ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟೇಲಿಯಾದಲ್ಲಿ ರೋಬೊ ನಡಿಗೆ ಈಗ ಶಾಲೆಯೆಡೆಗೆ!

Last Updated 25 ಆಗಸ್ಟ್ 2015, 19:35 IST
ಅಕ್ಷರ ಗಾತ್ರ

ಭಾರತ ಸೇರಿದಂತೆ ಇತರ ಅಭಿವೃದ್ಧಿಶೀಲ ರಾಷ್ಟ್ರಗಳು 21ನೇ ಶತಮಾನದಲ್ಲೂ ಕುಂಟುತ್ತಾ ಸಾಗಿರುವುದು ನಾಳಿನ ಬಗ್ಗೆ ಸ್ಪಷ್ಟ ಯೋಜನೆ ಹೊಂದಿಲ್ಲದೇ ಇರುವುದರಿಂದ ಎಂಬುದು ಸಾಮಾನ್ಯ ತಿಳಿವಳಿಕೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮುಂದೆ ಎದುರಾಗಬಹುದಾದ ಸಮಸ್ಯೆಯನ್ನು ಇಂದೇ ಊಹಿಸಿ, ಆ ನಿಟ್ಟಿನಲ್ಲಿ ಕೆಲಸ ಆರಂಭಿಸುತ್ತವೆ. ಇದಕ್ಕೆ ತಾಜಾ ಉದಾಹರಣೆ ಆಸ್ಟ್ರೇಲಿಯಾ. ಹೌದು, ಭವಿಷ್ಯದಲ್ಲಿ ರೋಬೊಗಳ ಜತೆ ಮನುಷ್ಯ ಕೆಲಸ ಮಾಡುವುದು ಅನಿವಾರ್ಯ ಎಂಬುದರ ಸುಳಿವು ಅರಿತಿರುವ ಆಸ್ಟ್ರೇಲಿಯಾ, ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದಲ್ಲಿ ರೋಬೊಗಳೊಂದಿಗೆ ಮಕ್ಕಳು ಕಲಿಯುವ ಅವಕಾಶಕ್ಕೆ ಸಿದ್ಧತೆ ನಡೆಸಿದೆ. ಈ ಸಂಬಂಧ ಸದ್ಯದಲ್ಲಿಯೇ ದಕ್ಷಿಣ ಆಸ್ಟ್ರೇಲಿಯಾದ ಎರಡು ಶಾಲೆಗಳಲ್ಲಿ ಮಕ್ಕಳಿಗೆ ರೋಬೊಗಳು ಜತೆಯಾಗಲಿವೆ.

ಶಾಲೆಯಲ್ಲಿ ರೋಬೊಗಳನ್ನು ಪರಿಚಯಿಸುವುದರಿಂದ ಮಕ್ಕಳ ಕಲಿಕಾ ಮಟ್ಟ ಸುಧಾರಿಸುವುದಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಶೋಧನೆಯೊಂದನ್ನು ನಡೆಸಲಾಗಿದೆ. ಸ್ವಿನ್‌ಬರ್ನ್‌ ತಾಂತ್ರಿಕ ವಿಶ್ವವಿದ್ಯಾಲಯವು ಮೂರು ವರ್ಷಗಳ ಸಂಶೋಧನಾ ಪ್ರಾಜೆಕ್ಟ್‌ ಸಿದ್ಧಪಡಿಸಿದೆ. ಅಂತೆಯೇ ಫ್ರಾನ್ಸ್‌ ಮೂಲದ ರೋಬೋಟಿಕ್‌್ ಕಂಪೆನಿ ತಯಾರಿಸಿದ ಮನುಷ್ಯರೊಂದಿಗೆ ಕಾರ್ಯನಿರ್ವಹಿಸಬಲ್ಲ ರೋಬೊಗಳನ್ನು ಪರೀಕ್ಷಾರ್ಥವಾಗಿ ದಕ್ಷಿಣ ಆಸ್ಟ್ರೇಲಿಯಾದ ಎರಡು ಶಾಲೆಗಳಲ್ಲಿ ಪರಿಚಯಿಸಲಾಗುವುದು.

ಶಾಲೆಯಲ್ಲಿ ರೋಬೊಗಳ ಬಳಕೆ ಮತ್ತು ಕಲಿಕೆಗೆ ಸಂಬಂಧಿಸಿಂದಂತೆ ಪ್ರತಿದಿನ ಆನ್‌ಲೈನ್‌ ಮೂಲಕ ಶಿಕ್ಷಕರು ವರದಿ ನೀಡಲಿದ್ದಾರೆ. ಇದರ ಜತೆಗೆ ತರಗತಿಯಲ್ಲಿ ರೋಬೊ ಬಳಸುವಾಗ ಎದುರಾಗುವ ಸವಾಲುಗಳ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತದೆ.

‘ಇತ್ತೀಚೆಗೆ ರೋಬೊಗಳು ಸಮಾಜದ ಭಾಗವಾಗಿ ಮಾರ್ಪಟ್ಟಿವೆ. ಭವಿಷ್ಯಕ್ಕೆ ಅವಶ್ಯವಾದ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ಮಿಳಿತಗೊಳಿಸುವುದು ಆಸ್ಟ್ರೇಲಿಯಾದ ಶಾಲೆಗಳ ಜವಾಬ್ದಾರಿ’ ಎನ್ನುತ್ತಾರೆ ಸ್ವಿನ್‌ಬರ್ನ್‌ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಥೆರೇಸಿ ಕೇನ್‌.
ಈಗ ಶಾಲೆಗಳಲ್ಲಿ ಸಾಂದರ್ಭಿಕವಾಗಿ ರೋಬೊಗಳ ಬಳಕೆ ಆಗುತ್ತದೆಯಾದರೂ, ಮಕ್ಕಳು ಮತ್ತು ಶಿಕ್ಷಕರಿಗೆ ಈ ಯಂತ್ರಮಾನವರು ಸಹಾಯ ಮಾಡುವ ಅಂಶ ಸಾಬೀತಾಗಿಲ್ಲ.

‘ಮೂರು ವರ್ಷಗಳ ಸಂಶೋಧನೆಯಲ್ಲಿ ಪಠ್ಯದಲ್ಲಿ ಯಂತ್ರಮಾನವರ ಪರಿಣಾಮಕಾರಿ ಬಳಕೆ ಬಗ್ಗೆ ವಿವರಿಸಿದ್ದೇವೆ. ತರಗತಿಯಲ್ಲಿ ರೋಬೊಗಳು ಹೊಸತನ ಅಥವಾ ಗಾಂಭೀರ್ಯತೆಗೆ ಧಕ್ಕೆ ತರುವುದಕ್ಕೆ ಬದಲಾಗಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಸುಧಾರಿಸಬೇಕು’ ಎಂಬುದು ನಮ್ಮ ಉದ್ದೇಶ ಎನ್ನುತ್ತಾರೆ ಕೇನ್‌.

ಪಠ್ಯದಲ್ಲಿ ಯಂತ್ರಮಾನವರ ವಿಚಾವನ್ನು ಸೇರಿಸುವುದರಿಂದ ಮಕ್ಕಳಿಗೆ ಕೋಡಿಂಗ್‌್ ಮತ್ತು ಪ್ರೋಗ್ರಾಮಿಂಗ್‌ ಬಗ್ಗೆ ತಿಳಿವಳಿಕೆ ಮೂಡುತ್ತದೆ. ‘ಶಾಲೆಗಳಲ್ಲಿ ಪರಿಚಯಿಸುವ ಎನ್‌ಎಒ ರೋಬೊಗಳನ್ನು ಮಾತು, ನೃತ್ಯ ಮತ್ತು ಅತ್ತಿಂದಿತ್ತ ಓಡಾಡುವ ರೀತಿ ತಯಾರಿಸಲಾಗಿರುತ್ತದೆ’ ಎಂದು ವಿವರಿಸುತ್ತಾರೆ ಕೇನ್‌.

ಭವಿಷ್ಯದ ಉದ್ಯೋಗಿಗಳಿಗೆ ಅಗತ್ಯವಾಗಿ ಇರಬೇಕಾದ ಕೌಶಲಗಳಲ್ಲಿ ಕೋಡಿಂಗ್‌ ಸಹ ಒಂದು. ಈ ಯಂತ್ರಮಾನವರು ಮಕ್ಕಳಿಗೆ ಖುಷಿಯ ಜತೆಗೆ ಕೋಡಿಂಗ್‌ ಬಗ್ಗೆ ತಿಳಿವಳಿಕೆ ಮತ್ತು ಅದನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ನೆರವು ನೀಡಲಿವೆ’ ಎಂಬುದು ಕೇನ್‌ ಅಭಿಪ್ರಾಯ.

ಕೃಷಿಯಲ್ಲಿ ರೋಬೊ ಬಳಕೆ
ಆಸ್ಟ್ರೇಲಿಯಾದಲ್ಲಿ ಹಣ್ಣು ಮತ್ತು ತರಕಾರಿ ಉತ್ಪಾದನೆ, ಪ್ಯಾಕೇಜಿಂಗ್‌ ಮತ್ತು ಸಂಸ್ಕರಣೆಗೆ ರೋಬೊಗಳನ್ನು ಬಳಸಲಾಗುತ್ತದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಮಾನವ ಸಂಪನ್ಮೂಲದ ಅಗತ್ಯವಿದೆ. ಮನುಷ್ಯರ ನಂತರ ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡಬಲ್ಲ ಯಂತ್ರಮಾನವರು, ಕೆಲಸಗಾರರ ಹೊರೆ ಇಳಿಸಬಲ್ಲರು ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಆಟೊ ಕಂಟ್ರೋಲ್‌ ಸಿಸ್ಟಂನಲ್ಲಿ ಕೆಲಸ ಮಾಡುವ ಆ್ಯಂಡ್ರ್ಯೂ ಟಾಯ್ಲರ್‌ ಎಂಬ ಎಂಜಿನಿಯರ್‌ ಈ ರೋಬೊಗಳನ್ನು ತಯಾರಿಸಿದ್ದಾರೆ.
‘ಸಾಮಗ್ರಿಗಳನ್ನು ಪ್ಯಾಕ್‌ ಮಾಡಲು ಈ ಯಂತ್ರಮಾನವರನ್ನು ಬಳಸಬಹುದು’ ಎಂದು ಸಲಹೆ ನೀಡಿದ್ದಾರೆ.

‘ಸ್ಟ್ರಾಬೆರಿಯಂಥ ಫಲಗಳನ್ನು ಪ್ಯಾಕ್‌ ಮಾಡಲು ಜನರೇ ಸಿಗುವುದಿಲ್ಲ. ಅತ್ಯಂತ ಬೇಸರ ಉಂಟುಮಾಡುವ ಪ್ಯಾಕೇಜಿಂಗ್‌ ಕೆಲಸಗಳಿಗೆ ಕೆಲಸಗಾರರು ಸಿಗುವುದಿಲ್ಲ. ರೋಬೊಗಳಾದರೆ ವಾರದ ಏಳು ದಿನ ಮತ್ತು 24 ಗಂಟೆ ಯಾವುದೇ ತೊಂದರೆಯಿಲ್ಲದೇ ಕೆಲಸ ಮಾಡುತ್ತವೆ’ ಎನ್ನುತ್ತಾರೆ ಅವರು.

ಎಚ್ಚರ ತಪ್ಪಿದರೆ ಅಪಾಯ!
ರೋಬೊಗಳು ಎಷ್ಟು ಲಾಭದಾಯಕವೋ ಅಷ್ಟೇ ಅಪಾಯಕಾರಿ. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಭಾರತದ ಗುರಗಾಂವ್‌ ಬಳಿಯ ಮಾನೇಸರ್‌ನ ಉಕ್ಕು ತಯಾರಿಕಾ  ಕಾರ್ಖಾನೆಯೊಂದರಲ್ಲಿ 23 ವರ್ಷದ ಕೆಲಸಗಾರನೊಬ್ಬ ರೋಬೊ‌ ಕೈಗೆ ಸಿಕ್ಕಿ ದುರ್ಮರಣ ಹೊಂದಿದ. ರೋಬೊದಿಂದ ಹೊರಟ ಎಲೆಕ್ಟ್ರಿಕ್‌ ಶಾಕ್‌ನಿಂದಾಗಿ ಎಸ್‌ಕೆಎಚ್‌ ಮೆಟಲ್ಸ್‌ ಫ್ಯಾಕ್ಟರಿಯ ಉದ್ಯೋಗಿ ರಾಮ್‌ಜೀ ಲಾಲ್‌ ಸಾವನ್ನಪ್ಪಿದ. ರೋಬೊ ಕೈಗಳು ಲಾಲ್‌ನ ಎದೆ ಮತ್ತು ಹೊಟ್ಟೆ ಭಾಗವನ್ನು ತೀವ್ರವಾಗಿ ಗಾಯಗೊಳಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT