ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ಹೆಚ್ಚಿಸುವ ಜೇನು

Last Updated 25 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಜೇನುತುಪ್ಪ, ಆರ್ಥಿಕ ಸ್ವಾವಲಂಬನೆಯಲ್ಲೂ ಪ್ರಮುಖ ಪಾತ್ರ ವಹಿಸಿದೆ. ತುಪ್ಪ ಮಾತ್ರವಲ್ಲದೇ ಜೇನುಪೆಟ್ಟಿಗೆಯಲ್ಲಿ ದೊರಕುವ ಮೇಣ, ಜೇನು ವಿಷ, ಪರಾಗ, ರಾಜಶಾಯಿ ರಸ ಇತ್ಯಾದಿಗಳಿಂದಲೂ ಕೃಷಿಕರು ಆದಾಯ ಹೆಚ್ಚಿಸಿಕೊಳ್ಳಬಹುದು. ಶೇ 60ರಷ್ಟು ಸಸ್ಯಗಳ ಇಳುವರಿ ಅಭಿವೃದ್ಧಿಗೆ ಅಗತ್ಯ ಇರುವ ಪರಾಗಸ್ಪರ್ಶ ಪ್ರಕ್ರಿಯೆಯಲ್ಲಿ ಜೇನು ನೊಣಗಳದ್ದೇ ಪ್ರಮುಖ ಪಾತ್ರ. ಇಷ್ಟೆಲ್ಲ ಪ್ರಯೋಜನಕಾರಿಯಾಗಿರುವ ಜೇನುಕೃಷಿಯ ಬಗ್ಗೆ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

*ಜೇನುಹುಳುಗಳಲ್ಲಿ ಎಷ್ಟು ಜಾತಿಗಳಿವೆ?
ಹೆಜ್ಜೇನು, ಕೋಲ್ಜೇನು, ಮುಜಂಟಿ ಜೇನು ಹಾಗೂ ತುಡುವೆ ಎಂಬ ಜಾತಿಗಳಿವೆ. ಹೆಜ್ಜೇನು ಎತ್ತರದ ಕಟ್ಟಡಗಳಲ್ಲಿ ಹಾಗೂ ಮರಗಳಲ್ಲಿ ಗೂಡು ಕಟ್ಟಿದರೆ, ಕೋಲ್ಜೇನು ಮರದ ಪೊಟರೆಗಳಲ್ಲಿ ವಾಸಿಸುತ್ತವೆ. ವೈದ್ಯಕೀಯವಾಗಿ ಹೆಚ್ಚು ಬೇಡಿಕೆಯುಳ್ಳ ಜೇನು ಎಂದರೆ ಮುಜಂಟಿ. ಇದು ಗಾತ್ರದಲ್ಲಿ ಚಿಕ್ಕದಾಗಿದ್ದು, ಅಧಿಕ ಔಷಧೀಯ ಗುಣಗಳನ್ನು ಹೊಂದಿದೆ. ತುಡುವೆ ಜೇನಿನಲ್ಲಿ ಯುರೋಪಿನ್ ಹಾಗೂ ಸ್ಥಳೀಯ ತುಡುವೆ ಎಂಬ ಪ್ರಬೇಧಗಳಿವೆ.

*ಜೀವನ ಕ್ರಮದ ಬಗ್ಗೆ ತಿಳಿಸಿ.
ಒಂದು ಜೇನು ಪೆಟ್ಟಿಗೆಯಲ್ಲಿ ಒಂದು ರಾಣಿ ಹುಳು, ಸಾವಿರಾರು ಕೆಲಸಗಾರರು ಹಾಗೂ ನೂರಾರು ಗಂಡು ನೊಣಗಳು ಇರುತ್ತವೆ. ರಾಣಿ ಹುಳುವಿನ ಗಾತ್ರ ದೊಡ್ಡದಾಗಿದ್ದು, ಇವು ದಿನನಿತ್ಯ ಸಾವಿರಾರು ಮೊಟ್ಟೆ ಇಡುತ್ತವೆ. ಗಂಡು ಜೇನುಗಳು ರಾಣಿಗಿಂತ ಚಿಕ್ಕದು. ರಾಣಿಜೇನಿನ ಗರ್ಭದ ನಂತರ ಕೆಲಸಗಾರ ನೊಣಗಳು ಅದನ್ನು ಕೊಂದು ಹಾಕುತ್ತವೆ ಅಥವಾ ಗರ್ಭದ ನಂತರ ಇವೇ ಸ್ವಾಭಾವಿಕವಾಗಿ ಸಾವು ಹೊಂದುತ್ತದೆ. ಮಕರಂದ, ಪರಾಗಸ್ಪರ್ಶ ಸಂಗ್ರಹಣೆ, ಎರೆ ಕಟ್ಟುವುದು, ಕಣಗಳನ್ನು ಸ್ವಚ್ಛಗೊಳಿಸುವುದು, ಆಹಾರ, ನೀರು ಎಲ್ಲರದ ನೇತೃತ್ವ ವಹಿಸಿಕೊಳ್ಳುವುದು ಕೆಲಸಗಾರ ನೊಣಗಳು.

*ಜೇನು ಕೃಷಿಗೆ ಬೇಕಾಗುವ ಸಾಮಗ್ರಿಗಳು ಯಾವುವು?
ಜೇನು ಪೆಟ್ಟಿಗೆ, ಅಡಿಮಣೆ, ಸಂಸಾರ ಕೋಣೆ, ಜೇನುಕೋಣೆ ಹಾಗೂ ಮೇಲುಮುಚ್ಚಳ ಪ್ರಮುಖ ಸಾಮಗ್ರಿಗಳು. ಇವಲ್ಲದೇ ನೊಣಗಳು ಚುಚ್ಚದಂತೆ ತಡೆಯಲು ಹೊಗೆತಿವಿ, ಗೂಡನ್ನು ಶುಚಿ ಮಾಡುವ ಸಾಧನ, ಕೈಕವಚ, ಮುಖಪರದೆ, ಎರೆಯಿಂದ ತುಪ್ಪ ಬೇರ್ಪಡಿಸಲು ಯಂತ್ರ ಇವೆಲ್ಲವೂ ಜೇನು ಸಾಕಾಣಿಕೆಗೆ ಅಗತ್ಯವಾಗಿವೆ.

*ಜೇನುಕುಟುಂಬ ಇರುವಿಕೆಯನ್ನು ಪತ್ತೆ ಮಾಡುವುದು ಹೇಗೆ? 
ಜೇನು ಕುಟುಂಬದ ಸ್ವಾಭಾವಿಕ ವಾಸಸ್ಥಾನ ಮರದ ಪೊಟರೆ, ಹುತ್ತದ ಕೋವೆ ಮುಂತಾದವು. ಬೆಳಕಿನ ಎಳೆ ಬಿಸಿಲಿನ ವೇಳೆ ಹಾಗೂ ಸಂಜೆ ವೇಳೆ ಗೂಡಿನಿಂದ ಅವು ಒಳಕ್ಕೆ ಹಾಗೂ ಹೊರಕ್ಕೆ ಹೋಗುವುದನ್ನು ಗಮನಿಸಿ ಅವುಗಳ ಸ್ವಾಭಾವಿಕ ವಾಸಸ್ಥಾನವನ್ನು ಪತ್ತೆ ಮಾಡಬಹುದು.

*ಸಾಕಾಣಿಕಾ ವಿಧಾನ ಹೇಗೆ?
ಜೇನುಹುಳುಗಳ ವಾಸಸ್ಥಳಗಳಿಂದ ಎರೆಗಳನ್ನು ಒಂದೊಂದಾಗಿ ಹೊರತೆಗೆದು ಪೆಟ್ಟಿಗೆಯ ಚೌಕಟ್ಟಿಗೆ ಸೂಕ್ತವಾಗಿ ಕತ್ತರಿಸಿ ಬಾಳೆನಾರಿನಿಂದ ಕಟ್ಟಿ ಪೆಟ್ಟಿಗೆಯಲ್ಲಿ ಇಡಬೇಕು. ರಾಣಿ ಸಹಿತ ಎಲ್ಲ ನೊಣಗಳನ್ನು ಪೆಟ್ಟಿಗೆಗೆ ವರ್ಗಾಯಿಸಿ ಕತ್ತಲೆಯಾಗುವವರೆಗೆ ಅಲ್ಲೇ ಇಟ್ಟು, ಆಮೇಲೆ ಬೇಕಾದ ಕಡೆಗೆ ಸಾಗಿಸಬಹುದು. ಪೆಟ್ಟಿಗೆಯನ್ನು ಹೊಸ ಸ್ಥಳಕ್ಕೆ ಒಯ್ದಾಗ, ಅಲ್ಲಿ ಅವುಗಳು ಹೊಂದಿ ಕೊಳ್ಳಲು ಕನಿಷ್ಠ ಒಂದು ವಾರವಾದರೂ ಬೇಕು. ಅಲ್ಲೀ ವರೆಗೆ ಅವುಗಳಿಗೆ ಸಕ್ಕರೆ ಪಾಕದ ಆಹಾರ ಕೊಡಬೇಕು.

*ಸಕ್ಕರೆ ಪಾಕ ತಯಾರಿಸುವುದು ಹೇಗೆ?
ಒಂದು ಲೋಟ ಸಕ್ಕರೆಗೆ ಅಷ್ಟೇ ಪ್ರಮಾಣದ ನೀರನ್ನು ಹಾಕಿ ಚೆನ್ನಾಗಿ ಕಲುಕಬೇಕು (ಯಾವುದೇ ಕಾರಣಕ್ಕೂ ಕಾಯಿಸಬಾರದು). ಇದನ್ನು ಬಾಟಲಿಗೆ ತುಂಬಿ. ಬಾಟಲಿಯ ಮುಚ್ಚಳಕ್ಕೆ ಸಣ್ಣ ಸೂಜಿಯಿಂದ 10 -15 ತೂತು ಮಾಡಬೇಕು. ಮುಚ್ಚಳವನ್ನು ಬಿಗಿಯಾಗಿ ಹಾಕಿ ಜೇನಿರುವ ಪೆಟ್ಟಿಗೆಯಲ್ಲಿ ಅದನ್ನು ಚಿಮುಕಿಸಬೇಕು. ನಂತರ ಗೂಡಿನ ಒಳಗೆ ಈ ಹನಿ ಬೀಳುವಂತೆ ಬಾಟಲಿಯನ್ನು ಓರೆಯಾಗಿ ಪೆಟ್ಟಿಗೆ ಮೇಲೆ ಇಡಬೇಕು.

*ಜೇನುಗೂಡಿನ ನಿರ್ವಹಣೆ ಹೇಗೆ?
ಜೇನುಗೂಡನ್ನು ವಾರಕ್ಕೊಮ್ಮೆ ಪರೀಕ್ಷಿಸಬೇಕು. ಅಡಿ ಹಲಗೆಯನ್ನು 10-12 ದಿನಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಹುಳು ಹೆಚ್ಚಾದಂತೆ ಮೇಣದ ಹಾಳೆ ಹೊಂದಿರುವ ಚೌಕಟ್ಟನ್ನು ಕೊಡುತ್ತಾ ಹೋಗಬೇಕು. ಸಂಸಾರದ ಕೋಣೆ ಸಂಪೂರ್ಣ ತುಂಬಿದಾಗ ಮೇಲು ಭಾಗದಲ್ಲಿ ತುಪ್ಪದ ಕೋಣೆ ಇರಿಸಬೇಕು.

ಜೇನು ಕೋಣೆಯಲ್ಲಿ ಶೇ 70 ರಷ್ಟು ಕಣಗಳು ಜೇನಿನಿಂದ ಭರ್ತಿಯಾಗಿ ಮುಚ್ಚಿದಾಗ ಜೇನುತೆಗೆಯಲು ಸಕಾಲ. ಜೇನುಹುಳುಗಳು ಪ್ರಮುಖ ಶತ್ರು ಇರುವೆ. ಮಳೆಗಾಲದಲ್ಲಿ ಇದರ ಬಾಧೆ ಹೆಚ್ಚು. ಇದನ್ನು ತಪ್ಪಿಸಲು ಜೇನುಪೆಟ್ಟಿಗೆಯ ಕೆಳಭಾಗದಲ್ಲಿ ಸ್ಟ್ಯಾಂಡ್ ಇಟ್ಟು ಅಲ್ಲಿ ನೀರು ಹಾಕಬೇಕು. ಇದರಿಂದ ಇರುವೆಗೆ ಹತ್ತಲು ಆಗುವುದಿಲ್ಲ.

*ಜೇನು ತುಪ್ಪ ತೆಗೆಯುವ ವಿಧಾನದ ಮಾಹಿತಿ ನೀಡಿ
ಜೇನುಕೋಣೆಯ ಎರೆಗಳನ್ನು ಒಂದೊಂದಾಗಿ ತೆಗೆದು ಎರೆ ಹುಳುಗಳನ್ನು ಕೊಡವಿ ಕಣದ ಮುಚ್ಚಳ ಕೊಯ್ಯಬೇಕು. ಇದನ್ನು ಜೇನು ಯಂತ್ರದಲ್ಲಿ ಹಾಕಿ ತುಪ್ಪ ಬೇರ್ಪಡಿಸಬೇಕು. ಸುಗ್ಗಿ ಕಾಲದಲ್ಲಿ 15 ರಿಂದ 20 ಒಮ್ಮೆ ಜೇನನ್ನು ತೆಗೆಯಬಹುದು (ಸುಗ್ಗಿ ಕಾಲ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ).

*ಇದರಿಂದ ಎಷ್ಟು ಆದಾಯ ಗಳಿಸಬಹುದು?
ಆಯಾ ಪ್ರದೇಶಕ್ಕೆ ಅನುಗುಣವಾಗಿ ಜೇನು ಇಳುವರಿ ದೊರೆಯುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ ಪ್ರಥಮ ವರ್ಷ ಜೇನು ನಿರ್ವಹಣೆಗೆ 800 ರಿಂದ 900 ರೂಪಾಯಿ ಖರ್ಚಾದರೆ, ಮುಂಬರುವ ವರ್ಷಗಳಲ್ಲಿ ಇದು 70 ರಿಂದ 80 ರೂಪಾಯಿಗೆ ಇಳಿಯುತ್ತದೆ. ಸರಿಯಾಗಿ ಜೇನಿನ ನಿರ್ವಹಣೆ ಮಾಡಿದ್ದೇ ಆದಲ್ಲಿ, ಬಯಲುಸೀಮೆ ಹಾಗೂ ಮಲೆನಾಡುಗಳಲ್ಲಿ ವರ್ಷಕ್ಕೆ ಸರಾಸರಿ 15- 20 ಕೆ.ಜಿ. ತುಪ್ಪ ಪಡೆಯಬಹುದು.

*ಜೇನು ಮೇಣದ ಪ್ರಯೋಜನವೇನು?
ಜೇನಿನ ಮೇಣಗಳನ್ನು ಕೈಗಾರಿಕೆಗಳಲ್ಲಿ, ಮೋಂಬತ್ತಿ ತಯಾರಿಸಲು, ಯುದ್ಧ ಸಲಕರಣೆ, ಇನ್ಸುಲೇಟರ್, ಆಲಂಕಾರಿಕ ಸಾಮಗ್ರಿ ತಯಾರಿಸಲು ಬಳಸುತ್ತಾರೆ. ಜೇನು ಏರಿಯನ್ನು ತುಂಡು ತುಂಡು ಮಾಡಿ ನೀರಿನಲ್ಲಿ 2 ರಿಂದ3 ಬಾರಿ ತೊಳೆಯಬೇಕು. ಏರಿಗಳನ್ನು ಪಾತ್ರೆಯಲ್ಲಿ ಹಾಕಿ ಮೇಣ ನೀರಿನಲ್ಲಿ ಕರಗುವವರೆಗೆ ಕಾಯಿಸಬೇಕು. ಇದರಿಂದ ಎಣ್ಣೆಯ ಅಂಶ ನೀರಿನಲ್ಲಿ ಕರಗಿ ಮೇಲೆ ಬಂದು ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ.

*ಸರ್ಕಾರದಿಂದ ಈ ಕೃಷಿಗೆ ಸಹಾಯಧನ (ಸಬ್ಸಿಡಿ) ಸಿಗುತ್ತದೆಯೇ?
ಜೇನುಕೃಷಿಯ ತರಬೇತಿ ಪಡೆದುಕೊಂಡ ಜಮೀನಿರುವ ರೈತರಿಗೆ ನಾಲ್ಕು ಜೇನುಪೆಟ್ಟಿಗೆ ಮತ್ತು ಜಮೀನು ಇಲ್ಲದಿರುವವರಿಗೆ ಎರಡು ಪೆಟ್ಟಿಗೆ, ಇತರ ಸಲಕರಣೆ ಖರೀದಿಸಲು ಶೇ 50ರಷ್ಟು ಸಹಾಯಧನವನ್ನು ರಾಜ್ಯ ತೋಟಗಾರಿಕಾ ಇಲಾಖೆಯಿಂದ ನೀಡಲಾಗುವುದು. ಇದರ ಹೊರತಾಗಿ ಕರ್ನಾಟಕ ರಾಜ್ಯ ತೋಟಗಾರಿಕಾ ಮಿಷನ್ ಏಜೆನ್ಸಿ (‘ಕ್ಷಮಾ’) ವತಿಯಿಂದ ಶೇ 40ರಷ್ಟು ಸಹಾಯಧನ ಪಡೆದುಕೊಳ್ಳುವ ಅವಕಾಶವಿದೆ. ತರಬೇತಿ, ಶಿಷ್ಯವೇತನ ಹಾಗೂ ಇತ್ಯಾದಿ ವಿವರಗಳಿಗೆ ಸಮೀಪದ ತಾಲ್ಲೂಕು ಕಚೇರಿಯನ್ನು ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT