ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೂಪ್ ಪ್ರವೇಶ

Last Updated 8 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ನಿರ್ಮಾಪಕ ಸಾ.ರಾ. ಗೋವಿಂದು ಅವರ ಪುತ್ರ ಅನೂಪ್ ಚಂದನವನಕ್ಕೆ ‘ಡವ್’ ಚಿತ್ರದ ಮೂಲಕ ಕಾಲಿರಿಸಿದ್ದಾರೆ. ಸಿನಿಮಾ ಹಿನ್ನೆಲೆಯ ಕುಟುಂಬದ  ಮತ್ತೊಂದು ಕುಡಿ ಚಿತ್ರರಂಗಕ್ಕೆ ಜೀಕಿದೆ.

ಕನ್ನಡ ಚಿತ್ರರಂಗದ ಪರಿಚಿತ ಸಿನಿಮಾ ನಿರ್ಮಾಪಕರು ಸಾ.ರಾ. ಗೋವಿಂದು. ಇದೀಗ ಅವರ ಪುತ್ರ ಅನೂಪ್ ಕೂಡ ಚಿತ್ರರಸಿಕರಿಗೆ ಪರಿಚಿತನಾಗುವ ಹಾದಿಯಲ್ಲಿದ್ದಾರೆ. ‘ಡವ್’ ಚಿತ್ರದ ಮೂಲಕ ಅನೂಪ್ ಮೊದಲ ಪ್ರಯತ್ನ ಆರಂಭವಾಗಿದೆ. ಮೊದಲ ಬಾರಿ ಅನೂಪ್ ನಾಯಕರಾಗಿ ಅಭಿನಯಿಸಿದ ‘ಡವ್’ ಇಂದು (ಅ.9) ತೆರೆಗೆ ಬರುತ್ತಿದೆ.

ಶಿಕ್ಷಣದ ವಿಚಾರಕ್ಕೆ ಬಂದರೆ ಅನೂಪ್ ಎಂ.ಬಿ.ಎ ಪದವೀಧರ. ತಂದೆ ಗಾಂಧಿನಗರದಲ್ಲಿ ಹೆಸರಿರುವ, ಪ್ರಭಾವಿ ವ್ಯಕ್ತಿಯಾಗಿದ್ದರೂ, ಸ್ವತಃ ತನಗೆ ತಕ್ಕ ಮಟ್ಟಿಗೆ ಸಿನಿಮಾ ಕ್ಷೇತ್ರದ ಒಡನಾಟವಿದ್ದರೂ ಅನೂಪ್‌ಗೆ ಸಿನಿಮಾದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಯೋಚನೆ ಯಾವತ್ತೂ ಬಂದಿದ್ದಿಲ್ಲ. ‘ಡವ್’ಗೆ ಅವರು ನಾಯಕನಾಗಿದ್ದು ಆಕಸ್ಮಿಕ. ‘ಗಾಂಧಿನಗರದ ಪ್ರಭಾವಿ ವ್ಯಕ್ತಿಯೊಬ್ಬರ ಮಗ ಎಂಬ ನೆಪಕ್ಕೆ ನಾನು ನಾಯಕನಾಗಿಲ್ಲ’ ಎನ್ನುತ್ತಾರೆ  ಅನೂಪ್.

‘ಡವ್’ಗೆ ನಾಯಕನಿಗಾಗಿ ಹುಡುಕಾಟ ನಡೆಸಿದ್ದ ನಿರ್ದೇಶಕ ಸಂತು, ಸಾ.ರಾ. ಗೋವಿಂದು ಅವರೊಂದಿಗೆ ಚೆನ್ನೈಗೆ ತೆರಳಿದ್ದರು. ಅಲ್ಲಿ ಸಂತು ಅಂದುಕೊಂಡ ನಟನ ‘ಡೇಟ್ಸ್’ ಸಿಗದಿದ್ದಾಗ ಬರಿಗೈಲಿ ವಾಪಸಾದರು. ಗೋವಿಂದು ಅವರ ಜೊತೆ ಅವರ ಮನೆಗೆ ಸಂತು ತೆರಳಿದಾಗ ಅನೂಪ್ ನಾಯಿಯನ್ನು ಎತ್ತಿ ಮುದ್ದಾಡುತ್ತಿರುವುದನ್ನು ಕಂಡಿದ್ದರು. ಅನೂಪ್‌ಗೆ ಶ್ವಾನ ಪ್ರೀತಿ ಜಾಸ್ತಿ ಎಂಬುದನ್ನೂ ತಿಳಿದುಕೊಂಡರು. ಬಹುಶಃ ನಿರ್ದೇಶಕರಿಗೆ ಅನೂಪ್ ಆಗಲೇ ಇಷ್ಟವಾಗಿರಬೇಕು. ಮುಂದೆ ಎರಡೇ ದಿನಗಳಲ್ಲಿ ಸಿಹಿ ಪೊಟ್ಟಣದೊಂದಿಗೆ ಅನೂಪ್ ಮನೆಯಲ್ಲಿ ಸಂತು ಹಾಜರು. ಜೊತೆಗೆ ಸಿಹಿ ಸುದ್ದಿಯೂ ಇತ್ತು. ‘ನನ್ನ ಚಿತ್ರಕ್ಕೆ ನಾಯಕನಾಗಲು ಅನೂಪ್ ಸೂಕ್ತವಾಗಿದ್ದಾನೆ’ ಎನ್ನುತ್ತಿದ್ದಂತಲೇ ಅನೂಪ್ ಒಪ್ಪಿಯೂ ಆಗಿತ್ತು.

ನಿರ್ದೇಶಕರೊಂದಿಗೆ ಸತತವಾಗಿ ಒಂಬತ್ತು ತಿಂಗಳು ಓಡಾಡಿ, ಚಿತ್ರ ತಂಡದಲ್ಲಿ ಒಬ್ಬರಾಗುತ್ತ ತಾಂತ್ರಿಕವಾಗಿ, ನಟನೆ ವಿಚಾರವಾಗಿ ಮತ್ತು ಚಿತ್ರ ಸಿದ್ಧವಾಗುವ ಬಗೆಯಾಗಿ ಅನೂಪ್ ಸಾಕಷ್ಟು ಕಲಿತಿದ್ದಾರೆ. ಮೊದಲ ಬಾರಿ ಕ್ಯಾಮೆರಾ ಎದುರಿಸುತ್ತಿದ್ದರೂ ಆ ಅನುಭವ ಕಷ್ಟ ಎನಿಸದಿರುವುದಕ್ಕೆ ಅವರು ಚಿತ್ರತಂಡದೊಂದಿಗೆ ಇಟ್ಟುಕೊಂಡ ಆಪ್ತ ಒಡನಾಟವೇ ಕಾರಣ. ‘ಲೈಮ್ ಲೈಟ್’ನಲ್ಲಿ ತರಬೇತಿಯನ್ನೂ ಪಡೆದ ಅನೂಪ್, ‘ಬಿಳಿ ಹಾಳೆಯಂತಿದ್ದ ನನ್ನಲ್ಲಿ ಸಿನಿಮಾ ತುಂಬಿಸಿದ್ದು ಸಂತು ಅವರೇ’ ಎನ್ನುತ್ತಾರೆ.

‘ಸಾ.ರಾ. ಗೋವಿಂದು ಅವರ ಮಗ ಅಂತಾಗಲಿ, ದೊಡ್ಡದಾಗಿ ಲಾಂಚ್ ಮಾಡಬೇಕು ಎಂದಾಗಲಿ, ಆ್ಯಕ್ಷನ್ ಹೀರೊ ಆಗಬೇಕು ಎಂದಾಗಲಿ– ಇವ್ಯಾವ ಒತ್ತಡವೂ ಇಲ್ಲದೆ, ಚಿತ್ರವನ್ನು ಸಹಜವಾಗಿ ನಿರೂಪಿಸಲಾಗಿದೆ. ಹೀರೊಯಿಸಂ ಇಲ್ಲ. ಕಥೆಗೆ ಏನು ಬೇಕೋ ಅದಕ್ಕೆ ನಾನು ಒಗ್ಗಿಕೊಂಡದ್ದೇನೆ’ ಎನ್ನುತ್ತಾರೆ ಅನೂಪ್. ಚಿತ್ರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಕಾರಣಕ್ಕೆ ಅವರಲ್ಲಿ ಖುಷಿಯಿದ್ದರೂ ಪ್ರೇಕ್ಷಕರು ಹೇಗೆ ಸ್ವೀಕರಿಸುವರೋ ಎಂಬ ಆತಂಕವೂ ಇದೆ. ಆ್ಯಕ್ಷನ್, ರೊಮ್ಯಾನ್ಸ್ ಕಥೆಯ ಈ ಚಿತ್ರಕ್ಕೆ ಸ್ಫೂರ್ತಿಯಾಗಿದ್ದು ಒಂದು ನೈಜ ಘಟನೆ. ಯುವಜನತೆ ತಮ್ಮ ಅನಿಸಿಕೆ–ಆತಂಕಗಳನ್ನು ಹೆತ್ತವರಲ್ಲಿ ಹೇಳಿಕೊಳ್ಳಲಾಗದೇ ತೊಳಲಾಡುವ ವಿಚಾರವೇ ‘ಡವ್’.

ಚಿತ್ರದಲ್ಲಿ ಅನೂಪ್ ಕಾಲೇಜು ಹುಡುಗ. ಅವರ ಪ್ರೀತಿಗೆ ಎರಡು ಛಾಯೆಗಳಿವೆ. ಒಂದರ್ಥದಲ್ಲಿ ಅವರದ್ದು ‘ಡವ್’ ಹೊಡೆಯುವ ಕೆಲಸ ಅಂದರೂ ತಪ್ಪಿಲ್ಲ. ಅವರ ನಿಜ ವ್ಯಕ್ತಿತ್ವಕ್ಕೂ, ಚಿತ್ರದಲ್ಲಿನ ‘ಡವ್ ಬಾಯ್’ಗೂ ಹೊಂದಿಕೆಯಿಲ್ಲವಂತೆ. ಹುಡುಗಿಯರಿಂದ ದೂರವೇ ಇರುವ ಒರಟ ಅವರು. ಅನೂಪ್ ಪಾಲಿಗೆ ಚಿತ್ರದಲ್ಲಿ ಒಂದಷ್ಟು ಆ್ಯಕ್ಷನ್ ಸನ್ನಿವೇಶಗಳಿವೆ. ಮೊದಲ ಚಿತ್ರದಲ್ಲಿ ಆ್ಯಕ್ಷನ್ ನಾಯಕನಾದರೆ ಮುಂದೆ ಅದೇ ಬ್ರಾಂಡ್ ಆಗುವ ಸಾಧ್ಯತೆಗಳಿವೆ ಎಂಬುದು ಅವರಿಗೆ ಗೊತ್ತಿದ್ದರೂ, ಮಾಸ್ ಪ್ರೇಕ್ಷಕನಿಗೆ ಇಷ್ಟವಾಗುವ ನಾಯಕನಾಗುವುದು ಅವರ ಬಯಕೆ.

ನಿರ್ದೇಶಕರು ಏನು ಹೇಳುತ್ತಾರೋ ಅದನ್ನು ನಿಷ್ಠೆಯಿಂದ ನಿರ್ವಹಿಸಿದ್ದು ಅವರ ಪ್ಲಸ್ ಪಾಯಿಂಟ್. ‘ನನ್ನ ಶ್ರಮ ತೆರೆಯ ಮೇಲೆ ಕಾಣಿಸುತ್ತದೆ’ ಎನ್ನುತ್ತಾರೆ ಅನೂಪ್. ಪಾತ್ರಕ್ಕೆ ತಕ್ಕಂತೆ ಒಗ್ಗಿಕೊಳ್ಳುತ್ತೇನೆ ಎನ್ನುವ ಅನೂಪ್‌ಗೆ, ತನಗೋಸ್ಕರ ಚಿತ್ರಕಥೆಯನ್ನು ತಿದ್ದುವುದು ಬೇಕಿಲ್ಲ. ಅವರೊಬ್ಬ ನಟನಷ್ಟೆ. ಕಥೆಯೇ ‘ಡವ್’ ಸಿನಿಮಾ ನಾಯಕ ಎಂಬುದು ಅವರ ಅರಿಕೆ.

ಮೊದಲ ಚಿತ್ರ ‘ಡವ್’ ಆರಂಭವಾಗಿ ಬಿಡುಗಡೆಯ ಹಂತಕ್ಕೆ ಬರಲು ಎರಡು ವರ್ಷಗಳನ್ನು ತೆಗೆದುಕೊಂಡಿದೆ. ಒಂದಷ್ಟು ತಾಂತ್ರಿಕ ಕಾರಣಗಳು ಹಾಗೂ ತಾನು ಪರಿಪೂರ್ಣನಾಗಲು ತೆಗೆದುಕೊಂಡ ಸಮಯವೇ ಇದಕ್ಕೆ ಕಾರಣ ಎಂಬುದು ನಾಯಕನ ಸಮರ್ಥನೆ. ಆದರೆ ಅದು ವೃತ್ತಿ ಬದುಕಿನ ಮೇಲೆ ದುಷ್ಪರಿಣಾಮವನ್ನೇನೂ ಮಾಡುವುದಿಲ್ಲ ಎನ್ನುವ ಅವರು, ‘ಆಗಿದ್ದೆಲ್ಲ ಒಲ್ಳೆಯದಕ್ಕೇ’ ಎಂಬ ಮನೋಭಾವದವರು. ‘ಡವ್’ ಬಿಡುಗಡೆಯಾಗುವ ಮುನ್ನವೇ ‘ಸಾಗುವ ದಾರಿಯಲ್ಲಿ’ ಎಂಬ ಮತ್ತೊಂದು ಚಿತ್ರದಲ್ಲೂ ಅನೂಪ್ ತೊಡಗಿಕೊಂಡಿದ್ದಾರೆ. ‘ಡವ್’ಗಿಂತ ಸಂಪೂರ್ಣ ವಿರುದ್ಧ ಪಾತ್ರವನ್ನು ‘ಸಾಗುವ ದಾರಿಯಲ್ಲಿ’ ನಿರ್ವಹಿಸಿದ್ದಾಗಿ ಹೇಳುತ್ತಾರೆ. ಇದೇ ವರ್ಷದ ಕೊನೆ ಅಥವಾ ಹೊಸ ವರ್ಷದ ಆರಂಭದಲ್ಲಿ ಆ ಚಿತ್ರವೂ ತೆರೆಗೆ ಬರುವ ನೀರೀಕ್ಷೆ ಅನೂಪ್‌ಗೆ.

‘ಡವ್’ ಢವ...
ಅನೂಪ್ ನಾಯಕತ್ವದ ‘ಡವ್’ ಸಿನಿಮಾ ಇಂದು ತೆರೆಗೆ ಬರುತ್ತಿದೆ. ಈಗಾಗಲೇ ದಾವಣಗೆರೆ, ಹುಬ್ಬಳ್ಳಿ ಮತ್ತು ಮಂಡ್ಯದಲ್ಲಿ ಕಾಲೇಜುಗಳಿಗೆ ಎಡತಾಕಿ ಪ್ರಚಾರ ಕಾರ್ಯ ನಡೆಸಿದ್ದಾರೆ ನಿರ್ದೇಶಕ ಸಂತು. ಪುನೀತ್ ರಾಜ್‌ಕುಮಾರ್ ಅವರು ಹಾಡಿರುವ ಹಾಡು ಸಿನಿಮಾಕ್ಕೆ ಒಳ್ಳೆಯ ಪ್ರಚಾರ ದೊರಕಿಸಿಕೊಟ್ಟಿದೆಯಂತೆ. ನಿರ್ದೇಶಕರು ಪಕ್ಕಾ ಮಾಸ್ ಸಿನಿಮಾವಾಗಿ ‘ಡವ್’ ಅನ್ನು ರೂಪಿಸಿದ್ದಾರಂತೆ. 

‘ರೊಮಾನ್ಸ್ ಸೀನ್‌ಗಳನ್ನು ಮಾಡುವಾಗ ಭಯವಾಗಿತ್ತು. ಇದು ಮಾಸ್ ಸಿನಿಮಾ’ ಎಂದು ಮೊದಲ ಬಾರಿ ನಾಯಕನಟನಾಗಿರುವ ಅನೂಪ್‌ ಬಣ್ಣಿಸಿದರು. ನಾಯಕಿ ಅದಿತಿ ತಮಗೆ ಈ ಅವಕಾಶ ಕೊಟ್ಟ ಚಿತ್ರತಂಡಕ್ಕೆ ಕೃತಜ್ಞತೆ ಹೇಳಿದರು. ತಮ್ಮ ಮಗನ ಕಸರತ್ತು ಮತ್ತು ನಿರ್ದೇಶಕರ ಕಸುಬುದಾರಿಕೆಯೇ ‘ಡವ್’ಗೆ ಬಲ ಎನ್ನುವುದು ಸಾ.ರಾ. ಗೋವಿಂದು ನಂಬಿಕೆ. ಸಿನಿಮಾ ಗೆದ್ದರೂ ಸೋತರೂ ಹೊಣೆ ನಿರ್ದೇಶಕರದ್ದು ಎಂದು ಸುರಕ್ಷತಾ ವಲಯದಂತೆ ಅವರು ಮಾತನಾಡಿದರು. ನಿರ್ಮಾಪಕ ಬೆಂಕೋಶ್ರೀ ಅವರಿಗೆ ‘ಡವ್‌’ ಮೇಲೆ ಅಪಾರ ಭರವಸೆ ಇದೆ.

ಚಿತ್ರ ಬಿಡುಗಡೆ ಬಗೆಗಿನ ಮಾತುಗಳಿಗಿಂತ ಲಹರಿ ವೇಲು ಅವರು ಹೇಳಿದ, ಸಂಗೀತ ನಿರ್ದೇಶಕರಿಂದ ಪಡೆಯುವ ‘ಎನ್‌ಒಸಿ’ಯೇ ಕಾರ್ಯಕ್ರಮದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಯಿತು. ನಿರ್ಮಾಪಕ ಬೆಂಕೊಶ್ರೀ, ‘ಲಹರಿ ಸಂಸ್ಥೆ  ಒಳ್ಳೆಯ ಮೊತ್ತಕ್ಕೆ ಆಡಿಯೊ ಹಕ್ಕುಗಳನ್ನು ಖರೀದಿಸುತ್ತದೆ. ಅವರ ಶೇ 60ರಷ್ಟು ಹಣವನ್ನು ಉಳಿಸಿಕೊಳ್ಳುತ್ತದೆ. ಅದಕ್ಕೆ ಸಣ್ಣ ನಿಬಂಧನೆ ಇದೆ. ಅದು ಸಂಗೀತ ನಿರ್ದೇಶಕರಿಂದ ‘ಎನ್‌ಒಸಿ’ ಪಡೆಯಬೇಕೆಂಬುದು. ಆದರೆ  ಸಂಗೀತ ನಿರ್ದೇಶಕರು ಅದನ್ನು ಕೊಡಲು ಸಿದ್ದರಿಲ್ಲ. ಇದರಿಂದ ಬಾಕಿ ಬರುವುದು ಕಷ್ಟ. ಈ ಸಮಸ್ಯೆ ಬಗೆಹರಿಸುವುದು ಹೇಗೆ ಎಂಬುದು ಗೊತ್ತಾಗುತ್ತಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ವೇಲು ‘ಸ್ಯಾಂಡಲ್‌ವುಡ್‌ನ ಸ್ಟಾರ್ ಸಂಗೀತ ನಿರ್ದೇಶಕರಿಗೆ ಅಹಂ ಬಂದಿದೆ. ಚಿತ್ರಕ್ಕೆ ಸಂಗೀತ ನೀಡಲು ಹೆಚ್ಚು ಸಂಭಾವನೆ ತೆಗೆದುಕೊಳ್ಳುತ್ತಾರೆ. ಕೊನೆಗೆ ನಿರಪೇಕ್ಷಣಾ ಪತ್ರ (ಎನ್‌ಒಸಿ) ಕೊಡಲು ನಿರಾಕರಿಸುತ್ತಾರೆ. ಇದರಿಂದ ನಿರ್ಮಾಪಕರು ತೊಂದರೆ ಅನುಭವಿಸಬೇಕಾಗುತ್ತದೆ. ಅಂತರರಾಷ್ಟ್ರೀಯ ಮಾರಕಟ್ಟೆಯಲ್ಲಿ ಈ ಬಗ್ಗೆ ಕಾನೂನು ಬದಲಾಗಿದೆ. ಎಲ್ಲಾ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರು ‘ಎನ್‌ಒಸಿ’ ಕೊಡುತ್ತಾರೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT