ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಿಸಿ

Last Updated 30 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅಮೀರ್‌ಖಾನ್‌ ನಟಿಸಿರುವ ರಾಜ್‌ಕುಮಾರ್‌ ಹಿರಾನಿ ನಿರ್ದೇಶನದ ‘ಪಿಕೆ’ ಚಿತ್ರವನ್ನು ನಿಷೇಧಿಸಲು ಒತ್ತಾಯಿಸಿ ಬಜರಂಗ ದಳದ ಕಾರ್ಯ­­ಕರ್ತರು ರಾಷ್ಟ್ರದ ವಿವಿಧೆಡೆ ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿ­ದ್ದಾರೆ.  ಅಹ್ಮದಾಬಾದ್‌ನ ಎರಡು ಥಿಯೇಟರ್‌ಗಳಿಗೆ ದಾಳಿ ನಡೆಸಿರುವ ಬಜರಂಗದಳ ಕಾರ್ಯಕರ್ತರು ಟಿಕೆಟ್‌ ಕೌಂಟರ್‌ನ ಗಾಜುಗಳನ್ನು ಒಡೆದು ಹಾಕಿದ್ದು, ಪೊಲೀಸರು ಬರುವ ವೇಳೆಗೆ ಪರಾರಿಯಾಗಿದ್ದಾರೆ.

ಭೋಪಾಲ್‌ ಜಮ್ಮು ಸೇರಿದಂತೆ ವಿವಿಧ ನಗರಗಳಲ್ಲಿ ‘ಪಿಕೆ’ ಚಿತ್ರ ಪ್ರದರ್ಶನ ನಡೆಸುತ್ತಿರುವ ಥಿಯೇಟರ್‌ಗಳ ಮುಂದೆ ಬಜರಂಗದಳ ಪ್ರತಿಭಟನೆ ನಡೆಸಿದೆ.  ‘ಈ ಸಿನಿಮಾದಲ್ಲಿ ಹಿಂದೂ ದೇವತೆಗಳನ್ನು ಅವಹೇಳನ ಮಾಡಲಾಗಿದೆ. ಆದ್ದರಿಂದ ಚಿತ್ರಪ್ರದರ್ಶನಕ್ಕೆ ಅಡ್ಡಿ ಪಡಿಸುತ್ತೇವೆ’ ಎನ್ನುವುದು ಬಜರಂಗ­ದಳದ ನಿಲುವು. ಹಿಂದೂ ಬಲಪಂಥೀಯ ಸಂಘಟನೆಯಾಗಿರುವ ಬಜರಂಗ­ದಳ ಹಿಂದೆಯೂ ಇದೇ ರೀತಿಯಲ್ಲಿ ಸೃಜನಶೀಲ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸಿದ ಹಲವು ಘಟನೆಗಳು ನಡೆದಿವೆ.

ಈಗ ‘ಪಿಕೆ’ಯ ಸರದಿ. ಬಿಡುಗಡೆಯಾದ ಮೊದಲ ವಾರದಲ್ಲೇ ‘ಪಿಕೆ’ ಸಿನಿಮಾ 180 ಕೋಟಿ ರೂಪಾಯಿಗಳನ್ನು ಗಳಿಸಿ ದಾಖಲೆ ಮಾಡಿದ್ದು ನೋಡಿದರೆ, ದೇಶದ ಎಲ್ಲೆಡೆ ಪ್ರೇಕ್ಷಕರು ಇದನ್ನು ಮುಕ್ತಮನಸ್ಸಿನಿಂದ ಮೆಚ್ಚಿಕೊಂಡಿರುವುದು ಸ್ಪಷ್ಟ. ‘ನಿನ್ನ ದೇವರನ್ನು ನೀನೇ ಹುಡುಕಿಕೋ. ದೇವರ ನಕಲಿ ಏಜೆಂಟರ ಜಾಲಕ್ಕೆ ಸಿಲುಕಬೇಡ’ ಎನ್ನುವ ಸಂದೇಶವನ್ನು ಸಾರುವ ಈ ಚಿತ್ರವನ್ನು ವಿರೋಧಿಸುವು­ದನ್ನು ನೋಡಿದರೆ, ಬಜರಂಗದಳದವರು ದೇವರ ನಕಲಿ ಏಜೆಂಟರ ಪರ­ವಾಗಿ­ದ್ದಾರೆ ಎಂಬ ಸಂಶಯ ಮೂಡುತ್ತದೆ. ಹಿಂದುತ್ವದ ಪ್ರತಿಪಾದಕರಾಗಿ­ರುವ ಬಿಜೆಪಿ ವರಿಷ್ಠ ನಾಯಕ ಲಾಲ್‌ಕೃಷ್ಣ ಅಡ್ವಾಣಿಯವರೇ ಈ ಸಿನಿಮಾವನ್ನು ನೋಡಿ, ‘ಇದೊಂದು ಅದ್ಭುತ, ಧೈರ್ಯಶಾಲಿ ಚಿತ್ರ’ ಎಂದು ಹೊಗಳಿದ್ದನ್ನು ಈ ಮತಾಂಧ ಶಕ್ತಿಗಳು ಗಮನಿಸುವುದು ಒಳ್ಳೆಯದು.

ಭಾರತದಲ್ಲಿ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಲು ಸ್ವತಂತ್ರ ಸೆನ್ಸಾರ್‌ ಮಂಡಳಿಯಿದೆ. ಯಾವುದೇ ಸಿನಿಮಾವನ್ನು ವೀಕ್ಷಿಸಿ, ಅದರ ಪ್ರದರ್ಶನಕ್ಕೆ ಅನುಮತಿ ನೀಡುವುದು ಅಥವಾ ತಿರಸ್ಕರಿಸುವುದು ಸೆನ್ಸಾರ್‌ ಮಂಡಳಿಯ  ಕರ್ತವ್ಯ. ಒಂದು ವೇಳೆ ಸೆನ್ಸಾರ್‌ ಮಂಡಳಿ ಅನುಮತಿ ನೀಡದಿದ್ದರೆ ಚಿತ್ರ­ನಿರ್ಮಾಪಕರು ನ್ಯಾಯಾಲಯದ ಮೊರೆ ಹೋಗಬಹುದು. ‘ಪಿಕೆ’ ಬಿಡುಗಡೆ­ಯಾಗುವ ಮೊದಲೇ ಕೆಲವರು ಈ ಚಿತ್ರವನ್ನು ನಿಷೇಧಿಸುವಂತೆ ಸುಪ್ರೀಂ­ಕೋರ್ಟಿನ ಮೊರೆ ಹೋಗಿದ್ದರು. ಆದರೆ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯ­ಮೂರ್ತಿಯವರು ಚಿತ್ರ ನಿಷೇಧದ ಮನವಿಯನ್ನು ತಳ್ಳಿಹಾಕಿದ್ದರು.

‘ಸಿನಿಮಾ ನಿಮ್ಮ ಭಾವನೆಗಳಿಗೆ ಧಕ್ಕೆ ತರುವುದಾದರೆ ಆ ಸಿನಿಮಾವನ್ನು ನೋಡಬೇಡಿ. ಪ್ರದರ್ಶನವನ್ನು ನಿರ್ಬಂಧಿಸಿದರೆ ಅದು ಇತರರ ಹಕ್ಕುಗಳನ್ನು ಕಸಿದು­ಕೊಂಡಂತೆ’ ಎನ್ನುವ ಮುಖ್ಯ ನ್ಯಾಯಮೂರ್ತಿಗಳ ನಿಲುವು ಶ್ಲಾಘನಾರ್ಹ. ಬಜರಂಗದಳದ ಕಾರ್ಯಕರ್ತರು ಸಂವಿಧಾನಕ್ಕೆ ಅತೀತರಲ್ಲ. ಸಿನಿಮಾ ಮಂದಿರಗಳಿಗೆ ಬೆದರಿಕೆ ಒಡ್ಡುವುದು, ದಾಳಿ ಮಾಡುವುದು ಅಕ್ಷಮ್ಯ ಅಪರಾಧ. ಅಲ್ಲಿನ ರಾಜ್ಯ ಸರ್ಕಾರಗಳು ಇಂತಹ ಪುಂಡರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಸಂವಿಧಾನಬದ್ಧ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ರಾಜ್ಯ ಸರ್ಕಾರಗಳ ಆದ್ಯ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT