ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಭಿರುಚಿಯ ಪಥದಲ್ಲಿ ಪರಿಶ್ರಮವಿದ್ದರೆ ಯಶಸ್ಸು'

Last Updated 29 ಜನವರಿ 2013, 10:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಹಣದ ಬೆನ್ನತ್ತಿ ಎಂದೂ ಓಡಬೇಡಿ. ಅಭಿರುಚಿ ಕಡೆಗೆ ಓಟ- ನೋಟ ಇರಲಿ. ಯಶಸ್ಸು, ಹಣ, ಜನಪ್ರಿಯತೆ ತಾನಾಗಿಯೇ ಬರುತ್ತದೆ...'

`ಕಷ್ಟಪಟ್ಟು ಕೆಲಸ ಮಾಡಿ. ದೇಶದ್ರೋಹಿ ಚಿಂತನೆ ಬೇಡ. ಮುನ್ನಡೆ ಪಥದ ಆಯ್ಕೆಯಲ್ಲಿ ನಿಮ್ಮತನ ಇರಲಿ. ಜೀವನ ಪಯಣದಲ್ಲಿ ಯಶಸ್ಸಿನ ಕುದುರೆ ನಿಮ್ಮನ್ನು ಅರಸಿಕೊಂಡು ಬರುತ್ತದೆ...'

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, `ಮಾರ್ಗದರ್ಶನದ' ಜೊತೆ  ಸ್ವ ಅನುಭವನ್ನು ಆತ್ಮೀಯವಾಗಿ ಹಂಚಿಕೊಂಡಾಗ ತದೇಕಚಿತ್ತದಿಂದ, ಆಲಿಸುತ್ತಿದ್ದ ಯುವ ಸಮೂಹದ ಹೃದಯದಲ್ಲಿ `ತಾವೂ ಯಾಕೆ ಸುಧಾಮೂರ್ತಿ ಥರ ಆಗಬಾರದು' ಎಂಬ ಕನಸಿನ ಲೋಕ ಸೃಷ್ಟಿಯಾಗಿತ್ತು!

ಯುವಜನತೆಯಲ್ಲಿ ನಾಯಕತ್ವ ಗುಣ ಬೆಳೆಸಿ ಅವರನ್ನು ಉದ್ಯಮಶೀಲರನ್ನಾಗಿಸುವ ಉದ್ದೇಶದಿಂದ ಸರ್ಕಾರೇತರ ಸಂಸ್ಥೆ, ನಗರದ ದೇಶಪಾಂಡೆ ಫೌಂಡೇಶನ್ ಆಯೋಜಿಸಿದ್ದ `ಲೀಡ್ ಪಯಣ'ದಲ್ಲಿ ಪಾಲ್ಗೊಂಡ ಸುಮಾರು 100 ವಿದ್ಯಾರ್ಥಿಗಳ ಜೊತೆಗೆ ಸೋಮವಾರ ಜರುಗಿದ ಸಂವಾದ ಸಂದರ್ಭವದು.

`ತಾಳ್ಮೆ, ಪರಿಪಕ್ವತೆ, ಸವಾಲುಗಳನ್ನು ಎದುರಿಸುವ ಧೈರ್ಯ, ಕಠಿಣ ಪರಿಶ್ರಮ, ತಂಡವಾಗಿ ಕೆಲಸ, ಕೇಳಿ ತಿಳಿದುಕೊಳ್ಳುವ ಜಾಣ್ಮೆ ಇದ್ದವರು ಉತ್ತಮ ನಾಯಕರಾಗಲು ಸಾಧ್ಯ' ಎಂದ ಅವರು `ಉತ್ತಮ ಉದ್ದೇಶಕ್ಕಾಗಿ ಕೆಲಸ ಮಾಡಬೇಕು' ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಂದ ಎದುರಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, `ವೃತ್ತಿ ಮತ್ತು ಕುಟುಂಬವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಎರಡರ ಮಧ್ಯೆ ಸಮತೋಲನ ಕಾಯ್ದಕೊಳ್ಳಬೇಕು. ಮಾತೃಭಾಷೆಯನ್ನು ನಿರ್ಲಕ್ಷಿಸದೆ ಇಂಗ್ಲಿಷ್ ಭಾಷೆ ಕಲಿಯಬೇಕು. ಪಾಶ್ಚಾತೀಕರಣ ಕಡೆಗಿನ ಬೆಳಕಿನ ಕಿಂಡಿ ಇಂಗ್ಲಿಷ್' ಎಂದರು.

`ಗಂಡಸರಿಗಿಂತ ಮಹಿಳೆಯರು ಭಿನ್ನ. ಇಬ್ಬರಲ್ಲೂ ಇರುವ ಗುಣವಿಶೇಷಗಳೂ ಭಿನ್ನ. ಮಹಿಳೆಯರು ಉತ್ತಮ ವ್ಯವಸ್ಥಾಪಕರಾಗಬಲ್ಲರು' ಎಂದ ಅವರು, `ಗಂಡು-ಹೆಣ್ಣಿನ ಮಧ್ಯೆ ಹೊಂದಣಿಕೆ ಇದ್ದರೆ ಮಾತ್ರ ಬದುಕು ಅರ್ಥಪೂರ್ಣವಾಗಲು ಸಾಧ್ಯ' ಎಂದರು.

`ಅಗತ್ಯ ಇರುವವರಿಗೆ ನೆರವಾಗಬೇಕು ಎಂಬ ನನ್ನ ಧ್ಯೇಯ, ನನಗೆ ಹೆಚ್ಚಿನ ಕೆಲಸ ಮಾಡಲು ಶಕ್ತಿ ನೀಡಿದೆ' ಎಂದ ಅವರು, ಕನ್ನಡ ಭಾಷೆ ಮತ್ತು ಹುಬ್ಬಳ್ಳಿ ಮೇಲಿನ ಪ್ರೀತಿಯನ್ನು ಹೇಳಿಕೊಂಡರು.

`ಅದು 1979. ಅಮೆರಿಕಾದ ಬೋಸ್ಟನ್‌ಗೆ ತೆರಳಿದ್ದೆ. ನನ್ನ ಮೊದಲ ವಿದೇಶ ಯಾತ್ರೆಯದು. ಆಗಿನ್ನೂ ಹೆಚ್ಚಿನ ಜ್ಞಾನ, ಕೈಯಲ್ಲಿ ಸಾಕಷ್ಟು ಹಣ ಇರಲಿಲ್ಲ. ಅಲ್ಲಿನ ಏರ್‌ಪೋರ್ಟ್‌ನಲ್ಲಿ ವಿಸಾ ಅಧಿಕಾರಿ, ಎಲ್ಲಿಂದ ಬಂದಿರಿ? ಯಾಕೆ ಬಂದಿರಿ? ಎಷ್ಟು ದಿನ ಇರುತ್ತೀರಿ? ನಿಮ್ಮಲ್ಲಿ ಎಷ್ಟು ಹಣ ಇದೆ. ಹೀಗೆ ನನ್ನಲ್ಲಿ ಹಲವು ಪ್ರಶ್ನೆ ಕೇಳಿದರು. ನಾನು ಭಾರತವಳು ಎಂದಾಗ `ಹೋ.. ಬಡ ರಾಷ್ಟ್ರ. ನಿಮಗೆ ಇಂಗ್ಲಿಷ್ ಗೊತ್ತಿದೆಯೇ'  ಎಂದು ಉದ್ಘಾರ ತೆಗೆದರು'

`ಇನ್ನೊಬ್ಬ ಅಧಿಕಾರಿ ಅಲ್ಲಿನ ರಸ್ತೆಗಳಲ್ಲಿ ಹಾವುಗಳಿವೆಯಲ್ಲ, ನಿಮ್ಮಲ್ಲಿ ಕೆಲವೇ ಮಂದಿಗೆ ಇಂಗ್ಲಿಷ್‌ಗೆ ಬರುತ್ತದೆ. ನಿಮ್ಮ ಬಳಿಯೂ ಆನೆ ಇದೆಯಾ ಎಂದೂ ಕೇಳಿದರು. ನಾನು ಅಲ್ಲಿ ಆರು ತಿಂಗಳು ಇರಲು ಬಯಸಿದ್ದರೂ ನನಗೆ ಮೂರು ತಿಂಗಳಿಗೆ ಮಾತ್ರ ವಿಸಾ ನೀಡಿದರು' ಎಂದು ಸುಧಾಮೂರ್ತಿ ನೆನಪಿಸಿಕೊಂಡರು.

`ಆದರೆ 2006ರಲ್ಲಿ, ಮತ್ತೆ ಅಮೆರಿಕಕ್ಕೆ ಹೋಗಿದ್ದೆ. ಅಲ್ಲಿನ ಮಿಯಾಮಿ ಏರ್‌ಪೋರ್ಟ್‌ನ ಅಧಿಕಾರಿಗಳು ಭಾರತೀಯರು ಉತ್ತಮ ಜನರು. ಕಠಿಣ ಪರಿಶ್ರಮ ಪಡುತ್ತಾರೆ. ಸಾಫ್ಟ್‌ವೇರ್ ಕಾರಣಕ್ಕೆ ಬೆಂಗಳೂರು ಪರಿಚಿತವಾಗಿದೆ ಎಂದು ಗೌರವದಿಂದ ಮಾತನಾಡಿದರು. ಆ ಸಂದರ್ಭದಲ್ಲಿ ನಾನು ಅಲ್ಲಿ ಮೂರು ತಿಂಗಳು ಇರಲು ತೆರಳಿದ್ದರೂ, ನನಗೆ ಆರು ತಿಂಗಳ ವಿಸಾ ನೀಡಿದರು' ಎಂದರು.

`30 ವರ್ಷಕ್ಕೂ ಕಡಿಮೆ ಅವಧಿಯಲ್ಲಿ ವಿದೇಶಿಯರ ಮನಸ್ಸಿನಲ್ಲಿ ಭಾರತದ ಕುರಿತ ಅಭಿಪ್ರಾಯ ಅದೆಷ್ಟು ಬದಲಾಯಿತು ಎನ್ನುವುದಕ್ಕೆ ಇದು ನಿದರ್ಶನ. ದೇಶದ ಒಳಗೆ ಮತ್ತು ಹೊರಗೆ ಇರುವ ಭಾರತೀಯರು ಕಷ್ಟಪಟ್ಟು ದುಡಿದ ಫಲವಿದು' ಎಂದು ಸುಧಾಮೂರ್ತಿ ಬಣ್ಣಿಸಿದರು.

ವಿದ್ಯಾರ್ಥಿಗಳ ಬೇಡಿಕೆಯಂತೆ,  ಜೆ.ಆರ್.ಡಿ ಟಾಟಾ ಅವರಿಗೆ ಪತ್ರ ಬರೆದು ಟೆಲ್ಕೊ ಕಂಪೆನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಕಾರಣವಾದ ಸಂದರ್ಭವನ್ನೂ ಹಂಚಿಕೊಂಡರು. 

ಸುಧಾಮೂರ್ತಿ ಅವರ ಸಹೋದರಿಯರಾದ ಜಯಶ್ರೀ ದೇಶಪಾಂಡೆ ಮತ್ತು ಸುನಂದಾ ಕುಲಕರ್ಣಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT