ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಸಂತ್ರಸ್ತೆಯರಿಗೆ ಪರಿಹಾರ: ‘ಸುಪ್ರೀಂ’ ಸೂಚನೆ

ರಾಷ್ಟ್ರೀಯ ನೀತಿ ರೂಪಿಸಲು ಕೇಂದ್ರಕ್ಕೆ ನಿರ್ದೇಶನ
Last Updated 26 ಮೇ 2016, 19:41 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅತ್ಯಾಚಾರ ಸಂತ್ರಸ್ತೆಯರ ಪುನರ್ವಸತಿಗೆ ‘ನಿರ್ಭಯ ನಿಧಿ’ ಸ್ಥಾಪಿಸಿರುವುದು ಬಾಯಿ ಮಾತಿನ ಸಹಾನುಭೂತಿ ಮಾತ್ರ ಎಂದು ಟೀಕಿಸಿರುವ ಸುಪ್ರೀಂಕೋರ್ಟ್, ಸಂತ್ರಸ್ತೆಯರಿಗೆ ಸಾಕಷ್ಟು ಪರಿಹಾರ ಒದಗಿಸಲು ರಾಷ್ಟ್ರೀಯ ನೀತಿ ರೂಪಿಸ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಅತ್ಯಾಚಾರ ಸಂತ್ರಸ್ತೆಯರಿಗೆ ಸಂಬಂಧಿ ಸಿದಂತೆ ರಾಜ್ಯಗಳಲ್ಲಿ ಬೇರೆಬೇರೆ ನೀತಿ ಅನುಸರಿಸಲಾಗುತ್ತಿದೆ. ಆದ್ದರಿಂದ ಒಂದು ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ನ್ಯಾಯಮೂರ್ತಿಗಳಾದ ಪಿ. ಸಿ. ಪಂತ್ ಮತ್ತು ಡಿ. ವೈ. ಚಂದ್ರಚೂಡ  ಅವನ್ನು ಒಳಗೊಂಡ ರಜಾ ಕಾಲದ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅತ್ಯಾಚಾರ ಸಂತ್ರಸ್ತೆಯರಿಗೆ ಸೂಕ್ತ ಪರಿಹಾರ ಒದಗಿಸಲು ನಿರ್ಭಯ ನಿಧಿ ಒಂದೇ ಸಾಲದು. ಆದ್ದರಿಂದ ಸರ್ಕಾರ ಸ್ಪಷ್ಟ ನೀತಿ ರೂಪಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಅಪರಾಧ ಪ್ರಕ್ರಿಯಾ ಸಂಹಿತೆಯ ಕಲಂ 357(ಎ) ಮತ್ತು ಅತ್ಯಾಚಾರ ಸಂತ್ರಸ್ತರ ಪರಿಹಾರ ಯೋಜನೆಯ ಜಾರಿಯ  ಸ್ಥಿತಿ ಹಾಗೂ ಪರಿಹಾರ ಪಡೆದ ಸಂತ್ರಸ್ತೆಯರ ಸಂಖ್ಯೆಯ ವಿವರಗಳನ್ನು ಒಳಗೊಂಡ ವರದಿಯನ್ನು ಮುಂದಿನ ವಿಚಾರಣೆಯ ವೇಳೆಗೆ ಸಲ್ಲಿಸಬೇಕು ಎಂದು ನ್ಯಾಯಪೀಠವು ಸೂಚಿಸಿದೆ.
ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನೋಟಿಸ್ ನೀಡಿದೆ.

ಈ ಸಂಬಂಧ ಸಲ್ಲಿಸಲಾಗಿರುವ ಹಲವು ರಿಟ್ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠವು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರನ್ನು  ಅಮಿಕಸ್ ಕ್ಯೂರಿ ಆಗಿ (ನ್ಯಾಯಾಲಯದ ಸಹಾಯಕರು) ನೇಮಿಸಿದೆ.

29 ರಾಜ್ಯಗಳ ಪೈಕಿ ಇದುವರೆಗೆ 25 ರಾಜ್ಯಗಳು ಮಾತ್ರ ಸಂತ್ರಸ್ತರ ಪರಿಹಾರ ಯೋಜನೆಯ ಅಧಿಸೂಚನೆ ಹೊರಡಿಸಿವೆ. ಈ ಯೋಜನೆಗಳು ಏಕರೂಪವಾಗಿ ಇಲ್ಲ ಮತ್ತು ಯೋಜನೆಗೆ ಅಗತ್ಯವಾದ ನಿಧಿಯ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಇಂದಿರಾ ಜೈಸಿಂಗ್ ಅವರು ನ್ಯಾಯಪೀಠಕ್ಕೆ ತಿಳಿಸಿದರು.
ಕೆಲವು ರಾಜ್ಯಗಳು ಸಂತ್ರಸ್ತೆಯರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡಿದರೆ ಕೆಲವು ಕೆಲವು ರಾಜ್ಯಗಳು ಕೇವಲ 50 ಸಾವಿರ ರೂಪಾಯಿ ಪರಿಹಾರ ನೀಡಿವೆ ಎಂದು ತಿಳಿಸಿದರು.

ಕೆಲವು ರಾಜ್ಯಗಳಲ್ಲಿ ಅತ್ಯಾಚಾರದ ಎಫ್‌ಐಆರ್ ದಾಖಲಾದ ಕೂಡಲೇ ಪರಿಹಾರ ನೀಡಲಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಮಧ್ಯಂತರ ಪರಿಹಾರ ನೀಡುವ ವ್ಯವಸ್ಥೆ ಇದೆ ಎಂದು ಅಮಿಕಸ್ ಕ್ಯೂರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT