ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹರಿಗೆ ವಸತಿ: ಸಿಎಜಿ ಆಕ್ಷೇಪ

Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇಂದಿರಾ ಆವಾಸ್‌ ಯೋಜನೆಯಲ್ಲಿ ಸಾವಿರಾರು ಅನರ್ಹರಿಗೆ ಮನೆ ಕಟ್ಟುವುದಕ್ಕೆ ನೆರವು ನೀಡಿರುವುದನ್ನು ಆಕ್ಷೇಪಿಸಿ­ರುವ ಮಹಾ­ಲೇಖಪಾಲರು (ಸಿಎಜಿ), ವಸತಿ­ರಹಿತ­ರನ್ನು ಸರಿಯಾಗಿ ಅಂದಾಜು ಮಾಡದ ಹಲವು ರಾಜ್ಯಗಳ ಕಾರ್ಯ­ವೈಖರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

೨೦೦೮ರ ಏಪ್ರಿಲ್‌ನಿಂದ  ೨೦೧೩ರ ಮಾರ್ಚ್‌ ಅವಧಿಯಲ್ಲಿ ೨೭ ರಾಜ್ಯಗಳ ೧೬೮ ಜಿಲ್ಲೆಗಳಲ್ಲಿ ಅನೇಕ ಅನರ್ಹರನ್ನು ಆರಿಸಲಾಗಿದೆ ಎಂದು ಸಿಎಜಿ ಹೇಳಿದೆ.

‘೧೨ ರಾಜ್ಯಗಳಲ್ಲಿ ಬಡತನರೇಖೆ­ಯಡಿಗೆ  (ಬಿಪಿಎಲ್‌) ಸೇರದ ೩೬,೭೫೧ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ರೂ೮೯.೧೫ ಕೋಟಿ ನೆರವು ನೀಡಲಾಗಿದೆ.  ೧೧ ರಾಜ್ಯಗಳಲ್ಲಿ ೧೦,೧೮೪ ಅನರ್ಹ­ರನ್ನು ಆಯ್ಕೆ ಮಾಡಿ ರೂ ೩೧.೭೩ ಕೋಟಿ ನೀಡಲಾಗಿದೆ’ ಎಂದು ಶುಕ್ರವಾರ ಸಂಸತ್‌­ನಲ್ಲಿ ಮಂಡಿಸಿದ ಸಿಎಜಿ ವರದಿ­ಯಲ್ಲಿ ಹೇಳಲಾಗಿದೆ.

ಯೋಜನೆಯಡಿ ಅರ್ಜಿ ಸಲ್ಲಿಸಿ ‘ಕಾಯ್ದಿ­­ರಿ­­ಸಿದ  ಪಟ್ಟಿಯಲ್ಲಿದ್ದ’ವರನ್ನು ಬಿಟ್ಟು ೩೩,೫೩೬ ಅನರ್ಹ ಫಲಾನು­ಭವಿ­ಗಳಿಗೆ  ಏಳು ರಾಜ್ಯಗಳಲ್ಲಿ ರೂ೧೩೮.೦೨ ಕೋಟಿ ನೆರವು ನೀಡಲಾಗಿದೆ. ಎಂಟು ಜಿಲ್ಲೆಗಳಲ್ಲಿ ೧,೬೫೪ ಫಲಾನುಭವಿಗಳಿಗೆ ರೂ೫.೩೭ ಕೋಟಿ ನೆರವು ನೀಡಲಾಗಿದೆ. ಆದರೆ ಇವರೆಲ್ಲಾ ಈಗಾಗಲೇ ಸುಸಜ್ಜಿತ ಮನೆಗಳನ್ನು ಕಟ್ಟಿಕೊಂಡವರು ಎಂಬು­ದನ್ನು ವರದಿ ಬಹಿರಂಗಗೊಳಿಸಿದೆ.

ಎಂಟು ರಾಜ್ಯಗಳಲ್ಲಿ ೫,೮೨೪ ಫಲಾ­ನುಭವಿಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಆಯ್ಕೆ ಮಾಡಲಾಗಿದ್ದು, ಇವರಿಗೆ ರೂ೧೪.೬೭ ಕೋಟಿ ನೆರವು ನೀಡಲಾಗಿದೆ.

ಆಂಧ್ರಪ್ರದೇಶ, ಅರುಣಾ­ಚಲ ಪ್ರದೇಶ, ಗೋವಾ, ಹರಿಯಾಣ, ಹಿಮಾ­ಚಲ ಪ್ರದೇಶ, ಜಾರ್ಖಂಡ್‌, ಕೇರಳ, ಮಹಾ­ರಾಷ್ಟ್ರ, ಮಣಿಪುರ, ಮೇಘಾ­ಲಯ, ನಾಗಾಲ್ಯಾಂಡ್‌, ಉತ್ತರಾ­ಖಂಡ, ಪಶ್ಚಿಮ ಬಂಗಾಳ ಮತ್ತು ಪಂಜಾ­ಬ್‌ನ ಮೂರು ಜಿಲ್ಲೆಗಳಲ್ಲಿ ನಿಜವಾದ ವಸತಿರಹಿತರನ್ನು ಪತ್ತೆಹಚ್ಚಿಲ್ಲ ಎಂದೂ ವರದಿ ಹೇಳಿದೆ.

ರೈಲ್ವೆ ಬೊಕ್ಕಸಕ್ಕೆ ನಷ್ಟ
ಸರಕು ಸಾಗಣೆ ಬೋಗಿಗಳು ಸರಿಯಾದ ಸಮಯಕ್ಕೆ ಲಭ್ಯವಾಗದ ಕಾರಣ ರೈಲ್ವೆ ಬೊಕ್ಕಸಕ್ಕೆ ರೂ೧,೬೩೫.೬೭ ಕೋಟಿ ನಷ್ಟ ಉಂಟಾಗಿದೆ ಎಂದೂ ಸಿಎಜಿ ವರದಿ ಹೇಳಿದೆ.

ರೈಲ್ವೆಯ ಒಟ್ಟು ಆದಾಯದಲ್ಲಿ ಶೇ ೬೬ರಷ್ಟು ಪಾಲು ಸರಕು ಸಾಗಣೆ­ಯಿಂದ ಬರುತ್ತಿದೆ. ಸಿಬ್ಬಂದಿ ಕೊರತೆ, ರೈಲ್ವೆ ಮಾರ್ಗಗಳ ಅಲಭ್ಯತೆ ಮತ್ತಿತರ ಕಾರಣಗಳಿಂದಾಗಿ ಈ ನಷ್ಟ ಸಂಭವಿಸುತ್ತಿದೆ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT