ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಸಾನದತ್ತ ಶಿಲಾಯುಗದ ಗೋರಿಗಳು

ನಿಖರ ಸಂಶೋಧನೆಯ ನಿರೀಕ್ಷೆಯಲ್ಲಿ ಅಪರೂಪದ ಚಿತ್ರಗಳು, ಶಿಲಾಕೃತಿಗಳು
Last Updated 25 ಅಕ್ಟೋಬರ್ 2014, 7:20 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್‌ನಲ್ಲಿರುವ ಶಿಲಾಯುಗದ ಗೋರಿಗಳು ದಿನಕಳೆದಂತೆ ಅವಸಾನದತ್ತ ಸಾಗುತ್ತಿವೆ. ಗುಡ್ಡದಲ್ಲಿರುವ ಗುಹಾಚಿತ್ರಗಳೂ ಕಾಲದ ಹೊಡೆತಕ್ಕೆ ಸಿಲುಕಿ, ನಶಿಸುವ ಆತಂಕ ಎದುರಿಸುತ್ತಿವೆ.

ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿ.ಮೀ. ದೂರದಲ್ಲಿದೆ ಹಿರೇಬೆಣಕಲ್‌. ಗ್ರಾಮದಿಂದ ಸುಮಾರು 10ಕಿ.ಮೀ. ದೂರ ಕಡಿದಾದ ಗುಡ್ಡದ ಮೇಲೆ ಕಾಲು ದಾರಿಯಲ್ಲಿ ಸಾಗಿದರೆ ಈ ಚಿತ್ರಗಳು ಹಾಗೂ ಶಿಲಾಯುಗದ ಅದ್ಭುತಗಳನ್ನು ಕಾಣಬಹುದು.

ಬೆಟ್ಟದ ತುದಿಯಲ್ಲಿ ಸುಮಾರು 3 ಸಾವಿರ ವರ್ಷಗಳಷ್ಟು ಹಳೆಯದಾದ ಆದಿಮಾನವರ ನಿವೇಶನದ ಕುರುಹುಗಳಿವೆ. ಹತ್ತಾರು ಎಕರೆ ಪ್ರದೇಶದಲ್ಲಿ ಸುಮಾರು 60ಕ್ಕೂ ಹೆಚ್ಚು ಗೋರಿಗಳು ಹಾಗೂ ಸಮಾಧಿಗಳಿವೆ. ಪ್ರಸ್ತುತ ಅವುಗಳ ಸಂಖ್ಯೆ ಅರ್ಧಕ್ಕಿಳಿದಿದೆ ಎನ್ನುತ್ತಾರೆ ಸ್ಥಳೀಯರು.

ಇವುಗಳಿಗೆ ಮೊರೇರ ಮನೆಗಳೆಂದು ಮತ್ತು ಅಲ್ಲಿಯ ಸಮೀಪದ ಬೆಟ್ಟದ ತುದಿಯಲ್ಲಿ ನಗಾರಿ ಆಕೃತಿಯ ಬೃಹತ್‌ ಕಲ್ಲು ಬಂಡೆ ಇರುವುದರಿಂದ  ಇದಕ್ಕೆ ನಗಾರಿ ಗುಡ್ಡ ಎಂದು ಕರೆಯಲಾಗುತ್ತದೆ.

ಮೊರೇರ ಗುಡ್ಡದಲ್ಲಿ 6ರಿಂದ 8 ಅಡಿ ಉದ್ದ, ಅಗಲದ ಬೃಹತ್‌ ಕಲ್ಲು ಚಪ್ಪಡಿಗಳನ್ನು ನಾಲ್ಕು ಭಾಗಗಳಲ್ಲಿ ನಿಲ್ಲಿಸಿ ಅದರ ಮೇಲೆ ವೃತ್ತಾಕಾರದ ಬೃಹತ್‌ ಚಪ್ಪಡಿಯನ್ನು ಛಾವಣಿಯಂತೆ ಹೊದಿಸಲಾಗಿದೆ. ಈ ಸ್ಥಳದಿಂದ ಸುಮಾರು ಪರ್ಲಾಂಗು ದೂರದಲ್ಲಿ ಇದೇ ಮಾದರಿಯ ಚಿಕ್ಕಗಾತ್ರದ ಸಮಾಧಿಗಳಿವೆ. ಇಲ್ಲಿಯ ಮಾಹಿತಿ ಫಲಕಗಳ ಪ್ರಕಾರ ಇವು ಅಂದು ಮರಣ ಹೊಂದಿದವರಿಗಾಗಿ ನಿರ್ಮಿಸಲಾದ ಸ್ಮಾರಕಗಳು. ಇಲ್ಲಿಂದ ಸುಮಾರು ಅರ್ಧ ಕಿ.ಮೀ. ದೂರದ ದುರ್ಗದ ದಡಿ ಎಂಬ ಪ್ರದೇಶದಲ್ಲಿ ನಾಗರಿಕತೆ ನೆಲೆಸಿತ್ತು ಎಂದು ವಿವರಿಸುತ್ತವೆ. ಇಲ್ಲಿ ಕೆಲವರಿಗಷ್ಟೇ ಏಕೆ ಸಮಾಧಿ ನಿರ್ಮಿಸಲಾಯಿತು ಎಂಬುದು ಉತ್ಖನನದಿಂದಷ್ಟೇ ತಿಳಿದುಬರಬೇಕು ಎಂದು ಹೇಳುವ ಮೂಲಕ ಅಲ್ಲಿನ ಕಥೆಯನ್ನು ನೋಡುವವರ ಊಹೆಗೆ ಬಿಡುತ್ತವೆ.

ಇನ್ನೊಂದು ಮಾಹಿತಿ ಪ್ರಕಾರ ಮೊರೇರ ಕಾಲದ ಗಿಡ್ಡ ಗಾತ್ರದ ಜನರೂ ಈ ಮನೆಗಳಲ್ಲಿ ವಾಸಿಸುತ್ತಿದ್ದರು ಎಂಬ ಊಹೆ ಇದೆ. ಶಿಲಾ ಗೋರಿಗಳ ಪಕ್ಕದಲ್ಲೇ ವಿಶಾಲವಾದ ನೀರಿನ ಹೊಂಡವಿದೆ. ಅದರ ದಕ್ಷಿಣ ಭಾಗಕ್ಕೆ ಏರಿಯೊಂದನ್ನು ಕಟ್ಟಲಾಗಿದೆ. ಒಟ್ಟಿನಲ್ಲಿ ಮಹಾಶಿಲಾಯುಗದ ಅಪರೂಪದ ಪಳೆಯುಳಿಕೆಯೊಂದು ಪೂರ್ತಿ ನಶಿಸುವ ಮುನ್ನ ಅದರ ಸಂರಕ್ಷಣೆಯಾಗಬೇಕಿದೆ. ಇತಿಹಾಸದ ಬಗ್ಗೆ ನಿಖರ ಸಂಶೋಧನೆ ನಡೆಯಬೇಕು ಎಂಬುದು ಇತಿಹಾಸ ಆಸಕ್ತರ ಒತ್ತಾಯ.

ಪುರಾತತ್ವ ಇಲಾಖೆಯ ಮಾಹಿತಿ ಫಲಕಗಳು ಹೇಳಿದ್ದು
* ಹಿರೇಬೆಣಕಲ್‌ ಗುಡ್ಡದ ಮೇಲೆ ನಡೆಯುವ ಪ್ರತಿ ಸಂಶೋಧನೆಗಳು ಹೊಸ ಹೊಸ ಮಾಹಿತಿ ಹೊರ ಹಾಕುತ್ತಿವೆ.
* ಇಲ್ಲಿದ್ದದ್ದು ನವಶಿಲಾಯುಗದ ಜನರು. ಅವರು ಅಲೆಮಾರಿಗಳಲ್ಲ. ರೈತರೂ, ಗೋಪಾಲಕರೂ ಆಗಿದ್ದರು. ಬಂಡೆಗಳಲ್ಲಿ ಚಿತ್ರಬಿಡಿಸಿದವರೂ ಇವರೇ ಆಗಿದ್ದಾರೆ. (ಗುಹೆಯೊಳಗಿನ ಬಂಡೆಗಳಲ್ಲಿ ಜಿಂಕೆ, ಕುದುರೆ, ಹಸು, ಗಂಡು ಹೆಣ್ಣಿನ ನೃತ್ಯದ ಚಿತ್ರಗಳು ಇವೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT