ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಷೇಕ್‌, ಲಿಯಾನ್‌ ಬ್ಯಾಟಿಂಗ್‌ ಸೊಗಸು

ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್: ದಿಟ್ಟ ಉತ್ತರ ನೀಡಿದ ಕರ್ನಾಟಕ
Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸೊಗಸಾದ ಬ್ಯಾಟಿಂಗ್ ಪ್ರದರ್ಶಿಸಿದ ಆರಂಭಿಕ ಬ್ಯಾಟ್ಸ್‌­ಮನ್‌ಗಳಾದ ಅಭಿಷೇಕ್ ರೆಡ್ಡಿ ಮತ್ತು ಲಿಯಾನ್‌ ಖಾನ್‌ ಜೊತೆಯಾಟದಲ್ಲಿ ದ್ವಿಶತಕ ತಪ್ಪಿಸಿಕೊಂಡರೂ ರಾಜ್ಯ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿದರು.

ಇಲ್ಲಿ ಗುರುವಾರ ಮುಕ್ತಾಯಗೊಂಡ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌ ಟೂರ್ನಿಯ ‘ಸಿ’ ಗುಂಪಿನ ಪಂದ್ಯವನ್ನು ಡ್ರಾ ಮಾಡಿಕೊಂಡ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಲೀಡ್‌ ಮಣಿದ ಕಾರಣ ಕೇವಲ ಒಂದು ಪಾಯಿಂಟ್‌ಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಮೊದಲ ಇನ್ನಿಂಗ್ಸ್‌ನಲ್ಲಿ 272 ರನ್ ಹಿಂದೆ ಉಳಿದು ಫಾಲೋ ಆನ್‌ ಆಗಿದ್ದ ಕರ್ನಾಟಕ ಸೋಲಿನಿಂದ ಪಾರಾಗ­ಬೇಕಾದರೆ ಕೊನೆಯ ದಿನ ಆಲೌಟ್‌ ಆಗುವುದನ್ನು ತಪ್ಪಿಸಿಕೊಳ್ಳ­ಬೇಕಾಗಿತ್ತು. ಈ ಸವಾಲನ್ನು ಬ್ಯಾಟ್ಸ್‌ಮನ್‌ಗಳು ಸಮರ್ಥವಾಗಿ ಎದುರಿಸಿದರು.

ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಬ್ಯಾಟಿಂಗ್‌ ವೈಭವ ಪ್ರದರ್ಶಿಸಿದ ರೆಡ್ಡಿ ಮತ್ತು ಲಿಯಾನ್ ಖಾನ್‌ ಚಹಾ ವಿರಾಮಕ್ಕೆ ಸ್ವಲ್ಪ ಹೊತ್ತು ಇರುವವರೆಗೂ ಕ್ರೀಸ್‌ನಲ್ಲಿ ಲಂಗರು ಹಾಕಿ ಭರವಸೆ ಮೂಡಿಸಿದರು. ಇವರಿಬ್ಬರ ಜೊತೆಯಾಟ ಮುರಿದ ನಂತರ 15 ಓವರ್‌ಗಳಲ್ಲಿ ಮೂರು ವಿಕೆಟ್‌ಗಳು ಉರುಳಿದವು. ಆದರೆ ಅಷ್ಟರಲ್ಲಿ ತಂಡ ಆತಂಕದಿಂದ ಪಾರಾಗಿತ್ತು. ದಿನದಾಟ ಮುಕ್ತಾಯಕ್ಕೆ ಒಂದು ತಾಸು ಬಾಕಿ ಇರುವಾಗ ಉಭಯ ತಂಡಗಳ ನಾಯಕರು ಪಂದ್ಯ ಮುಕ್ತಾಯಗೊಳಿಸಲು ಕೋರಿಕೊಂಡ ಕಾರಣ ಅಂಪೈರ್‌ಗಳು ಬೇಲ್ಸ್‌ ತೆಗೆ­ದರು. ಈ ಸಂದರ್ಭದಲ್ಲಿ ಕರ್ನಾಟಕ 99 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 299 ರನ್‌ ಗಳಿಸಿತ್ತು.

ರೆಡ್ಡಿ ಎರಡನೇ ಶತಕ
ಕಳೆದ ವಾರ ಇದೇ ಮೈದಾನದಲ್ಲಿ ದೆಹಲಿ ವಿರುದ್ಧ ಶತಕ ಸಿಡಿಸಿದ್ದ ಅಭಿಷೇಕ್‌ ರೆಡ್ಡಿ ಗುರುವಾರ ಮತ್ತೊಮ್ಮೆ ಮಿಂಚು ಹರಿಸಿದರು. ಎರಡು ಅವಧಿ ಬ್ಯಾಟಿಂಗ್‌ ಮಾಡಿದ ಅವರು ಲಿಯಾನ್‌ ಖಾನ್‌ ಜೊತೆಗೆ ಮೊದಲ ವಿಕೆಟ್‌ಗೆ 195 ರನ್‌ ಸೇರಿಸಿದರು. 214 ಎಸೆತ ಎದುರಿಸಿ 115 ರನ್‌ ಗಳಿಸಿದ ರೆಡ್ಡಿ 1 ಸಿಕ್ಸರ್‌ ಮತ್ತು 14 ಬೌಂಡರಿ ಬಾರಿಸಿದ್ದರು.

ಲಿಯಾನ್ ಖಾನ್‌ (85; 193 ಎಸೆತ, 1 ಸಿಕ್ಸರ್‌, 11 ಬೌಂ) ಔಟಾದ ನಂತರ ಬಂದ ಸ್ಥಳೀಯ ಹುಡುಗ ಶಿಶಿರ್ ಭವಾನೆ ಕೇವಲ 21 ರನ್‌ ಗಳಿಸಿ ಮರಳಿದರು. ಆದರೆ ನಾಯಕ ದಿನೇಶ ಬೋರ್ವಾಂಕರ್‌ ಮತ್ತು ಅರ್ಧ ಶಕತ ಗಳಿಸಿದ ಕೆ.ಎನ್‌.ಭರತ್‌ (56; 85 ಎಸೆತ, 1 ಸಿಕ್ಸರ್‌, 10 ಬೌಂ) ಅಜೇಯರಾಗಿ ಉಳಿದು ಆತಂಕ ದೂರ ಮಾಡಿದರು.

ಕರ್ನಾಟಕದ ಮುಂದಿನ ಪಂದ್ಯ ಡಿಸೆಂಬರ್‌ 22ರಿಂದ ರಾಜಸ್ತಾನ ವಿರುದ್ಧ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌
ಮುಂಬೈ ಮೊದಲ ಇನ್ನಿಂಗ್ಸ್‌: 176.5 ಓವರ್‌ಗಳಲ್ಲಿ 475ಕ್ಕೆ ಆಲೌಟ್‌; ಕರ್ನಾಟಕ ಮೊದಲ ಇನ್ನಿಂಗ್ಸ್‌: 80.2 ಓವರ್‌ಗಳಲ್ಲಿ 203ಕ್ಕೆ ಆಲೌಟ್‌. ಎರಡನೇ ಇನ್ನಿಂಗ್ಸ್‌: 99 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 299 (ಅಭಿಷೇಕ್‌ ರೆಡ್ಡಿ 115, ಲಿಯಾನ್‌ ಖಾನ್‌ 85, ಶಿಶಿರ್ ಭವಾನೆ 21, ಕೆ.ಎನ್‌.ಭರತ್‌ 56; ಹರ್ಮೀತ್‌ ಸಿಂಗ್‌ 98ಕ್ಕೆ2, ಮೀರಜ್ ಖಾನ್‌ 79ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT