ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ...

ಸಾಥಿ ಸಂಘಟನೆಯಿಂದ ಪುನರ್ಮಿಲನ ಕಾರ್ಯಕ್ರಮ
Last Updated 17 ಏಪ್ರಿಲ್ 2015, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ನಂದು ಮಂಡ್ಯ, ಏಳನೇ ಕ್ಲಾಸ್‌ ಓದ್ತಿದ್ದೆ. ಒಂದು ದಿನ ಅಪ್ಪ ಅಮ್ಮನನ್ನು ಹೊಡೆದು ಸಾಯಿಸಿದ. ಊರಲ್ಲಿ ಎಲ್ಲರೂ ಅದನ್ನೇ ಮಾತಾಡ್ತಿದ್ರು. ಭಯವಾಗಿ ಮನೆ ಬಿಟ್ಟು ಬಂದೆ. ನನಗೆ ತಂಗಿಯರು ಇದ್ದಾರೆ. ಇನ್ನು ಮುಂದೆ ಹಿಂಗೆಲ್ಲ ಮಾಡಲ್ಲ. ಚೆನ್ನಾಗಿ ಓದ್ತೀನಿ’
–ಇದು ಮೂರು ಬಾರಿ ಮನೆ ಬಿಟ್ಟು ಬಂದ ವೆಂಕಟೇಶನ ಮಾತುಗಳು

ಶುಕ್ರವಾರ ನಗರದ ಯಶವಂತಪುರ ರೈಲು ನಿಲ್ದಾಣದ ಬಳಿಯ ರೈಲ್ವೆ ಇನ್‌ಸ್ಟಿಟ್ಯೂಟ್‌ನಲ್ಲಿ ‘ಸಾಥಿ’ ಸಂಘಟನೆ ಏರ್ಪಡಿಸಿದ್ದ ‘ಕುಟುಂಬದೊಂದಿಗೆ ಪುನರ್ಮಿಲನ’ ಕಾರ್ಯಕ್ರಮದಲ್ಲಿ  ಇಂತಹ ಹಲವು ದಾರುಣ ಕಥನಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದ್ದರೆ ಕೇಳುತ್ತಿದ್ದವರ ಮನಸ್ಸು ಭಾರಗೊಳ್ಳುತ್ತಿತ್ತು.

‘ಇವನ ಅಮ್ಮ ಅಂದ್ರೆ ನಮ್ಮ ಅಕ್ಕನೇ ನನ್ನನ್ನು ಸಾಕಿದವಳು. ಅವಳು ತೀರಿಕೊಂಡ ನಂತರ ಅವಳ ಮಕ್ಕಳನ್ನು ನಾನೇ ಸಾಕಬೇಕು ಎಂದುಕೊಂಡು ಮನೆಗೆ ತಂದು ಇಟ್ಟುಕೊಂಡಿದ್ದೆ. ಆದರೆ ಇವನು ಪದೇ ಪದೇ ಮನೆ ಬಿಟ್ಟು ಹೋದ್ರೆ ನಾವಾದ್ರೂ ಏನು ಮಾಡ್ಬೇಕು? ನಮ್ಮ ಮೂರು ಮಕ್ಕಳಿಗೆ ಎಷ್ಟು ಬೇಕಾದರೂ ಬೈತೀವಿ ಆದ್ರೆ, ಇವನಿಗೆ ‘ಎಂದೂ ಬೈದಿಲ್ಲ’ ಎನ್ನುತ್ತಿದ್ದ  ವೆಂಕಟೇಶನ ಚಿಕ್ಕಮ್ಮನ ಕಣ್ಣೀರು ಸಮಸ್ಯೆಯ ಇನ್ನೊಂದು ಮುಖವನ್ನು ತೆರೆದಿಡುತ್ತಿತ್ತು.

16 ವರ್ಷದ ಶಿವಕುಮಾರ್‌ನದು ಇನ್ನೊಂದೇ ವ್ಯಥೆ. ‘ಅಜ್ಜಿ–ದೊಡ್ಡಪ್ಪ ನನ್ನನ್ನು ಕೊಲ್ಲಲು ಯತ್ನಿಸುತ್ತಿದ್ದರು. ಅಪ್ಪ ತೀರಿ ಹೋದ ಮೇಲೆ ನನ್ನ ಮತ್ತು ಅಮ್ಮನ ಮೇಲೆ ಮಾಟ ಮಂತ್ರ ಮಾಡಿಸುತ್ತಿದ್ದರು. ಅಜ್ಜಿ ರಾತ್ರೋರಾತ್ರಿ ಇದ್ದಕ್ಕಿದ್ದಂತೆ ಏನೂ ಕಾರಣವಿಲ್ಲದೇ ಹೊಡೆಯುತ್ತಿದ್ದಳು. ಅವರ ಕಾಟವನ್ನು ತಾಳಲಾರದೆ  ಮನೆ ಬಿಟ್ಟು ಬಂದೆ’ ಎಂದು ಮನೆತೊರೆದ ಕಾರಣ ವಿವರಿಸುತ್ತಾನೆ. 

‘ಕೆಲಸಕ್ಕೆಂದು ಬೆಂಗಳೂರಿಗೆ ಬಂದೆ. ಐಸ್‌ಕ್ರೀಂ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದೆ. ಅವರು ಸಂಬಳವನ್ನು ಅಪ್ಪನಿಗೆ ಕಳಿಸುತ್ತೀವಿ ಅಂತ ಹೇಳಿದ್ರು. ಆದ್ರೆ ಅಪ್ಪನನ್ನು  ಸಂಪರ್ಕಿಸಲು ಬಿಡುತ್ತಿರಲಿಲ್ಲ. ಅದಕ್ಕೆ ಅಲ್ಲಿಂದ ತಪ್ಪಿಸಿಕೊಂಡು ಬಂದೆ. ಎಂಟು ತಿಂಗಳಿಂದ ಅವರು ಅಪ್ಪನಿಗೂ ಸಂಬಳ ಕಳುಹಿಸಿರಲಿಲ್ಲ’ ಎಂದು ಅನ್ನವನ್ನರಸಿ ಬಂದು ಎದುರಿಸಿದ ಶೋಷಣೆಯನ್ನು ವಿವರಿಸುತ್ತಾನೆ ರಾಜಸ್ತಾನ್‌ ಮೂಲದ 15 ವರ್ಷದ ಮಹಾದೇವ್‌.

ಕೆಲಸವನ್ನು ಅರಸಿ, ಮದರಸಾದಲ್ಲಿ ಓದಲು ಇಷ್ಟವಿಲ್ಲದೇ, ಆಟವಾಡುತ್ತಿದ್ದಾಗ ತಪ್ಪಿಸಿಕೊಂಡವರು ಹೀಗೆ ನಾನಾ ಕಾರಣಗಳಿಂದ ಮನೆಯಿಂದ ದೂರಾಗಿದ್ದ ಒಟ್ಟು 20 ಮಕ್ಕಳನ್ನು ಸಾಥಿ ಸಂಘಟನೆ ಮರಳಿ ಪೋಷಕರ ತೆಕ್ಕೆಗೆ ಸೇರಿಸಿದೆ.

ಬೇರೆ ಕಡೆಗಳಿಂದ ನಗರದ ರೈಲ್ವೆ ನಿಲ್ದಾಣಗಳಲ್ಲಿ ಬಂದಿಳಿವ ಮಕ್ಕಳು ಮಧ್ಯವರ್ತಿಗಳ ಕೈಸೇರುವ ಮುನ್ನವೇ ‘ಸಾಥಿ’ ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ. ನಂತರ ಪೊಲೀಸ್‌ ಠಾಣೆಯಲ್ಲಿ ಮಕ್ಕಳ ಬಗ್ಗೆ ಮಾಹಿತಿ ದಾಖಲಿಸಿ, ಮಕ್ಕಳಿಗೆ ಊಟ ವಸತಿ ನೀಡಿ, ಅವರ ಕಷ್ಟಗಳನ್ನು ಕೇಳಿ, ಆಪ್ತ ಸಮಾಲೋಚನೆ ನಡೆಸಿ, ಪೋಷಕರ ಮಾಹಿತಿ ಪಡೆದು ಪೋಷಕರನ್ನು ಕರೆಸಿ ಮಕ್ಕಳನ್ನು ಒಪ್ಪಿಸುವ ಕೆಲಸವನ್ನು ಸಾಥಿ ಸಂಸ್ಥೆ ನಿರ್ವಹಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT