ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯ ಅಸ್ತ್ರಗಳೂ ಇವೆ

Last Updated 3 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಇರಬೇಕಾದ ಅತಿ ಮುಖ್ಯವಾದ ಹಕ್ಕು. ಭಾರತ ಸಂವಿಧಾನ ಅನುಚ್ಛೇದ 19(1) (ಎ) ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿ ವ್ಯಕ್ತಿಗೂ  ಇರುವುದನ್ನು ಖಾತ್ರಿಪಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ.

ಸಂವಹನದ ಬಳಕೆ, ತಂತ್ರಜ್ಞಾನದಲ್ಲಿನ ಕ್ರಾಂತಿ, ಸಂವಹನ ಮಾಧ್ಯಮವನ್ನು ಇಂದಿನ ಯುವಜನ ಬಳಸುವ ರೀತಿ, ಅತ್ಯಂತ ಅಗ್ಗದಲ್ಲಿ ತತ್‌ಕ್ಷಣ ಸಾವಿರಾರು ಜನರನ್ನು ತಲುಪಬಲ್ಲ ಶಕ್ತಿ ಇರುವಂತಹ ಕಾರಣ ಗಳಿಂದ ಜಾಲತಾಣಗಳಲ್ಲಿ ವ್ಯಕ್ತವಾಗುವ  ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗಿನ ಚರ್ಚೆ ಇಂದು ಹೆಚ್ಚು ಮಹತ್ವ ಪಡೆದು ಕೊಂಡಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ– 2000 ಹಾಗೂ ಅದಕ್ಕೆ 2008ರಲ್ಲಿ ತಂದ ತಿದ್ದುಪಡಿಯು ತಂತ್ರಜ್ಞಾನವನ್ನು ಅವಲಂಬಿಸಿರುವ ಯುವ ಸಮುದಾಯದ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದರಿಂದ ಈ ಬಗೆಯ ಚರ್ಚೆ ಮತ್ತೊಂದು ಮಜಲನ್ನೇ ತಲುಪುವಂತೆ ಆಯಿತು.

ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಂದ ತಿದ್ದುಪಡಿಯು ಕೆಲ ಅಭಿವ್ಯಕ್ತಿಯನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಿತು. ಅದರಲ್ಲಿ  66(ಎ) ಬಹುಮುಖ್ಯವಾದ ಕಲಂ. ಅದರ ಪ್ರಕಾರ, ಯಾವುದೇ ಮಾಹಿತಿ ತೀವ್ರ ಆಕ್ರಮಣಕಾರಿ ಆಗಿದ್ದರೆ, ಭೀತಿ ಹುಟ್ಟಿಸುವಂತಿದ್ದರೆ, ಸುಳ್ಳು ಎಂಬುದು ಅರಿವಿದ್ದರೂ ಮತ್ತೊಬ್ಬರಿಗೆ ತೊಂದರೆ ಕೊಡುವ/ ಅವಮಾನ ಮಾಡುವ ಉದ್ದೇಶದಿಂದ ಕಂಪ್ಯೂಟರ್‌, ಸಂವಹನ ಮಾಧ್ಯಮಗಳ ಮೂಲಕ ಅದನ್ನು ಇತರರಿಗೆ ರವಾನಿಸಿದರೆ ಅಂತಹ ಕ್ರಿಯೆಗಳನ್ನು ಅಪರಾಧ ಎಂದು ಪರಿಗಣಿಸಲಾಗುತ್ತಿತ್ತು. ಅಂತಹವರಿಗೆ   3 ವರ್ಷ ಜೈಲು ಶಿಕ್ಷೆಯ ಜೊತೆಗೆ ಜುಲ್ಮಾನೆಯನ್ನೂ ವಿಧಿಸಬಹುದಾಗಿತ್ತು.

ವಿಶೇಷವೆಂದರೆ, ಈ ಕಲಂನಡಿ ದಾಖಲಾಗುವ ಅಭಿವ್ಯಕ್ತಿ ಕೇಂದ್ರಿತ ಅಪರಾಧಗಳಿಗೆ ಭಾರತೀಯ ದಂಡ ಸಂಹಿತೆಯ ಇತರ ಕಲಂಗಳಡಿ  ಮಾಡು ವಂತೆ ವ್ಯಕ್ತಿಗತ, ಗುಂಪು/ ಜನಾಂಗ, ಸರ್ಕಾರ ಎಂಬ ಭೇದಭಾವವನ್ನು ಮಾಡುವಂತೆ ಇರಲಿಲ್ಲ. ಇಲ್ಲಿ ಎಲ್ಲ ಬಗೆಯ  ಅಪರಾಧಗಳಿಗೂ ಒಂದೇ ಬಗೆಯ ಶಿಕ್ಷೆ ವಿಧಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ ಈ ಕಾಯ್ದೆಯಡಿ ಪ್ರಕರಣ ದಾಖಲಿಸಲು, ವಿಚಾರಣೆ ನಡೆಸಲು ಸರ್ಕಾರದಿಂದ ಪೂರ್ವಾನುಮತಿ ಪಡೆಯಬೇಕಾದ ಅವಶ್ಯಕತೆಯೂ ಇರಲಿಲ್ಲ.

ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಹಾಗೂ ಕೆಲವು ವ್ಯಕ್ತಿಗಳ ನಡೆನುಡಿಗೆ ಸಂಬಂಧಿಸಿದಂತೆ ತಮ್ಮ ಬ್ಲಾಗ್‌ಗಳು, ಟ್ವಿಟರ್‌ಗಳು, ಫೇಸ್‌ಬುಕ್‌ಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ ಅನೇಕ ಯುವಜನರನ್ನು ದೇಶದಾದ್ಯಂತ ಪೊಲೀಸರು ಬಂಧಿಸಿದ್ದರು. ಹೀಗೆ ಜನ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಅನುಭವಿಸಲು ಹಿಂದುಮುಂದು ನೋಡಬೇಕಾದ ಪರಿಸ್ಥಿತಿ ತಲೆದೋರಿದ್ದಾಗ, 66 (ಎ) ಕಲಂ ರದ್ದಾಗಿರುವುದು ಬಹು ಮುಖ್ಯವಾದ ಸಂಗತಿ.

ಇದು 1962ರಲ್ಲಿ ಭಾರತೀಯ ದಂಡಸಂಹಿತೆಯ ಕಲಂ 124 (ಎ)ಯ ಸಂವಿಧಾನಾತ್ಮಕತೆಯನ್ನು ಪ್ರಶ್ನಿಸಿ ಕೇದಾರನಾಥ್‌ ಮತ್ತು ಬಿಹಾರ ರಾಜ್ಯ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌  ನೀಡಿದ್ದ ತೀರ್ಪನ್ನು ಅನುಕರಣೆ ಮಾಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದಂಗೆ ಎರಡನ್ನೂ ಭಿನ್ನ ರೀತಿಯಲ್ಲಿ ನೋಡಬೇಕು, ಎಲ್ಲ ಬಗೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಶಿಕ್ಷೆಗೆ ಒಳಪಡಿಸಬಾರದು ಎಂಬ ಆದೇಶವನ್ನು ಕೋರ್ಟ್‌ ಆ ಸಂದರ್ಭದಲ್ಲಿ ನೀಡಿತ್ತು.

ಇದರ ಜೊತೆಗೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿರುವ ಇನ್ನಿತರ ಪ್ರಕರಣಗಳನ್ನು ಗಮನದಲ್ಲಿ ಇರಿಸಿಕೊಂಡು ಕಲಂ 66 (ಎ)ಯಲ್ಲಿರುವ ಉದ್ದೇಶ ಹಾಗೂ ಅದು ಶಿಕ್ಷಿಸಲು ಹೊರಟಿದ್ದ ಅಪರಾಧಗಳನ್ನು ಕೋರ್ಟ್‌ ಈಗ ನೀಡಿರುವ ತೀರ್ಪಿನಲ್ಲಿ ಪಟ್ಟಿ ಮಾಡಿದೆ. ಅದರ ಪ್ರಕಾರ ‘66 (ಎ)ಯು ಸಾರ್ವಜನಿಕ ಅಶಾಂತಿ, ಅಪಹರಣಕ್ಕೆ ಪ್ರೇರಣೆ, ಸಾಮಾಜಿಕ ಮೌಲ್ಯ, ಮಾನ ಹಾನಿಯಂತಹ ಯಾವ ವಿಷಯಗಳಿಗೂ ಶಿಕ್ಷಿಸುವುದಿಲ್ಲ, ಈ ಕಲಂ ಯಾವ ರೀತಿ ಹೇಳಿಕೆಯನ್ನು ಅಪರಾಧ ಎಂದು ಪರಿಗಣಿಸುತ್ತದೆ ಎಂಬುದನ್ನೂ ಸ್ಪಷ್ಟವಾಗಿ ತಿಳಿಸುವುದಿಲ್ಲ. ಇದು ಅನೇಕ ದ್ವಂದ್ವಗಳಿಗೆ ಎಡೆಮಾಡಿಕೊಡುತ್ತದೆ. ಹೀಗೆ ಯಾವುದೇ ಕಾನೂನು ದ್ವಂದ್ವ ಉಂಟು ಮಾಡುವಂತಿದ್ದರೆ ಅದು ಜನರ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ. ಆ ಮೂಲಕವೂ ಈ ಕಾನೂನು ಸಂವಿಧಾನ ಬಾಹಿರ’ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.

ಭಾರತೀಯ ದಂಡ ಸಂಹಿತೆ ಕಲಂ 124 (ಎ), 153 (ಎ) 294 (ಎ), 499, 505 ಜೊತೆಗೆ ಜನಪ್ರತಿನಿಧಿ ಕಾಯ್ದೆ 123, ಪೊಲೀಸ್‌ ಕಾಯ್ದೆ ಮುಂತಾದವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಕೆಲವು ನಿರ್ಬಂಧಗಳು. ಈಗಾಗಲೇ 1962ರಲ್ಲಿ ಸಾಂವಿಧಾನಿಕ ಪೀಠವು ಕಲಂ 124 (ಎ)ಯ ವ್ಯಾಪ್ತಿಯನ್ನು ಮಿತಿಗೊಳಪಡಿಸಿದೆ. ಅದೇ ರೀತಿ ದಂಡ ಪ್ರಕ್ರಿಯಾ ಸಂಹಿತೆ ಕಲಂ 196 ಯಾವುದೇ ನ್ಯಾಯಾಲಯವು ಸರ್ಕಾರದ ಪೂರ್ವಾನುಮತಿ ಇಲ್ಲದೆ ಕಲಂ 124 (ಎ), 153 (ಎ), 244 (ಎ) ಹಾಗೂ 505ರಡಿ ವಿಚಾರಣೆ ನಡೆಸಬಾರದು ಎಂಬ ನಿರ್ಬಂಧವನ್ನು ಹೇರಿದೆ. ಅದೇ ರೀತಿ ದಂಡಪ್ರಕ್ರಿಯಾ ಸಂಹಿತೆ 199ರ ಅಡಿ ಮಾನನಷ್ಟ ಮೊಕದ್ದಮೆಯಂತಹ (ಕಲಂ 499 ಐಪಿಸಿ) ಪ್ರಕರಣಗಳನ್ನು ನಷ್ಟಕ್ಕೆ ಒಳಗಾದ ವ್ಯಕ್ತಿ ದೂರು ನೀಡಿದರೆ ಮಾತ್ರ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಹೇಳುತ್ತದೆ. ಪೊಲೀಸ್‌ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು  ನ್ಯಾಯಾಲಯದ ಅನುಮತಿ ಪಡೆಯದೆ ವಿಚಾರಣೆ ನಡೆಸುವಂತಿಲ್ಲ. ಆದರೆ ಈ ಬಗೆಯ ಯಾವ ರಕ್ಷಣೆ ಅಥವಾ ಮಿತಿಗಳೂ  ಕಲಂ 66(ಎ)ಗೆ ಇರದಿದ್ದುದು ಗಮನಾರ್ಹ.

ಹಾಗಿದ್ದರೆ ಈಗ ಕಲಂ 66 (ಎ) ಇಲ್ಲದಿರುವುದರಿಂದ  ನಾವು ಯಾವ ಬಗೆಯ ಅಭಿಪ್ರಾಯವನ್ನು ಬೇಕಾದರೂ ವ್ಯಕ್ತಪಡಿಸಬಹುದು ಎಂದೇನಲ್ಲ. ನಮ್ಮ ಅಭಿಪ್ರಾಯಗಳು ಸಂವಿಧಾನದ ಅನು ಚ್ಛೇದ 19 (2)ರಲ್ಲಿ ವಿಧಿಸಿರುವ ನಿಬಂಧನೆಗಳ ಒಳಗಿರಬೇಕು. ಒಂದು ವೇಳೆ ಅದನ್ನು ಮೀರಿದರೆ ಭಾರತೀಯ ದಂಡ ಸಂಹಿತೆ ಕಲಂ 124 (ಎ), 153 (ಎ), 295 (ಎ), 505 ಹಾಗೂ ಕಲಂ 92 ಪೊಲೀಸ್‌ ಕಾಯ್ದೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ 123ರಡಿ ಅವುಗಳನ್ನು  ಅಪರಾಧ ಕೃತ್ಯ ಎಂದು ಭಾವಿಸಬಹುದು.

ಯಾವುದೇ ಹೇಳಿಕೆ, ಸಂದೇಶಗಳು ವ್ಯಕ್ತಿಯನ್ನು ನಿಂದಿಸುವಂತಿದ್ದರೆ ಅಂತಹ ವ್ಯಕ್ತಿಗಳು ಭಾರತೀಯ ದಂಡಸಂಹಿತೆ ಕಲಂ 499ರಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬಹುದು ಅಥವಾ ಅದಕ್ಕೆ ಉಂಟಾದ ನಷ್ಟ ಭರಿಸಲು ನ್ಯಾಯಾಲಯದ ಮೊರೆ ಹೋಗಬಹುದು ಎಂಬುದನ್ನು ನಾವು ಮರೆಯುವಂತಿಲ್ಲ.
(ಲೇಖಕರು ವಕೀಲರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT