ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಕೆ. ಲಕ್ಷ್ಮಣ್‌ ಮೈಸೂರು ಭೇಟಿ!

Last Updated 26 ಜನವರಿ 2015, 20:37 IST
ಅಕ್ಷರ ಗಾತ್ರ

ಮೈಸೂರು: ಖ್ಯಾತ ವ್ಯಂಗ್ಯಚಿತ್ರಕಾರ ಆರ್‌.ಕೆ. ಲಕ್ಷ್ಮಣ್‌ ಹುಟ್ಟೂರು ಮೈಸೂರಿಗೆ ಕೊನೆ ಭೇಟಿ ನೀಡಿದ್ದು ೨೦೦೯ರಲ್ಲಿ. ಆಗ ಮೈಸೂರಿಗೆ ಭೇಟಿ ನೀಡಿದ್ದ ಅವರು ಹೋಟೆಲ್‌ ಪ್ರೆಸಿಡೆಂಟ್‌­ನಲ್ಲಿ ತಂಗಿದ್ದರು. ಅಲ್ಲದೆ, ಕುಕ್ಕರಹಳ್ಳಿ­ಕೆರೆ, ದೇವರಾಜ ಮಾರುಕಟ್ಟೆಯನ್ನು ಕಾರಿನಲ್ಲಿ ಸುತ್ತಾಡಿದ್ದರು.

ಸರಸ್ವತಿಪುರಂ ೭ನೇ ಮುಖ್ಯರಸ್ತೆಯ ಮನೆ ಸಂಖ್ಯೆ ೫೮ರಲ್ಲಿ ವಾಸವಿದ್ದ ಆತ್ಮೀಯ ಸ್ನೇಹಿತ, ಪ್ರಸಿದ್ಧ ಛಾಯಾಚಿತ್ರ­ಕಾರರಾದ ಟಿ.ಎಸ್‌. ಸತ್ಯನ್‌ ಅವರ ಮನೆಗೆ ೨೦೦೮ರಲ್ಲಿ ಲಕ್ಷ್ಮಣ್‌ ಭೇಟಿ ನೀಡಿದ್ದರು. ಇದಾದ ಒಂದು ವರ್ಷದ ತರುವಾಯ ೨೦೦೯ರಲ್ಲಿ ಟಿ.ಎಸ್‌. ಸತ್ಯನ್‌ ನಿಧನರಾದರು.

‘ಮೈಸೂರಿಗೆ ಲಕ್ಷ್ಮಣ್‌ ಭೇಟಿ ನೀಡಿದಾಗಲೆಲ್ಲ ಸತ್ಯನ್‌ ಅವರ ಮನೆಗೆ ತಪ್ಪದೇ ಹೋಗಲು ಬಯಸುತ್ತಿದ್ದರು. ತಾವು ಓದಿದ ಶಾಲೆ ಮಹಾರಾಜ ಕಾಲೇಜಿಗೆ ಗೆಳೆಯ ಸತ್ಯನ್‌ ಅವರೊಂ­ದಿಗೆ ಲಕ್ಷ್ಮಣ್‌ ಅವರು ವೀಲ್‌ ಚೇರ್‌­ನಲ್ಲಿಯೇ ತೆರಳಿ ಕಾಲೇಜು ಕ್ಯಾಂಪಸಿನಲ್ಲಿ ಸುತ್ತಾಡಿ ಎಲ್ಲರನ್ನು ಆತ್ಮೀಯವಾಗಿ ಮಾತನಾಡಿಸಿದ್ದರು. ೧೯೪೦ರಲ್ಲಿ ಬಿ.ಎ ಪದವಿ ಮುಗಿಸಿದ್ದ ದಿನಗಳನ್ನು ಮೆಲುಕು ಹಾಕಿದ್ದರು’ ಎಂದು ಹಿರಿಯ ಪತ್ರಕರ್ತ ಕೃಷ್ಣ ವಟ್ಟಂ ಸ್ಮರಿಸಿಕೊಂಡರು.

‘ಪುಣೆಯಲ್ಲಿ ವಾಸವಿದ್ದ ಪುತ್ರಿ ಕಲ್ಪನಾ ಅವರ ಮನೆಗೆ ೨೦೦೯ರಲ್ಲಿ ತೆರಳಿದ್ದ ನಾನು, ಆಗ ಲಕ್ಷ್ಮಣ್‌ ಅವರ ಕುಟುಂಬ­ವನ್ನು ಭೇಟಿ ಮಾಡಿದ್ದೆ. ಲಕ್ಷ್ಮಣ್‌ ಅವರು ಮೈಸೂರಿಗೆ ಬಂದಾಗಲೆಲ್ಲ ಮೆಟ್ರೊ­ಪೋಲ್‌ ಇಲ್ಲವೆ ಸದರನ್‌ ಸ್ಟಾರ್‌ (ಈಗಿನ ರಿಗಾಲಿಸ್‌) ಹೋಟೆಲಿ­ನಲ್ಲಿ ತಂಗುತ್ತಿ­ದ್ದರು. ಸಹಾಯಕರೊಬ್ಬರ ಜತೆ ಮಾಡಿ­ಕೊಂಡು ಮನೆಗೆ ಬರುತ್ತಿದ್ದ ಅವರು ಕೆಲ ಹೊತ್ತು ಆತ್ಮೀಯವಾಗಿ ಮಾತನಾಡಿಸಿ, ವಿಶ್ರಾಂತಿ ಪಡೆದು ಹೋಗು­ತ್ತಿದ್ದರು’ ಎಂದು ಟಿ.ಎಸ್‌. ಸತ್ಯನ್‌ ಅವರ ಪತ್ನಿ ರತ್ನಾ ಮೆಲುಕು ಹಾಕಿದರು.

‘ಆರ್‌.ಕೆ. ಲಕ್ಷ್ಮಣ್‌ ಅವರ ವ್ಯಂಗ್ಯಚಿತ್ರ­ವನ್ನು ಬಿಡಿಸಿದ್ದ ನಾನು ೨೦೦೬ರಲ್ಲಿ ಅವರು ಮೈಸೂರಿಗೆ ಬಂದ ವೇಳೆ ಹೋಟೆಲೊಂದರಲ್ಲಿ ಅವರನ್ನು ಭೇಟಿ­ಯಾಗಿ ಅದನ್ನು ತೋರಿಸಿ ಹಸ್ತಾಕ್ಷರ ಪಡೆದುಕೊಂಡಿದ್ದೆ. ವ್ಯಂಗ್ಯಚಿತ್ರ ನೋಡಿ ಅವರು ಖುಷಿಪಟ್ಟಿದ್ದ ಅವರು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು’ ಎಂದು ಮೈಸೂರಿನ ವ್ಯಂಗ್ಯಚಿತ್ರಕಾರ ಎಂ.ವಿ. ನಾಗೇಂದ್ರ ಬಾಬು ನೆನೆದರು.

೨೦೦೮ಕ್ಕೂ ಮುನ್ನ ಲಕ್ಷ್ಮಣ್‌ ಅವರು ಮೈಸೂರಿಗೆ ಅನೇಕ ಬಾರಿ ಭೇಟಿ ನೀಡಿದ್ದರು. ೧೯೯೩ರಲ್ಲಿ ಬೋಗಾದಿ ರಸ್ತೆಯ ಧ್ವನ್ಯಾಲೋಕಕ್ಕೆ ಭೇಟಿ ನೀಡಿದ್ದರು.

ಲಕ್ಷ್ಮೀಪುರಂನಲ್ಲಿ ನೆಲೆಸಿದ್ದರು
ಮೈಸೂರಿನ ಲಕ್ಷ್ಮೀಪುರಂನ ಮನೆಯಲ್ಲಿ ಆರ್‌.ಕೆ. ಲಕ್ಷ್ಮಣ್‌ ಚಿಕ್ಕಂದಿನಲ್ಲಿ ನೆಲೆಸಿದ್ದರು. ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್‌ ಹಾಗೂ ಮಹಾರಾಜ ಜೂನಿಯರ್‌ ಮತ್ತು ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ೧೯೪೦ರಲ್ಲಿ ಪದವಿ ಪಡೆದಿದ್ದರು. ಮೈಸೂರು ವಿಶ್ವವಿದ್ಯಾಲಯ ಇದೇ ವರ್ಷ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಲಕ್ಷ್ಮಣ್‌ ಅವರ ಕುರಿತು ದಾಖಲೆಗಳನ್ನು ಕಲೆ ಹಾಕುವುದರಲ್ಲಿ ನಿರತವಾಗಿದೆ. ಆದರೆ, ಲಕ್ಷ್ಮಣ್‌ ಅವರು ಮೈಸೂರು ವಿವಿ ಶತಮಾನೋತ್ಸವಕ್ಕೂ ಮುನ್ನವೇ ವಿಧಿವಶರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT