ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೂಹ್ಯ ಜಾಡಿನ ಸಂಗೀತ ಸಂಚಾರಿಣಿ

Last Updated 23 ಜೂನ್ 2016, 5:17 IST
ಅಕ್ಷರ ಗಾತ್ರ

ಹಲವು ಕಲಾಶಾಖೆಗಳನ್ನು ಅಭ್ಯಸಿಸಿರುವ ಬಿಂದುಮಾಲಿನಿ ನಾರಾಯಣಸ್ವಾಮಿ ಅವರ ಅಂತರಂಗದ ಸ್ವರಸಂಚಾರಕ್ಕೆ ದೀವಿಗೆಯಾಗಿದ್ದು ಮಾತ್ರ ಸಂಗೀತ.

‘ಅಧ್ಯಾತ್ಮದ ಆತ್ಯಂತಿಕ ಅನುಭವ ತಲುಪಲು ಸಂಗೀತವೇ ಅತ್ಯಂತ ವೇಗದ ವಾಹನ’ ಎಂದು ನಂಬಿರುವ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಪಾಶ್ಚಾತ್ಯ ಸಂಗೀತದೊಂದಿಗೆ ಕಸಿಮಾಡಿ ಹೊಸ ದಾರಿಯನ್ನು ಹುಡುಕುವ ಪ್ರಯತ್ನದಲ್ಲಿಯೂ ತೊಡಗಿಕೊಂಡಿದ್ದಾರೆ. ಅವರ ಗಾಯನದಲ್ಲಿ ಕಾಣುವ ಅಚ್ಚರಿಯ ತಿರುವುಗಳು ಬದುಕಿನ ವಿವರಗಳಲ್ಲಿಯೂ ಇವೆ.

‘ನೀಭೈರಾಗಿ ಇರಬಹುದು ಬಾಕಿ/ ನಿನ್ನ ಮಠದಾಗ ನಾನೂ ಇರಾಕಿ...’-ಕೈಯಲ್ಲಿದ್ದ ತಂಬೂರಿಯಂಥ ಪುಟ್ಟ ವಾದ್ಯವನ್ನೊಮ್ಮೆ (ಅಮೆರಿಕನ್‌ ಬ್ಯಾಂಜೋ) ಶ್ರುತಿಗೂಡಿಸಿಕೊಂಡು ಮೀಟುತ್ತಾ ಕಣ್ಮುಚ್ಚಿ ಅವರು ಹಾಡಲಾರಂಭಿಸಿದಂತೆ ಎದುರು ಕೂತಿದ್ದ ಕೇಳುಗರೆಲ್ಲ ಅರೆಗಳಿಗೆಯಲ್ಲಿಯೇ ಪರವಶರಾಗಿದ್ದರು.

ವರಕವಿ ಬೇಂದ್ರೆ ಅವರ ಆ ಪದ್ಯದ ಸಾಲುಗಳು ಸಾಹಿತ್ಯದಾಚೆಯ ಹೊಸ ಅನುಭಾವ ದರ್ಶನದ ದಾರಿಯಲ್ಲಿ ಏರಲಾರಂಭಿಸಿದಂತೆ ಭಾಸವಾಯಿತು. ಸಂಗೀತಕ್ಕಷ್ಟೇ ಸಾಧ್ಯವಿರುವ ಜಿಗಿತ ಅದು.

‘ಅಡವಿ ಸೇರು ಗುಡ್ಡ ಏರು ಜ್ವಾಕಿ/ ಗವಿಗೋಗು ಸುರಂಗವ ನೂಕಿ/
ಕಾಕು ಪೋಕರ ಸಂಗತಿ ಸೋಕಿ/ ನೀ ಎಲ್ಲೇ ಇರು ಅಲ್ಲೇ ಬರಾಕಿ’

ಅದೊಂದು ಅನೂಹ್ಯ ಸ್ವರ ಪ್ರಯಾಣ. ಗಾಯಕಿಯ ಪಾಲಿಗೂ ಶ್ರೋತೃಗಳ ಪಾಲಿಗೂ... ಆಳದ ಗಾನದನುಭವವೊಂದು ಸ್ವರದ ಆತ್ಮ ಧರಿಸಿ ಲಯಬದ್ಧ ಶಬ್ದಗಳನ್ನೇ ಕೈಯಾಗಿಸಿಕೊಂಡು ನಮ್ಮ ಬೆರಳುಗಳನ್ನು ಹಿಡಿದು ನಡೆಸಿದ ವಿಶಿಷ್ಟ ಅನುಭೂತಿ.

ಆ ಸಂಚಾರದಲ್ಲಿ ಸಾಗರದ ಮೊರೆತವಿತ್ತು. ಆಳ ಸುಳಿಗಳ ಎಳೆತವಿತ್ತು. ಆಕಾಶದ ನಿರಭ್ರಮತೆ ಇತ್ತು. ಅಡವಿಗೆ ಕರೆಯುವ ತೀವ್ರ ಸೆಳೆತವಿತ್ತು. ಗವಿಯೊಳಗೆ ನಡೆಯುವ ಗೂಢ ಕಂಪನವೂ ಇತ್ತು. ಹಾಡು ಮುಗಿಸಿ ಕಲಾವಿದೆ ನಿಧಾನ ಕಣ್ತೆರೆದಾಗ ಅವರ ಕಣ್ಣಲ್ಲಿದ್ದ ಸಾರ್ಥಕ ಪ್ರಯಾಣದ ಧನ್ಯ ದಣಿವು ಕೇಳುಗರ ಮುಖದಲ್ಲೂ ಪ್ರತಿಫಲಿಸುತ್ತಿತ್ತು.

ಇದು ಬಿಂದುಮಾಲಿನಿ ನಾರಾಯಣಸ್ವಾಮಿ ಅವರ ಗಾನಶಕ್ತಿಯ ಒಂದು ಝಲಕ್‌ ಅಷ್ಟೆ. ಕಬೀರರ ದೋಹೆಗಳು, ಶಂಕರಾಚಾರ್ಯರ ಸೌಂದರ್ಯಲಹರಿ ಶ್ಲೋಕಗಳು, ಜಾನಪದ ಗೀತೆಯ ಫಲಕುಗಳು ಹೀಗೆ ತಾವು ಎಡತಾಕಿದ ಎಲ್ಲವನ್ನೂ ಧ್ಯಾನವಾಗಿಸುವ, ಆ ಅನುಭವವನ್ನು ಅಷ್ಟೇ ಗಾಢವಾಗಿ ಕೇಳುಗರಿಗೂ ದಾಟಿಸುವ ಸುಪ್ತಶಕ್ತಿ ಅವರ ಧ್ವನಿಗಿದೆ.

***
‘ಬಿಂದುಮಾಲಿನಿ’ ಎಂಬ ಹೆಸರಿನಲ್ಲಿಯೇ ಸಂಗೀತದ ಲಾಲಿತ್ಯವಿದೆ. ಅವರ ಆಸಕ್ತಿಯ ಹರವು ಇನ್ನೂ ವಿಸ್ತಾರವಾಗಿದೆ. ಅವರು ಕಲಿತಿರುವ, ಕಲಿಯುತ್ತಿರುವ, ತೊಡಗಿಸಿಕೊಂಡಿರುವ ಕ್ಷೇತ್ರ–ವಿಷಯಗಳನ್ನು ನೋಡಿದರೆ ಅಚ್ಚರಿಯಾಗುತ್ತದೆ.

ಚಿತ್ರಕಲೆ, ನೃತ್ಯ, ಸಂಗೀತ, ಭರತನಾಟ್ಯ, ಕಳರಿಪಯಟ್ಟು, ರಂಗಭೂಮಿ, ವಿಷುವಲ್‌ ಕಮ್ಯುನಿಕೇಷನ್‌, ಗ್ರಾಫಿಕ್ ಡಿಸೈನ್... ಒಬ್ಬ ಮನುಷ್ಯ ಏನೆಲ್ಲ ಮಾಡಬಹುದಲ್ಲ ಎಂದು ಬೆರಗಾಗುವಷ್ಟು ಕ್ಷೇತ್ರಗಳಲ್ಲಿ ಬಿಂದುಮಾಲಿನಿ ಕೈಯಾಡಿಸಿದ್ದಾರೆ.

ಇಷ್ಟೆಲ್ಲ ವಿಷಯಗಳನ್ನು ಕಲಿತು ಅವುಗಳಲ್ಲಿ ತೊಡಗಿಕೊಂಡಿದ್ದರೂ ಅವರ ಮನಸ್ಸಿನಾಳದ ಜೀವನದಿ ಮಾತ್ರ ಸಂಗೀತದ ಧ್ಯಾನದಲ್ಲಿಯೇ ಹರಿಯುತ್ತದೆ.
ಬಿಂದುಮಾಲಿನಿ ಹುಟ್ಟಿ ಬೆಳೆದ ಕುಟುಂಬ, ಸಂಗೀತ ಅವರೊಳಗೆ ಬೆಳೆದ ಬಗೆಯೂ ಕುತೂಹಲಕಾರಿಯಾಗಿದೆ.

ಬಿಂದುಮಾಲಿನಿ ಚೆನ್ನೈ ಮೂಲದವರು. ಅವರದು ಕಲಾವಿದರ ಕುಟುಂಬ. ಮನೆಯಲ್ಲಿಯೇ ಸಂಗೀತ ಕಲಾವಿದರಿದ್ದರು. ನೃತ್ಯಗಾರರೂ ಇದ್ದರು. ಜಲತರಂಗ್ ನುಡಿಸುವ ಕೆಲವೇ ಕೆಲವು ಮಹಿಳಾ ಕಲಾವಿದರಲ್ಲಿ ಬಿಂದುಮಾಲಿನಿ ಅವರ ಅಜ್ಜಿ ಸೀತಾ ದೊರೈಸ್ವಾಮಿ ಒಬ್ಬರಾಗಿದ್ದರು.

ಅಮ್ಮ ವಿಶಾಲಾಕ್ಷಿ ಆಲ್‌ ಇಂಡಿಯಾ ರೇಡಿಯೊದಲ್ಲಿ ಕರ್ನಾಟಕ ಸಂಗೀತ ಪ್ರಕಾರದಲ್ಲಿ ನಿಲಯ ಕಲಾವಿದೆಯಾಗಿದ್ದರು. ಚಿಕ್ಕಮ್ಮ ಭರತನಾಟ್ಯ ಕಲಾವಿದೆ. ಚಿಕ್ಕಪ್ಪ ಮೃದಂಗ ವಾದಕ.

ಹೀಗೆ ಹಲವು ಕಲೆಗಳ ಗಂಧವನ್ನೇ ಉಸಿರಾಡುತ್ತಾ ಬೆಳೆದ ಬಿಂದುಮಾಲಿನಿ ಅವರಿಗೆ ಚಿಕ್ಕಂದಿನಲ್ಲಿ ಚಿತ್ರಕಲೆಯ ಬಗ್ಗೆ ಅಪಾರ ಆಸಕ್ತಿ ಇತ್ತು. ಇದೇ ಅದೇ ಆಸಕ್ತಿಯ ಬೆನ್ನುಹತ್ತಿ ಮುಂದೆ ಲಲಿತಕಲೆಯಲ್ಲಿ ಪದವಿಯನ್ನೂ ಪಡೆದಿದ್ದಾರೆ.

ಹಾಗೆಯೇ ಸಂಗೀತ ವಿಷಯದಲ್ಲಿ ಬಿ.ಎ. ಪದವಿ  ಪಡೆದಿದ್ದಾರೆ. ನಂತರ ವಿಷುವಲ್‌ ಕಮ್ಯುನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಅದಾದ ಮೇಲೆ ಅಹಮದಾಬಾದ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಷನ್‌ ಆಫ್‌ ಡಿಸೈನ್‌ನಲ್ಲಿ ಗ್ರಾಫಿಕ್‌ ಡಿಸೈನ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡರು.

ಹೀಗೆ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಕುದುರಿಸಿಕೊಂಡಿದ್ದ ಅವರಿಗೆ ಸಂಗೀತವೇ ತನ್ನ ಅಭಿವ್ಯಕ್ತಿಯ ಆತ್ಯಂತಿಕ ಮಾರ್ಗ ಎಂದು ಅರಿವಾಗಿದ್ದು ಕೊಂಚ ತಡವಾಗಿಯೆ.

ಚಿಕ್ಕಂದಿನಿಂದ ಮನೆಯಲ್ಲಿ ಸಂಗೀತದ ಪ್ರಾಥಮಿಕ ಶಿಕ್ಷಣವನ್ನು ಅನೌಪಚಾರಿಕವಾಗಿಯೇ ದೊರೆತಿದ್ದರೂ ಅವರು ಆ ಪ್ರಕಾರವನ್ನು ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈ ಕುರಿತು ಅವರು ನೆನಪಿಸಿಕೊಳ್ಳುವುದು ಹೀಗೆ:

‘ತರಗತಿಗೆ ಹೋಗಿ ಔಪಚಾರಿಕವಾಗಿ ಕಲಿಯದಿದ್ದರೂ ಚಿಕ್ಕ ವಯಸ್ಸಿನಲ್ಲಿ ಮನೆಯಲ್ಲಿ ಕೇಳುತ್ತ ಕೇಳುತ್ತಲೇ ಕರ್ನಾಟಕ ಸಂಗೀತ ನನ್ನೊಳಗೆ ಇಳಿದಿತ್ತು. ಮೂರು ನಾಲ್ಕು ವರ್ಷದಿಂದಲೇ ನಾನು ಹಾಡುತ್ತಿದ್ದೆ. ಅದರ ಜತೆಗೆ ನನಗೆ ಡಾನ್ಸ್‌ ಕೂಡ ತುಂಬ ಇಷ್ಟವಾಗಿತ್ತು.

ಚಿಕ್ಕಮ್ಮ ಭರತನಾಟ್ಯ ತರಗತಿಗಳನ್ನು ನಡೆಸುತ್ತಿದ್ದಾಗ ಹೋಗಿ ನೋಡುತ್ತಿದ್ದೆ. ಅವರಿಗೆ ತಿಳಿಯದಂತೆ ಅವರ ಹಿಂದೆ ನಿಂತುಕೊಂಡು ಅವರನ್ನು ಅನುಕರಿಸುತ್ತಿದ್ದೆ. ಹಾಗೆಯೇ ನಾನು ಭರತನಾಟ್ಯವನ್ನೂ ಕಲಿತೆ.

ನಂತರ ಶಾಸ್ತ್ರೋಕ್ತವಾಗಿಯೂ ಅದನ್ನು ಕಲಿತೆ. ಈಗಲೂ ನನಗೆ ಡಾನ್ಸ್‌ ಅಂದರೆ ತುಂಬ ಇಷ್ಟ. ಇವುಗಳ ಜತೆಗೆ ಚಿತ್ರಕಲೆಯತ್ತಲೂ ಒಲವು ಸಾಕಷ್ಟಿತ್ತು. ಯಾವಾಗಲೂ ಏನಾದರೂ ಪೇಂಟಿಂಗ್‌ ಮಾಡುತ್ತಲೇ ಇರುತ್ತಿದ್ದೆ.

ಹೀಗೆ ಸಂಗೀತ, ನೃತ್ಯ, ಚಿತ್ರಕಲೆ ಮೂರೂ ಕಲೆಗಳು ನನ್ನ ಬಾಲ್ಯದಲ್ಲಿ ಒಟ್ಟೊಟ್ಟಿಗೇ ನನ್ನೊಳಗೆ ಬೆಳೆದುಕೊಂಡು ಬಂದವು’ ಎಂದು ಬಾಲ್ಯದ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಹೀಗೆ ಎಳವೆಯಿಂದಲೇ ಸಂಗೀತ ಅವರೊಳಗೆ ಇಳಿದಿದ್ದರೂ ಪೂರ್ಣ ಪ್ರಮಾಣದಲ್ಲಿ ಆ ಕ್ಷೇತ್ರದಲ್ಲಿಯೇ ತೊಡಗಿಸಿಕೊಳ್ಳಲು ಅವರಿಗೆ ಮನಸ್ಸಿರಲಿಲ್ಲ. ರಂಗಭೂಮಿ, ಡಾನ್ಸ್‌, ಪೇಂಟಿಂಗ್‌ ಎಲ್ಲವನ್ನೂ ಮಾಡಬೇಕು ಎಂಬ ಬಹುಮುಖಿ ಹಂಬಲ ಅವರನ್ನು ಒಂದು ಕ್ಷೇತ್ರಕ್ಕೆ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳಲು ಅನುವು ಮಾಡಿಕೊಡಲಿಲ್ಲ. ಅದು ಹಾಗೆಯೇ ಮುಂದುವರಿಸಿಕೊಂಡು ಬಂದಿತು ಕೂಡ.

ನಿಧಾನವಾಗಿ ಬಿಂದುಮಾಲಿನಿ ಕರ್ನಾಟಕ ಸಂಗೀತದಲ್ಲಿ ಆಸಕ್ತಿ ಕಳೆದುಕೊಂಡರು. ‘ನಾನು ಈಗಲೂ ಕರ್ನಾಟಕ ಸಂಗೀತವನ್ನು ಇಷ್ಟಪಡುತ್ತೇನೆ. ಆದರೆ ಆ ಪ್ರಕಾರದ ಪರಿಣತಿ ಪಡೆದು ಕಲಾವಿದೆಯಾಗುವ ಹಂಬಲ ಇಲ್ಲ’ ಎಂದು ಹೇಳುವ ಅವರಿಗೆ ಎನ್‌ಐಡಿಯಲ್ಲಿ ಗ್ರಾಫಿಕ್‌ ಡಿಸೈನ್‌ ಕಲಿಯುತ್ತಿದ್ದಾಗ ಹಿಂದೂಸ್ತಾನಿ ಸಂಗೀತವನ್ನು ಹತ್ತಿರದಿಂದ ಆಸ್ವಾದಿಸುವ ಅವಕಾಶ ಆಯಿತು. ಈ ಸಂಗೀತ ಪ್ರಕಾರ ಅವರ ಮೇಲೆ ಬಹಳ ಪ್ರಭಾವ ಬೀರಿತು.

‘ಹಿಂದೂಸ್ತಾನಿ ಸಂಗೀತದಲ್ಲಿನ ಯಾವುದೋ ಭಾವ, ಅದರ ಯಾವುದೋ ತುಡಿತ ನನ್ನನ್ನು ಸೆಳೆದುಕೊಂಡಿತು’ ಎಂದು ಅವರು ನೆನೆಯುತ್ತಾರೆ. ಆ ಗಳಿಗೆಯಿಂದಲೇ ಹಿಂದೂಸ್ತಾನಿ ಸಂಗೀತ ಕಲಿತುಕೊಳ್ಳುವ ಸಲುವಾಗಿ ಸೂಕ್ತ ಗುರುಗಳ ಹುಡುಕಾಟ ಆರಂಭಿಸಿದರು.

ಆದರೆ ಎಷ್ಟೇ ಹುಡುಕಿದರೂ ಗುರುಗಳು ಸಿಗಲಿಲ್ಲ. ಕೊನೆಯಲ್ಲಿ ನಿರಾಶರಾಗಿ ‘ಒಂದೊಮ್ಮೆ ಯಾವುದಾದರೂ ಒಳ್ಳೆ ಗುರುಗಳು ಸಿಕ್ಕರೆ ಮಾತ್ರ ಹಿಂದೂಸ್ತಾನಿ ಸಂಗೀತಾಭ್ಯಾಸ ಮುಂದುವರಿಸುತ್ತೇನೆ. ಇಲ್ಲವಾದರೆ ಕರ್ನಾಟಕ ಸಂಗೀತಕ್ಕೆ ಹಿಂತಿರುಗುತ್ತೇನೆ’ ಎಂದು ನಿರ್ಧರಿಸಿದರು.

ಆದರೆ ಹಿಂದೂಸ್ತಾನಿ ಸಂಗೀತ ಪ್ರಕಾರಕ್ಕೂ ಬಿಂದುಮಾಲಿನಿಯವರನ್ನು ಬಿಟ್ಟುಕೊಡುವ ಮನಸ್ಸಿರಲಿಲ್ಲ ಅನಿಸುತ್ತದೆ. 2007ರಲ್ಲಿ ಅವರು ತಮ್ಮ ಗುರುಗಳನ್ನು ಕಂಡುಕೊಂಡರು.

ಕೋಲ್ಕತ್ತದ ಹಿರಿಯ ಕಲಾವಿದ ಪದ್ಮಭೂಷಣ ಉಸ್ತಾದ್‌ ಅಬ್ದುಲ್‌ ರಷೀದ್‌ ಖಾನ್‌ ಅವರ ಬಳಿ ಶಿಷ್ಯೆಯಾಗಿ ಸೇರಿಕೊಂಡಮೇಲೆ ಬಿಂದುಮಾಲಿನಿ ಅವರ ಬದುಕಿನ ದೆಸೆಯೇ ಬದಲಾಯಿತು. ಇದನ್ನು ‘ತನ್ನ ಹೊಸ ಹುಟ್ಟು’ ಎಂದು ಅವರು ಕರೆದುಕೊಳ್ಳುತ್ತಾರೆ.

‘ಗುರುಗಳು ಸಿಕ್ಕಿದ ಮೇಲೆ ಅಷ್ಟೆ, ನನಗೆ ಬೇರೇನೂ ಬೇಡ, ಶಿಕ್ಷಣವೂ ಬೇಡ ಪದವಿಯೂ ಬೇಡ ಸಂಗೀತವೊಂದೇ ಸಾಕು ಅನಿಸಿಬಿಟ್ಟಿತು’ ಎಂದು ಹಿಂದೂಸ್ತಾನಿ ಸಂಗೀತ ತಮ್ಮನ್ನು ತನ್ನ ತೆಕ್ಕೆಗೆ ಸೆಳೆದುಕೊಂಡ ಪರಿಯನ್ನು ಅವರು ವಿವರಿಸುತ್ತಾರೆ. ಅಧ್ಯಾತ್ಮದ ಅರಮನೆಗೆ ನೇರ ದಾರಿ ಬಿಂದುಮಾಲಿನಿ ಅವರಿಗೆ ಭಕ್ತಿ ಸಂಗೀತದ ಮೇಲೆ ವಿಶೇಷ ಒಲವಿದೆ.

ನನ್ನ ಸ್ನೇಹಿತೆ ರಮ್ಯಾಗೆ ವೇದಾಂತ್‌ ಭಾರದ್ವಾಜ್‌ ಎಂಬ ಗಿಟಾರ್‌ ನುಡಿಸುವ ಒಬ್ಬ ಸ್ನೇಹಿತರಿದ್ದರು. ‘ನೀನು ಮತ್ತು ಅವರು ಇಬ್ಬರೂ ಸೇರಿ ಸಂಗೀತ ಕಾರ್ಯಕ್ರಮ ಕೊಡಬೇಕು’ ಎಂದು ಅವಳು ಯಾವಾಗಲೂ ಹೇಳುತ್ತಿದ್ದಳು.

ಬೌಲ್‌ ಸಂಗೀತದ ಒಂದು ಕಾರ್ಯಕ್ರಮದಲ್ಲಿ ನನಗೆ ವೇದಾಂತ್‌ ಅವರನ್ನು ಪರಿಚಯ ಮಾಡಿಕೊಟ್ಟಳು. ಅವರು ಮರುದಿನವೇ ನನ್ನ ಮನೆಗೆ ಬಂದರು. ಅವತ್ತು ಅವರು ಗಿಟಾರ್‌ಗೆ ಜತೆಯಾಗಿ ನಾನು ಕರ್ನಾಟಕ ಸಂಗೀತ ಹಾಡಿದೆ.

ಅದು ನನಗೆ ತುಂಬ ಇಷ್ಟವಾಯಿತು. ಕರ್ನಾಟಕ ಸಂಗೀತ ಮತ್ತು ಗಿಟಾರ್‌ ಎರಡೂ ಬೆರೆತ ಹೊಸ ರೂಪ ಅದ್ಭುತವಾಗಿದೆ ಅನ್ನಿಸಿತು’ ಎಂದು ತಮ್ಮ ಸಂಗೀತ ಪಯಣದಲ್ಲಿ ವೇದಾಂತ್‌ ಜತೆಯಾದ ಗಳಿಗೆಯನ್ನು ನೆನಪಿಸಿಕೊಳ್ಳುತ್ತಾರೆ.

ಬಿಂದುಮಾಲಿನಿ ಮತ್ತು ವೇದಾಂತ್‌ ಭಾರದ್ವಾಜ್ ಇದುವರೆಗೆ ಭಾರತದಾದ್ಯಂತ ಅನೇಕ  ಭಕ್ತಿ ಸಂಗೀತದ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಒಟ್ಟಿಗೆ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದ ಏಳು ವರ್ಷಗಳ ನಂತರ, ಅಂದರೆ 2012ರಲ್ಲಿ ‘ಸುನೋ ಭಾಯ್‌’ ಎಂಬ ಕಬೀರದಾಸರ ಪದ್ಯಗಳ ಆಲ್ಬಂ ಕೂಡ ತಂದಿದ್ದಾರೆ.

ಹಿಂದೂಸ್ತಾನಿ ಸಂಗೀತದ ಗುಂಗಿನಲ್ಲಿಯೇ ತೇಲುತ್ತಿದ್ದ ಬಿಂದುಮಾಲಿನಿ ಭಕ್ತಿ ಸಂಗೀತದೆಡೆ ಬರಲು ಕಾರಣವಾಗಿದ್ದು ಅವರ ಅಕ್ಕ ಜಯಾ ಮಾಧವನ್‌. ಅವರು ಕಬೀರದಾಸರ ಮೇಲೆ ಒಂದು ಪುಸ್ತಕ ಬರೆದಿದ್ದರು.

ಅದಕ್ಕೂ ಮುನ್ನ ಬಿಂದುಮಾಲಿನಿ ಮತ್ತು ಜಯಾ ಸೇರಿಕೊಂಡು ಒಂದು ನಾಟಕ ಮಾಡಿದ್ದರು. ಅದಕ್ಕೆ ಕಬೀರರ ಪದ್ಯಗಳನ್ನಿಟ್ಟುಕೊಂಡು ಬಿಂದುಮಾಲಿನಿ ಸಂಗೀತ ಸಂಯೋಜಿಸಿದ್ದರು.

ಇದು ತುಂಬ ಜನಪ್ರಿಯವಾಯಿತಷ್ಟೇ ಅಲ್ಲ, ಬಿಂದುಮಾಲಿನಿ ಅವರನ್ನೂ ಕಬೀರರ ಪದ್ಯಗಳಲ್ಲಿನ ಸತ್ವ ಆವರಿಸತೊಡಗಿತ್ತು. ಅದೇ ಸಂದರ್ಭದಲ್ಲಿ ವೇದಾಂತ್‌ ಭಾರದ್ವಾಜ್ ಅವರು ಕುಮಾರ ಗಂಧರ್ವ ಹಾಡಿದ ಕಬೀರರ ದೋಹೆಗಳನ್ನು ಬಿಂದುಮಾಲಿನಿ ಅವರಿಗೆ ಕೇಳಿಸಿದರು. ಆ ಅನುಭವವನ್ನು ಅವರ ಮಾತುಗಳಲ್ಲಿಯೇ ಕೇಳಬೇಕು.

‘ಕುಮಾರ ಗಂಧರ್ವ ಅವರ ಗಾಯನದಲ್ಲಿ ಕಬೀರರ ಪದ್ಯಗಳನ್ನು ಕೇಳಿ ನಾನು ಪೂರ್ತಿ ಮಾರುಹೋದೆ. ಮೊದಲ ಸಲ ನನಗೆ ಸಾಹಿತ್ಯ ಏನೂ ಅರ್ಥ ಆಗಲಿಲ್ಲ. ಆದರೆ ಅದನ್ನೂ ಮೀತಿ ಸಂಗೀತ ನನ್ನನ್ನು ತೀವ್ರವಾಗಿ ಕಾಡಿತು.

ಆ ರೀತಿ ಸಂಗೀತವನ್ನು ನಾನು ಕೇಳಿರಲೇ ಇಲ್ಲ. ನಾನೂ ಕಬೀರರ ಹಾಡುಗಳನ್ನು ಕಲಿತುಕೊಂಡು ಹಾಡಬೇಕು ಎಂಬ ಹಂಬಲದಲ್ಲಿ ಮನಸ್ಸು ತುಡಿಯಲಾರಂಭಿಸಿತು. ನಾನು ಕಲಿತುಕೊಂಡು ಹಾಡಿದೆ.

ಅದು ಎಷ್ಟು ಜನಪ್ರಿಯವಾಯಿತೆಂದರೆ ಜನರು ಅದರಿಂದಲೇ ನನ್ನನ್ನು ಗುರ್ತಿಸಲಾರಂಭಿಸಿದರು. ಎಷ್ಟೋ ಧ್ಯಾನಕೇಂದ್ರಗಳಲ್ಲಿ ಆ ಹಾಡನ್ನು ಬಳಸಿಕೊಳ್ಳುತ್ತಿದ್ದರು’ ಎನ್ನುವಾಗ ಅವರ ಮುಖದಲ್ಲಿ ಸಾರ್ಥಕ್ಯದ ನಗು ಅರಳುತ್ತದೆ.

‘ಸೂಫಿ ಸಂಗೀತ, ಭಕ್ತಿ ಸಂಗೀತದಲ್ಲಿ ಮಾತಿಗೆ ಸಿಕ್ಕದ ಒಂದು ಸತ್ವವಿದೆ. ಅದನ್ನು ನಾನು ಅನುಭವಿಸಲು ಮಾತ್ರ ಸಾಧ್ಯ. ಆ ಅನುಭವವನ್ನು ಉಳಿದವರಿಗೂ ಹಂಚುವ ಇಂಗಿತ ನನ್ನದು’ ಎಂದು ಗೀತಧ್ಯಾನದಲ್ಲಿ ತಮಗೆ ಸಿಗುವ ದರ್ಶನವನ್ನು ಮಾತಿನಲ್ಲಿ ಕಟ್ಟಿಕೊಡಲಾಗದೇ ತಡವರಿಸುತ್ತಾರೆ.

‘ಕಬೀರರು ತಮ್ಮ ಪದ್ಯಗಳಲ್ಲಿ ಯಾವ ಅನುಭವವನ್ನು ಹೇಳಲು ಪ್ರಯತ್ನಿಸಿದ್ದಾರೆಯೋ ಆ ಮಟ್ಟಕ್ಕೆ ಸಂಗೀತವೊಂದೇ ನಿಮ್ಮನ್ನು ಕೊಂಡೊಯ್ಯಲು ಸಾಧ್ಯ’ ಎನ್ನುವ ಅವರು ‘ಅಧ್ಯಾತ್ಮದ ಅನುಭವವನ್ನು ತಲುಪಲು ಇರುವ ಅತ್ಯಂತ ವೇಗದ ವಾಹನ ಸಂಗೀತ’ ಎಂದು ಅಚಲವಾಗಿ ನಂಬಿಕೊಂಡಿದ್ದಾರೆ.
ಕನ್ನಡವೆಂದರೆ ತುಂಬ ಇಷ್ಟ

ಬಿಂದು ಮಾಲಿನಿ ಚೆನ್ನೈನವರಾದರೂ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ. ‘ನನಗೆ ಭಾಷೆಗಳನ್ನು ಕಲಿಯುವುದು ತುಂಬ ಇಷ್ಟ. ಬಂಗಾಳಿ, ಕನ್ನಡ ಮತ್ತು ಮಲಯಾಳಂ ಈ ಮೂರು ಭಾಷೆಗಳು ನನಗೆ ತುಂಬ ಇಷ್ಟ’ ಎನ್ನುವ ಅವರು ಶಾಲೆಯಲ್ಲಿ ಪಠ್ಯಕ್ಕಿದ್ದ ಬಸವಣ್ಣನ ವಚನಗಳನ್ನೂ ನೆನಪಿಸಿಕೊಳ್ಳುತ್ತಾರೆ.

ಮುಂದಿನ ವರ್ಷ ಜನವರಿಯಲ್ಲಿ ಮುಂಬೈನಲ್ಲಿ ನಡೆಯುವ ಕಬೀರ್‌ ಉತ್ಸವದಲ್ಲಿ ಅಕ್ಕಮಹಾದೇವಿ ಅವರ ವಚನಗಳನ್ನು ಹಾಡಲೂ ಅವರು ಸಿದ್ಧತೆ ಮಾಡಿಕೊಂಡಿದ್ದಾರೆ.

ದ.ರಾ. ಬೇಂದ್ರೆ, ಶರೀಫ, ಬಸವಣ್ಣ ಹೀಗೆ ವಿವಿಧ ಕನ್ನಡದ ಕವಿಗಳ ಗೀತೆಗಳಿಗೆ ಸಂಗೀತ ಸಂಯೋಜಿಸಬೇಕು ಎಂಬ ಆಸೆಯೂ ಅವರಿಗಿದೆ. ‘ನನಗೆ ಯಾರಾದರೂ ಮಾರ್ಗದರ್ಶಕರು ಸಿಕ್ಕರೆ ಇನ್ನೂ ಒಳ್ಳೆಯ ರೀತಿಯಲ್ಲಿ ಪದ್ಯಗಳನ್ನು ಅರ್ಥಮಾಡಿಕೊಂಡು ಸಂಗೀತ ಸಂಯೋಜಿಸಬಹುದು’ ಎಂದು ಅವರು  ಕನ್ನಡದ ಪದ್ಯಗಳನ್ನು ಹಾಡುವ ಇಂಗಿತ ವ್ಯಕ್ತಪಡಿಸುತ್ತಾರೆ.

2009ರಲ್ಲಿ ವಸು ದೀಕ್ಷಿತ್ (ಅವರೂ ಸಂಗೀತಗಾರರು) ಅವರನ್ನು ಮದುವೆಯಾದ ಬಿಂದುಮಾಲಿನಿ ಈಗ ಬೆಂಗಳೂರಿನಲ್ಲಿಯೇ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಖವ್ವಾಲಿ ಸಂಗೀತದ ಬಗ್ಗೆಯೂ ಅವರ ಆಸಕ್ತಿ ಕುದುರಿಕೊಂಡಿದೆ.

ಕಬೀರರ ಪದ್ಯಗಳ ಇನ್ನೊಂದು ಆಲ್ಬಂ ಬಿಡುಗಡೆಗೆ ಸಿದ್ಧವಾಗಿದೆ. ‘ಸಂಗೀತದ ಸಖ್ಯ ನನಗೆ ವಿಶಿಷ್ಟ ಅನುಭವಗಳನ್ನು ನೀಡಿದೆ. ಈ ವಿಷಯದಲ್ಲಿ ನಾನು  ಅದೃಷ್ಟವಂತೆ’ ಎಂದು ನಗುವಾಗ ಅವರು ಅನೂಹ್ಯವೊಂದರ ಜಾಡು ಹಿಡಿದು ಹೊರಟ ಸಂಗೀತ ಸಂಚಾರಿಣಿಯಂತೇ ಕಂಡರು.

ಮಾತು ನಿಂತಾಗ ಆವರಿಸಿಕೊಂಡ ಮೌನದಲ್ಲಿ  ಬಿಂದುಮಾಲಿನಿ ಬೆರಳುಗಳು ಕೈಲಿದ್ದ ವಾದ್ಯದೆದೆಯ ಮೇಲಿನ ತಂತಿಗಳನ್ನು ಹಗುರವಾಗಿ  ಮೀಟಿದವು. ಅದರ ಹಿಂದೆಯೇ ಅವರ ಧ್ವನಿ ಮೆಲುವಾಗಿ ಹರಡಿ ಮನದೊಳಗೆ ಇಳಿಯಲಾರಂಭಿಸಿತು.
‘ಉಳ್ಳವರು ಶಿವಾಲಯ ಮಾಡಿಹರು/ ನಾನೇನ ಮಾಡಲಿ ಬಡವನಯ್ಯಾ...’

ಉಸ್ತಾದ್‌ ಅಬ್ದುಲ್‌ ರಶೀದ್‌ ಖಾನ್‌ ಬಳಿ ಸಂಗೀತ ಕಲಿಯುತ್ತಿದ್ದಾಗ ನನಗೆ ಬೇರೆ ಯಾವುದೂ ಬೇಡ ಅನಿಸಿಬಿಟ್ಟಿತು. ಕಾಲೇಜೂ ಬಿಟ್ಟುಬಿಡಲು ನಿರ್ಧರಿಸಿದೆ. ಆಗ ಅಮ್ಮ ‘ಈಗ ಕಲಿಯುತ್ತಿರುವ ಕೋರ್ಸ್‌ ಮುಗಿಸು.

ಅದರ ಪ್ರಮಾಣಪತ್ರ ಸಿಕ್ಕಮೇಲೆ ಎಲ್ಲಿ ಬೇಕಾದರೂ ಹೋಗು’ ಎಂದು ಒತ್ತಾಯಿಸತೊಡಗಿದರು. ನಾನು ತುಂಬ ಒತ್ತಾಯ ಮಾಡಿ ಅವರನ್ನು ಕೋಲ್ಕತ್ತಾಕ್ಕೆ ನನ್ನ ಗುರುಗಳ ಬಳಿ ಕರೆದುಕೊಂಡು ಹೋದೆ. ‘ಅಮ್ಮಾ ಒಂದು ಸಲ ನನ್ನ ಗುರುಗಳ ಗಾಯನ ಕೇಳು’ ಎಂದು ಕೂಡಿಸಿದೆ.

ಗುರುಗಳಿಗೆ ಆಗ 99 ವರ್ಷ. ಅವರು ಹಾಡಲಾರಂಭಿಸಿದರು. ಅಷ್ಟೆ! ಅಮ್ಮನ ಕಣ್ಣುಗಳಲ್ಲಿ ನೀರಿತ್ತು. ‘ಈ ಕಲಿಕೆಗಿಂತ ಹೆಚ್ಚಿನ ಕಲಿಕೆ ಏನಿದೆ? ಇದನ್ನೇ ಕಲಿ’ ಎಂದು ಆಶೀರ್ವಾದ ಮಾಡಿ ಬಿಟ್ಟುಬಿಟ್ಟರು. ಅವರಿಗೀಗ ನೂರಾಎಂಟು ವರ್ಷ. ಈಗಲೂ ಅವರ ಬಳಿಯೇ ಸಂಗೀತಾಭ್ಯಾಸ ಮಾಡುತ್ತಿದ್ದೇನೆ.

‘ನನಗೆ ಸಂಗೀತ ತುಂಬ ಇಷ್ಟ. ಅವುಗಳಲ್ಲಿ ಇದೇ ಶ್ರೇಷ್ಠ ಅದು ಕನಿಷ್ಠ ಎಂಬ ಭಾವನೆ ಇಲ್ಲ. ಆಧುನಿಕ ಸಂಗೀತವಿರಲಿ, ಜಾನಪದ ಸಂಗೀತವಿರಲಿ, ಶಾಸ್ತ್ರೀಯ, ಲಘು ಸಂಗೀತ ಯಾವುದಾದರೂ ಸರಿ.

ಅದು ಕೇಳುಗರ ಹೃದಯವನ್ನು ತಟ್ಟಬೇಕು. ಭಾಷೆಯ ಗಡಿಯಿಲ್ಲದೆ, ಚಿಂತನೆಯ ಹಂಗಿಲ್ಲದೇ ನಮ್ಮೊಳಗೆ ಇಳಿಯುವ ಶಕ್ತಿಯಿದ್ದರೆ ಅದು ಒಳ್ಳೆಯ ಸಂಗೀತವೆಂದು ನನ್ನ ನಂಬಿಕೆ’ ಎನ್ನುವ ಬಿಂದುಮಾಲಿನಿ ಶಾಸ್ತ್ರೀಯ ಸಂಗೀತ ಪ್ರಕಾರವನ್ನು ಪಾಶ್ಚಾತ್ಯ ಸಂಗೀತ ವಾದ್ಯ ಗಿಟಾರ್‌ದೊಂದಿಗೆ ಸೇರಿಸಿ ಹೊಸ ರೀತಿಯ ಸಂಗೀತವನ್ನು ಕಟ್ಟುತ್ತಿದ್ದಾರೆ. ಹಾಗೆಂದು ಶಾಸ್ತ್ರೀಯ ಪ್ರಕಾರದಲ್ಲೇನೂ ಅವರು ರಾಜಿ ಮಾಡಿಕೊಂಡಿಲ್ಲ.

ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ವಿಧಾನ
*ನಿಮ್ಮ ಸ್ಮಾರ್ಟ್‌ಫೋನ್‌ಗೆ I-nigma QR Code Reader ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

* ಆ್ಯಪ್‌ ಓಪನ್‌ ಮಾಡಿ, ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ.

*ವೆಬ್‌ಲಿಂಕ್‌ಗೆ ಸಂಪರ್ಕಿಸಲು ಸ್ಮಾರ್ಟ್‌ಫೋನ್‌ ಅನುಮತಿ ಕೇಳುತ್ತದೆ. 

* ಅನುಮತಿಸಿದ ತಕ್ಷಣ ಲಿಂಕ್‌ ಪ್ಲೇ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT