ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಧೂರಿ ದಸರಾ ಮಹೋತ್ಸವಕ್ಕೆ ಸಂಭ್ರಮದ ತೆರೆ

Last Updated 2 ಅಕ್ಟೋಬರ್ 2014, 7:20 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಒಂದು ವಾರ ಕಾಲ ನಡೆದ ಚಾಮರಾಜನಗರ ದಸರಾ ಮಹೋತ್ಸವವು ಬುಧವಾರ ಮುಕ್ತಾಯಗೊಂಡಿತು. ಪ್ರತಿದಿನ ನಾಡಿನ ವಿವಿಧೆಡೆಯಿಂದ ಬಂದಿದ್ದ ಕಲಾವಿದರು ನಾಗರಿಕರಿಗೆ ಸಾಂಸ್ಕೃತಿಕ ರಸದೌತಣ ನೀಡಿದರು. ನೃತ್ಯ ರೂಪಕಗಳ ಝಲಕ್‌ಗೆ ಪ್ರೇಕ್ಷಕರು ಪುಳಕಗೊಂಡರು. ನಾಡಿನ ಪ್ರಖ್ಯಾತ ಗಾಯಕರು ಮತ್ತು ಸ್ಥಳೀಯ ಗಾಯಕರಿಂದ ಸುಗಮ ಸಂಗೀತದ ಹೊನಲು ಅರಿಯಿತು.

ಹಾಸ್ಯ ಸಂಜೆಯಲ್ಲಿ ಜನರು ಮಿಂದೆದ್ದರು. ಚಲನಚಿತ್ರ ಗೀತೆಗಳ ನೃತ್ಯ ಸಂಜೆಗೆ ಮನ ಸೋತರು. ಕಳೆದ ಬಾರಿಗಿಂತ ಈ ವರ್ಷ ಜಿಲ್ಲಾಡಳಿತ, ಮೈಸೂರು ದಸರಾ ಆಚರಣೆಯ ಉಸ್ತುವಾರಿ ಸಮಿತಿ ಸುವ್ಯವಸ್ಥಿತವಾಗಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ನಿರೀಕ್ಷೆಗೂ ಮೀರಿ ಜನರು ಕಾರ್ಯಕ್ರಮ ನೋಡಲು ಆಗಮಿಸಿದ್ದರು.

ನಿನ್ನೆ ನಡೆದ ಕಲಾ ತಂಡಗಳ ಮೆರವಣಿಗೆ, ಸಂಗೀತ ನಿರ್ದೇಶಕ ಗುರುಕಿರಣ್‌ ನೇತೃತ್ವದ ಚಲನಚಿತ್ರ ಸಂಗೀತ ಸಂಜೆಗೆ ಜನಸಾಗರ ಹರಿದುಬಂದಿತ್ತು.

ಕೊನೆಯ ದಿನವಾದ ಬುಧವಾರ ಕೂಡ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿನ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಸೊಬಗು ಅನಾವರಣಗೊಂಡಿತು. ಕನ್ನಡ ಗೀತೆಗಳು ಮತ್ತು ಜನಪದ ಗೀತೆಗಳ ಗಾಯನ ನಾಗರಿಕರಿಗೆ ಮೋಡಿ ಮಾಡಿತು.

ಬೇಸರ:
ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ಜನರು ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಚಾಮರಾಜೇಶ್ವರನ ಸನ್ನಿಧಿಗೆ ಧಾವಿಸುತ್ತಿದ್ದರು. ಆದರೆ, ಅವರಿಗೆ  ಕಾರ್ಯಕ್ರಮ ವೀಕ್ಷಿಸಲು ಸೂಕ್ತ ಆಸನ ವ್ಯವಸ್ಥೆ ಇರಲಿಲ್ಲ.

ಜಿಲ್ಲಾಡಳಿತ, ದಸರಾ ಆಚರಣಾ ಸಮಿತಿ ಕಲ್ಪಿಸಿದ ಆಸನ ವ್ಯವಸ್ಥೆ ಯಾವುದಕ್ಕೂ ಸಾಲುತ್ತಿರಲಿಲ್ಲ. ಜತೆಗೆ, ಅಗತ್ಯವಿರುವ ಸ್ಥಳದಲ್ಲಿ ಹೆಚ್ಚುವರಿ ಟಿವಿ ಅಳವಡಿಸಿ ಕಾರ್ಯಕ್ರಮ ನೋಡಲು ಅವಕಾಶ ಕಲ್ಪಿಸಬಹುದಿತ್ತು ಎನ್ನುವ ಅಭಿಪ್ರಾಯ ಕೇಳಿಬಂದಿತು. ಜನರು ದೇವಸ್ಥಾನದ ಗೋಡೆಬದಿ, ವೇದಿಕೆಯ ಎಡ–ಬದಿಯಲ್ಲಿ ನಿಂತುಕೊಂಡು ಕಾರ್ಯಕ್ರಮ ವೀಕ್ಷಿಸಿದರು.
ಜನರನ್ನು ನಿಯಂತ್ರಣಕ್ಕೆ ತರುವಲ್ಲಿ ಪೊಲೀಸರು ಬೆವರು ಹರಿಸಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT