ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧಕ್ಕೇ ನಿಂತ ತೀನಂಶ್ರೀ ಭವನ

Last Updated 14 ಡಿಸೆಂಬರ್ 2014, 20:24 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ (ತುಮಕೂರು ಜಿಲ್ಲೆ): ನಾಡಿನ ಹೆಮ್ಮೆಯ ಸಾಹಿತಿ ತೀ.ನಂ.­ಶ್ರೀಕಂಠಯ್ಯ ಅವರ ಸ್ಮರಣೆಗಾಗಿ ಪಟ್ಟಣದ ಸಂತೆ ಮೈದಾನ­ದಲ್ಲಿ ನಿರ್ಮಾ­ಣವಾಗುತ್ತಿರುವ ಕಲಾ ಭವನ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಕಟ್ಟಡದ ಬಾಗಿಲು, ಕಿಟಕಿಗಳನ್ನು ದುಷ್ಕರ್ಮಿಗಳು ಕಿತ್ತೊಯ್ದಿದ್ದಾರೆ. ರಾತ್ರಿ ವೇಳೆ ಕುಡುಕರು ಪಾನಗೋಷ್ಠಿ ನಡೆ­ಸುತ್ತಿ-­ದ್ದರೆ, ಸಂತೆಗೆ ಬರುವ ಜನ ಇದನ್ನೇ ಶೌಚಾಲಯ ಮಾಡಿಕೊಂಡಿ­ದ್ದಾರೆ. ಒಳಾಂಗಣ­ದಿಂದ ಮಲ–ಮೂತ್ರ­ಗಳ ದುರ್ನಾತ ಬರುತ್ತಿದೆ. ಹಂದಿ, ನಾಯಿ ಹಾಗೂ ಬೀಡಾಡಿ ದನಗಳ ನೆಲೆಯಾಗಿ ಮಾರ್ಪಟ್ಟಿದೆ ಎಂದು ಪ್ರಗತಿಪರ ಚಿಂತಕ ನಾಗ­ಕುಮಾರ್‌ ಚೌಕಿಮಠ ಬೇಸರ ವ್ಯಕ್ತಪಡಿಸಿದರು.

ತೀನಂಶ್ರೀ ಹೆಸರಿನಲ್ಲಿ ಕಲಾ ಭವನ ನಿರ್ಮಿಸಬೇಕು ಎಂಬ ಬೇಡಿಕೆಗೆ ಈಗ 25 ವರ್ಷ. ತಾಲ್ಲೂಕಿನ  ಹಿರಿ–ಕಿರಿಯ ಸಾಹಿತಿಗಳು ಭವನದ ನಿರ್ಮಾಣಕ್ಕಾಗಿ ಆಗ್ರಹಿಸುತ್ತಲೇ ಬಂದಿದ್ದೇವೆ. ಕಟ್ಟಡದ ಕಾಮಗಾರಿ ಪ್ರಾರಂಭ ಆದಾಗ ಸಂತಸ­ಪಟ್ಟಿದ್ದೆವು. ಆದರೆ ಕಾಮಗಾರಿಯ ಆಮೆ ವೇಗ, ಅಪೂರ್ಣ ಕಟ್ಟಡದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆ ನೋವು ತಂದಿದೆ ಎಂದು ಸಾಹಿತಿ ಎಂ.ವಿ.ನಾಗರಾಜ್‌ರಾವ್  ಹೇಳಿದರು.

೨೦೦೯ರಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ­ದಲ್ಲಿ ಕಾಮಗಾರಿ ಆರಂಭಿ­ಸ­­ಲಾಯಿತು. ಕಾಮಗಾರಿ ಚುರುಕು­ಗೊಳಿ­ಸಲು, ಗುಣಮಟ್ಟ ಕಾಯ್ದು­ಕೊಳ್ಳು­ವಂತೆ 5 ವರ್ಷಗಳಿಂದ ಜನಪ್ರತಿ­ನಿಧಿ­­ಗಳು, ಅಧಿ­ಕಾರಿ­ಗಳಿಗೆ ಮನವಿ ಮಾಡು­ತ್ತಲೇ ಇದ್ದರೂ ಯಾವುದೇ ಪ್ರಯೋಜ­ನ­ವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿ­ದರು.    

ಸುಮಾರು ₨ 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಕಟ್ಟಡದ ಕಾಮಗಾರಿ ಮೊದಲ ಹಂತ ಮುಗಿದಿದೆ. ಭವನ ಪೂರ್ಣಗೊಳಿಸಲು ಇನ್ನೂ ₨1 ಕೋಟಿ ಅಗತ್ಯ ಇದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ, ಜಿಲ್ಲಾಧಿ­ಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಹಣದ ಕೊರತೆ­­ಯಿಂದ ಕಾಮಗಾರಿ ಸ್ಥಗಿತ­ಗೊಂಡಿದೆ ಎಂದು ಲೋಕೋಪ­ಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿ­ಯರ್ ಆನಂದಪ್ಪ ತಿಳಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ­ವ­ರಾದ ತೀರ್ಥಪುರ ನಂಜಪ್ಪ ಶ್ರೀಕಂಠಯ್ಯ ಅವರು ಭಾರತೀಯ ಕಾವ್ಯಮೀ­ಮಾಂಸೆ, ಒಲುಮೆ, ನಂಬಿಯಣ್ಣನ ರಗಳೆ, ರನ್ನನ ಗದಾಯುದ್ಧ ಸಂಗ್ರಹ, ಕನ್ನಡ ಮಾಧ್ಯಮ ವ್ಯಾಕರಣ, ವಿಶಾಖ­ದತ್ತನ ಮುದ್ರಾರಾಕ್ಷಸನ ಕನ್ನಡ ರೂಪ, ರಾಕ್ಷಸನ ಮುದ್ರಿಕೆ, ನಂಟರು, ಕಾವ್ಯ ಸಮೀಕ್ಷೆ, ಕಾವ್ಯಾನುಭವ, ಪಂಪ, ಸಮಾ­ಲೋಕನ, ಮುಂತಾದ ಕೃತಿಗ­ಳನ್ನು ನೀಡಿ, ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. 1966ರಲ್ಲಿ ಪಂಪ ಪ್ರಶಸ್ತಿಗೂ ಭಾಜನರಾಗಿದ್ದಾರೆ.

‘ತೀನಂಶ್ರೀ ಸಾಧನೆ ಅರಿವಿರದ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡ­ಳಿತ, ತಾಲ್ಲೂಕು ಆಡಳಿತದಿಂದ ಭವನ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಾಹಿತ್ಯಾ­ಸಕ್ತರು ಇದನ್ನು ಒಕ್ಕೊರಲಿನಿಂದ ಖಂಡಿ­ಸ­ಬೇಕು’ ಎಂದು ಚಿಕ್ಕನಾಯ­ಕನಹಳ್ಳಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಸವರಾಜು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT