ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರ ಸೇವೆ ವಜಾ ಆದೇಶ ವಾಪಸ್

Last Updated 15 ಫೆಬ್ರುವರಿ 2016, 19:28 IST
ಅಕ್ಷರ ಗಾತ್ರ

ಬೆಂಗಳೂರು: ಮುಷ್ಕರ ನಿರತ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರನ್ನು ಮತ್ತೆ ಸೇವೆಗೆ ತೆಗೆದುಕೊಳ್ಳಬಾರದು ಎಂದು ಫೆ.12ರಂದು  ಹೊರಡಿಸಿರುವ ಆದೇಶವನ್ನು ಉನ್ನತ ಶಿಕ್ಷಣ ಇಲಾಖೆ ಸೋಮವಾರ ವಾಪಸ್‌ ಪಡೆದಿದೆ.

ಇದರಿಂದಾಗಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ನಿಟ್ಟುಸಿರು  ಬಿಡುವಂತಾಗಿದೆ. ಈ ಸಂಬಂಧ ಇಲಾಖೆಯು ಹೊಸ ಆದೇಶ ಹೊರಡಿಸಿದ್ದು, ‘ಅತಿಥಿ ಉಪನ್ಯಾಸಕರು ಮುಷ್ಕರ ಕೈಬಿಟ್ಟು ತಕ್ಷಣದಿಂದ ಸೇವೆಗೆ ಹಾಜರಾಗಬೇಕು. ಅವರಿಗೆ ಮಾತ್ರ ಹಳೆಯ ಆದೇಶ ಅನ್ವಯವಾಗುವುದಿಲ್ಲ’ ಎಂದು ಹೇಳಲಾಗಿದೆ.

ಹೋರಾಟ ನಿಲ್ಲದು: ‘ನಾವು ಪ್ರತಿಭಟನೆಯನ್ನು ವಾಪಸ್‌ ಪಡೆದಿಲ್ಲ. ಆದರೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ಬೋಧನಾ ಕಾರ್ಯ ಮುಂದುವರಿಸಲು ನಿರ್ಧರಿಸಿದ್ದೇವೆ’ ಎಂದು ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ ಬಿ.ರಾಜಶೇಖರ ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ನಡೆಸುತ್ತೇವೆ. ತರಗತಿ ಬಹಿಷ್ಕಾರ ಹಾಕಿದ ಒಂದು ತಿಂಗಳ ಅವಧಿಯಲ್ಲಿ ಮಾಡಬೇಕಾಗಿದ್ದ ಪಾಠ ಪ್ರವಚನಗಳನ್ನು ಹೆಚ್ಚುವರಿ ತರಗತಿಗಳನ್ನು ತೆಗೆದುಕೊಂಡು ಮುಗಿಸುತ್ತೇವೆ. ಆದರೆ, ಇಲಾಖೆಯು ನಮ್ಮ ಒಂದು ತಿಂಗಳ ವೇತನವನ್ನು ತಡೆ ಹಿಡಿಯಬಾರದು’ ಎಂದು  ಒತ್ತಾಯಿಸಿದರು.

26ಕ್ಕೆ ಬಂದ್‌: ಅತಿಥಿ ಉಪನ್ಯಾಸಕರು ಇದೇ 17ಕ್ಕೆ ರಾಜ್ಯದಾದ್ಯಂತ ನಡೆಸಲು ಉದ್ದೇಶಿಸಿದ್ದ ಶೈಕ್ಷಣಿಕ ಬಂದ್ ಅನ್ನು 26ಕ್ಕೆ ಮುಂದೂಡಿದ್ದಾರೆ.

ಕಾಯಂಗೆ ಆಗ್ರಹಿಸಿ ಪ್ರತಿಭಟನಾ ರ್ಯಾಲಿ: ಅತಿಥಿ ಉಪನ್ಯಾಸಕರ ಕಾಯಂಗೆ ಸರ್ಕಾರ ವಿಶೇಷ ನಿಯಮಾವಳಿ ರೂಪಿಸಬೇಕು ಎಂದು ಆಗ್ರಹಿಸಿ, ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.
*
ಕಾಯಂಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನಾ ರ್ಯಾಲಿ
ಬೆಂಗಳೂರು:
ಅತಿಥಿ ಉಪನ್ಯಾಸಕರ ಕಾಯಂಗೆ ಸರ್ಕಾರ ವಿಶೇಷ ನಿಯಮಾವಳಿ ರೂಪಿಸಬೇಕು ಎಂದು ಆಗ್ರಹಿಸಿ, ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನಾ ರ್ಯಾಲಿ ನಡೆಸಿದರು.

ರೈಲು ನಿಲ್ದಾಣದಿಂದ ಮುಖ್ಯಮಂತ್ರಿ ನಿವಾಸದ ಕಡೆಗೆ ಹೊರಟ ಪ್ರತಿಭಟನಾಕಾರರನ್ನು ಪೊಲೀಸರು ಶೇಷಾದ್ರಿ ರಸ್ತೆಯಲ್ಲೇ ತಡೆದರು. ಆಗ ಪರಸ್ಪರ ವಾಗ್ವಾದ ನಡೆಯಿತು.

ಬಳಿಕ ಮಾತನಾಡಿದ ಸಂಘದ ಗೌರವಾಧ್ಯಕ್ಷ ರಾಜಶೇಖರ ಮೂರ್ತಿ, ‘ಅರೆಕಾಲಿಕ ಉಪನ್ಯಾಸಕರನ್ನು ನೇಮಕ ಮಾಡಿಕೊಂಡಂತೆ, ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಬೇಕು. ಈ ಸಂಬಂಧ ಬರುವ ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರ ವಿಶೇಷ ನಿಯಮಾವಳಿ ರೂಪಿಸಬೇಕು’ ಎಂದರು.

‘ಈ ಎಲ್ಲ ಪ್ರಕ್ರಿಯೆ ಮುಗಿಯುವವರೆಗೆ ಉಪನ್ಯಾಸಕರಿಗೆ ಮಾಸಿಕ ₹ 25 ಸಾವಿರ ವೇತನ ನೀಡಬೇಕು. ಜತೆಗೆ, ಮಹಿಳಾ ಉಪನ್ಯಾಸಕರಿಗೆ ವೇತನ ಸಹಿತ 3 ತಿಂಗಳ ಹೆರಿಗೆ ರಜೆ ಮಂಜೂರು ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯರಾದ ತಾರಾ ಅನೂರಾಧಾ, ಬಸವರಾಜ ಹೊರಟ್ಟಿ ಭೇಟಿ ನೀಡಿ ಪ್ರತಿಭಟನಾಕಾರರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
*
26ಕ್ಕೆ ಕಾಲೇಜು, ವಿ.ವಿ ಬಂದ್

‘ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡುತ್ತಲೇ ನುಣುಚಿಕೊಳ್ಳುತ್ತಿರುವ ಸರ್ಕಾರದ ಧೋರಣೆ ಖಂಡಿಸಿ, ಫೆ. 26ರಂದು ರಾಜ್ಯದಾದ್ಯಂತ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಬಂದ್ ನಡೆಸಿ ಪ್ರತಿಭಟನೆ ನಡೆಸಲಾಗುವುದು’ ಎಂದು ರಾಜಶೇಖರ ಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT