ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮಾನತೆಗೆ ಸಿದ್ಧ ಉತ್ತರ

Last Updated 8 ಜುಲೈ 2016, 19:30 IST
ಅಕ್ಷರ ಗಾತ್ರ

‘ಕಾನೂನಿನ ಮುಂದೆ ಎಲ್ಲರೂ ಒಂದೆ’ ಎಂಬ ಪ್ರತಿಪಾದನೆಯೊಂದಿಗೆ ಕೇಂದ್ರ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಜಾರಿಯ ಪರಿಶೀಲನೆಗೆ ಮುಂದಾಗಿದೆ. ಆದರೆ, ವೈವಿಧ್ಯಮಯ ಸಂಸ್ಕೃತಿಗೆ ಹೆಸರಾದ ನಾಡಿನಲ್ಲಿ ಈ ವಿಷಯದಲ್ಲಿ ವಿವಿಧ ಧರ್ಮಗಳ ನಡುವೆ ಸಮನ್ವಯ ಅಸಾಧ್ಯ ಎಂಬುದು ಏಕರೂಪ ನಾಗರಿಕ ಸಂಹಿತೆ ವಿರೋಧಿಗಳ ವಾದ. ಎರಡೂ ಬಣಗಳು ತಮ್ಮ ತಮ್ಮ ನಿಲುವುಗಳ ಸಮರ್ಥನೆಗೆ ತಮ್ಮದೇ ವಾದಗಳನ್ನು ಮುಂದಿಡುತ್ತವೆ.

ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವುದಕ್ಕೆ ಇರುವ ಸಮಸ್ಯೆಗಳೇನು ಎಂದು ಪರಿಶೀಲಿಸಲು ಕಾನೂನು ಆಯೋಗಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡುವುದರೊಂದಿಗೆ, ದೇಶದಲ್ಲಿ ದೊಡ್ಡ ಪ್ರಮಾಣದ ಚರ್ಚೆಯೊಂದು ಮತ್ತೆ ಆರಂಭವಾಗಿದೆ.

ಉತ್ತರ ಪ್ರದೇಶ ಸಹಿತ ಕೆಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಟ್ಟ ಹೆಜ್ಜೆ ಇದು ಎಂದು ಆರೋಪಿಸಿದರೂ, ಅದರಾಚೆ ದೃಷ್ಟಿ ಹರಿಸುವ ಪ್ರಯತ್ನ ಈಗ ನಡೆಯತೊಡಗಿದೆ.

ಏಕರೂಪ ನಾಗರಿಕ ಸಂಹಿತೆ ಎಂಬುದು ಹಿಂದೂ, ಮುಸ್ಲಿಂ ಸಹಿತ ವಿವಿಧ ಧರ್ಮಗಳಲ್ಲಿ ಇರುವ ಅಸಮಾನತೆಯನ್ನು ತೊಲಗಿಸುವ ಕಾನೂನು. ಮುಖ್ಯವಾಗಿ ಮಹಿಳೆಯರನ್ನು ಬಾಧಿಸುವ ಅಸಮಾನತೆಗೆ ಇಲ್ಲಿ ಉತ್ತರ ಇದೆ. ಬೇರೆ ಎಲ್ಲ ಕಾನೂನುಗಳು ಎಲ್ಲ ಧರ್ಮಗಳಿಗೆ ಸಮಾನವಾಗಿ ಅನ್ವಯವಾಗುವಂತೆ, ಏಕರೂಪ ನಾಗರಿಕ ಸಂಹಿತೆ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕೊಡುತ್ತದೆ.

ಆಸ್ತಿಪಾಸ್ತಿ, ಮದುವೆ, ದಾಂಪತ್ಯ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರ, ಜೀವನಾಂಶ ಮೊದಲಾದ ವಿಚಾರಗಳಲ್ಲಿ ಎಲ್ಲ ಧರ್ಮಗಳಿಗೆ ಸೇರಿದ ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಹಕ್ಕು ದೊರಕಿಸುವುದು ಇದರ ಉದ್ದೇಶ. ಇದು ಯಾವುದೇ ಕಾರಣಕ್ಕೂ ಧಾರ್ಮಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದಿಲ್ಲ.

ಸುಪ್ರೀಂ ಕೋರ್ಟ್‌ ಸಹಿತ ಇತರ ನ್ಯಾಯಾಲಯಗಳು ಮೇಲಿಂದ ಮೇಲೆ ಇದರ ಜಾರಿಗೆ ಒತ್ತಾಯ ಮಾಡುತ್ತಿರುವುದರ ಹಿಂದಿನ ಮರ್ಮ ಎಲ್ಲರಿಗೂ ಅರ್ಥವಾಗುತ್ತಿದೆ. ಆದರೆ ರಾಜಕೀಯ ಕಾರಣಕ್ಕಾಗಿ ‘ಧರ್ಮ’ವನ್ನು ಬಿಡುವುದು ಸಾಧ್ಯವಾಗದೆ ಗೊಂದಲ ಉಂಟಾಗಿದೆ.

ಸಂವಿಧಾನ ರಚನೆಯ ಸಮಯದಲ್ಲಿಯೇ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಅಂದು ಮುಖ್ಯವಾಗಿ ಮುಸ್ಲಿಂ ಸದಸ್ಯರು ವ್ಯಕ್ತಪಡಿಸಿದ ಆತಂಕದಿಂದಾಗಿ ಸಂಹಿತೆಯ ಬಗ್ಗೆ ಒಮ್ಮತದ ಅಭಿಪ್ರಾಯಕ್ಕೆ ಬರಲಾಗಲಿಲ್ಲ.

ಏಕರೂಪ ನಾಗರಿಕ ಸಂಹಿತೆ ನಮ್ಮ ಸಂವಿಧಾನದ ಆಶಯವಾಗಿರಬೇಕು, ಆದರೆ ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಹೊರತು ಅದನ್ನು ಕಾನೂನುಬದ್ಧಗೊಳಿಸಬಾರದು ಎನ್ನುವ ದೂರದೃಷ್ಟಿಯಿಂದಾಗಿ ಅದನ್ನು ರಾಜ್ಯ ನಿರ್ದೇಶಕ ತತ್ವಗಳ ಪಟ್ಟಿಯಲ್ಲಿ ಸೇರಿಸಲಾಯಿತು.

ಇದೀಗ ಮತ್ತೆ ಈ ವಿಷಯದಲ್ಲಿ ಚರ್ಚೆಗೆ ಅವಕಾಶ ತೆರೆದುಕೊಂಡಿದೆ. ಏಕರೂಪ ನಾಗರಿಕ ಸಂಹಿತೆ ಏಕೆ ಬೇಕು ಎಂದು ಹೇಳುವವರ ಸಂಖ್ಯೆ ಎಷ್ಟಿದೆಯೋ, ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿರೋಧಿಸುವವರು ಇರಬಹುದು. ಆದರೆ ವಾಸ್ತವ ಸ್ಥಿತಿಗತಿಯನ್ನು ಅರಿತಾಗ ಮತ್ತು ಧರ್ಮದ ಆಚೆ ಇಣುಕಿ ನೋಡಿದಾಗ ಇದು ಎಷ್ಟು ಅಗತ್ಯ ಎಂಬುದು ಮನವರಿಕೆಯಾಗದೇ ಇರದು.

ಬ್ರಿಟನ್‌ನಲ್ಲಿ ಈಚೆಗೆ ನಡೆದ ಜನಮತಗಣನೆಯಂತೆ ಇಲ್ಲೂ ಏಕರೂಪ ನಾಗರಿಕ ಸಂಹಿತೆ ಕುರಿತಂತೆ ಜನಮತಗಣನೆ ನಡೆದರೆ ಮಾತ್ರ ನಿಜವಾದ ಅರ್ಥದಲ್ಲಿ ಜನರ ನಾಡಿಮಿಡಿತ ಅರ್ಥ ಮಾಡಿಕೊಳ್ಳಲು ಸಾಧ್ಯವೇನೋ. ಆದರೆ ಅದು ಅಷ್ಟು ಸುಲಭವಲ್ಲ.

ಕೇಂದ್ರದ ಈ ನಡೆಯ ಬಗ್ಗೆ ‘ಪ್ರಜಾವಾಣಿ’ ಸಂವಿಧಾನ ತಜ್ಞರು, ಧಾರ್ಮಿಕ ಮುಖಂಡರು ಹಾಗೂ ಸಾಹಿತಿಗಳನ್ನು ಮಾತನಾಡಿಸಿದಾಗ, ಏಕರೂಪ ನಾಗರಿಕ ಸಂಹಿತೆಯ ಅಗತ್ಯ, ಅದು ಜಾರಿಗೆ ಬರಬೇಕಾದ ರೀತಿಗಳ ಬಗ್ಗೆ ಸ್ಪಷ್ಟ ರೂಪ ಸಿಗುವಂತಾಯಿತು.

‘ಸಂವಿಧಾನ ರಚನಾಸಭೆಯಲ್ಲಿ ಆದ ಬಹುಮುಖ್ಯ ಚರ್ಚೆ ‘ಏಕರೂಪ ನಾಗರಿಕ ಸಂಹಿತೆ’ಗೆ ಸಂಬಂಧಿಸಿದ್ದಾಗಿತ್ತು. ‘ಧಾರ್ಮಿಕ ಸ್ವಾತಂತ್ರ್ಯ’ ಮತ್ತು ‘ಸಮಾನ ನಾಗರಿಕತ್ವ’ ಕುರಿತ ಚರ್ಚೆಯ ಸಂದರ್ಭದಲ್ಲಿ ಈ ಚರ್ಚೆ ಹುಟ್ಟಿತು.

ಚರ್ಚೆಯ ಪ್ರಮುಖ ಪ್ರಶ್ನೆ ಆಯಾ ಧರ್ಮದವರಿಗೆ ತಮ್ಮದೇ ‘ವೈಯಕ್ತಿಕ ಕಾನೂನು’ ಅನುಸರಿಸಲು ಅವಕಾಶವಿರಬೇಕೇ ಅಥವಾ ಇಡೀ ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ಇರಬೇಕೇ ಎಂಬುದಾಗಿತ್ತು’ ಎಂದು ನೆನಪಿಸುತ್ತಾರೆ ಕುವೆಂಪು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎ.ಷಣ್ಮುಖ.

‘ವೈಯಕ್ತಿಕ ಕಾನೂನಿನ ಅವಕಾಶವಿರಬೇಕು ಎಂದು ವಾದಿಸಿದವರು ಪ್ರಜೆಗಳ ಧಾರ್ಮಿಕ ಸ್ವಾತಂತ್ರ್ಯದ ವಾದವನ್ನು ಮುಂದೊತ್ತಿದರೆ, ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸಿದವರು ಸಮಾನ ನಾಗರಿಕತ್ವದ ಪ್ರತಿಪಾದಕರಾಗಿದ್ದರು.

ಇವೆರಡೂ ಬಣಗಳ ವಾದದ ಚೌಕಟ್ಟು ಒಂದೇ ಆಗಿತ್ತು. ಅದು ‘ಸೆಕ್ಯುಲರಿಸಂ’. ಭಾರತವು ಸೆಕ್ಯುಲರ್ ಪ್ರಭುತ್ವವಾಗಿರಬೇಕೆಂದರೆ ಪ್ರಭುತ್ವವು ಪ್ರಜೆಗಳ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡಕೂಡದು, ಹಾಗಾಗಿ ವೈಯಕ್ತಿಕ ಕಾನೂನಿಗೆ ಅವಕಾಶವಿರಬೇಕು ಎನ್ನುವುದು ಒಂದು ಬಣದ ವಾದವಾಗಿತ್ತು.

ಮತ್ತೊಂದು ಬಣದವರು ಅದೇ ಸೆಕ್ಯುಲರ್ ತತ್ವದ ಪ್ರಕಾರ ಪ್ರಭುತ್ವದ ಕಾನೂನುಗಳು ಧರ್ಮಗಳಿಂದ ಮುಕ್ತವಾಗಿರಬೇಕು, ಪ್ರಭುತ್ವ ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು, ಎಲ್ಲ ನಾಗರಿಕರೂ ಒಂದೇ ಬಗೆಯ ಸೆಕ್ಯುಲರ್ ಕಾನೂನುಗಳಿಂದ ಆಳಿಸಿಕೊಳ್ಳಬೇಕು ಎನ್ನುವ ವಾದಗಳನ್ನು ಮುಂದಿಟ್ಟಿದ್ದರು.

ವಾಸ್ತವದಲ್ಲಿ ಇಡೀ ಚರ್ಚೆಯಲ್ಲಿ ಈ ವಿವಾದವು ಒಂದು ತಾರ್ಕಿಕ ಅಂತ್ಯ ಕಾಣಲೇ ಇಲ್ಲ. (ಬಹುಶಃ ಈ ಕಾರಣಕ್ಕೇ ಸಂವಿಧಾನದಲ್ಲಿ ಮೊದಲಿಗೆ ‘ಸೆಕ್ಯುಲರ್’ ಪದವನ್ನು ಸೇರಿಸಿರಲಿಲ್ಲ). ಆದರೆ ವೈಯಕ್ತಿಕ ಕಾನೂನುಗಳು ಮಾನ್ಯತೆ ಪಡೆದವು’ ಎನ್ನುತ್ತಾರೆ ಅವರು.

‘ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸುವವರು ಪ್ರಜೆಗಳ ಧಾರ್ಮಿಕ ಸ್ವಾತಂತ್ರ್ಯದ ನೆಲೆಯಲ್ಲಿಯೇ ವಿರೋಧಿಸುತ್ತಿದ್ದಾರೆ. ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ತಮ್ಮ ಧರ್ಮದ ನಿರ್ದೇಶನದಂತೆ ಬದುಕಲು ಅವಕಾಶವಿರಬೇಕು.

ವಿಭಿನ್ನ ಧರ್ಮಗಳು ವಿಭಿನ್ನ ರೀತಿಯಲ್ಲಿ ವೈಯಕ್ತಿಕ ಜೀವನದ ನಿಯಮಗಳನ್ನು ಹೊಂದಿರುವುದರಿಂದ ಅದರಂತೆ ಆಯಾ ಧರ್ಮದವರಿಗೆ ಬದುಕುವ ಸ್ವಾತಂತ್ರ್ಯವಿರಬೇಕು ಎನ್ನುವುದು ಇವರ ಪ್ರಮುಖ ವಾದ. ಇದಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಒಂದು ವಿಶಿಷ್ಟ ಸಮಸ್ಯೆ ಇದೆ.

ಕ್ರಿಶ್ಚಿಯನ್ನರಿಗೆ ಹಿಂದಿನಿಂದಲೂ ‘ಕ್ಯಾನನ್ ಲಾ’ ಇದೆ. ಮತ್ತು ಮುಸ್ಲಿಮರಿಗೆ ‘ಷರಿಯಾ’ ಇದೆ. ಅವರಿಗೆ ವೈಯಕ್ತಿಕ ಕಾನೂನು ಅನುಸರಣೆ ಸಹಜ. ಆದರೆ ಹಿಂದೂಗಳು ಎಂದು ಕರೆಸಿಕೊಂಡವರು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಂತೆ ಒಂದು ಧರ್ಮಕ್ಕೆ ಸೇರಿದವರಲ್ಲ.

ಬ್ರಿಟಿಷರ ಕಾಲದಿಂದ ಹಿಡಿದು ಸಂವಿಧಾನ ರಚನೆ ಮತ್ತು ಕಳೆದೆರಡು ದಶಕಗಳವರೆಗೂ ‘ಹಿಂದೂ’ ಎನ್ನುವುದು ಒಂದು ‘ಧರ್ಮ’ ಎಂದೇ ಸಾಮಾನ್ಯವಾಗಿ ಭಾವಿಸಲಾಗಿತ್ತು. ಆದರೆ ಇತ್ತೀಚಿನ ದಶಕಗಳ ಬಹುತೇಕ ಅಧ್ಯಯನಗಳು ಮತ್ತು ಚರ್ಚೆಗಳು ‘ಹಿಂದೂ’ ಧರ್ಮ  ಅನ್ನುವುದನ್ನು ತಿರಸ್ಕರಿಸಿವೆ’ ಎಂಬ ವಾದ ಷಣ್ಮುಖ ಅವರದು.

‘ಹಿಂದೂಗಳು ಸಾವಿರಾರು ವಿಭಿನ್ನ ಪಂಗಡ, ಜಾತಿ, ಮತ, ಸಂಪ್ರದಾಯಗಳಿಗೆ ಸೇರಿದವರಾಗಿದ್ದು ಅವರುಗಳ ಜೀವನ ಸಾಕಷ್ಟು ವಿಭಿನ್ನವೂ ವೈವಿಧ್ಯವೂ ಆಗಿದೆ. ಇಂಥ ಸಾವಿರಾರು ಮತ-ಪಂಥಗಳ ಸಮುದಾಯಗಳನ್ನು ಸೇರಿಸಿ ಒಂದು ‘ಹಿಂದೂ ಕಾನೂನು’ ಎಂದು ಮಾಡಿರುವುದೇ ಆಭಾಸವಾಗುತ್ತದೆ.

ಇವರನ್ನೂ ಮುಸ್ಲಿಂ ಮತ್ತು ಮತ್ತು ಕ್ರಿಶ್ಚಿಯನ್ನರಂತೆ ‘ಒಂದು’ ವೈಯಕ್ತಿಕ ಕಾನೂನಿನಡಿಯಲ್ಲಿ ಬದುಕಲೇಬೇಕಾದ ಹೇರಿಕೆ ಮಾಡಿದಂತಾಗಿದೆ. ಸಾವಿರಾರು ವಿಭಿನ್ನ ಹಿಂದೂ ಸಂಪ್ರದಾಯಗಳ ಮೇಲೆ ಒಂದು ಏಕರೂಪ (ಹಿಂದೂ) ನಾಗರಿಕ ಸಂಹಿತೆಯನ್ನು ಹೇರಲಾಗಿದೆ. ಆಗ ಪ್ರತಿ ಜಾತಿ, ಸಮುದಾಯ, ಪಂಗಡ, ಪಂಥಕ್ಕೂ ಒಂದೊಂದು ವೈಯಕ್ತಿಕ ಕಾನೂನನ್ನು ಮಾನ್ಯ ಮಾಡಬೇಕಾಗುತ್ತದೆ. ಆದರೆ ಈ ರೀತಿಯ ವೈಯಕ್ತಿಕ ಕಾನೂನಿನ ಕಲ್ಪನೆ ಧರ್ಮಗಳದ್ದು.

ಹಿಂದೂ ಸಂಪ್ರದಾಯಗಳವರಿಗೆ ಈ ಕಲ್ಪನೆಯೇ ಇಲ್ಲದಿರುವುದರಿಂದ ಅವರಿಗೆ ಸಂಬಂಧಿಸಿದಂತೆ ವೈಯಕ್ತಿಕ ಕಾನೂನುಗಳನ್ನು ಮಾಡುವುದನ್ನೇ ಪ್ರಭುತ್ವ ನಿಲ್ಲಿಸಬೇಕಾಗುತ್ತದೆ. ಆಗ ಪ್ರಭುತ್ವದ ನ್ಯಾಯಾಲಯಗಳು ಈ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ಣಯ ಮಾಡಲು ಸಾಧ್ಯವಿಲ್ಲ.

ಹಾಗಾಗಿ ವಿರೋಧಿಸುತ್ತಿರುವ ಸೆಕ್ಯುಲರ್‌ವಾದಿಗಳು ಒಂದೋ ತಮ್ಮದೇ ಸಮಾನ ನಾಗರಿಕತ್ವ ತತ್ವಕ್ಕೆ ಅನುಗುಣವಾಗಿ ಏಕರೂಪ ನಾಗರಿಕ ಸಂಹಿತೆಯನ್ನು ಒಪ್ಪಬೇಕು. ಇಲ್ಲವೇ ಅವರು ಅದನ್ನು ವಿರೋಧಿಸುವ ಜತೆಗೆ ಹಿಂದೂ ವೈಯಕ್ತಿಕ ಕಾನೂನನ್ನೂ ವಿರೋಧಿಸಬೇಕು. ಇಲ್ಲವಾದರೆ ಅವರದ್ದು ದ್ವಂದ್ವ ನೀತಿಯಾಗುತ್ತದೆ’ ಎಂಬ ಪ್ರಬಲ ಪ್ರತಿಪಾದನೆ ಷಣ್ಮುಖ ಅವರದು.

‘ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದರಿಂದ ಆಗುವ ಲಾಭಗಳೇನು? ಅದರಿಂದ ಯಾರಿಗೆ ತೊಂದರೆಯಾಗಬಹುದು ಎನ್ನುವ ಬಗ್ಗೆ ಸಾರ್ವಜನಿಕರಲ್ಲಿ ಸ್ಪಷ್ಟತೆ ಇಲ್ಲ. ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿಯ ವಾರಸುದಾರಿಕೆಯಂತಹ ವಿಷಯಗಳು ನಾಗರಿಕರ ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು.

ಇವು ಪರೋಕ್ಷವಾಗಿ ಸಂವಿಧಾನದ 25ನೇ ವಿಧಿಯಲ್ಲಿ ಕೊಡಮಾಡಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟುಮಾಡುತ್ತವೆ ಎನ್ನುವ ಆತಂಕವನ್ನು ಪ್ರಮುಖವಾಗಿ ಕ್ರೈಸ್ತ ಮತ್ತು ಮುಸ್ಲಿಂ ಅಲ್ಪಸಂಖ್ಯಾತ ಪ್ರತಿನಿಧಿಗಳು (ಎಲ್ಲರೂ ಅಲ್ಲ) ವ್ಯಕ್ತಪಡಿಸುತ್ತಿದ್ದಾರೆ.

ಒಂದು ರೀತಿಯಲ್ಲಿ ಇಲ್ಲಿ ಘರ್ಷಣೆ ಇರುವುದು ಸಮುದಾಯದ ಸ್ವಾತಂತ್ರ್ಯ ಹಾಗೂ ವ್ಯಕ್ತಿ ಸ್ವಾತಂತ್ರ್ಯದ ನಡುವೆ. ಏಕೆಂದರೆ ಇದರಿಂದ ಮುಖ್ಯವಾಗಿ ಅನುಕೂಲವಾಗುವುದು ಎಲ್ಲ ಧರ್ಮದ ಮಹಿಳೆಯರಿಗೆ’ ಎಂದು ಹೇಳುತ್ತಾರೆ ನಿವೃತ್ತ ಪ್ರಾಧ್ಯಾಪಕ ಪ್ರೊ. ಜಿ.ಎಸ್‌.ಸದಾನಂದ.

‘ಭಾರತವು ಹೇಳಿಕೇಳಿ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾತಾಂತ್ರಿಕ ಗಣರಾಜ್ಯ. ಅಂದಮೇಲೆ ಜಾತಿ-ಮತ-ಧರ್ಮದ ಆಧಾರದಲ್ಲಿ ಅಸಮಾನತೆಯನ್ನು ಹುಟ್ಟುಹಾಕುವ ಕಾಯ್ದೆ-ಕಟ್ಟಳೆಗಳು ಇರಲೇಕೂಡದು. ಒಂದೆಡೆ ಜಾತ್ಯತೀತತೆಯೇ ಭಾರತದ ಜೀವಾಳ ಎಂಬ ಹುಯಿಲಿಡುವುದು, ಇನ್ನೊಂದೆಡೆ ಏಕರೂಪ ಕಾಯ್ದೆಯು ಹಲವು ಮತ-ಪಂಥಗಳ ನಂಬಿಕೆಗಳಿಗೆ ಧಕ್ಕೆ ತರುತ್ತದೆ ಎನ್ನುವುದು ವಿತಂಡವಾದ. ಏಕರೂಪ ನಾಗರಿಕ ಸಂಹಿತೆಯೇ ಇದಕ್ಕೆ ಮದ್ದು’ ಎನ್ನುತ್ತಾರೆ ಲೇಖಕ ಬೇಳೂರು ಸುದರ್ಶನ.

‘ಎಲ್ಲರನ್ನೂ ಒಳಗೊಳ್ಳುವ ನೀತಿಯನ್ನು ಆರ್ಥಿಕ ಯೋಜನೆಗಳಲ್ಲಿ ಜಾರಿ ಮಾಡುತ್ತಿರುವಾಗ, ಅದೇ ನೀತಿಯನ್ನು ಸಾಮಾಜಿಕವಾಗಿ ಅನ್ವಯಿಸಲು ಹಿಂಜರಿಕೆ ಬೇಕಿಲ್ಲ. ಇಂಥ ಒಳಗೊಳ್ಳುವಿಕೆಗೆ ಎಲ್ಲ ಮತಗಳಿಂದಲೂ ವಿರೋಧ ಬರಬಹುದು. ಅದಕ್ಕೇ ಸಂವಿಧಾನವು ‘ನಾವೆಲ್ಲರೂ ಶ್ರಮಿಸಬೇಕು’ ಎಂಬ ಪದಕ್ಕೆ ಒತ್ತು ನೀಡಿದೆ. ಈ ಒತ್ತಾಸೆಯನ್ನು ಸರ್ಕಾರವು ಮುಂದಿಟ್ಟಮೇಲೆ ಅದರತ್ತ ನಡೆಯುವುದು ಸಮಾಜದ ಗುರುತರ ಹೊಣೆಗಾರಿಕೆ.

ಮಹಿಳೆಯರ ಆಸ್ತಿ ಹಕ್ಕು, ಬೆಲೆ ಸೂಚ್ಯಂಕ ಆಧಾರಿತ ವಿಚ್ಛೇದನ ಪರಿಹಾರ, ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕು, ಜಾತಿ ತಾರತಮ್ಯವಿಲ್ಲದ ಊರು- ಕೇರಿ- ಕೆರೆ- ಬಾವಿ- ದೇಗುಲ, ಧಾರ್ಮಿಕ ತಾಣಗಳು, ಸಮಾನ ಉದ್ಯೋಗಾವಕಾಶ ಇವನ್ನೆಲ್ಲ ಕೇಳುವುದು ಜಾತ್ಯತೀತತೆಯೇ ಹೊರತು ಮತಾಂಧತೆಯಲ್ಲ. ವೈ.ವಿ.ಚಂದ್ರಚೂಡ್‌, ವಿ.ಆರ್.ಕೃಷ್ಣ ಅಯ್ಯರ್‌ ಅವರಂಥ ನ್ಯಾಯತಜ್ಞರೇ ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸಿದ್ದಾರೆ’ ಎಂದು ಬೆಟ್ಟುಮಾಡಿ ತೋರಿಸುತ್ತಾರೆ ಸುದರ್ಶನ್‌.

‘ಭಾರತದಂಥ ವೈವಿಧ್ಯಪೂರ್ಣ ದೇಶದಲ್ಲಿ ಒಬ್ಬ ವ್ಯಕ್ತಿಯ ಖಾಸಗಿ ಜೀವನವನ್ನು ಪ್ರಭಾವಿಸುವ ಪಾರಂಪರಿಕ ಪದ್ಧತಿಗಳೂ ಅಷ್ಟೇ ವೈವಿಧ್ಯಪೂರ್ಣ. ಬ್ರಿಟಿಷರು ಭಾರತದಲ್ಲಿ ಸ್ಟೇಟ್ ಎನ್ನುವ ಕಾನೂನಿನ ಆಳ್ವಿಕೆಯನ್ನು ಹುಟ್ಟುಹಾಕಿದ ನಂತರ ಈ ವೈವಿಧ್ಯತೆಯು ಕಾನೂನಿನ ಆಳ್ವಿಕೆಗೆ ಸವಾಲಾಯಿತು.

ಅಂಥ ತೊಡಕುಗಳನ್ನು ನಿವಾರಿಸಿಕೊಳ್ಳುವ ಉಪಾಯವೇ ಸಮಾನ ನಾಗರಿಕ ಸಂಹಿತೆ. ಅದರ ಸಾಧಕ ಬಾಧಕಗಳ ಕುರಿತು ರಾಜಕೀಯ ಬಿಟ್ಟು ಗಂಭೀರ ಚರ್ಚೆಯನ್ನು ನಡೆಸುವ ತುರ್ತು ಇದೆ’ ಎಂದು ಹೇಳುತ್ತಾರೆ ಇತಿಹಾಸ ಪ್ರಾಧ್ಯಾಪಕ ರಾಜಾರಾಮ ಹೆಗಡೆ.

‘ಪ್ರತಿಯೊಬ್ಬ ವ್ಯಕ್ತಿಯನ್ನು ಸಂವಿಧಾನದ ಚೌಕಟ್ಟಿನಲ್ಲಿ ತರುವುದು ಹಾಗೂ ಸಂವಿಧಾನಕ್ಕಿಂತ ಈ ದೇಶದಲ್ಲಿ ಯಾವುದೂ ಮುಖ್ಯವಲ್ಲ ಎಂದು ತಿಳಿಸುವುದು ಬಹಳ ಅಗತ್ಯ. ಅದಕ್ಕಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳ್ಳಲೇಬೇಕು. ಬದಲಾವಣೆ ಬೇಕೆಂದರೆ ನಾವು ಬದಲಾಗಬೇಕಿದೆ’ ಎಂದು ಹೇಳುತ್ತಾರೆ ಸಂವಿಧಾನ ತಜ್ಞ ಪ್ರೊ. ಪಿ.ಎಲ್‌.ಧರ್ಮ.

ಬಿಜೆಪಿ, ಸಂಘ ಪರಿವಾರ ಮೊದಲಿನಿಂದಲೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕು ಎಂದು ಪ್ರತಿಪಾದಿಸುತ್ತಲೇ ಇವೆ. ಬಿಜೆಪಿಯ ಪ್ರಣಾಳಿಕೆಯಲ್ಲೂ ಈ ಅಂಶ ಸೇರಿಕೊಂಡಿದೆ. ಸಂಘ ಪರಿವಾರಕ್ಕೆ ಮುಂಚೂಣಿಯಲ್ಲಿ ಇರುವವರು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು. ‘ಏಕರೂಪ ನಾಗರಿಕ ಸಂಹಿತೆಯಿಂದ ಯಾವುದೇ ಧರ್ಮಕ್ಕೂ ಚ್ಯುತಿಯಾಗಬಾರದು.

ಸರ್ಕಾರ ಇದರ ಕರಡು ತಯಾರಿಸುವ ಮೊದಲು ಹಿಂದೂ ಮಠಾಧೀಶರು, ಮುಸ್ಲಿಂ ಧರ್ಮಗುರುಗಳು, ಕ್ರಿಶ್ಚಿಯನ್‌ ಸಮುದಾಯದ ಧಾರ್ಮಿಕ ಮುಖಂಡರು ಸೇರಿದಂತೆ ಎಲ್ಲ ಧರ್ಮದ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಬೇಕು. ಎಲ್ಲರ ಸಲಹೆ ಪಡೆದು ಕರಡು ಸಿದ್ಧಪಡಿಸಬೇಕು’ ಎಂದು ಅವರು ಸಲಹೆ ನೀಡುತ್ತಾರೆ.

ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ಇಟ್ಟಿರುವ ಮೊದಲ ಹೆಜ್ಜೆಯೇ ಬಹಳಷ್ಟು ಚರ್ಚೆಗೆ ತೆರೆದುಕೊಂಡಿದೆ. ಅದು ನಿರ್ದಿಷ್ಟ ಗುರಿ ತಲುಪುವುದೇ? ತಲುಪಿಸುವ ಇಚ್ಛಾಶಕ್ತಿ ಅಧಿಕಾರದಲ್ಲಿರುವವರಿಗೆ ಇದೆಯೇ ಎಂಬ ಪ್ರಶ್ನೆಯಂತೂ ಉಳಿದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT