆ ಸೂಕ್ತ ಮಾರ್ಗೋಪಾಯವನ್ನು ಸರ್ಕಾರ ಕಂಡುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘1986, 1991, 1994, 1995ರಲ್ಲಿ  ವಿಶೇಷ ನಿಯಮಾವಳಿ ರೂಪಿಸುವ ಮೂಲಕ  ಅರೆಕಾಲಿಕ ಉಪನ್ಯಾಸಕರನ್ನು ಕಾಯಂ ಮಾಡಲಾಗಿದೆ. 2013ರಲ್ಲಿ ವೃತ್ತಿಪರ ತರಬೇತಿ ಕೋರ್ಸ್‌ಗಳ ಅತಿಥಿ ಉಪನ್ಯಾಸಕರನ್ನೂ ಇದೇ ರೀತಿ ಕಾಯಂ ಮಾಡಲಾಗಿದೆ. ಇದೇ ಮಾನದಂಡವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಏಕೆ ಅಳವಡಿಸಬಾರದು?’ ಎಂದು ಅವರು ಪ್ರಶ್ನಿಸಿದ್ದಾರೆ. ‘ಅತಿಥಿ ಉಪನ್ಯಾಸಕರ ವೇತನವನ್ನು ತಕ್ಷಣ ಹೆಚ್ಚಿಸಬೇಕು. ಮುಂದಿನ ಶೈಕ್ಷಣಿಕ ವರ್ಷಕ್ಕೂ ಅವರ ಸೇವೆಯನ್ನು ಷರತ್ತಿಲ್ಲದೇ ಮುಂದುವರಿಸ ಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT