ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧಗಳನ್ನು ನಿಯಂತ್ರಿಸಿ

Last Updated 1 ಜೂನ್ 2014, 19:30 IST
ಅಕ್ಷರ ಗಾತ್ರ

ಉತ್ತರ ಪ್ರದೇಶದ ಬದಾಯೂಂ ಜಿಲ್ಲೆಯಲ್ಲಿ ಹದಿಹರೆಯದ ಸೋದರಿ­ಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ನೇಣುಹಾಕಿ ಕೊಲೆ ಮಾಡಿದ ಪ್ರಕರಣ ರಾಜಕೀಯ ಬಿರುಗಾಳಿಯನ್ನೆಬ್ಬಿಸಿದೆ. ಸಂತ್ರಸ್ತ ಕುಟುಂಬದ ಸದಸ್ಯರನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿದ ನಂತರ, ಈ ಪ್ರಕರಣದ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ಬದಲಿಸಿ ಆ ಹುದ್ದೆಗೆ ಬೇರೊಬ್ಬರನ್ನು ನಿಯೋಜಿಸಲಾಗಿದೆ. ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರೂ ಸಂತ್ರಸ್ತ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ್ದಾರೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಉತ್ತರಪ್ರದೇಶದ ಯುವ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಸಾಕಷ್ಟು ನಿರೀಕ್ಷೆಗಳನ್ನು ಗರಿಗೆದರಿಸಿದ್ದರು. ಆದರೆ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇರುವುದು ದುರದೃಷ್ಟಕರ. 

ಕಳೆದ ವರ್ಷ ಒಂದೇ ವಾರದಲ್ಲಿ 126 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. ಹೀಗಿದ್ದೂ ಸರ್ಕಾರ ಸೂಕ್ಷ್ಮತೆ ಪ್ರದರ್ಶಿಸಲಿಲ್ಲ. ಬದಲಿಗೆ ‘ಹುಡುಗರು ಹುಡುಗರೇ. ಅವರು ತಪ್ಪುಗಳನ್ನು ಮಾಡುತ್ತಾರೆ’ ಎಂದು ಸಮಾಜವಾದಿ ಪಕ್ಷದ ಮುಖಂಡ ಹಾಗೂ ಅಖಿಲೇಶ್ ಯಾದವ್ ಅವರ ತಂದೆ ಮುಲಾಯಂ ಸಿಂಗ್ ಯಾದವ್ ಹೇಳಿದ್ದರು. ಈಗ ಕೂಡ, ರಾಜ್ಯದಲ್ಲಿನ ಅತ್ಯಾಚಾರಗಳ ಬಗ್ಗೆ ಪ್ರಶ್ನಿಸಿದ ಪತ್ರಕರ್ತೆಗೆ ‘ನಿಮಗೇನೂ ಅಪಾಯ ಎದುರಾಗಿಲ್ಲ ತಾನೆ?   ಕಾನೂನು ಸುವ್ಯವಸ್ಥೆ ಬಗ್ಗೆ ನೀವೇಕೆ ತಲೆ ಕೆಡಿಸಿಕೊಳ್ಳುತ್ತೀರಿ’ ಎಂದು   ಅಖಿಲೇಶ್ ಯಾದವ್ ಉತ್ತರಿಸಿ ಪ್ರದರ್ಶಿಸಿದ ಲಘು ಧೋರಣೆ ಅತಿ­ರೇಕದ್ದು. ಅತ್ಯಾಚಾರದಂತಹ ಗಂಭೀರ ಅಪರಾಧದ ಬಗ್ಗೆ ಇಂತಹ ಉಡಾಫೆ ಪ್ರತಿಕ್ರಿಯೆಗಳು ಸಮಾಜಕ್ಕೆ ತಪ್ಪುಸಂದೇಶ ನೀಡುತ್ತವೆ. ಈ ಸೂಕ್ಷ್ಮತೆ ರಾಜಕೀಯ ನೇತಾರರಿಗೆ ಇರದಿದ್ದಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗುವುದು ಹೇಗೆ?

ವಿವಿಧ ಬಗೆಯ ಅಪರಾಧಗಳಿಗೆ ಉತ್ತರ ಪ್ರದೇಶ ಈಗಾಗಲೇ ಕುಖ್ಯಾತಿ ಪಡೆದಿದೆ. ದರೋಡೆ, ಲೂಟಿ,  ಅಪಹರಣ, ಕೊಲೆ ಇತ್ಯಾದಿ ಅಪರಾಧ­ಗಳನ್ನು ಅಖಿಲೇಶ್ ಸರ್ಕಾರ ನಿಯಂತ್ರಣಕ್ಕೆ ತರಬಹುದೆಂಬ ಜನಸಾಮಾನ್ಯರ ನಿರೀಕ್ಷೆ ಹುಸಿಯಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಮುಜಾಫರ್ ನಗರದ ಕೋಮು ಸಂಘರ್ಷಗಳನ್ನು ಅಖಿಲೇಶ್ ಸರ್ಕಾರ ನಿರ್ವಹಿಸಿದ ರೀತಿಯಂತೂ ಆಘಾತಕಾರಿಯಾಗಿಯೇ ಇತ್ತು. ಜಾತ್ಯತೀತ ತತ್ವಗಳನ್ನು ಪ್ರತಿಪಾದಿಸುವ ಸಮಾಜವಾದಿ ಸರ್ಕಾರ ಬಂದ ನಂತರ  ಕೋಮುಗಲಭೆಗಳೇನೂ  ಕಡಿಮೆ ಯಾಗಲಿಲ್ಲ ಎಂಬುದು ಗಂಭೀರ ವಿಚಾರ. ಬಹಿರ್ದೆಸೆಗೆ ಹೋದ ಹೆಣ್ಣು­ಮಕ್ಕಳ ಮೇಲೆ ಬರ್ಬರ ಅನಾಚಾರ ನಡೆಸಿ ಕೊಲೆಗೈದಿರುವ ಈ ಪ್ರಕರಣ ಮತ್ತೊಂದು ಗಂಭೀರ ಸಮಸ್ಯೆಯತ್ತಲೂ ಬೆಳಕು ಚೆಲ್ಲಿದೆ. ಮನೆಗಳಲ್ಲಿ  ಶೌಚಾಲಯಗಳ ಸೌಲಭ್ಯಗಳಿಲ್ಲದಿರುವುದು ಹೆಣ್ಣುಮಕ್ಕಳ ಸುರಕ್ಷತೆಗೆ ಧಕ್ಕೆ ಒದಗಿಸುತ್ತದೆ ಎಂಬುದಕ್ಕೆ ಈ ಪ್ರಕರಣ ಹೊಸ ಸಾಕ್ಷಿ. ಭಾರತದ ಜನ­ಸಂಖ್ಯೆಯಲ್ಲಿ ಅರ್ಧದಷ್ಟು ಮಂದಿ ಬಯಲು ಶೌಚಾಲಯ ಅವಲಂಬಿಸಿ­ದ್ದಾರೆ ಎಂಬುದನ್ನು ಸಮೀಕ್ಷೆಗಳು ಹೇಳುತ್ತವೆ. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಶೌಚಾಲಯ ಸೌಲಭ್ಯಗಳನ್ನು ಕಲ್ಪಿಸುವ ವಿಚಾರಕ್ಕೂ ಸರ್ಕಾರ ಆದ್ಯತೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT