ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂಗಡ್ಡೆ ಬೆಳೆಗೆ ಚಳಿ ವಾತಾವರಣ ಸೂಕ್ತ

ತೋಟಗಾರಿಕೆ ತಜ್ಞರಿಂದ ಪರಿಶೀಲನೆ
Last Updated 24 ಅಕ್ಟೋಬರ್ 2014, 7:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಕೆಲ ಭಾಗ­ಗಳಲ್ಲಿ ಆಲೂಗಡ್ಡೆ ಬೆಳೆಗೆ ಹಾನಿ­ಯಾ­ಗಿ­ರುವ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆ ತಜ್ಞರು ಗುರುವಾರ ಗವಿಗಾನಹಳ್ಳಿ ಮತ್ತು ವರದಹಳ್ಳಿಯ ಆಲೂಗಡ್ಡೆ ಬೆಳೆದ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬಿತ್ತನೆ ಬೀಜ, ಬೆಳೆಯನ್ನು ಪರೀ­ಕ್ಷಿಸಿದ ಅವರು ಆಲೂಗಡ್ಡೆ ಬೆಳೆಗಾರರ ಅಹವಾಲುಗಳನ್ನು ಆಲಿಸಿ, ಅಗತ್ಯ ಮಾಹಿತಿ ಸಂಗ್ರಹಿಸಿದರು.
ಆಗಸ್ಟ್‌ ಮತ್ತು ಸೆಪ್ಟೆಂಬರ್‌ ಅವಧಿ­ಯಲ್ಲಿ ಬಿತ್ತನೆ ಮಾಡಿದರೂ ಈವರೆಗೆ ಗಿಡ ಬೆಳೆದಿದೆಯೇ ಹೊರತು ಆಲೂ­ಗಡ್ಡೆಯ ಗಡ್ಡೆ ಬಲಿತಿಲ್ಲ. ₨ 40 ಸಾವಿರಕ್ಕೂ ಹೆಚ್ಚು ಸಾಲ ಮಾಡಿ ಆಲೂಗಡ್ಡೆ ಬಿತ್ತನೆ ಮಾಡಿದ್ದ ನಾವು ಒಳ್ಳೆಯ ಬೆಳೆ ಬರುವುದೆಂಬ ನಿರೀಕ್ಷೆ­ಯಲ್ಲಿದ್ದವು. ಬಿತ್ತನೆ ಬೀಜದಲ್ಲಿ ದೋಷ­ವಿದೆಯೇ ಹೊರತು ನಮ್ಮ ಕೃಷಿ ಪದ್ಧತಿಯಲ್ಲಿ ಯಾವುದೇ ತಪ್ಪಿಲ್ಲ. ಇದೆಲ್ಲ­ವನ್ನೂ ನೀವೇ ಸರಿಪಡಿಸಬೇಕು ಎಂದು ರೈತರು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ತೋಟಗಾರಿಕೆ ತಜ್ಞ ಡಾ.ಅಮರ ನಂಜುಂಡೇಶ್ವರ ಮಾತ­ನಾಡಿ, ಆಲೂಗಡ್ಡೆ ಬೆಳೆಯನ್ನು ಸಾಮಾನ್ಯವಾಗಿ ನವೆಂಬರ್‌ನಿಂದ ಜನವರಿ ಅವಧಿಯಲ್ಲಿ ಬಿತ್ತನೆ ಮಾಡಿ ಬೆಳೆಯಲಾಗುತ್ತದೆ.  ಬಿಸಿಲಿನಲ್ಲಿ ಯಾವುದೇ ಕಾರಣಕ್ಕೂ ಬೆಳೆಯ­ಲಾಗದ ಈ ಬೆಳೆಗೆ ತೇವಾಂಶ ಮತ್ತು ಮಂಜಿನ ವಾತಾವರಣ ಬೇಕು. ಬಿಸಿಲಿದ್ದಷ್ಟೂ ಬೆಳೆಗೆ ಹೆಚ್ಚು ಅಪಾಯ ಎಂದರು.

18 ರಿಂದ 20 ಸೆಂಟಿಗ್ರೇಡ್‌ನಷ್ಟು ಉಷ್ಣಾಂಶ ಇದ್ದ ಆಗಸ್ಟ್– ಅಕ್ಟೋ­ಬರ್‌ ಅವಧಿಯಲ್ಲಿ ಬಿತ್ತನೆ ಮಾಡಿರು­ವುದರಿಂದಲೇ ಆಲೂಗಡ್ಡೆ ಸರಿಯಾಗಿ ಬೆಳೆದಿಲ್ಲ. ಹಾನಿಯಾಗಿರುವ ಬೆಳೆ­ಯನ್ನು ಮತ್ತೊಮ್ಮೆ ಪರೀಕ್ಷಿಸಿ ವರದಿ ನೀಡಲಾಗುವುದು. ಇದರ ಬಗ್ಗೆ ಮಾಹಿತಿ ಕೊಡಲಾಗುವುದು ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ನಮ್ಮ ಹಿರಿಯರ ಕಾಲದಿಂದಲೂ ಆಗಸ್ಟ್‌–ಸೆಪ್ಟೆಂಬರ್‌ನಲ್ಲಿ ಆಲೂಗಡ್ಡೆ ಬಿತ್ತನೆ ಮಾಡುತ್ತಿದ್ದೆವು. ಆಗ ಇರದ ದೋಷ ಈಗ ಹೇಗೆ ಒಮ್ಮೆಲೇ ಕಾಣಿಸಿ­ಕೊಂ­ಡಿತು. ಬಿತ್ತನೆ ಬೀಜದಲ್ಲಿ ದೋಷವಿದೆ. ಅದನ್ನು ಪರೀಕ್ಷಿಸಬೇಕು. ಬೆಳೆಗೆ ಹಾನಿ­ಯಾದ ಹಿನ್ನೆಲೆಯಲ್ಲಿ ಆಲೂಗಡ್ಡೆ ಬೆಳೆಗಾರರಿಗೆ ಪರಿಹಾರ ಧನ ನೀಡಬೇಕು ಎಂದರು.

ತೋಟಗಾರಿಕೆ ತಜ್ಞರಾದ ಡಾ. ಮಂಜುನಾಥ ರೆಡ್ಡಿ, ಡಾ. ದೊಡ್ಡ­ಬಸಪ್ಪ, ತೋಟಗಾರಿಕೆ ಇಲಾಖೆ ಉಪ­ನಿರ್ದೇಶಕಿ ಗಾಯತ್ರಿ, ರೈತ ಮುಖಂಡ­ರಾದ ಯಲುವಹಳ್ಳಿ ಸೊಣ್ಣೇಗೌಡ, ಮಂಚನಬಲೆ ಕೆ.ಶ್ರೀನಿವಾಸ್, ಅಂಗ­ರೇಖನಹಳ್ಳಿ ರವಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT