ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ನೀರಿಳಿಸಿದ ನಾಗರಿಕರು

ರಾಮಮೂರ್ತಿನಗರ: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿದ್ದ ‘ಜನ­ಸ್ಪಂದನ
Last Updated 23 ಮೇ 2015, 20:22 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ಲಿ ನೆರೆದಿದ್ದ ಎಲ್ಲರೂ ಒಂದಿಲ್ಲೊಂದು ಸಮಸ್ಯೆಗಳನ್ನು ಹೊತ್ತು ತಂದಿದ್ದರು. ಅವರಿಗೆ ಶಾಸಕರಿಗಿಂತ ಅಧಿಕಾರಿಗಳ ಮೇಲೆ ಅಧಿಕ ಕೋಪವಿದ್ದಂತಿತ್ತು. ಪ್ರಶ್ನೆ ಕೇಳುತ್ತಿದ್ದ ಪ್ರತಿಯೊಬ್ಬರೂ ಅಧಿಕಾರಿಗಳೇ ತಮಗೆ ಉತ್ತರಿಸಲಿ ಎಂದು ಹಠ ಮಾಡುತ್ತಿದ್ದರು.

 ಕೆಲವರಂತೂ ಅಧಿಕಾರಿಗಳ ಉತ್ತರಕ್ಕೆ ತೃಪ್ತರಾಗದೇ ಧಿಕ್ಕಾರ ಕೂಗಿ, ತರಾಟೆ ಕೂಡ ತೆಗೆದುಕೊಂಡರು. ಅವರಲ್ಲಿ ಬಹುತೇಕರು ಇಂತಹದೊಂದು ಅಪೂರ್ವ ಅವಕಾಶ ಒದಗಿಸಿದವರಿಗೆ ಧನ್ಯವಾದಗಳು ಎಂದು  ಹೇಳಿದರು.

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮಮೂರ್ತಿ ನಗರದ ಹೋಲಿ ಫ್ಯಾಮಿಲಿ ಚರ್ಚ್‌ ಆವರಣದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಶನಿವಾರ ಆಯೋಜಿಸಿದ್ದ ‘ಜನ­ಸ್ಪಂದನ’ ಕಾರ್ಯಕ್ರಮದಲ್ಲಿ ಈ ದೃಶ್ಯ ಕಂಡುಬಂತು. ಕಾರ್ಯಕ್ರಮದಲ್ಲಿ ಶಾಸಕ ಬೈರತಿ ಬಸವರಾಜು ಮತ್ತು ಕ್ಷೇತ್ರ ಭಾಗಗಳಾದ ಹೊರಮಾವು – ವಾರ್ಡ್‌ 25, ರಾಮಮೂರ್ತಿ ನಗರ – ವಾರ್ಡ್‌ 26 ಮತ್ತು ವಿಜಿನಾಪುರ – ವಾರ್ಡ್‌ 51ರ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಜನಸ್ಪಂದನದಲ್ಲಿ ಜನರು ಒಳಚರಂಡಿ ಸಮಸ್ಯೆ, ರಸ್ತೆ ಡಾಂಬರೀಕರಣ, ತ್ಯಾಜ್ಯ ವಿಲೇವಾರಿ, ಕುಡಿಯುವ ನೀರು, ಬೀದಿದೀಪ, ಪಾದಚಾರಿ ಮಾರ್ಗ ಅತಿಕ್ರಮಣ,  ಸಂಚಾರ ಸಮಸ್ಯೆ, ಒಳಚರಂಡಿ,  ಪುಂಡರ ಹಾವಳಿ, ಬಸ್‌ ಸಮಸ್ಯೆ.. ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದರು.

ಇನ್ನೂ ಕೆಲವರು ಕೆರೆ ಜಾಗಗಳಲ್ಲಿ ನಿರ್ಮಿಸಿರುವ ನಮ್ಮ ಮನೆಗಳಿಗೆ ಹಕ್ಕು ಪತ್ರಗಳನ್ನು ನೀಡಿಲ್ಲ.  ಮನೆ ಒಡೆದು ಹಾಕಿ ನಮ್ಮನ್ನು ಬೀದಿಪಾಲು ಮಾಡುತ್ತಾರೆ ಎನ್ನುವ ಭಯ ಕಾಡುತ್ತಿದೆ. ದಯವಿಟ್ಟು ಹಕ್ಕುಪತ್ರ ಕೊಡಿಸಿ ಮನೆಗಳನ್ನು ರಕ್ಷಿಸಿ ಎಂದು ಶಾಸಕರಿಗೆ ಹನಿಗಣ್ಣಾಗಿ ಮನವಿ ಮಾಡಿಕೊಂಡರು.

‘ಈ ಕುರಿತು ಕಂದಾಯ ಸಚಿವರೊಂದಿಗೆ ಚರ್ಚಿಸಿದ್ದೇನೆ. ಹಕ್ಕುಪತ್ರ ನೀಡುವಂತೆ ಮನವಿ ಮಾಡಿಕೊಂಡಿದ್ದೇನೆ. ಮನೆಗಳನ್ನು ಒಡೆಯಲು ಬಿಡುವುದಿಲ್ಲ. ಒಂದೊಮ್ಮೆ, ಮನೆ ಒಡೆದು ಹಾಕಿದರೆ ಆ ಕ್ಷಣದಲ್ಲೇ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಬಸವರಾಜು ಹೇಳಿದರು.

ಚಂದಾ ಎತ್ತಿ ಬಣ್ಣ ಕೊಡಿಸುವೆ: ‘ರಾಮಮೂರ್ತಿ ನಗರದಲ್ಲಿ ಅನೇಕ ಸಿಗ್ನಲ್‌ಗಳಲ್ಲಿ ಪಾದಚಾರಿ ಮಾರ್ಗದ (ಝಿಬ್ರಾ ಕ್ರಾಸ್‌) ಬಣ್ಣ ಬಳಿದಿಲ್ಲ. ಕೇಳಿದರೆ ಸಂಚಾರ ಪೊಲೀಸರು ಹಣವಿಲ್ಲ ಎಂದು ಹೇಳುತ್ತಾರೆ. ಇದರಿಂದ ವಯೋವೃದ್ಧರು ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವಂತಾಗಿದೆ. ನಮ್ಮ ಏರಿಯಾದಲ್ಲಿ ಚಂದಾ ಎತ್ತಿ ಹಣ ಸಂಗ್ರಹಿಸಿ ಬಣ್ಣ ಕೊಡಿಸುತ್ತೇನೆ. ಆಗಲಾದರೂ ಬಳಿಯುತ್ತಾರೋ ನೋಡೋಣ’ ಎಂದು ಬೆಂಗಳೂರು ನಾಗರಿಕ  ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.

ಸಹಾಯದ ಭರವಸೆ: ‘ಸ್ವಾಮಿ, ನಾನು ಮತ್ತು ನನ್ನ ತಾಯಿ ಇಬ್ಬರೂ ಅಂಗವಿಕಲರು. ನಮಗೆ ಜೀವನ ಸಾಗಿಸಲು ಸಣ್ಣದೊಂದು ಅಂಗಡಿ ತೆರೆಯಲು ಆರ್ಥಿಕ ನೆರವು ನೀಡಿ’ ಎಂದು ರಾಮಮೂರ್ತಿ ನಗರದ ನಿವಾಸಿ ಶಿವಕುಮಾರ್ ಅವರು ಮನವಿ ಮಾಡಿಕೊಂಡರು.

ಅದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಸವರಾಜು ಅವರು ‘ನನ್ನ ಸ್ವಂತ ಖರ್ಚಿನಲ್ಲಿ ಶಿವಕುಮಾರ್‌ ಅವರಿಗೆ ಅಂಗಡಿ ತೆರೆಯಲು ಅಗತ್ಯವಾದ ಧನ ಸಹಾಯ ಮಾಡುತ್ತೇನೆ’ ಎಂದು ಘೋಷಿಸಿದರು. ಇದರ ಬೆನ್ನಲ್ಲೇ, ರಾಮಮೂರ್ತಿ ನಗರದ ಬಾಲಕೃಷ್ಣ ಎನ್ನುವವರು  ‘ನಾನು ಕೂಡ ಆತನಿಗೆ ₨5 ಸಾವಿರ ನೆರವು ನೀಡುವೆ’ ಎಂದು ಹೇಳಿದರು.

ಅಬ್ರಾಹಂ ಎನ್ನುವವರು ‘ಕಾಲಿಗೆ ಶಸ್ತ್ರಚಿಕಿತ್ಸೆಯಾಗಿ ನಡೆದಾಡಲು ಆಗುತ್ತಿಲ್ಲ. ನನಗೊಂದು ಗಾಲಿ ಕುರ್ಚಿ ಕೊಡಿಸಿ’ ಎಂದು ಮನವಿ ಮಾಡಿಕೊಂಡರು. ಅದಕ್ಕೆ ಶಾಸಕರು ‘ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು. ವಿಜಿನಾಪುರದ ನಿವಾಸಿ ಜಯಭಾರತಿ, ‘ನಾವು ಬಡವರು ಸ್ವಾಮಿ, ಮೂರು ಮಕ್ಕಳಿವೆ. ಗಂಡ ಹೋಟೆಲ್‌ನಲ್ಲಿ ಕೆಲಸ ಮಾಡ್ತಾರೆ. ತುಂಬಾ ಕಷ್ಟಲ್ಲಿದ್ದೇವೆ. ನಮಗೆ ಸಹಾಯ ಮಾಡಿ’ ಎಂದು ಬೇಡಿಕೊಂಡರು. ಆಗ ಬಸವರಾಜು ‘ನಾಳೆ ಮನೆಗೆ ಬಂದು ಕಾಣಮ್ಮ, ಸಹಾಯ ಮಾಡ್ತೀನಿ’ ಎಂದರು.

ಧರಣಿ ಬೆದರಿಕೆ: ‘ನಾಲ್ಕು ವರ್ಷದಿಂದ ಮನವಿ ಮಾಡಿಕೊಳ್ಳುತ್ತಿದ್ದರೂ ನಮ್ಮ ಬಡಾವಣೆಯಲ್ಲಿ ಒಳಚರಂಡಿ ನಿರ್ಮಿಸಿಲ್ಲ. ರಸ್ತೆಗೆ ಟಾರು ಹಾಕಿಲ್ಲ. ಇದರಿಂದ ತುಂಬಾ ತೊಂದರೆ ಎದುರಿಸುತ್ತಿದ್ದೇವೆ. ಅಧಿಕಾರಿಗಳನ್ನು ಕೇಳಿದರೆ ಅನುದಾನ ಬಿಡುಗಡೆಯಾಗಿದೆ ಎನ್ನುತ್ತಾರೆ. ಗುತ್ತಿಗೆದಾರ ಹಣವಿಲ್ಲ ಎಂದು ಹೇಳುತ್ತ ತಿರುಗುತ್ತಿದ್ದಾನೆ. ನಮ್ಮ ಸಮಸ್ಯೆ ಬಗೆಹರಿಯುವುದು ಯಾವಾಗ?’ ಎಂದು ನರಸಿಂಹಯ್ಯ ಬಡಾವಣೆಯ ನಿವಾಸಿ ನೀಲಕಂಠ ಮೂರ್ತಿ ಪ್ರಶ್ನೆ ಎತ್ತಿದರು.

ಈ ವೇಳೆ ಜಲಮಂಡಳಿ ಅಧಿಕಾರಿ ನೀಡಿದ ಉತ್ತರದಿಂದ ತೃಪ್ತರಾಗದ ನರಸಿಂಹಯ್ಯ, ಬಡಾವಣೆಯ ಕೆಲ ನಿವಾಸಿಗಳು ಎದ್ದು ನಿಂತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತ, ‘ನಾಚಿಕೆಯಾಗಬೇಕು ನಿಮಗೆ’ ಎಂದು ಕೂಗಿದರು. ‘ವಾರದೊಳಗೆ ಈ ಸಮಸ್ಯೆ ಬಗೆಹರಿಸದಿದ್ದರೆ ಶಾಸಕರ ಮನೆ ಮುಂದೆ ಧರಣಿ ನಡೆಸುತ್ತೇವೆ’ ಎಂದು ಬೆದರಿಕೆ ಹಾಕಿದರು.

ಹೊಸ ಸಂಸಾರ ಕಟ್ಟಿಕೊಂಡಿದ್ದೇನೆ: ಕಾರ್ಯಕ್ರಮ ಉದ್ದೇಶಿಸಿ  ಮಾತನಾಡಿದ ಶಾಸಕ ಬಸವರಾಜು ‘ಕ್ಷೇತ್ರದಾದ್ಯಂತ ಬಹಳಷ್ಟು ಸಮಸ್ಯೆಗಳಿದ್ದವು. ನನ್ನ ಎರಡು ವರ್ಷದ ಅಧಿಕಾರಾವಧಿಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಹೊಸ ಸಂಸಾರ ಕಟ್ಟಿಕೊಂಡಂತಾಗಿದೆ. ಇನ್ನುಳಿದ ಮೂರು ವರ್ಷಗಳ ಅವಧಿಯಲ್ಲಿ ನಿಮ್ಮ ಎಲ್ಲ ಸಮಸ್ಯೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿ, ಪ್ರಾಮಾಣಿಕವಾಗಿ ಬಗೆಹರಿಸಲು ಪ್ರಯತ್ನಿಸುತ್ತೇನೆ’ ಎಂದರು.

‘ಬಡ ಮಕ್ಕಳಿಗೆ ವಸತಿ ನಿಲಯ ನಿರ್ಮಿಸುವ ಕಾರ್ಯ ಮತ್ತು ಕೋರ್ಟ್‌ ಕಾಮಗಾರಿ ಪ್ರಗತಿಯಲ್ಲಿದೆ. ಹೊಯ್ಸಳ ನಗರ ಮತ್ತು ಹೊರಮಾವು ಸುತ್ತಲಿನ ಗ್ರಾಮಗಳಿಗೆ ಕಾವೇರಿ ನೀರು ಒದಗಿಸಲು ಮತ್ತು ಒಳ ಚರಂಡಿ ನಿರ್ಮಿಸುವುದಕ್ಕಾಗಿ ₹5,184 ಕೋಟಿ ಯೋಜನೆ ರೂಪಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆರೇಳು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ತಿಳಿಸಿದರು.

ನಾಚಿಕೆ ಇಲ್ಲ ನಿನಗೆ: ಕಾರ್ಯಕ್ರಮದಲ್ಲಿ ಕಲ್ಕೆರೆಯ ಪುಣ್ಯಭೂಮಿ ಬಡಾವಣೆ ನಿವಾಸಿ ಮುರುಳಿ, ‘ಒಂದು ವರ್ಷದಿಂದ ಕುಡಿಯುವ ನೀರಿನ ತೊಂದರೆ ತೀವ್ರವಾಗಿದೆ’ ಎಂದು ಅಳಲು ತೋಡಿಕೊಂಡರು. ಅದಕ್ಕೆ ಶಾಸಕ ಬಸವರಾಜು ‘ನನ್ನ ಗಮನಕ್ಕೆ ಏಕೆ ತರಲಿಲ್ಲ’ ಎಂದು ಕೇಳಿದರು.

ಆಗ ಮುರುಳಿ ‘ಸಂಬಂಧಿತ ಅಧಿಕಾರಿಗೆ 40 ಬಾರಿ ಫೋನು ಮಾಡಿರುವೆ’ ಎಂದು ತಿಳಿಸಿದರು. ಈ ವೇಳೆ ಬಸವರಾಜು ವೇದಿಕೆಯ ಮೇಲಿದ್ದ ಜಲಮಂಡಳಿಯ ಅಧಿಕಾರಿಗೆ ‘ನಿನಗೆ ನಾಚಿಕೆ ಇಲ್ಲ. ಯಾಕೆ ಸಮಸ್ಯೆಯನ್ನು ನನ್ನ ಗಮನಕ್ಕೆ ತರಲಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳಿಗೆ ಎಚ್ಚರಿಕೆ: ‘ಎಲ್ಲ ಇಲಾಖೆಗಳ ಅಧಿಕಾರಿಗಳು ಕೆಲಸದ ಸಮಯದಲ್ಲಿ ಕಚೇರಿಯಲ್ಲಿದ್ದು ಕಾರ್ಯ ನಿರ್ವಹಿಸಬೇಕು. ಾರ್ವಜನಿಕರಿಂದ ಕೇಳಿಬರುವ ದೂರುಗಳಿಗೆ ಅಸಡ್ಡೆ ತೋರದೇ ಸಕಾರಾತ್ಮಕವಾಗಿ ಸ್ಪಂದಿಸಬೇಕು. ನಾನು ಕೂಡ ಇನ್ನು ಮೇಲೆ ಕಚೇರಿಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿ, ಕರ್ತವ್ಯಲೋಪ ಎಸಗುವವರ ವಿರುದ್ಧ ಶಿಸ್ತುಕ್ರಮತೆಗೆದುಕೊಳ್ಳುತ್ತೇನೆ’ ಎಂದು ವೇದಿಕೆ ಮೇಲಿದ್ದ ಅಧಿಕಾರಿಗಳಿಗೆ ಶಾಸಕರು ಎಚ್ಚರಿಸಿದರು.
*
ಸಾರ್ವಜನಿಕರ ಅಳಲು...

ಚುರುಕು ಮುಟ್ಟಿಸಿ
ನಮ್ಮ ಬಡಾವಣೆಯಲ್ಲಿ ಅಂಚೆ ಕಚೇರಿ ಇಲ್ಲ. ಅಡ್ಡ ರಸ್ತೆಗಳಿಗೆ ನಾಮಫಲಕವಿಲ್ಲ. ಪ್ರತಿಯೊಂದಕ್ಕೂ ನಾವು ಶಾಸಕರನ್ನು ಸಂಪರ್ಕಿಸಬೇಕಾಗಿದೆ. ಶಾಸಕರು ಅಧಿಕಾರಿಗಳಿಗೆ ಚುರುಕು ಮುಟ್ಟಿಸಲಿ.
-ಜಯರಾಮ್,
ಎನ್ಆರ್‌ಐ ಬಡಾವಣೆ ಕ್ಷೇಮಾಭಿವೃದ್ಧಿ ಸಂ

ಕೆರೆಯಾಗುತ್ತದೆ ರಸ್ತೆ
ಮಳೆ ನೀರಿಗೆ ರಸ್ತೆ ಕೆರೆಯಂತಾಗುತ್ತದೆ. ಗಂಡನಿಗೆ ಪದೇ ಪದೇ ಡಯಾಲಿಸಿಸ್‌ಗೆ ಕರೆದುಕೊಂಡು ಹೋಗಬೇಕಾದರೆ ಮನೆಗೆ ಆಟೊ, ಆಂಬುಲೆನ್ಸ್‌ ಬರುತ್ತಿಲ್ಲ.
-ರಜಿನಾ,
ಜೆ.ಸಿ.ಬಡಾವಣೆ


ಫೋನೇ ಎತ್ತೋದಿಲ್ಲ
ಕ್ರೈಸ್ತ ದಿ ಕಿಂಗ್‌ ಶಾಲೆಯ ರಸ್ತೆ ಚರಂಡಿ ನೀರು ರಸ್ತೆಗೆ ನುಗ್ಗಿ ವಿದ್ಯಾರ್ಥಿಗಳಿಗೆ ನಡೆದಾಡಲು ಕಷ್ಟವಾಗುತ್ತಿದೆ. ಹಾವು, ಸೊಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಅಧಿಕಾರಿ­ಗಳು  ಫೋನೇ ಎತ್ತುವುದಿಲ್ಲ.
-ಎಸ್‌.ಕೆ.ವರದರಾಜನ್‌,
ರಾಮಮೂರ್ತಿ ನಗರ


ಕ್ಯಾರೆ ಎನ್ನುತ್ತಿಲ್ಲ
ಒಳಚರಂಡಿ ಸ್ವಚ್ಛಗೊಳಿಸಿ ಐದು ವರ್ಷವಾಯ್ತು. ಹೂಳು ತೆಗೆಸುವಂತೆ ಅಧಿಕಾರಿಗಳಿಗೆ ಹತ್ತಾರು ಬಾರಿ ಹೇಳಿದರೂ ಕ್ಯಾರೆ ಎನ್ನುತ್ತಿಲ್ಲ. ರಸ್ತೆ ಕಾಮಗಾರಿಯಂತೂ ತುಂಬಾ ಕಳಪೆ.
-ಎನ್‌.ಎಸ್‌.ಆಂಜಿನಪ್ಪ,
ರಾಮಮೂರ್ತಿ ನಗರ


10 ದಿನಕ್ಕೊಮ್ಮೆ ಕಸ ಎತ್ತುತ್ತಾರೆ


ನಮ್ಮ ಬಡಾವಣೆಯಲ್ಲಿ ಕಸದ ಸಮಸ್ಯೆ ತುಂಬಾ ಇದೆ. 10 ದಿನಕ್ಕೊಮ್ಮೆ ತ್ಯಾಜ್ಯ ತೆಗೆಯುತ್ತಾರೆ. ಮಳೆ ಸುರಿದ ಸಹಿಸಲಾರದಷ್ಟು ದುರ್ನಾತ ಹರಡುತ್ತದೆ.
-ಬಿಂದುವೇಣುಗೋಪಾಲ್
ಆಂಧ್ರ ಮುನಿರೆಡ್ಡಿ ಬಡಾವಣೆ


ಶಾಸಕರು, ಅಧಿಕಾರಿಗಳ ಮೊಬೈಲ್‌ ಸಂಖ್ಯೆಗಳು
ಶಾಸಕ ಬೈರತಿ ಬಸವರಾಜು – 9900571699, ಕೆ.ಆರ್‌.ಪುರ ತಹಶೀಲ್ದಾರ್‌ ಬಿ.ಆರ್‌.ಹರೀಶ್‌ ನಾಯಕ್‌ – 9845923449, ಬಿಬಿಎಂಪಿ ಜಂಟಿ ಆಯುಕ್ತ ದೇವರಾಜ್ –9480685350, ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಚ್ಚೇಗೌಡ – 9480683438, ಜಲಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ ಎನ್‌.ಸತೀಶ್‌ – 9845444083, ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಜಿ.ಮಹಾದೇವಗೌಡ – 9845444012, ಬಿಡಿಎ ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟೇಶ್‌ – 9900098336, ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಎನ್.ಕೃಷ್ಣಮೂರ್ತಿ – 9845630110, ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ ಶಶಿಧರ್– 9945525730, ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ನಾಗರಾಜ್ – 94409844866, ಕೆ.ಆರ್.ಪುರ ಇನ್‌ಸ್ಪೆಕ್ಟರ್‌ ಸಂಜೀವರಾಯಪ್ಪ – 9449781535, ಹೆಣ್ಣೂರು ಇನ್‌ಸ್ಪೆಕ್ಟರ್‌ ಲಕ್ಷ್ಮೀ ನಾರಾಯಣ ಪ್ರಸಾದ್ – 9480801225, ರಾಮಮೂರ್ತಿ ನಗರ ಇನ್‌ಸ್ಪೆಕ್ಟರ್‌ ವಿ.ಎಲ್‌.ರಮೇಶ್‌ – 9480801224, ಬಿಎಂಟಿಸಿ ವಿಭಾಗೀಯ ಸಂಚಾರ ಅಧಿಕಾರಿ ಚಂದ್ರಶೇಖರ್‌ – 7760991012, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಚಂದ್ರಶೇಖರಯ್ಯ – 9448332195.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT