ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿಗಳು ಕಲಬುರ್ಗಿ ಜೈಲಿಗೆ

ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಕುಟುಂಬಕ್ಕೆ ಆಮಿಷವೊಡ್ಡಿದ ಪ್ರಕರಣ
Last Updated 21 ಡಿಸೆಂಬರ್ 2014, 19:41 IST
ಅಕ್ಷರ ಗಾತ್ರ

ಬೆಂಗಳೂರು: ಮಾಹಿತಿ ಹಕ್ಕು ಕಾರ್ಯ­ಕರ್ತ (ಆರ್‌ಟಿಐ) ಲಿಂಗರಾಜು ಕೊಲೆ ಪ್ರಕರಣ ಸಂಬಂಧ ದೂರು ಹಿಂಪಡೆ­ಯು­ವಂತೆ ಮೃತರ ಕುಟುಂಬಕ್ಕೆ ಆಮಿಷ­ವೊ­ಡ್ಡಿದ ಕಾರಣಕ್ಕೆ ಬಿಬಿಎಂಪಿ ಸದಸ್ಯೆ ಗೌರಮ್ಮ ಅವರ ಪತಿ ಗೋವಿಂದರಾಜು ಮತ್ತು ಪ್ರಕರಣದ ಇತರೆ ಆರೋಪಿಗಳಿಗೆ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾ­ಗೃಹದಿಂದ ಕಲಬುರ್ಗಿ ಜೈಲಿಗೆ ಕಮಾನು (ಸ್ಥಳಾಂತರಿಸುವುದು) ಎತ್ತಲಾಗಿದೆ.

ಪರಪ್ಪನ ಅಗ್ರಹಾರ ಕಾರಾಗೃಹ­ದ­ಲ್ಲಿದ್ದ ಗೋವಿಂದರಾಜು ಅವರು ಅನಾರೋಗ್ಯದ ಕಾರಣಕ್ಕೆ ನ್ಯಾಯಾ­ಲಯ­ದಿಂದ ಅನುಮತಿ ಪಡೆದು ಆಸ್ಪತ್ರೆಗೆ ದಾಖಲಾಗಿದ್ದಾಗ ಲಿಂಗರಾಜು ಅವರ ಮಗನನ್ನು ಆಸ್ಪತ್ರೆಯಲ್ಲೇ ಹಲವು ಬಾರಿ ಭೇಟಿ­ಯಾಗಿ ದೂರು ಹಿಂಪಡೆಯುವಂತೆ ಹಣ ಮತ್ತು ನಿವೇಶನದ ಆಮಿಷ­ವೊಡ್ದಿ­ದ್ದರು.

ಅಲ್ಲದೇ, ನ್ಯಾಯಾಲಯದಲ್ಲಿ  ವಿಚಾ­ರಣೆಗೆ ಹಾಜರಾಗಿ ಜೈಲಿಗೆ ಹಿಂದಿ­ರು­ಗು­ವಾಗ ವಾಹನದ ಭದ್ರತಾ ಸಿಬ್ಬಂದಿಗೆ ಲಂಚ ಕೊಟ್ಟು ಮಾರ್ಗಮಧ್ಯೆ ಲಿಂಗ­ರಾಜು ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರನ್ನು ಭೇಟಿಯಾಗಿ­ದ್ದರು. ಈ ಸಂಗತಿ ಸುದ್ದಿವಾಹಿನಿ­ಯೊಂದು ಇತ್ತೀಚೆಗೆ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿತ್ತು.

‘ಗೋವಿಂದರಾಜು ಅವರು ಆಸ್ಪತ್ರೆ­ಯ­ಲ್ಲಿದ್ದಾಗ ಲಿಂಗರಾಜು ಕುಟುಂಬ ಸದಸ್ಯರನ್ನು ಭೇಟಿಯಾಗಿ ರಾಜಿ ಮಾಡಿ­ಕೊಳ್ಳಲು ಯತ್ನಿಸಿರುವುದು ಗೊತ್ತಾಗಿದೆ. ಜತೆಗೆ ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ. ಆದ ಕಾರಣ ಅವರನ್ನು ಬೇರೆ ಜೈಲಿಗೆ ಸ್ಥಳಾಂ­ತರಿಸ­ಲಾಗಿದೆ’ ಎಂದು ಕಾರಾ­ಗೃಹದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

‘ಗೋವಿಂದರಾಜು ಹಾಗೂ ಪ್ರಕ­ರಣದ ಇತರೆ ಆರೋಪಿಗಳನ್ನು ಬೇರೊಂದು ಜೈಲಿಗೆ ಸ್ಥಳಾಂತರಿಸುವಂತೆ ಎಡಿಜಿಪಿ ಕೆ.ವಿ.ಗಗನ್‌ದೀಪ್‌ ನಾಲ್ಕು ದಿನಗಳ ಹಿಂದೆ ಆದೇಶ ಹೊರಡಿಸಿದ್ದರು. ಅವರ ಆದೇಶದಂತೆ ಶನಿವಾರ ಮಧ್ಯಾಹ್ನ ಗೋವಿಂದರಾಜು, ವೇಲು, ಶಂಕರ ಅಲಿಯಾಸ್‌ ಗುಂಡ, ರಂಗ­ಸ್ವಾಮಿ, ಉಮಾಶಂಕರ್‌, ರಾಘವೇಂದ್ರ ಮತ್ತು ಶಂಕರ್‌ನನ್ನು ಕಲಬುರ್ಗಿ  ಜೈಲಿಗೆ ಕಳುಹಿಸಲಾಗಿದೆ’ ಎಂದು ಕಾರಾಗೃಹ ಇಲಾಖೆ ಡಿಐಜಿ ಜಯಸಿಂಹ ‘ಪ್ರಜಾವಾಣಿ’ಗೆ ತಿಳಿಸಿದರು.

2012ರ ನ.20ರಂದು ಚಾಮರಾಜ­ಪೇಟೆ ಸಮೀಪದ  ವಿಠ್ಠಲನಗರದಲ್ಲಿ ಲಿಂಗರಾಜು ಅವರನ್ನು ಮನೆಯ ಬಳಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಬಳಿಕ ಚಾಮರಾಜಪೇಟೆ ಪೊಲೀಸರು ಪಾಲಿಕೆಯ ಆಜಾದ್‌ನಗರ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ ಗೌರಮ್ಮ, ಅವರ ಪತಿ ಗೋವಿಂದರಾಜು ಹಾಗೂ ಇತರೆ ಆರೋಪಿಗಳನ್ನು ಬಂಧಿಸಿದ್ದರು. ನಂತರ ಗೌರಮ್ಮ ಅವರು 2013ರ ಏಪ್ರಿಲ್‌­ನಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡದ ಅಧಿಕಾರಿಗಳು, ‘ಲಿಂಗರಾಜು ಅವರು ಗೌರಮ್ಮ ದಂಪತಿ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಆರೋಪ ಹೊರಿಸಿ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೇ ಅವರ ಕೊಲೆಗೆ ಮುಖ್ಯ ಕಾರಣ’ ಎಂದು ನ್ಯಾಯಾ­ಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT